ನವ ದೆಹಲಿ (ಮಾರ್ಚ್ 6): ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸೆಕ್ಸ್ ಸಿಡಿಯೊಂದು ಬಹಿರಂಗಗೊಂಡು ಅವರು ರಾಜೀನಾಮೆ ನೀಡುತ್ತಿದ್ದಂತೆ ಬೆಚ್ಚಿ ಬಿದ್ದಿರುವ ಆರು ಸಚಿವರು ತಡೆಯಾಜ್ಞೆ ಕೋರಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಷಯ ಈಗ ಬಿಜೆಪಿ ಹೈಕಮಾಂಡ್ ಅಂಗಳವನ್ನೂ ತಲುಪಿದ್ದು ಬಿಜೆಪಿ ಹೈಕಮಾಂಡ್ ನಾಯಕರು ಮಾಹಿತಿ ಸಂಗ್ರಹಿಸಿದ್ದಾರೆ. ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಐದು ಕ್ಷೇತ್ರಗಳ ಉಸ್ತುವಾರಿ ನೀಡಲಾಗಿದೆ. ಈ ಬಗ್ಗೆ ಶನಿವಾರ ಸಚಿವ ಅರವಿಂದ ಲಿಂಬಾವಳಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯದ ಸಚಿವರು ಅವಸರದಲ್ಲಿ ಕೋರ್ಟ್ ಮೆಟ್ಟಿಲು ಏರಿದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆರು ಮಂದಿ ಸಚಿವರು ಸ್ವತಃ ಕೋರ್ಟ್ ಮೊರೆ ಹೋಗಿದ್ದು ಏಕೆ? ಇದರಿಂದ ತಾವು ತಪ್ಪಿತಸ್ಥರು ಎಂದು ಒಪ್ಪಿಕೊಂಡ ಹಾಗಲ್ಲವೇ? ಕೋರ್ಟಿಗೆ ಹೋಗುವ ಮುನ್ನ ಪಕ್ಷದ ನಾಯಕರನ್ನು ಇವರು ಸಂಪರ್ಕ ಮಾಡಿದ್ದರಾ? ಪಕ್ಷದ ಸಲಹೆ ಸೂಚನೆ ಏನಿತ್ತು? ಅಥವಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಚರ್ಚೆ ಮಾಡಿದ್ದರಾ? ಒಟ್ಟಾರೆ ಸಚಿವರು ಆತುರ ತೋರಿದ್ದು ಏಕೆ? ಎಂಬ ಮಾಹಿತಿಗಳನ್ನು ಸಚಿವ ಅರವಿಂದ್ ಲಿಂಬಾವಳಿ ಅವರಿಂದ ಜೆ.ಪಿ. ನಡ್ಡಾ ಪಡೆದಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಅವರ ವಿಡಿಯೋ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಪ್ರತಿಪಕ್ಷಗಳ ತಂತ್ರ ಇದೆ ಎಂಬಿತ್ಯಾದಿಯಾಗಿ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಆಪ್ತ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರಂತೂ 'ಈ ಷಡ್ಯಂತ್ರದ ಹಿಂದೆ ಕನಕಪುರ ಮೂಲದ ಪ್ರಭಾವಿ ರಾಜಕಾರಣಿ ಒಬ್ಬರ ಕೈವಾಡ ಇದೆ' ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಡೆಗೆ ಬೊಟ್ಟು ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅರವಿಂದ ಲಿಂಬಾವಳಿ ಬಳಿ 'ಪ್ರತಿಪಕ್ಷದ ನಾಯಕರ ಕೈವಾಡದ ಸಾಧ್ಯಾಸದ್ಯತೆ' ಬಗ್ಗೆ ಕೂಡ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜೆ.ಪಿ. ನಡ್ಡಾ ಭೇಟಿ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ ಮಾತ್ರ 'ತಾನು ಜೆ.ಪಿ. ನಡ್ಡಾ ಜೊತೆ ರಾಜ್ಯದ ವಿಚಾರ ಚರ್ಚೆ ಮಾಡಿಲ್ಲ' ಎಂದು ಜಾರಿಕೊಂಡರು. ಹೈಕಮಾಂಡ್ ನಾಯಕರ ಬುಲಾವ್ ಹಿನ್ನಲೆಯಲ್ಲಿ ದೆಹಲಿಗೆ ಆಗಮಿಸಿದ್ದೆ. ಪಶ್ಚಿಮ ಬಂಗಾಳ ಚುನಾವಣೆ ಹಿನ್ನಲೆ ಬುಲಾವ್ ನೀಡಲಾಗಿತ್ತು. ಕೇವಲ ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಮಾತ್ರ ಚರ್ಚೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ