ದ್ವೇಷದ ರಾಜಕೀಯಕ್ಕೆ ಯಡಿಯೂರಪ್ಪ ಮುನ್ನುಡಿ?; ಡಿಕೆಶಿ ಬ್ರದರ್ಸ್​ ವಿರುದ್ಧ ಮಾಜಿ ಸಿಎಂ ಐಟಿ ಇಲಾಖೆಗೆ ಬರೆದ ಪತ್ರ ಬಹಿರಂಗ

news18
Updated:September 8, 2018, 1:20 PM IST
ದ್ವೇಷದ ರಾಜಕೀಯಕ್ಕೆ ಯಡಿಯೂರಪ್ಪ ಮುನ್ನುಡಿ?; ಡಿಕೆಶಿ ಬ್ರದರ್ಸ್​ ವಿರುದ್ಧ ಮಾಜಿ ಸಿಎಂ ಐಟಿ ಇಲಾಖೆಗೆ ಬರೆದ ಪತ್ರ ಬಹಿರಂಗ
  • News18
  • Last Updated: September 8, 2018, 1:20 PM IST
  • Share this:
- ಚಿದಾನಂದ್ ಪಟೇಲ್, ನ್ಯೂಸ್ 18 ಕನ್ನಡ 

ಬೆಂಗಳೂರು ( ಸೆ.08) : ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿ.ಎಸ್​ ಯಡಿಯೂರಪ್ಪ ಯತ್ನಿಸುತ್ತಿದ್ದಾರೆ, ಅದಕ್ಕಾಗಿ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದರು. ಸಿಎಂ ಆರೋಪ ಮಾಡಿದ ಕೆಲವೇ ದಿನಗಳ ಅಂತರದಲ್ಲಿ ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಗೆ ನೀಡಿದ ದೂರಿನ ಪತ್ರ ಬಹಿರಂಗವಾಗಿದೆ. ನ್ಯೂಸ್​ 18ಗೆ ಯಡಿಯೂರಪ್ಪ, ಡಿ.ಕೆ. ಶಿವಕುಮಾರ್​ ಮತ್ತು ಡಿ.ಕೆ. ಸುರೇಶ್​ ವಿರುದ್ಧ ನೀಡಿರುವ ದೂರಿನ ಪ್ರತಿ ಲಭ್ಯವಾಗಿದೆ.

ಆದಾಯ ತೆರಿಗೆ ಇಲಾಖೆ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ದುರ್ಬಳಕೆ ಮಾಡುತ್ತಿದೆ. ಈ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿರುವ ಪ್ರಮುಖ ಮುಖಂಡರನ್ನು ಬಿಜೆಪಿ ಟಾರ್ಗೆಟ್​ ಮಾಡುತ್ತಿದೆ ಎಂದು ಆರೋಪಿಸಿದ್ದರು. ಜತೆಗೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಆಗಾಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದೂ ಕುಮಾರಸ್ವಾಮಿ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ಮುಖ್ಯಮಂತ್ರಿ ಮಾಡಿದ ಆರೋಪ ಸಾಭೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲೊಡ್ಡಿದ್ದರು. ಇದೀಗ ಆದಾಯ ತೆರಿಗೆ ಇಲಾಖೆಗೆ ಕಾಂಗ್ರೆಸ್​ ನಾಯಕ ಮತ್ತು ಸಚಿವ ಡಿ.ಕೆ. ಶಿವಕುಮಾರ್​ ಮತ್ತು ಸಂಸದ ಡಿ.ಕೆ. ಸುರೇಶ್​ ವಿರುದ್ಧ ಐಟಿಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.

ಆದಾಯ ತೆರಿಗೆ ಇಲಾಖೆಯ ಭಾರತೀಯ ಆದಾಯ ತೆರಿಗೆ ಸೇವೆಯ ಆಯುಕ್ತ ಸುಶೀಲ್​ ಚಂದ್ರ ಅವರಿಗೆ ಯಡಿಯೂರಪ್ಪ ಕಳೆದ ಜನವರಿ 10ರಂದು ದೂರು ನೀಡಿದ್ದಾರೆ. ದೂರಿನಲ್ಲಿ ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಪತ್ರ ಬರೆಯುತ್ತಿದ್ದು, ಡಿ.ಕೆ. ಶಿವಕುಮಾರ್​ ಮತ್ತು ಡಿ.ಕೆ. ಸುರೇಶ್​ ವ್ಯಾಪಕ ಭ್ರಷ್ಟಾಚಾರ, ಅಕ್ರಮದಲ್ಲಿ ತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪುರಾವೆಗಳೂ ಇವೆ. ಈ ಹಿನ್ನೆಲೆಯಲ್ಲಿ ಇಬ್ಬರ ಮೇಲೂ ಸೂಕ್ತ ಕ್ರಮ ಜರುಗಿಸಿ ಎಂದು ಪತ್ರ ಬರೆದಿದ್ದರು. ಅದಾದ ನಂತರ ಆದಾಯ ತೆರಿಗೆ ಇಲಾಖೆ ಡಿ.ಕೆ. ಶಿವಕುಮಾರ್​ ಮನೆ, ಕಚೇರಿ ಮತ್ತು ಆಪ್ತರ ಮನೆಗಳ ಮೇಲೆ ದಾಳಿ ಮಾಡಿತ್ತು.

ಇದೀಗ ಯಡಿಯೂರಪ್ಪ ಅವರೇ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದು ಎಂಬುದಕ್ಕೆ ಸಾಕ್ಷಿ ಲಭ್ಯವಾಗಿದ್ದು, ದ್ವೇಷ ರಾಜಕಾರಣಕ್ಕೆ ಯಡಿಯೂರಪ್ಪ ಮುನ್ನುಡಿ ಬರೆದರೇ? ಎಂಬ ಪ್ರಶ್ನೆ ಮೇಲೆದ್ದಿದೆ.

ಡಿ.ಕೆ. ಸುರೇಶ್​ ವಾಗ್ದಾಳಿ:ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ವಾಮಮಾರ್ಗ ಹಾಗೂ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು  ಬಿಜೆಪಿ ವಿರುದ್ದ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕರ್ನಾಟಕದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಸರ್ಕಾರ ರಚಿಸಿದ್ದೇವೆ. ಹಾಗಾಗಿ ಇಡಿ, ಐಟಿ ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸುತ್ತಿದ್ದಾರೆ.  ಇದರ ಹಿಂದೆ ಇರುವವರನ್ನ ಬಂಧಿಸುವುದಕ್ಕೆ ಷಡ್ಯಂತ್ರ ನಡೆದಿದೆ. ಇದಕ್ಕೆ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರಿದ್ದಾರೆ ಎಂದು ಆರೋಪ ಮಾಡಿದ್ದರು.

ಸಿಬಿಐ ಅಧಿಕಾರಿಗಳು ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ

ಸಿಬಿಐ ಅಧಿಕಾರಿಗಳು ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ. ನನಗೂ ಕೂಡ ನೋಟೀಸ್ ಕೊಟ್ಟಿದ್ದರು. ಕಳೆದ ಹತ್ತು ದಿನಗಳ ಹಿಂದೆ ನಾನು ಸಿಬಿಐ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.

ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಗಮನಕ್ಕೆ ತರಲಿದ್ದೇನೆ. ಹಿಗಾಗಿ ಪ್ರಧಾನಿ ಭೇಟಿಗೆ ಅನುಮತಿ ಕೇಳಿದ್ದೇನೆ ಎಂದು ಡಿ.ಕೆ ಸುರೇಶ್ ಹೇಳಿದರು. 

ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಗೆ ಬರೆದ ಪತ್ರ


ದ್ವೇಷದ ರಾಜಕಾರಣ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೆಳೆದಿದೆ. ಅದರಲ್ಲೂ ಕರ್ನಾಟಕ ಬಿಜೆಪಿಯ ಟಾರ್ಗೆಟ್ ಆಗಿದೆ. ಇಲ್ಲಿ ಬಿಜೆಪಿಗೆ ಸಡ್ಡು ಹೊಡೆದು ಸಮಿಶ್ರ ಸರ್ಕಾರ ರಚನೆ ಆಗಿದೆ. ಕೇಂದ್ರ ಬಿಜೆಪಿ ಸರಕಾರ ಐಟಿ, ಇಡಿ, ಸಿಬಿಐಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರಕ್ಕೆ ಬೆಂಬಲವಾಗಿರುವವರನ್ನ ಬಂಧಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಐಟಿ ಅಧಿಕಾರಿಗಳು 4 ಪ್ರಾಸಿಕ್ಯೂಷನ್ ಕೇಸನ್ನ ಡಿಕೆಶಿ ವಿರುದ್ದ ಹಾಕಿದ್ದಾರೆ. ಅದು ಪ್ರಯೋಜನ ಆಗದಿದ್ದಾಗ ಮತ್ತೊಂದು ರೀತಿಯ ಪ್ರಯತ್ನ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಿಷನ್ 25 ಮಾಡಲು ಇಂತಹ ಒತ್ತಡ ಅನುಸರಿಸುತ್ತಿದ್ದಾರೆ

ಇದು ಸಿಬಿಐ ಅಲ್ಲಾ ಸಿಬಿಐ ಮೋರ್ಚಾ, ಐಟಿ ಮೋರ್ಚಾ, ಇಡಿ ಮೋರ್ಚಾ ಆಗಿ ಕೆಲಸ ಮಾಡುತ್ತಿದೆ‌. ಇದಕ್ಕೆಲ್ಲಾ ಕಾರಣ ರಾಜ್ಯ ಬಿಜೆಪಿ ನಾಯಕರು. ಆಪರೇಷನ್ ಕಮಲಕ್ಕೆ ಈಗಾಗಲೇ ಏಳು ಜನ‌ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಹಣದ ಆಮಿಷ ಒಡ್ಡಿದ್ದಾರೆ. ಗೋವಿಂದ ರಾಜ್ ಡೈರಿಯನ್ನು ಸದನದಲ್ಲಿ ಬಿಜೆಪಿಗರು ಹೇಗೆ ತೋರಿಸ್ತಾರೆ ಇದು ಹೇಗೆ ಸಾಧ್ಯ ? ಐಟಿ ಈಡಿಗೆ ಆರ್ ಟಿ ಐ ಅಪ್ಲೈ ಆಗಲ್ಲ, ಆದರೂ ಗೋವಿಂದ ರಾಜ್ ಡೈರಿ ಬಿಜೆಪಿಗರಿಗೆ ಹೇಗೆ ಸಿಕ್ಕಿತು ಎಂದು ಡಿಕೆ ಸುರೇಶ್ ಪ್ರಶ್ನೆ ಮಾಡಿದರು.

ಸೋನಿಯಾಗಾಂಧಿ, ವೀರಭದ್ರಸಿಂಗ್, ಮಮತಾ ಬ್ಯಾನರ್ಜಿ ಎಲ್ಲರಿಗೂ ತೊಂದರೆ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ನಾರಾಯಣ ರಾಣೆ ಮೇಲೆ ಒತ್ತಡ ಹೇರಿ ಅವರನ್ನು ಬಿಜೆಪಿ ಸೇರಿಸಿಕೊಂಡರು. ಗುಜರಾತ್​ ಶಾಸಕರ ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್​ರನ್ನು ಬಂಧಿಸುವ ಬಗ್ಗೆ ಬಿಜೆಪಿ ವಲಯದಲ್ಲಿ ಚರ್ಚೆಯಾಗಿರುವುದು ಗಮನಕ್ಕೆ ಬಂದಿದೆ. ನಾವು ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಿಲ್ಲ. ಸಿಬಿಐ ಬಂಧಿಸಿದರೆ ಎದುರಿಸಲು ಸಿದ್ದ ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ಬಿಎಸ್ ವೈ ಆದಾಯ ತೆರಿಗೆ ಇಲಾಖೆಗೆ ಬರೆದಿರುವ ಪತ್ರವನ್ನುಡಿ.ಕೆ.ಸುರೇಶ್​ ಬಿಡುಗಡೆ ಮಾಡಿದರು.


 

 
First published:September 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading