news18-kannada Updated:February 12, 2021, 2:51 PM IST
ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು (ಫೆ. 12): ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದ ಅನಿಶ್ಚಿತತೆ ಕುರಿತು ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕಾರಣ ಕೇಳಿ ಪಕ್ಷ ನೋಟಿಸ್ ಜಾರಿ ಮಾಡಿದೆ. ಪಕ್ಷ ವಿರೋಧಿ ಚಟುವಟಿಕೆಗೆ ಕಾರಣ ನೀಡುವಂತೆ ಹೈ ಕಮಾಂಡ್ ನೋಟಿಸ್ ಜಾರಿಗೊಳಿಸಿದೆ. ಸಮಸ್ಯೆ ಇದ್ದರೆ ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು, ಪದೇ ಪದೇ ಪಕ್ಷ ಹಾಗೂ ನಾಯಕರಿಗೆ ಮುಜುಗರಕ್ಕೆ ಒಳಗಾಗುವಂತಹ ಹೇಳಿಕೆ ನೀಡಿದರೆ ಪಕ್ಷದ ಘನತೆಗೆ ಕುಂದು ಉಂಟಾಗುತ್ತದೆ. ಇದು ಪಕ್ಷ ವಿರೋಧಿ ಚಟುವಟಿಕೆ ಆಗಿದ್ದು, ಇದಕ್ಕೆ ಸ್ಪಷ್ಟೀಕರಣ ನೀಡುವಂತೆ ಪಕ್ಷದ ಶಿಸ್ತು ಸಮಿತಿ ಸೂಚಿಸಿದೆ.
ಮುಖ್ಯಮಂತ್ರಿ ಸ್ಥಾನ ಬದಲಾವಣೆ ಶೀಘ್ರದಲ್ಲಿಯೇ ನಡೆಯಲಿದೆ. ಬಿಎಸ್ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಪದೇ ಪದೇ ಮಾಧ್ಯಮಗಳಿಗೆ ಯತ್ನಾಳ್ ಹೇಳಿಕೆ ನೀಡುತ್ತಿದ್ದರು. ಅಲ್ಲದೇ, ಯಡಿಯೂರಪ್ಪ ಅವರನ್ನು ಬೆದರಿಸಿ ಕೆಲವರು ಮಂತ್ರಿ ಪದವಿ ಪಡೆದಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದರು. ಅವರ ಈ ಹೇಳಿಕೆ ವಿರುದ್ಧ ಅವರದೇ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ರೀತಿ ಪಕ್ಷದ ವಿರುದ್ಧ ಅವರು ಮಾತನಾಡುವುದು ಸರಿಯಲ್ಲ. ಅವರ ಸಮಸ್ಯೆ ಬಗ್ಗೆ ರಾಜ್ಯಾಧ್ಯಕ್ಷರು ಅಥವಾ ರಾಷ್ಟ್ರೀಯ ನಾಯಕರಿಗೆ ತಿಳಿಸಬೇಕು ಈ ರೀತಿ ಬೀದಿಯಲ್ಲಿ ನಿಂತು ಮಾತನಾಡುವುದರಿಂದ ಅವರ ಭವಿಷ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಇತ್ತೀಚೆಗೆ ಕೇಂದ್ರ ಸಚಿವ ಸದಾನಂದಗೌಡ ಕೂಡ ಟೀಕಿಸಿದ್ದರು.
ಇದನ್ನು ಓದಿ: ದೇಶದಲ್ಲಿ ಲಾಕ್ಡೌನ್ ತೆರವಾದರೂ ಕೊಡಗಿನ ಟಿಬೆಟಿಯನ್ ಕ್ಯಾಂಪಿಗೆ ಮಾತ್ರ ಪ್ರವೇಶ ನಿಷಿದ್ಧ
ಪದೇ ಪದೇ ಪಕ್ಷ ವಿರೋಧಿ ಹೇಳಿಕೆ ನೀಡುವ ಮೂಲಕ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ವಿಪಕ್ಷಗಳ ಮುಂದೆ ತಿಳಿಸುವ ಯತ್ನ ನಡೆಸಿದ್ದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಎಂ ಬಿಎಸ್ವೈ ಎದುರೇ ಕುಳಿತು ಅನುದಾನ ಹಂಚಿಕೆ ಸೇರಿದಂತೆ ಹಲವು ವಿಷಯಗಳ ವಿರುದ್ಧ ಅವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದರು. ಬಿಜೆಪಿ ನಾಯಕರುಗಳು ಕೂಡ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಈ ಕುರಿತು ಹೈ ಕಮಾಂಡ್ ತೀರ್ಮಾನ ನಡೆಸಲಿದೆ ಎಂದಿದ್ದರು.
ಯತ್ನಾಳ್ ಅವರ ಈ ನಡುವಳಿಕೆ ವಿರುದ್ಧ ಹಲವು ನಾಯಕರು ಈ ವಿಷಯವನ್ನು ಹೈ ಕಮಾಂಡ್ಗೆ ತಿಳಿಸಿದ್ದರು. ಬೆಳಗಾವಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿತ್ತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಸಮಿತಿಗೆ ದೂರು ನೀಡಿದ್ದರು
Published by:
Seema R
First published:
February 12, 2021, 2:47 PM IST