ನಟಿ ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್ ಪಿ. ಮೆಣಸಿನಕಾಯಿ ಲಲಿತ್ ಅಶೋಕ್ ಹೋಟೆಲ್‍ಗೆ ಬಿಲ್ ಪಾವತಿಸದೆ ವಂಚಿಸಿದ ಪ್ರಕರಣದ ಕುರಿತು ನ್ಯೂಸ್ 18 ನಲ್ಲಿ ಸುದ್ದಿ ಪ್ರಸಾರ ಹಿನ್ನಲೆಯಲ್ಲಿ ಅನಿಲ್ ಬಾಕಿ ಹಣವನ್ನು ವಾಪಸ್ಸು ಮಾಡಿದ್ದಾರೆ.
ಇದನ್ನೂ ಓದಿ: ನಟಿ ಪೂಜಾ ಗಾಂಧಿ- ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ವಿರುದ್ಧ ವಂಚನೆ ಆರೋಪ: ಹೋಟೆಲ್ ಬಿಲ್ ಕೊಡದೆ ಕಾಲ್ಕಿತ್ತ ಮಳೆ ಹುಡುಗಿ..!
ಅನಿಲ್ ಹಾಗೂ ಪೂಜಾ ಗಾಂಧಿ ಒಂದು ವರ್ಷದಿಂದ ದಿ ಲಲಿತ್ ಅಶೋಕ್ನಲ್ಲೇ ಉಳಿದುಕೊಂಡಿದ್ದು, ಅಲ್ಲಿನ ಸೇವೆಗಳನ್ನು ಪಡೆದಿದ್ದರು. ಅದರ ಒಟ್ಟಾರೆ ಮೊತ್ತ 26.22 ಲಕ್ಷ ಆಗಿತ್ತು. ಅದರಲ್ಲಿ 22.80 ಲಕ್ಷ ಪಾವತಿಸಲಾಗಿದ್ದು, 3.50 ಲಕ್ಷ ಬಾಕಿ ಉಳಿದಿತ್ತು. ಇದರಲ್ಲಿ 2.25 ಲಕ್ಷ ನಂತರ ಪಾವತಿಸಿದ್ದಾರೆ. ಈಗ ಬಾಕಿ 1.25 ಲಕ್ಷವನ್ನು ಅನಿಲ್ ಪಿ. ಮೆಣಸಿನಕಾಯಿ ತಮ್ಮ ಆಪ್ತರ ಮೂಲಕ ಹಣವನ್ನು ಪೊಲೀಸ್ ಠಾಣೆಗೆ ಕಳುಹಿಸಿ, ನಂತರ ಇನ್ಸ್ಪೆಕ್ಟರ್ ಸಾದಿಕ್ ಪಾಷ ಅದರ ಸಮ್ಮುಖದಲ್ಲಿ ಹೋಟೆಲ್ ಸಿಬ್ಬಂದಿಗೆ ಹಣ ಕೊಡಿಸಿದ್ದಾರೆ.
ಈ ಪ್ರಕರಣ ಸಂಬಂಧ ಸದ್ಯ ಅನಿಲ್ ಮೆಣಸಿನಕಾಯಿ ಹಾಗೂ ಪೂಜಾ ಗಾಂಧಿ ಅವರ ಹೇಳಿಕೆ ಪಡೆಯುವಂತೆ ಕೇಂದ್ರ ವಿಭಾಗದ ಡಿಸಿಪಿ ದೇವರಾಜು ಸೂಚನೆ ನೀಡಿದ್ದಾರೆ. ಇಂದು ಸಂಜೆ ಅಥವಾ ನಾಳೆ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆಸಲಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಯಾರ ಕೈಗೂ ಸಿಗದೇ ತಪ್ಪಿಸಿಕೊಂಡ ಪೂಜಾ ಗಾಂಧಿ, ಕೊನೆಗೂ ತುಟಿ ಬಿಚ್ಚಿದ್ದಾರೆ. 'ನನಗೂ ಈ ವಿಷಯಕ್ಕೂ ಏನೂ ಸಂಬಂಧವಿಲ್ಲ. ಅನಿಲ್ಗೂ ನನಗೂ ಪರಿಚಯವೇ ಇಲ್ಲ' ಎಂದಿದ್ದಾರೆ.
ನಂತರ ಮತ್ತೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಳಲಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿರುವ ಪೂಜಾ 'ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಕಲಾವಿದರಿಗಾಗಿ ನನ್ನ ಪ್ರೊಡಕ್ಷನ್ ಕಂಪನಿ ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದು, ಅನಿಲ್ ಮೆಣಸಿನಕಾಯಿ ನಮ್ಮ ಪ್ರೊಡಕ್ಷನ್ ಪಾರ್ಟನರ್. ಈ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ದೂರು ನೀಡಲಾಗಿದ್ದು, ಹೀಗಾಗಿ ವಕೀಲರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ.
ಅನಿಲ್ ಮೆಣಸಿನಕಾಯಿ ಅವರೂ ನಮ್ಮ ವಾಹಿನಿಯೊಂದಿಗೆ ಮಾತನಾಡಿದ್ದು, 'ಪೂಜಾ ಮತ್ತು ನನ್ನ ನಡುವೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ. ನಾನು ಅಶೋಕ ಹೋಟೆಲ್‍ಗೆ ಹೋಗೇ ಇಲ್ಲ. ನನ್ನ ಹೆಸರು ಅಲ್ಲಿ ಹೇಗೆ ಬಂತು ಅಂತ ಕೂಡ ಗೊತ್ತಿಲ್ಲ. ನಾನೇ ಖುದ್ದಾಗಿ ಅಲ್ಲಿಗೆ ತೆರಳಿ ಮಾಹಿತಿ ಪಡೆಯುತ್ತೇನೆ' ಎಂದು ಜಾರಿಕೊಳ್ಳುತ್ತಾರೆ ಮೆಣಸಿನಕಾಯಿ.
ಇನ್ನು ಪೂಜಾ, ಅನಿಲ್ ಮೆಣಸಿನಕಾಯಿ ಅಶೋಕಾ ಹೋಟೆಲ್ ಪ್ರಸಂಗದ ವಿಷಯ ತಿಳಿದು ಬಿಜೆಪಿ ನಾಯಕನ ಕುಟುಂಬದವರೂ ಕೆಂಡಾಮಂಡಲರಾಗಿದ್ದಾರೆ. ಒಂದು ರೀತಿ ಈ ಪ್ರಕರಣ ಬೀದಿ ರಂಪವಾಗಿದೆ.
ಇದನ್ನೂ ಓದಿ: ಒಲವಿನ ಉಡುಗೊರೆ ಕೊಡ್ತಾರೆ ಅಭಿಷೇಕ್ : ಈ ಹಾಡು ಚಿತ್ರಮಂದಿರದಲ್ಲಿ ಮಾತ್ರ ಇರುತ್ತೆ..!
ಘಟನೆ ಹಿನ್ನಲೆ
ಸರಿ ಸುಮಾರು ಒಂದು ವರ್ಷದ ಅವಧಿಗೆ ಅಶೋಕ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದ ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್ ಪಿ. ಮೆಣಸಿನಕಾಯಿ ವಿರುದ್ಧ ವಂಚನೆ ಪ್ರಕಣ ದಾಖಲಾಗಿದೆ. ಕಾರಣ ಇಷ್ಟೆ ಒಂದು ವರ್ಷ ಹೋಟೆಲ್ನ ಸೇವೆ ಪಡೆದ ಇವರು ಬರೋಬ್ಬರಿ 26 ಲಕ್ಷದ 22 ಸಾವಿರ ರೂಪಾಯಿ ಬಿಲ್ ಮೊತ್ತದಲ್ಲಿ 22 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ಕಟ್ಟಿದ್ದರಂತೆ. ಆದರೆ ಒಂದೂವರೆ ವರ್ಷ ಕಳೆದರೂ ಉಳಿದ ಮೂರೂವರೆ ಲಕ್ಷ ರೂಪಾಯಿ ಕಟ್ಟದ ಕಾರಣ, ಅಶೋಕ ಹೋಟೆಲ್ ಮ್ಯಾನೇಜರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೂಜಾ ಗಾಂಧಿ ಹಾಗೂ ಅನಿಲ್ ಮೆಣಸಿನಕಾಯಿ ವಿರುದ್ಧ ದೂರು ದಾಖಲಿಸಿದ್ದಾರೆ.
- ಮಂಜು ಆರ್ಯ,
PHOTOS: ಟ್ರೆಂಡಿ ಲುಕ್ನಲ್ಲಿ ಪೋಸ್ ನೀಡಿದ್ದಾರೆ 'ಕೇಸರಿ' ಸಿನಿಮಾದ ನಟಿ ಪರಿಣಿತಿ ಚೋಪ್ರಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ