ಮುಗಿಯದ ಗಾಂಧಿ-ಗೋಡ್ಸೆ ವಿವಾದ; ಸಂಸದರ ಬಾಲಿಶ ಟ್ವೀಟ್​; ನಳಿನ್​ಗಿಂತ ಸಾಧ್ವಿಯೇ ಬೆಟರ್ ಎಂದು ಜರಿದ ಟ್ವೀಟಿಗರು.!

ಈ ಹಿಂದೆ ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕಿ ಸಾಧ್ವಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದರೆ, ಅವರ ಹೇಳಿಕೆಯನ್ನು ಸಮರ್ಥಿಸಿ ಟ್ವೀಟ್​ ಮಾಡುವ ಮೂಲಕ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಬೇಡದ ವಿವಾದವನ್ನು ಮೈಮೇಲೆ ಎಳೆದುಕೊಂಡು ಇದೀಗ ಪೇಚಿಗೆ ಸಿಲುಕುವಂತಾಗಿದೆ.

MAshok Kumar | news18
Updated:June 29, 2020, 5:36 PM IST
ಮುಗಿಯದ ಗಾಂಧಿ-ಗೋಡ್ಸೆ ವಿವಾದ; ಸಂಸದರ ಬಾಲಿಶ ಟ್ವೀಟ್​; ನಳಿನ್​ಗಿಂತ ಸಾಧ್ವಿಯೇ ಬೆಟರ್ ಎಂದು ಜರಿದ ಟ್ವೀಟಿಗರು.!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್.
  • News18
  • Last Updated: June 29, 2020, 5:36 PM IST
  • Share this:
ಬೆಂಗಳೂರು (ಮೇ17) : ಇತ್ತೀಚೆಗೆ ಲೋಕಸಭಾ ಚುನಾವಣಾ ಕಣದಲ್ಲಿ ಪ್ರಸ್ತುತ ಸಮಸ್ಯೆಗಳಿಗಿಂತ ರಾಷ್ಟ್ರಪಿತ ದಿವಂಗತ ಮಹಾತ್ಮ ಗಾಂಧಿ-ಗೋಡ್ಸೆ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ. ಆದರೆ, ಅದು ಬಿಜೆಪಿ ನಾಯಕರ ಅಪ್ರಬುದ್ಧ ಹೇಳಿಕೆಗಳಿಂದ ಎಂಬುದು ಮಾತ್ರ ವಿಷಾಧನೀಯ ಸಂಗತಿ.

ಈ ಹಿಂದೆ ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕಿ ಸಾಧ್ವಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದರೆ, ಅವರ ಹೇಳಿಕೆಯನ್ನು ಸಮರ್ಥಿಸಿ ಟ್ವೀಟ್​ ಮಾಡುವ ಮೂಲಕ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಬೇಡದ ವಿವಾದವನ್ನು ಮೈಮೇಲೆ ಎಳೆದುಕೊಂಡು ಇದೀಗ ಪೇಚಿಗೆ ಸಿಲುಕುವಂತಾಗಿದೆ.

ಮಹಾತ್ಮಾ ಗಾಂಧಿ ವಿಶ್ವಕ್ಕೆ ಶಾಂತಿಯ ಮಾದರಿಯಾದವರು. ದೇಶಕ್ಕೆ ಅವರು ನೀಡಿದ ಕೊಡುಗೆ ಹಾಗೂ ತ್ಯಾಗಗಳನ್ನು ಪರಿಗಣಿಸಿಯೇ ಅವರಿಗೆ ರಾಷ್ಟ್ರಪಿತ ಸ್ಥಾನಮಾನ ನೀಡಲಾಗಿದೆ. ಅವರು ದೇಶ ಕಂಡ ಅತ್ಯುತ್ತಮ ನಾಯಕ, ರಾಜಕೀಯ ನೇತಾರ ಹಾಗೂ ಅಜಾತಶತೃ ಎಂದು ಎಲ್ಲರಿಂದ ಒಪ್ಪಿಕೊಳ್ಳಲಾದ ದೇಶದ ಏಕೈಕ ವ್ಯಕ್ತಿ ಮಹಾತ್ಮಾ ಗಾಂಧಿ. ಆದರೆ, ಮಹಾತ್ಮನ ಕೊಲೆ ಹಿಂದೆಂದಿಗಿಂತಲೂ ಪ್ರಸ್ತುತ ಹೆಚ್ಚು ಚರ್ಚೆಯಾಗುತ್ತಿರುವುದು, ಗಾಂಧಿ ಕೊಲೆಗಡುಕರನ್ನು ದೇಶಭಕ್ತರು ಎಂದು ಬಿಂಬಿಸುವ ಗುಂಪು ರಾಜಾರೋಷವಾಗಿ ಹೇಳಿಕೆ ನೀಡುತ್ತಿರುವುದು ಮಾತ್ರ ವಿಪರ್ಯಾಸ.

ಗೋಡ್ಸೆಯನ್ನು ದೇಶಭಕ್ತ ಎಂದಿದ್ದ ಸಾಧ್ವಿ : ಈ ಹಿಂದೆ ತಾಜ್ ಹೋಟೆಲ್​ ದಾಳಿಯಲ್ಲಿ ಮೃತ ಪಟ್ಟಿದ್ದ ಯೋಧ ಹೇಮಂತ್​ ಕರ್ಕರೆ ಸಾವಿಗೆ ತನ್ನ ಶಾಪವೇ ಕಾರಣ ಎಂದು ಹೇಳುವ ಮೂಲಕ ದೇಶದಾದ್ಯಂತ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶಂಕಿತ ಉಗ್ರೆ  ಸಾಧ್ವಿ ಪ್ರಜ್ಞಾ ಸಿಂಗ್  ನಂತರ ಭುಗಿಲೆದ್ದ ಟೀಕೆಗಳಿಂದಾಗಿ ನಂತರ ಈ ಹೇಳಿಕೆಗೆ ದೇಶದೆದುರು ಕ್ಷಮೆ ಕೇಳಿದ್ದರು. ಆದರೂ, ಅವರು ತಮ್ಮ ಇಂತಹ ಬಾಲಿಶ ತಪ್ಪು ಹೇಳಿಕೆಗಳನ್ನು ನಿಲ್ಲಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಮತ್ತೆ ಗೋಡ್ಸೆ ಬಗ್ಗೆ ಹೇಳಿಕೆ ನೀಡುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಬುಧವಾರ ಚುನಾವಣಾ ಪ್ರಚಾರದ ವೇಳೆ ನಾಥೂರಾಮ್ ಗೋಡ್ಸೆ ಬಗ್ಗೆ ಪತ್ರಕರ್ತ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಪ್ರಜ್ಞಾ ಸಿಂಗ್ ಗಾಂಧಿಯನ್ನು ಹತ್ಯೆಗೈದಿದ್ದ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದರು. ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಮಾತ್ರವಲ್ಲ ಸ್ವತಃ ಬಿಜೆಪಿ ನಾಯಕರೂ ಸಹ ಕಿಡಿಕಾರಿದ್ದರು. ಅಲ್ಲದೆ ಈ ಹೇಳಿಕೆಗೆ ಸಾಧ್ವಿ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿಗರೇ ಒತ್ತಾಯಿಸಿದ್ದರು. ಪರಿಣಾಮ ಸಾಧ್ವಿ ಮತ್ತೊಮ್ಮೆ ದೇಶದೆದುರು ಕ್ಷಮೆ ಕೇಳುವ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದರು.  ಆದರೆ ಸಾಧ್ವಿ ಕ್ಷಮೆಯ ಬಳಿಕ ತಣ್ಣಗಾಗಬಹುದಾಗಿದ್ದ ಪ್ರಕರಣವನ್ನು ದಕ್ಷಿಣ ಕನ್ನಡ ಸಂಸದ ನಳಿನ್​ ಕುಮಾರ್​ ಕಟೀಲ್ ತಮ್ಮ ಟ್ವೀಟ್ ಮೂಲಕ ಮತ್ತೆ ಬಡಿದೆಬ್ಬಿಸಿದ್ದಾರೆ

ಸಂಸದ ಕಟೀಲ್​ಗಿಂತ ಸಾಧ್ವಿಯೇ ಬೆಟರ್​..!; ಅತ್ತ ಗಾಂಧಿ ಮತ್ತು ಗೋಡ್ಸೆ ಕುರಿತ ಚರ್ಚೆ ದೇಶದಾದ್ಯಂತ ಬೇರೆಯೇ ದೃಷ್ಟಿಕೋನದಲ್ಲಿ ಚರ್ಚೆಯಾಗುತ್ತ ಎಲ್ಲರೂ ಸಾಧ್ವಿ ಹೇಳಿಕೆಯನ್ನು ಟೀಕಿಸುತ್ತಿದ್ದರೆ, ಇತ್ತ ಸಾಧ್ವಿಗೆ ಬೆಂಬಲ ಸೂಚಿಸುವ ಬರದಲ್ಲಿಸಂಸದ ನಳಿನ್ ಕುಮಾರ್ ಕಟೀಲ್ ಮಾಡಿರುವ ಆ ಒಂದು ಟ್ವೀಟ್​ ಸಂಸದರ ಅಪ್ರಬುದ್ಧತೆಗೆ ಸಾಕ್ಷಿ ನುಡಿಯುತ್ತಿದೆ. ಅಲ್ಲದೆ ಜನರ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.“ನಾಥೂರಾಮ್ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್​ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಈಗ ನೀವೆ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?” ಎಂದು ಬಾಲಿಶವಾಗಿ ಟ್ವೀಟ್ ಮಾಡಿರುವ ಸಂಸದ ನಳಿನ್​ ಕುಮಾರ್​ ಕಟೀಲ್ ಬಹಿರಂಗವಾಗಿಯೇ ಸಾಧ್ವಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಕಟೀಲ್ ವಿರುದ್ಧ ನೆಟ್ಟಿಗರ ಆಕ್ರೋಶ: ಇದೀಗ ಕಟೀಲ್ ಅವರ ಟ್ವೀಟ್​ಗೆ ದೇಶದಾದ್ಯಂತ ​ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಟ್ವೀಟ್​ನಲ್ಲೇ ಪ್ರತಿಕ್ರಿಯೆ ನೀಡಿರುವ ಹಲವರು "ಸಂಸದ ನಳಿನ್​ ಕುಮಾರ್ ಕಟೀಲ್​ಗಿಂತ ಶಂಕಿತ ಉಗ್ರೆ ಸಾಧ್ವಿಯೇ ಉತ್ತಮ" ಎಂದು ಪ್ರತಿಕ್ರಿಸಿದ್ದರೆ, ಮತ್ತೆ ಕೆಲವರು "ಗೋದ್ರಾ  ಹತ್ಯಾಕಾಂಡ ನಿಮಗೆ ನೆನಪಾಗಲಿಲ್ಲವೆ, ಗುಜರಾತ್​ ನಲ್ಲಿ 1500 ಮುಸಲ್ಮಾನರು ಹಾಗೂ 500 ಹಿಂದೂಗಳ ಸಾವಿಗೆ ಕಾರಣ ಯಾರು?" ಎಂದು ಮರುಪ್ರಶ್ನೆ ಹಾಕಿದ್ದಾರೆ.

"ದಿನಬೆಳಗಾದರೆ ದೇಶದ ಜನರನ್ನು ತನ್ನ ಸುಳ್ಳಿನ ಮೂಲಕ ಮಾನಸಿಕವಾಗಿ ಕೊಲ್ಲುತ್ತಿರುವ ಈ ನಿಮ್ಮ ಪ್ರಧಾನಿಯಲ್ಲವೇ ಸರ್ ದೇಶದ ದುರಂತ. ಸುಳ್ಳಿನ ಸರದಾರ" ಎಂದು ಕೆಲವರು ಜರಿದರೆ ಮತ್ತೆ ಕೆಲವರು, "ದೇಶದ 130 ಕೋಟಿ ಜನರನ್ನು ತನ್ನ ಸುಳ್ಳಿನ ಮೂಲಕ ಕೊಂದ ಮೋದಿಯೇ ನಿಜವಾದ ಕ್ರೂರಿ" ಎಂದು ಕೆಲವರು ಸಂಸದರ ಕಾಲೆಳೆದಿದ್ದಾರೆ.

ಸಂಸದ ನಳಿನ್​ ಕುಮಾರ್ ಕಟೀಲ್ ಹೇಳಿಕೆಗೆ ಟ್ವೀಟ್ ಮೂಲಕವೇ ಆಕ್ರೋಶ ವ್ಯಕ್ತಪಡಿಸಿರುವ ಕುಂದಾಪುರ ಕಾಂಗ್ರೆಸ್​, “ಅವೈಜ್ಞಾನಿಕ ನೋಟು ಬ್ಯಾನ್ ಮಾಡಿ ದೇಶದ ಆರ್ಥಿಕತೆಯನ್ನು ದಿವಾಳಿ ಮಾಡಿದ ನಿಮ್ಮ ಪಕ್ಷ ಯಾವ ಮುಖ ಹೊತ್ತುಕೊಂಡು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದೆ? ಮಾತೆತ್ತಿದರೆ ಹಿಂದುತ್ವದ ಕುರಿತು ಮಾತನಾಡುವ ನಿಮ್ಮ ಅಥವಾ ನಿಮ್ಮ ಪಕ್ಷದ ಕೊಡುಗೆ ಹಿಂದೂ ಧರ್ಮಕ್ಕೆ ಏನು? ನಿಮ್ಮ ಪಕ್ಷ ಹುಟ್ಟುವ ಮೊದಲು ನಮ್ಮ ಹಿಂದೂ ಧರ್ಮ ಇದ್ದಿರಲಿಲ್ಲವೇ?" ಎಂದು ಪ್ರಶ್ನೆ ಮಾಡಿದೆ.

ಒಟ್ಟಾರೆ ನಾಥೂರಾಮ್​ ಗೋಡ್ಸೆ ದೇಶದ ಮೊದಲ ಉಗ್ರ ಎಂದು ಹೇಳುವ ಮೂಲಕ ಈ ವಿವಾದಕ್ಕೆ ಮೊದಲು ಅಂಕಿತ ಹಾಕಿದ್ದು ತಮಿಳುನಾಡಿನ ನಟ ರಾಜಕಾರಣಿ ಕಮಲಹಾಸನ್ . ಆದರೆ, ಈ ವಿವಾದದ ಕುರಿತು ಹೆಚ್ಚು ಪೇಚಿಗೆ ಸಿಲುಕಿರುವುದು ಮಾತ್ರ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಸಂಸದ ನಳಿನ್​ ಕುಮಾರ್ ಕಟೀಲ್. ಈಗಾಗಲೇ ಗೋಡ್ಸೆ ಕುರಿತ ತಮ್ಮ ಹೇಳಿಕೆಗೆ ಸ್ವಪಕ್ಷೀಯರಿಂದಲೇ ಕೆಂಗಣ್ಣಿಗೆ ಗುರಿಯಾಗಿದ್ದ ಸಾಧ್ವಿ ದೇಶದ ಕ್ಷಮೆ ಕೇಳಿದ್ದಾರೆ. ಟ್ವೀಟರ್​ನಲ್ಲಿ ನಳಿನ್​ ವಿರುದ್ಧ ವ್ಯಕ್ತವಾಗುತ್ತಿರುವ ಆಕ್ರೋಶವನ್ನು ಗಮನಿಸಿದರೆ ಭವಿಷ್ಯದಲ್ಲಿ ಅವರಿಗೂ ಇಂತಹದ್ದೇ ಪರಿಸ್ಥಿತಿ ಎದುರಾದರೂ ಅಚ್ಚರಿ ಇಲ್ಲ
First published: May 17, 2019, 9:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading