ಗಾಂಧಿ ಬಗ್ಗೆ ಹೆಗಡೆ, ಕಟೀಲ್​ ನೀಡಿರುವ ಹೇಳಿಕೆಗಳು ಕ್ಷಮಿಸಲಾಗದ ಅಪರಾಧ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಕಡೆಯ ಹಂತದ ಮತದಾನ ಬಾಕಿ ಇರುವಾಗ ಪ್ರಗ್ಯಾ ಠಾಕೂರ್​ ಆರಂಭಿಸಿದ ಅನಾರೋಗ್ಯಕರ ಚರ್ಚೆ ಬಿಜೆಪಿಗೆ ಇರುಸುಮುರುಸು ತಂದಿದೆ. ಮುಂಬೈ ದಾಳಿಯಲ್ಲಿ ಹುತಾತ್ಮರಾದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿ ಹೇಮಂತ್​ ಕರ್ಕರೆ ವಿರುದ್ಧ ವಾಗ್ದಾಳಿ ನಡೆಸಿ ಸಾಮಾಜಿಕವಾಗಿ ಖಂಡನೆಗೆ ಗುರಿಯಾಗಿದ್ದ ಪ್ರಗ್ಯಾ ನಂತರ ಗೋಡ್ಸೆ ಒಬ್ಬ ದೇಶಭಕ್ತನಾಗಿದ್ದ ಮತ್ತು ಯಾವಾಗಲೂ ದೇಶಭಕ್ತನಾಗಿಯೇ ಇರುತ್ತಾನೆ ಎಂಬ ಹೇಳಿಕೆ ನೀಡಿ ಚರ್ಚೆಗೆ ನಾಂದಿ ಹಾಡಿದ್ದರು

ಅನಂತ್​ ಕುಮಾರ್​ ಹೆಗಡೆ ನಳಿನ್​ ಕುಮಾರ್​ ಕಟಿಲ್​ ಬಿಎಸ್​​ ಯಡಿಯೂರಪ್ಪ

ಅನಂತ್​ ಕುಮಾರ್​ ಹೆಗಡೆ ನಳಿನ್​ ಕುಮಾರ್​ ಕಟಿಲ್​ ಬಿಎಸ್​​ ಯಡಿಯೂರಪ್ಪ

  • News18
  • Last Updated :
  • Share this:
ಹುಬ್ಬಳ್ಳಿ: ಬಿಜೆಪಿ ಸಂಸದ ನಳಿನ್​ ಕುಮಾರ್​ ಕಟೀಲ್​ ಮತ್ತು ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿಯವರ ವಿರುದ್ಧ ಟ್ವೀಟ್​ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕಟೀಲ್​ ಮತ್ತು ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಯಡಿಯೂರಪ್ಪ ನಳಿನ್​ ಕುಮಾರ್​ ಕಟೀಲ್​ ಮತ್ತು ಅನಂತ್​ ಕುಮಾರ್​ ಹೆಗಡೆ ನೀಡಿರುವ ಹೇಳಿಕೆಗಳು ಪಕ್ಷದ ಗೌರವಕ್ಕೆ ಧಕ್ಕೆ ತಂದಿದೆ. ಈಗಾಗಲೇ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ನೊಟೀಸ್​ ಜಾರಿ ಮಾಡಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ಮಹಾತ್ಮಾ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು. ಒಬ್ಬರ ಬಗ್ಗೆ ಮಾತನಾಡುವಾಗ ಏನು ಮಾತನಾಡುತ್ತಿದ್ದೇವೆ ಎಂಬ ಅರಿವಿರಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಅಗತ್ಯವಿಲ್ಲ ಎಂದರು.

ಮುಂದುವರೆದ ಅವರು, ಗಾಂಧಿ ಬಗ್ಗೆ ಹಗುರ ಹೇಳಿಕೆಗಳು ಶೋಭೆ ತರಲ್ಲ, ಇದೊಂದು ಕ್ಷಮಿಸಲಾರದ ಅಪರಾಧ ಎಂದರು. ಈ ಬಗ್ಗೆ ಅಮಿತ್ ಷಾ ಸೂಕ್ತ ಕ್ರಮ ಕೈಗೊಳ್ತಾರೆ. ಅಧಿಕಪ್ರಸಂಗ ಮಾಡುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಕೊನೆಗೂ ಮೌನ ಮುರಿದ ಮೋದಿ; ಗಾಂಧಿ ವಿರುದ್ಧ ಹೇಳಿಕೆಗೆ ಸಾಧ್ವಿ ಪ್ರಗ್ಯಾಸಿಂಗ್​ರನ್ನು ಕ್ಷಮಿಸಲಾರೆ ಎಂದ ಪ್ರಧಾನಿ

ಬೆಳಗ್ಗೆ ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿದ್ದ ನಳಿನ್​ ಕುಮಾರ್​ ಕಟೀಲ್​, ದಿವಂಗತ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರನ್ನು ಗೋಡ್ಸೆ ಮತ್ತು ಉಗ್ರ ಕಸಬ್​ಗೆ ಹೋಲಿಕೆ ಮಾಡಿದ್ದರು. "ಗೋಡ್ಸೆ ಕೊಂದಿದ್ದು ಒಬ್ಬರನ್ನು, ಕಸಬ್​ ಕೊಂದಿದ್ದು 72 ಜನರನ್ನು, ರಾಜೀವ್​ ಗಾಂಧಿ ಕೊಂದಿದ್ದು 17,000 ಜನರನ್ನು. ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?" ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಗಾಂಧಿ-ಗೋಡ್ಸೆ ವಿವಾದಕ್ಕೆ ಕಿಡಿ ಹೊತ್ತಿಸಿದ ಅನಂತ್ ಕುಮಾರ್ ಟ್ವೀಟ್​ ಡಿಲೀಟ್; ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ

ಕಟೀಲ್​ ಈ ಟ್ವೀಟ್​ ಬೆನ್ನಲ್ಲೇ ಅನಂತ್​ ಕುಮಾರ್​ ಹೆಗಡೆ ಕೂಡ ಟ್ವಿಟ್ಟರ್​ನಲ್ಲಿ ಗೋಡ್ಸೆ ಸಮರ್ಥನೆಗೆ ಇಳಿದಿದ್ದರು. ಕಳೆದ 7 ದಶಕಗಳಲ್ಲಿ ಗೋಡ್ಸೆ ಬಗ್ಗೆ ಇದ್ದ ಚರ್ಚೆಯ ದಾರಿಯೇ ಬೇರೆಯಾಗಿತ್ತು, ಆದರೆ ಈಗ ನಡೆಯುತ್ತಿರುವ ಚರ್ಚೆಯ ಹಾದಿಯೇ ಬೇರೆ. ನಾಥೂರಾಂ ಗೋಡ್ಸೆ ಕಡೆಗೂ ಈಗಿನ ಚರ್ಚೆಗಳನ್ನು ನೋಡಿ ಖುಷಿಯಾಗಿರುತ್ತಾರೆ, ಎಂದು ಹೆಗಡೆ ಟ್ವೀಟ್​ ಮಾಡಿದ್ದರು. ಟ್ವೀಟ್​ ಮಾಡಿದ ಕೆಲವೇ ನಿಮಿಷಗಳಲ್ಲಿ ಡಿಲೀಟ್​ ಮಾಡಿ ನನ್ನ ಖಾತೆ ಹ್ಯಾಕ್​ ಆಗಿದೆ ಎಂದು ತೇಪೆ ಹಚ್ಚಲು ಮುಂದಾದರಾದರೂ, ವಿಪಕ್ಷಗಳು ಮತ್ತು ಸ್ವಪಕ್ಷೀಯ ನಾಯಕರು ಕೂಡ ಹೆಗಡೆ ಹೇಳಿಕೆಯನ್ನು ಖಂಡಿಸಿದರು.

ಇದನ್ನೂ ಓದಿ: ಬಾಯಿ ಚಪಲಕ್ಕೆ ಮಾತನಾಡಬಾರದು: ಅನಂತಕುಮಾರ್ ಹೆಗಡೆ, ಖರ್ಗೆ, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಕಿಡಿ

ಸಾಧ್ವಿ ಪ್ರಗ್ಯಾ ಠಾಕೂರ್​ ಕೂಡ ತಮ್ಮ ಹೇಳಿಕೆ ಸಂಬಂಧಿಸಿದಂತೆ ಕಡೆಗೂ ಕ್ಷಮೆಯಾಚಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೌನ ಮುರಿದಿದ್ದು, ಪ್ರಗ್ಯಾ ಠಾಕೂರ್​ರನ್ನು ನಾನು ಎಂದಿಗೂ ಕ್ಷಮಿಸಲಾರೆ ಎಂದಿದ್ಧಾರೆ. ಇನ್ನೂ ಕಡೆಯ ಹಂತದ ಮತದಾನ ಬಾಕಿ ಇರುವಾಗ ಪ್ರಗ್ಯಾ ಠಾಕೂರ್​ ಆರಂಭಿಸಿದ ಅನಾರೋಗ್ಯಕರ ಚರ್ಚೆ ಬಿಜೆಪಿಗೆ ಇರುಸುಮುರುಸು ತಂದಿದೆ. ಮುಂಬೈ ದಾಳಿಯಲ್ಲಿ ಹುತಾತ್ಮರಾದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿ ಹೇಮಂತ್​ ಕರ್ಕರೆ ವಿರುದ್ಧ ವಾಗ್ದಾಳಿ ನಡೆಸಿ ಸಾಮಾಜಿಕವಾಗಿ ಖಂಡನೆಗೆ ಗುರಿಯಾಗಿದ್ದ ಪ್ರಗ್ಯಾ ನಂತರ ಗೋಡ್ಸೆ ಒಬ್ಬ ದೇಶಭಕ್ತನಾಗಿದ್ದ ಮತ್ತು ಯಾವಾಗಲೂ ದೇಶಭಕ್ತನಾಗಿಯೇ ಇರುತ್ತಾನೆ ಎಂಬ ಹೇಳಿಕೆ ನೀಡಿ ಚರ್ಚೆಗೆ ನಾಂದಿ ಹಾಡಿದ್ದರು.
First published: