ಬಿಜೆಪಿಯಿಂದ ಸಮ್ಮಿಶ್ರ ಸರ್ಕಾರ ಉರುಳಿಸುವ ಯತ್ನ; 80 ಕಾಂಗ್ರೆಸ್​ ಶಾಸಕರನ್ನು ಸಂಪರ್ಕಿಸಿದ್ದಾರೆ: ಗುಂಡೂರಾವ್​

news18
Updated:August 7, 2018, 3:14 PM IST
ಬಿಜೆಪಿಯಿಂದ ಸಮ್ಮಿಶ್ರ ಸರ್ಕಾರ ಉರುಳಿಸುವ ಯತ್ನ; 80 ಕಾಂಗ್ರೆಸ್​ ಶಾಸಕರನ್ನು ಸಂಪರ್ಕಿಸಿದ್ದಾರೆ: ಗುಂಡೂರಾವ್​
news18
Updated: August 7, 2018, 3:14 PM IST
-ನ್ಯೂಸ್​ 18 ಕನ್ನಡ

ಬೆಂಗಳೂರು,(ಆ.07): ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್​ನ 80 ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ತೆರಳುವವರೆಲ್ಲಾ ನಮ್ಮ ಪಕ್ಷದ ಕಟ್ಟಾಳುಗಳು. ಆದರೆ ಅವರು ಯಡಿಯೂರಪ್ಪ ಜೊತೆಗೆ ಹೋಗಿದ್ದಾರೆ ಎನ್ನುವುದು ಸುಳ್ಳು. ಬಿಜೆಪಿಯವರಿಗೆ ಅಧಿಕಾರದ ದಾಹ ಇದೆ. ಸಮ್ಮಿಶ್ರ ಸರ್ಕಾರ ಬೀಳಿಸೋಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್​ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ. ಅನೈತಿಕ ಕೆಲಸಕ್ಕೆ ಬಿಜೆಪಿಯವರು ಕೈಹಾಕುತ್ತಿದ್ದಾರೆ. ಅವರು ಇದನ್ನೆಲ್ಲಾ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇವರು, ಸ್ವಾಮೀಜಿಗಳಿಗೆ ಬಿಜೆಪಿ ನಾಯಕರು ಕಾಲಿಗೆ ಬೀಳುತ್ತಿದ್ದಾರೆ. ಹೀಗಿದ್ದರೂ ಅನೈತಿಕತೆಯ ಮಾರ್ಗದಿಂದ ಸರ್ಕಾರ ರಚನೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ. ಅನ್ಯ ಮಾರ್ಗದಲ್ಲಿ ಸರ್ಕಾರ ರಚನೆ ಮಾಡುವುದು ಸರಿಯಲ್ಲ. ಯಡಿಯೂರಪ್ಪ ಮೂರು ದಿನ ಮುಖ್ಯಮಂತ್ರಿಯಾಗಿದ್ದರು. ಈಗಾಗಲೇ ಬಿಎಸ್​ವೈ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟಿಕೊಂಡಿದ್ದಾರೆ. ಇನ್ನಾದರೂ ಸರ್ಕಾರದ ತಂಟೆಗೆ ಹೋಗದೆ ಸುಮ್ಮನಿರುವುದು ಅವರಿಗೆ ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯನ್ನು ದೂರ ಇಡಲು ಮೈತ್ರಿ:

ಲೋಕಸಭಾ ಚುನಾವಣೆಗೆ ಜೆಡಿಎಸ್​ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸ್ಥಳೀಯ ಮಟ್ಟದಲ್ಲಿ ವಿರೋಧವಿದೆ. ಆದರೆ ಬಿಜೆಪಿಯನ್ನು ದೂರ ಹಿಡಲು ಮೈತ್ರಿ ಮಾಡಿಕೊಳ್ಳಬೇಕಾಗಿದೆ. ಸ್ಥಳೀಯ ಮಟ್ಟದ ನಾಯಕರಿಗೆ ಮನವರಿಕೆ ಮಾಡಿಕೊಳ್ಳುವ ಕೆಲಸ ಮಾಡಬೇಕಿದೆ ಎಂದರು.

ಜೆಡಿಎಸ್​ನ ಆಂತರಿಕ ವಿಚಾರ:
Loading...

ಸರಕಾರ ರಚನೆ ಬಳಿಕ ಸಮನ್ವಯ ಸಮಿತಿ ರಚನೆಯಾಗಿದೆ. ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸಮನ್ವಯ ಸಮಿತಿಗೆ ಸೇರುವ ವಿಷಯ ಜೆಡಿಎಸ್ ಗೆ ಬಿಟ್ಟಿದ್ದು. ಅದು ಜೆಡಿಎಸ್​ನ ಆಂತರಿಕ ವಿಚಾರ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ:

ಕೇಂದ್ರದಿಂದ ಹಲವು ವಿಚಾರಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಅದರಲ್ಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಕ್ಕೆ ಪದೇ ಪದೇ ಮೋಸವಾಗುತ್ತಿದೆ. ಬ್ಯಾಂಕಿಂಗ್ ಸೆಲೆಕ್ಷನ್ ರೂಲ್ಸ್ ನಲ್ಲೂ ನಮಗೆ ಅನ್ಯಾಯವಾಗಿದೆ. ಸ್ಥಳೀಯ ಭಾಷೆಗೆ ಹೆಚ್ಚಿನ ಒತ್ತು ನೀಡಬೇಕು. ಮೊದಲು ಸ್ಥಳೀಯ ಭಾಷೆಗೆ ಅವಕಾಶವಿತ್ತು. ಆದರೆ ಈಗಿನ ನಿಯಮಗಳಲ್ಲಿ ಅದನ್ನು ಸಡಿಲಗೊಳಿಸಲಾಗಿದೆ. ಇಂಗ್ಲೀಷ್, ಹಿಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ನಿಮ್ಮ ರೂಲ್ಸ್ ಬದಲಾಯಿಸಿದ್ದು ಯಾಕೆ? ಎಂದು ಕೇಂದ್ರಕ್ಕೆ ಗುಂಡೂರಾವ್ ಪ್ರಶ್ನಿಸಿದ್ದಾರೆ. ರಾಜ್ಯದ ಸಾವಿರಾರು ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದರ ಬಗ್ಗೆ ನೀವು ಧ್ವನಿ ಎತ್ತುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ನಿರ್ಮಲಾ ಸೀತಾರಾಮನ್​ ವಿರುದ್ಧ ಕಿಡಿ:

ರಾಜ್ಯದ ಹಿತಸಾಕ್ತಿ ಕಾಪಾಡುವಲ್ಲಿ ನಿರ್ಮಲಾ ಸೀತಾರಾಮನ್​​ ವಿಫಲರಾಗಿದ್ದಾರೆ. ಕರ್ನಾಟಕದಿಂದಲೇ ಪ್ರತಿನಿಧಿ ಆದರೂ ರಾಜ್ಯಕ್ಕೆ ಪ್ರಯೋಜನವಾಗುವ ಕೆಲಸ ಮಾಡಲಿಲ್ಲ. ರಾಜ್ಯಕ್ಕೆ ೧೫ ಹಣಕಾಸು ಆಯೋಗದಲ್ಲಿ ಇರುವ ಕೆಲ ನಿಯಮಗಳನ್ನು ಬದಲಿಸಿ ರಾಜ್ಯಕ್ಕೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ 11 ವರ್ಷಗಳಿಂದ ಬೆಂಗಳೂರಿನಲ್ಲಿ ಏರ್​​ ಇಂಡಿಯಾ ಶೋ ನಡೆಯುತ್ತಿತ್ತು. ವಿಶ್ವದ ಎಲ್ಲ ಕಡೆಗಳಿಂದ ​ಶೋ ನೋಡಲು ಬರುತ್ತಿದ್ದರು. ಶೋ ನಡೆಸಲು ಬೆಂಗಳೂರು ಸೂಕ್ತ ಸ್ಥಳವಾಗಿತ್ತು. ಆದರೆ ಲಕ್ನೋದಲ್ಲಿ ಏರ್​ ಇಂಡಿಯಾ ಶೋ ನಡೆಸಲು ಚಿಂತನೆ ನಡೆಸಿದ್ದೀರಿ. ಇಲ್ಲಿಗೆ ಬಂದಾಗಲೂ ಸ್ಪಷ್ಟವಾಗಿ ಹೇಳಿ ಹೋಗಿಲ್ಲ. ನಮ್ಮ ರಾಜ್ಯದ ಹಿತಾಸಕ್ತಿಯನ್ನ ನೀವು ಹೇಗೆ ಕಾಪಾಡ್ತೀರಾ? ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದು ಯಾವ ಪುರುಷಾರ್ಥಕ್ಕೆ? ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಗಸ್ಟ್​ 9 ಕ್ಕೆ ಕ್ವಿಟ್​ ಇಂಡಿಯಾ ನೆನಪಿನ ಕಾರ್ಯಕ್ರಮ:

ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ನೆನಪಿನ ಕಾರ್ಯಕ್ರಮ‌ ನಡೆಯಲಿದೆ. ಅಂದಿನ ಹೋರಾಟ ಇಂದಿನ ಜನರಿಗೆ ಗೊತ್ತಾಗಬೇಕು.ಅದನ್ನು ಮರುಕಳಿಸುವ ರೀತಿ ಕಾರ್ಯಕ್ರಮ ಮಾಡುತ್ತೇವೆ. ಬೆಂಗಳೂರು ಸೇರಿ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಕ್ವಿಟ್ ಇಂಡಿಯಾದಲ್ಲಿ ಭಾಗವಹಿಸಿದ್ದವರನ್ನು ಕರೆಸಲಾಗುತ್ತದೆ ಎಂದರು.

ಆಗಸ್ಟ್​ 13 ಕ್ಕೆ ರಾಜ್ಯಕ್ಕೆ ರಾಹುಲ್​ ಗಾಂಧಿ ಭೇಟಿ:

ಆಗಸ್ಟ್ 13 ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ. ಬೀದರ್​ನಲ್ಲಿ ‌ಬೃಹತ್ ರ್ಯಾಲಿ ನಡೆಯಲಿದೆ. ಆ ರ್ಯಾಲಿಗೆ 'ಜನಧ್ವನಿ' ಎಂದು ಹೆಸರು ಇಡಲಾಗಿದೆ. ಈ ರ್ಯಾಲಿಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ,ಪರಂ, ಡಿಕೆಶಿ ‌ಸೇರಿದಂತೆ ಎಲ್ಲಾ‌ ನಾಯಕರು ಪಾಲ್ಗೊಳ್ಳಲಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರ ಆರಂಭದ ಕಾರ್ಯಕ್ರಮ ಕೂಡ ಇದಾಗಿದೆ. ಕೇಂದ್ರ ‌ಸರ್ಕಾರದ ವೈಫಲ್ಯ ವಿರುದ್ದ ಜನರ ಅಭಿಪ್ರಾಯಕ್ಕೆ ಈ ರ್ಯಾಲಿ ವೇದಿಕೆಯಾಗಲಿದೆ. ಸುಮಾರು ‌3ಲಕ್ಷ ಜನರನ್ನು ‌ಸೇರಿಸುವ ಗುರಿ ಹೊಂದಲಾಗಿದೆ. ಇದಾದ ಬಳಿಕ ರಾಹುಲ್ ‌ಗಾಂಧಿ ತೆಲಗಾಂಣಕ್ಕೆ ಹೊರಡಲಿದ್ದಾರೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಹತ್ಯೆಯಾದ ‌ಸೈನಿಕರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದರು. ಹಿರಿಯ ‌ಸಾಹಿತಿ‌ ಡಾ. ಸುಮತೀಂದ್ರ ‌ನಾಡಿಗ ಅವರ ನಿಧನಕ್ಕೂ‌ ಸಂತಾಪ ಸೂಚಿಸಿದರು.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...