ರಾಜ್ಯ ಸರ್ಕಾರ ಬೀಳಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ; ಕುಮಾರಸ್ವಾಮಿ: ಶುದ್ಧ ಸುಳ್ಳು ಎಂದ ಇಲಾಖೆ

ಈ ಹಿಂದೆ ಐಟಿ ಇಲಾಖೆಯ ನಿರ್ದೇಶಕ ಬಾಲಕೃಷ್ಣನ್​ ವಿರುದ್ಧ ಕಾಂಗ್ರೆಸ್​ ನೇರಾನೇರ ದೂರು ನೀಡಿತ್ತು. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್​ ನಾಯಕರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ದೂರಿತ್ತು.

Sharath Sharma Kalagaru | news18
Updated:September 5, 2018, 6:52 PM IST
ರಾಜ್ಯ ಸರ್ಕಾರ ಬೀಳಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ; ಕುಮಾರಸ್ವಾಮಿ: ಶುದ್ಧ ಸುಳ್ಳು ಎಂದ ಇಲಾಖೆ
ಮುಖ್ಯಮಂತ್ರಿ ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
Sharath Sharma Kalagaru | news18
Updated: September 5, 2018, 6:52 PM IST
ರಮೇಶ್​ ಹಿರೇಜಂಬೂರು

ಬೆಂಗಳೂರು: ಕಾಂಗ್ರೆಸ್​ - ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚನೆಯಾದ ಕ್ಷಣದಿಂದ ಬಿಜೆಪಿ ಸರ್ಕಾರವನ್ನು ಬೀಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳನ್ನು ಆಡಳಿತಾರೂಢ ಪಕ್ಷಗಳು ಮಾಡುತ್ತಲೇ ಬಂದಿವೆ. ಈಗ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತೆ ಬಿಜೆಪಿಯ ರಾಜ್ಯ ಮುಖಂಡರು ಮತ್ತು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ಧಾರೆ.

ಬಿ.ಎಸ್​. ಯಡಿಯೂರಪ್ಪ ಮಗ ವಿಜಯೇಂದ್ರ ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಗೆ ಆಗಾಗ ಭೇಟಿ ನೀಡುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ನಿರ್ದೇಶಕ ಬಾಲಕೃಷ್ಣನ್​ ಅವರನ್ನು ಭೇಟಿ ಮಾಡುತ್ತಿದ್ಧಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರವನ್ನು ಉರಳಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ. ಆದರೆ ಇದು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ಐಟಿ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪವನ್ನು ಕುಮಾರಸ್ವಾಮಿ ಮಾಡಿದ ಬೆನ್ನಲ್ಲೇ ಬಿಜೆಪಿ ಮುಖಂಡರು ನಿರಾಕರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮಾತನಾಡಿ, ರಾಜ್ಯದ ಜನತೆ ನಮಗೆ ವಿರೋಧ ಪಕ್ಷದ ಸ್ಥಾನ ನೀಡಿದ್ಧಾರೆ. ಸರ್ಕಾರ ಬೀಳಿಸಲು ಬಿಜೆಪಿ ಯಾವುದೇ ಯತ್ನ ಮಾಡುತ್ತಿಲ್ಲ ಎಂದಿದ್ದಾರೆ.

ಸಿಎಂ ಆರೋಪವನ್ನು ನಿರಾಕರಿಸಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಐಟಿ ಮುಖ್ಯಸ್ಥ ಬಾಲಕೃಷ್ಣನ್​ರನ್ನು ವಿಜಯೇಂದ್ರ ಭೇಟಿ ಮಾಡಿದ್ದಾರೆ ಎಂಬುದಕ್ಕೆ ಸಿಎಂ ಸಾಕ್ಷ್ಯ ಕೊಡಲಿ ಎಂದು ಆಗ್ರಹಿಸಿದ್ದಾರೆ. ಐಟಿ ಮುಖ್ಯಸ್ಥರನ್ನ ಯಾರು ಬೇಕಾದರೂ ಭೇಟಿ ಮಾಡಬಹುದು, ಐಟಿ ರಿಟರ್ನ್ಸ್ ವಿಚಾರವಾಗಿ ಮಾತನಾಡಲು ಭೇಟಿ ಮಾಡಿರಬಹುದು. ಇಷ್ಟಕ್ಕೂ ಸಿಎಂಗೆ ಏಕೆ ಭಯ, ತನಿಖಾ ಸಂಸ್ಥೆಗಳು ಇರೋದೇ ತನಿಖೆ ಮಾಡಲು ಅಲ್ಲವೇ ಎಂದು ಪ್ರಶ್ನಿಸಿದ್ಧಾರೆ.

ಆರೋಪ ನಿರಾಕರಿಸಿದ ವಿಜಯೇಂದ್ರ:

ಸಿಎಂ ಆರೋಪವನ್ನು ನಿರಾಕರಿಸಿದ ಯಡಿಯೂರಪ್ಪ ಮಗ ಬಿ.ವೈ.ವಿಜಯೇಂದ್ರ, ಕುಮಾರಸ್ವಾಮಿ ಬಳಿಯೇ ಸರ್ಕಾರವಿದೆ, ಗುಪ್ತಚರ ಇಲಾಖೆ ಇದೆ ಎಂದಿದ್ದಾರೆ. ಇಷ್ಟೆಲ್ಲಾ ಅವರ ಬಳಿಯೇ ಇದ್ದರೂ ಕುಮಾರಸ್ವಾಮಿ ಬಾಲಿಶ ಕೊಡಬಾರದು ಎಂದಿದ್ದಾರೆ. ಐಟಿ ಇಲಾಖೆಯಲ್ಲಿ ಆ ರೀತಿ ಅಧಿಕಾರಿ ಇದ್ದಾರೆ ಅನ್ನೋದೆ ಗೊತ್ತಿಲ್ಲ ಎಂದು ವಿಜಯೇಂದ್ರ ತಿಳಿಸಿದರು.
Loading...

ಇಲಾಖೆಯಿಂದ ಸ್ಪಷ್ಟನೆ: 

ಕರ್ನಾಟಕ, ಗೋವಾ ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯಿಂದ ಈ ಆರೋಪ ಸಂಬಂಧ  ಸ್ಪಷ್ಟನೆ ಹೊರ ಬಂದಿದ್ದು, ಐಟಿ ಆಯುಕ್ತರನ್ನು ಯಾವುದೇ ರಾಜಕೀಯ ಪಕ್ಷದ ನಾಯಕರು ಭೇಟಿಯಾಗಿಲ್ಲ ಎನ್ನಲಾಗಿದೆ. ರಾಜಕೀಯ ಪಕ್ಷಗಳ ನಾಯಕರು, ಸಂಬಂಧಿಕರು ಆಯುಕ್ತರನ್ನು ಭೇಟಿಯಾಗಿಲ್ಲ. ಮಾಧ್ಯಮಗಳಲ್ಲಿ ಭೇಟಿ ಬಗ್ಗೆ ಬಂದಿರುವ ವರದಿಗಳೆಲ್ಲಾ ಸುಳ್ಳು, ಕರ್ನಾಟಕ, ಗೋವಾ ಐಟಿ ಇಲಾಖೆ 2 ವರ್ಷಗಳಲ್ಲಿ ಹಲವು ದಾಳಿ ನಡೆಸಿದೆ. 2 ವರ್ಷಗಳಲ್ಲಿ ಐಟಿ ಇಲಾಖೆ ಹಲವು ಮಹತ್ವದ ದಾಳಿಗಳನ್ನು ನಡೆಸಿದೆ, ಯಾವುದೇ ರಾಜಕೀಯ ಕಾರಣಕ್ಕಾಗಿ ದಾಳಿಗಳನ್ನು ನಡೆಸಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

ರಾಜಕೀಯ ದ್ವೇಷ ಇಟ್ಟುಕೊಂಡು ನಾವು ಯಾವುದೇ ದಾಳಿ ಮಾಡಿಲ್ಲ ಎಂದು ಹೇಳುವ ಮೂಲಕ ತಮ್ಮ ಮೇಲಿರುವ ಎಲ್ಲಾ ಆರೋಪಗಳಿಗೆ ತೆರೆ ಎಳೆದಿದೆ.

ಈ ಹಿಂದೆ ಐಟಿ ಇಲಾಖೆಯ ನಿರ್ದೇಶಕ ಬಾಲಕೃಷ್ಣನ್​ ವಿರುದ್ಧ ಕಾಂಗ್ರೆಸ್​ ಗಂಭೀರ ಆರೋಪ ಮಾಡಿತ್ತು. ಚುನಾವಣೆಗೂ ಮುನ್ನ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಚುನಾವಣೆ ಮುಗಿಯುವವರೆಗೂ ಬಾಲಕೃಷ್ಣನ್​ ಅವರನ್ನು ವರ್ಗಾವಣೆ ಮಾಡುವಂತೆ ಕೋರಿತ್ತು. ಬಾಲಕೃಷ್ಣನ್​ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್​ ಪಕ್ಷದ ವರಿಷ್ಠರ ಮೇಲೆ ಟಾರ್ಗೆಟ್​ ಮಾಡಿ ದಾಳಿ ಮಾಡಲಾಗುತ್ತಿದೆ, ಎಂದು ದೂರಲಾಗಿತ್ತು.

ಖಾಸಗಿ ಪತ್ರಿಕೆಯೊಂದು ವರದಿ ಮಾಡಿರುವಂತೆ, ಕುಮಾರಸ್ವಾಮಿ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ ಮಗ ವಿಜಯೇಂದ್ರ ಬಿದರಿ ಅವರನ್ನು ಬೆಂಗಳೂರು ಸಿಬಿಐ ಎಸ್​ಪಿಯಾಗಿ ವರ್ಗಾವಣೆ ಮಾಡಿರುವ ಹಿಂದೆಯೂ ದುರುದ್ದೇವಿದೆ ಎಂದಿದ್ದಾರೆ. ಶಂಕರ್​ ಬಿದರಿ ಸದ್ಯ ರಾಜ್ಯ ಬಿಜೆಪಿಯ ಸದಸ್ಯರಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿ ಬಿದರಿ ನೇಮಕವಾಗಿದ್ದರು. ವಿಜಯೇಂದ್ರ ಬಿದರಿ ತಮಿಳು ನಾಡು ಕೇಡರ್​ ಐಪಿಎಸ್​ ಅಧಿಕಾರಿ. ಆದರೀಗ ಕೇಂದ್ರ ನಿಯುಕ್ತಿಯ ಮೇಲೆ ಬೆಂಗಳೂರು ಸಿಬಿಐ ಎಸ್​ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿಜೆಪಿ ಸರ್ಕಾರವನ್ನು ಉರಳಿಸಲು ಹೂಡುತ್ತಿರುವ ದಾಳಗಳು ನನಗೆ ಗೊತ್ತಿದೆ, ಎಲ್ಲದಕ್ಕೂ ಪುರಾವೆ ಕೊಡಲು ಸಾಧ್ಯವಿಲ್ಲ, ಆದರೆ ಆಧಾರವಿಲ್ಲದೇ ನಾನು ದೂರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಆದಾಯ ತೆರಿಗೆ ಇಲಾಖೆಯ ಸರಣಿ ದಾಳಿಗಳು ಆರಂಭವಾಗಲಿದೆಯೇ ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಮರು ಜೀವ ಕೊಟ್ಟಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ