news18-kannada Updated:January 28, 2021, 7:38 AM IST
ನಳೀನ್ ಕುಮಾರ್ ಕಟೀಲ್
ಚಿತ್ರದುರ್ಗ (ಜ. 28): ಈ ದೇಶದಲ್ಲಿ ಭಾರತ-ಪಾಕಿಸ್ತಾನವನ್ನು ಇಬ್ಭಾಗ ಮಾಡಿದ ಕಾಂಗ್ರೆಸ್ ಮತ ಬ್ಯಾಂಕ್ ಗಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿತು. ಅಯೋಧ್ಯೆಯ ಶ್ರೀರಾಮಚಂದ್ರನಿಗೆ ಮಂದಿರ ಕಟ್ಟುವುದು ದೇಶದ ಬಹು ಸಂಖ್ಯಾತರ ಕಲ್ಪನೆ. ಅದಕ್ಕೂ ಸಹ ಕಾಂಗ್ರೆಸ್ ವಿರೋಧ ಮಾಡಿತ್ತು. ತುಷ್ಟೀಕರಣ ನೀತಿಯಿಂದ ದೇಶದ ಜನತೆ ಕಾಂಗ್ರೆಸ್ ಪಕ್ಷದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ಹೀನ ರಾಜಕಾರಣ ಮಾಡುತ್ತಿದೆ. ಗಾಂಧಿಗೆ ದ್ರೋಹ ಮಾಡಿದ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಬುಧವಾರ ನಡೆದ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಷಣ ಮಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಗೆ ಎರಡು ಪುಣ್ಯಗಳಿತ್ತು. ಸ್ವಾತಂತ್ರ್ಯದ ಪುಣ್ಯ, ಗಾಂಧಿ ಪುಣ್ಯ ಎರಡೂ ಕಾಂಗ್ರೆಸ್ ಗೆ ಇತ್ತು. ಆಗ ಲೈಟ್ ಕಂಬ ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಉಲ್ಲೇಖ ಇತ್ತು. ಆದರೆ, ಅಧಿಕಾರ ಬಂದಾಗ ಕಾಂಗ್ರೆಸ್ ವಂಶ ರಾಜಕಾರಣ, ಜಾತಿವಾದದ ರಾಜಕಾರಣಕ್ಕೆ ಪ್ರೇರಣೆ ನೀಡಿ, ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಮಹಾತ್ಮಾ ಗಾಂಧಿ ಹೆಸರಲ್ಲಿ ಕಾಂಗ್ರೆಸ್ ಮತ ಪಡೆದು, ಗಾಂಧಿಯವರನ್ನೇ ಮರೆಯಿತು. ಗಾಂಧಿಗೆ ದ್ರೋಹ ಮಾಡಿದ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಎಂದು ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದೆಹಲಿ ರೈತರ ಹಿಂಸಾಚಾರಕ್ಕೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್; ಯತ್ನಾಳ್ ಗಂಭೀರ ಆರೋಪ
ತುಷ್ಟೀಕರಣ ನೀತಿಯಿಂದ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಯಾಯಿತು. ಕಾಂಗ್ರೆಸ್ ನಿಂದ ಭಯೋತ್ಪಾದನೆ ಸೃಷ್ಟಿಯಾದರೆ ಬಿಜೆಪಿಯಿಂದ ಭಯೋತ್ಪಾದನೆ ನಿಗ್ರಹ ಆಗಿದೆ. ಅತಿಯಾದ ಜಾತಿ ಪ್ರೇಮ, ಜಾತಿ ಒಡೆದು ಆಳಿದ ಪಕ್ಷ ಕಾಂಗ್ರೆಸ್. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ವೀರಶೈವ-ಲಿಂಗಾಯತರನ್ನ ಒಡೆದ ನೀಚ ಕೆಲಸ ಮಾಡಿದ್ದರು ಎಂದಿದ್ದಾರೆ. ಅಲ್ಲದೆ, 2004-14 ಕಾಂಗ್ರೆಸ್ ಮನಮೋಹನ್ ಸಿಂಗ್ ಅಧಿಕಾರ ಅವಧಿಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರವಿತ್ತು. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಇದಕ್ಕಾಗಿ ಪ್ರಧಾನಿ ಮೋದಿ ಹೇಳಿದ್ದು, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂದು. ಮೋದಿ ಕಾಂಗ್ರೆಸ್ ಅನ್ನುವ ಭ್ರಷ್ಟಾಚಾರ ಹೊರಗಿಡುತ್ತೇನೆ ಎಂದಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷ ತಿಹಾರ್ ಜೈಲಿನಲ್ಲಿ ಇತಿಹಾಸ ಓದಲು ಹೋಗಿ ಬೇಲ್ ನಲ್ಲಿದ್ದಾರೆ ಎಂದು ನಳಿನ್ ಕುಮಾರ್ ಲೇವಡಿ ಮಾಡಿದ್ದಾರೆ.
65 ವರ್ಷದ ಮೋದಿ ಆಡಳಿತದಲ್ಲಿ ಒಂದೇ ಒಂದು ಕಳಂಕವಿಲ್ಲ. ಇನ್ನೂ ದೇಶದಲ್ಲಿ ನಕಲಿ ಗಾಂಧಿಗಳು ಇದ್ದಾರೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಂಜಯ್ ಗಾಂಧಿ, ಪ್ರಿಯಾಂಕ ಗಾಂಧಿ, ಮುಂದೆ ಯಾವ ಗಾಂಧಿ ಬರುತ್ತಾರೋ ಗೊತ್ತಿಲ್ಲ. ಗಾಂಧಿ ಕುಟುಂಬ ಬಿಟ್ಟರೇ ಕಾಂಗ್ರೆಸ್ ಗೆ ಗತಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಇಲ್ಲ,ರಾಷ್ಟ್ರೀಯ ಅಧ್ಯಕ್ಷರನ್ನ ಘೋಷಣೆ ಮಾಡಲು ಆಗದ ಹೀನಾಯ ಸ್ಥಿತಿಗೆ ಕಾಂಗ್ರೆಸ್ ಹೋಗಿದ್ದು, ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ಮನಸ್ಸಿನಿಂದ ಹೊರಗಟ್ಟಿದ್ದಾರೆ ಎಂದಿದ್ದಾರೆ.
(ವರದಿ : ವಿನಾಯಕ ತೊಡರನಾಳ್)
Published by:
Sushma Chakre
First published:
January 28, 2021, 7:38 AM IST