ಯಡಿಯೂರಪ್ಪರನ್ನ ಇಳಿಸಿದರೆ, ಆಂಧ್ರದಲ್ಲಾಗಿದ್ದು ಕರ್ನಾಟಕದಲ್ಲಾಗುತ್ತೆ: ಬಿಜೆಪಿ ವರಿಷ್ಠರನ್ನ ಎಚ್ಚರಿಸಿದ ಸುರೇಶ್ ಗೌಡ

ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷ ರಾಜಶೇಖರ್ ರೆಡ್ಡಿ ಅವರನ್ನ ಸಿಎಂ ಸ್ಥಾನದಿಂದ ಇಳಿಸಿತು. ಮುಂದೆ ಅವರ ಮಗ ಜಗನ್ಮೋಹನ್ ರೆಡ್ಡಿ ಸಿಎಂ ಆದರು. ಅದೇ ರೀತಿ ಯಡಿಯೂರಪ್ಪರನ್ನ ಇಳಿಸಿದರೆ ಮುಂದೆ ಅವರ ಮಗ ವಿಜಯೇಂದ್ರ ಸಿಎಂ ಆಗುತ್ತಾರೆ ಎಂದು ಸುರೇಶ್ ಗೌಡ ಹೇಳಿದ್ದಾರೆ.

ಬಿ.ಎಸ್.​ ಯಡಿಯೂರಪ್ಪ.

ಬಿ.ಎಸ್.​ ಯಡಿಯೂರಪ್ಪ.

  • Share this:
ಬೆಂಗಳೂರು(ಜುಲೈ 21): ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ಆಗುತ್ತೆಂಬ ವದಂತಿ ಹಬ್ಬುತ್ತಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆ ತೀವ್ರ ಗತಿಯಲ್ಲಿ ನಡೆದಿದೆ. ರಾಜ್ಯದ ಬಹುತೇಕ ಮಠಗಳ ಸ್ವಾಮಿಗಳು ಯಡಿಯೂರಪ್ಪ ಪರ ನಿಂತಿದ್ದಾರೆ. ಇಂದು ಅನೇಕ ಸ್ವಾಮಿಗಳು ಮುಖ್ಯಮಂತ್ರಿಯನ್ನು ಭೇಟಿಯಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮಾಜಿ ಶಾಸಕ ಸುರೇಶ್ ಗೌಡ ಅವರು ಯಡಿಯೂರಪ್ಪರನ್ನ ಬದಲಿಸಿದರೆ ಬಿಜೆಪಿಗೆ ಭಾರೀ ಹೊಡೆತ ಬೀಳುತ್ತದೆ ಎಂದು ಎಚ್ಚರಿಸಿದ್ದಾರೆ. ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್ ಗೌಡ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡಬಾರದು. ಹಾಗೇನಾದರು ಮಾಡಿದರೆ ಪಕ್ಷಕ್ಕೆ ಭಾರೀ ಹಿನ್ನಡೆ ಆಗುತ್ತದೆ ಎಂದು ಹೇಳಿ ಆಂಧ್ರ ಪ್ರದೇಶ ರಾಜಕೀಯ ಬೆಳವಣಿಗೆಯ ನಿದರ್ಶನವೊಂದನ್ನ ನೀಡಿದ್ದಾರೆ.

ಯಡಿಯೂರಪ್ಪ ಅವರನ್ನ ಬದಲಾವಣೆ ಮಾಡಿದರೆ ಆಂಧ್ರ ಪ್ರದೇಶದಲ್ಲಿ ಹೇಗೆ ಆಯಿತೋ ಹಾಗೆ ಆಗುತ್ತದೆ. ಆಂದ್ರದಲ್ಲಿ ಕಾಂಗ್ರೆಸ್ ಪಕ್ಷ ರಾಜಶೇಖರ ರೆಡ್ಡಿ ಅವರನ್ನ ಸಿಎಂ ಸ್ಥಾನದಿಂದ ಇಳಿಸಿತು. ಅದಾದ ಬಳಿಕ ಕಾಂಗ್ರೆಸ್ ನೆಲಕಚ್ಚಿತು. ರಾಜಶೇಖರ್ ರೆಡ್ಡಿ ಅವರ ಮಗ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಹೇಗೆ ಬಂದರೋ ಅದೇ ರೀತಿ ಇಲ್ಲೂ ಆಗುತ್ತೆಂದು ಜನರು ಮಾತಾಡುತ್ತಾರೆ ಎಂದು ಸುರೇಶ್ ಗೌಡ ತಿಳಿಹೇಳಿದ್ದಾರೆ.

ಆಂಧ್ರದಲ್ಲಿ ರಾಜಶೇಖರ್ ರೆಡ್ಡಿ ಮಗ ಜಗನ್​ಮೋಹನ್ ರೆಡ್ಡಿ ಸಿಎಂ ಆದ ರೀತಿಯಲ್ಲಿ ಯಡಿಯೂರಪ್ಪರನ್ನ ಕೆಳಗಿಳಿಸಿದರೆ ಅವರ ಮಗ ವಿಜಯೇಂದ್ರ ಸಿಎಂ ಆಗುತ್ತಾರೆ ಎಂಬುದು ತಮ್ಮ ಮಾತಿನ ಅರ್ಥವಾ ಎಂದು ಮಾಧ್ಯಮದವರು ಕೇಳಿದಾಗ, ಹೌದು ಎಕ್ಸಾಕ್ಟ್ಲೀ (Exactly) ಎಂದು ಮಾಜಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಯಡಿಯೂರಪ್ಪ ಸಿಎಂ ಆದಾಗ ಅವರನ್ನ ಪಕ್ಷ ಹಾಗೂ ಹೈಕಮಾಂಡ್ ಬಹಳ ಡಿಸ್ಟರ್ಬ್ ಮಾಡುತ್ತೆ. ಈಗ ಅವರಿಗೆ ತೊಂದರೆ ಕೊಟ್ಟರೆ ಪಕ್ಷಕ್ಕೆ ತುಂಬಾ ಸಮಸ್ಯೆ ಆಗಲಿದೆ ಎಂದೂ ಸುರೇಶ್ ಗೌಡ ಅವರು ಬಿಜೆಪಿ ವರಿಷ್ಠರನ್ನ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಸರ್ವಜನಾಂಗವನ್ನೂ ಜೊತೆಯಲ್ಲಿ ಒಯ್ಯುವ ಯಡಿಯೂರಪ್ಪಗೆ ತೊಂದರೆ ಆಗಬಾರದು: ಮುರುಘಾ ಶರಣರು

ಇದೇ ವೇಳೆ, ರಾಜ್ಯದ ಬಹುತೇಕ ಮಠಗಳು ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿವೆ. ನಿನ್ನೆ ಚಿತ್ರದುರ್ಗದಲ್ಲಿ ಹಲವು ಮಠಾಧೀಶರು ಪತ್ರಿಕಾಗೋಷ್ಠಿ ನಡೆಸಿ ಸಿಎಂ ಪರ ಮಾತನಾಡಿದ್ದರು. ಇಂದೂ ಕೂಡ ಯಡಿಯೂರಪ್ಪ ಪರ ಸ್ವಾಮೀಜಿಗಳು ಧ್ವನಿ ಎತ್ತುವುದು ಮುಂದುವರಿದಿದೆ. ಪೇಜಾವರ ಮಠದ ಸ್ವಾಮಿಗಳೂ ಕೂಡ ಬೆಂಬಲ ವ್ಯಕ್ತಪಡಿಸಿರುವುದು ಗಮನಾರ್ಹ. ಕೊರೋನಾ ಸಂದರ್ಭದಲ್ಲಿ ಸಿಎಂ ಆಗಿ ಯಡಿಯೂರಪ್ಪ ಉತ್ತಮವಾಗಿ ಸಮಸ್ಯೆ ನಿಭಾಯಿಸಿದ್ದಾರೆ. ಈಗ ಅವರನ್ನ ಬದಲಾವಣೆ ಮಾಡಲು ಸರಿಲ್ಲ ಎಂದು ತಮ್ಮ ಅನಿಸಿಕೆ ತೋರ್ಪಡಿಸಿದ್ದಾರೆ.

ಇವತ್ತು ಬೆಂಗಳೂರಿನಲ್ಲರುವ ಕೊಳದ ಮಠದ ಡಾ. ಶಾಂತವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಂಜಾಮಠದ ಚಿದ್ಘನ ಸ್ವಾಮಿ, ಜಗದ್ಗುರ ಉದಾಸೀನ ಮಠd ಸನಾತನ ಮುನಿ, ಬಸವನಗುಡಿಯ ಟೆಂಪಲ್ ಆಫ್ ಸಕ್ಸಸ್​ನ ರಘುನಾಥ ಗುರೂಜಿ ಮೊದಲಾದವರು ಪಾಲ್ಗೊಂಡು ಯಡಿಯೂರಪ್ಪಗೆ ಬೆಂಬಲ ನೀಡಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರು ಸ್ವ ಇಚ್ಛೆಯಿಂದ ಕೆಳಗಿಳಿದರೆ ಲಿಂಗಾಯತ ಶಾಸಕರೊಬ್ಬರನ್ನೇ ಸಿಎಂ ಆಗಿ ಮಾಡಿ. ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಮೊದಲಾದವರ ಪೈಕಿ ಒಬ್ಬರನ್ನ ಮಾಡಿ ಎಂದು ಕೊಳದ ಮಠದ ಶ್ರೀಗಳು ಒತ್ತಾಯಿಸಿದ್ದಾರೆ.

ಹೊಸದುರ್ಗದ ಯಾದವ ಮಠದ ಸ್ವಾಮಿ, ಕಾಗಿನೆಲೆ ಕನಕಗುರು ಪೀಠದ ಈಶ್ವರಾನಂದ ಮಹಾಸ್ವಾಮಿ, ನಿರಂಜನಾನಂದ ಪುರಿ ಮಹಾಸ್ವಾಮಿ, ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮೊದಲಾದವರು ಇಂದು ಸಿಎಂ ಅವರ ಕಾವೇರಿ ನಿವಾಸಕ್ಕೆ ತೆರಳಿ ಭೇಟಿಯಾಗಿಯೂ ಬಂದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಪಕ್ಷವು ಗೌರವಯುತವಾಗಿ ನಡೆಸಿಕೊಳ್ಳಬೇಕು. ಪೂರ್ಣಾವಧಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಶ್ರೀಗಳೆಲ್ಲರೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ಧಾರೆ.
Published by:Vijayasarthy SN
First published: