ನವದೆಹಲಿ (ಜು. 31): ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈ ಗೊಂಡಿದ್ದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿ ಕೇವಲ ಹೈ ಕಮಾಂಡ್ಗೆ ಧನ್ಯವಾದ ಅರ್ಪಿಸಲು ಮಾತ್ರ ಸೀಮಿತವಾಯಿತು. ನಿನ್ನೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಸಿಎಂ ಧನ್ಯವಾದಗಳನ್ನು ಸಲ್ಲಿಸಿದ್ದರು. ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಬಳಿಕ ಅವರು ಬೆಂಗಳೂರಿಗೆ ಬರೀ ಕೈಯಲ್ಲಿ ವಾಪಸ್ಸಾಗುತ್ತಿದ್ದಾರೆ. ಈ ಮೂಲಕ ಸಂಪುಟ ರಚನೆಯ ಕಸರತ್ತು ಮುಂದಿನವಾರ ನಡೆಸಲು ನಿರ್ಧರಿಸಿದ್ದಾರೆ. ಪಕ್ಷದ ಅಧ್ಯಕ್ಷರ ಬಳಿ ಸಂಪುಟ ರಚನೆ ಕುರಿತು ಸಿಎಂ ಚರ್ಚಿಸಿದರೂ ಇದಕ್ಕೆ ಯಾವುದೇ ಹಸಿರು ನಿಶಾನೆ ಸಿಕ್ಕಿಲ್ಲ. ಹೀಗಾಗಿ ಸಿಎಂ ನೇತೃತ್ವ ಏಕ ವ್ಯಕ್ತಿ ಸಂಪುಟ ರಾಜ್ಯದಲ್ಲಿ ಇನ್ನೊಂದು ವಾರ ಇರಲಿದೆ.
ಜೆ ಪಿ ನಡ್ಡಾ ಯಾವುದೋ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಕಾರಣ ಈ ಕುರಿತು ಸವಿವರವಾದ ಚರ್ಚೆ ನಡೆದಿಲ್ಲ. ಈ ಕುರಿತು ಮಾಹಿತಿ ಪಡೆದಿರುವ ಅಧ್ಯಕ್ಷರು ಇನ್ನು ಎರಡು ಮೂರು ದಿನದಲ್ಲಿ ಈ ಕುರಿತು ಚರ್ಚೆ ನಡೆಸೋಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಕೇವಲ ಇನ್ನು ಒಂದು ಮುಕ್ಕಾಲು ವರ್ಷ ಆಡಳಿತ ಅವಧಿ ಇರುವ ಹಿನ್ನಲೆ ಒಂದೇ ಹಂತದಲ್ಲಿ ಸಂಪುಟ ರಚನೆ ನಡೆಸುವ ಚಿಂತನೆ ನಡೆಸಲಾಗಿದೆ. ಪಕ್ಷದಲ್ಲಿ ಆಕಾಂಕ್ಷಿಗಳು ಕೂಡ ಹೆಚ್ಚಿರುವ ಹಿನ್ನಲೆ ಯಾರಿಗೆ ಸ್ಥಾನ ನೀಡಬೇಕು ಎಂಬ ಚರ್ಚೆ ಕೂಡ ಮುಂದುವರೆದಿದೆ.
ಇದೇ ವೇಳೆ ಹಲವು ನಾಯಕರು ಹೈ ಕಮಾಂಡ್ ಮಟ್ಟದಲ್ಲಿ ಲಾಬಿ ಕೂಡ ನಡೆಸಿದ್ದು, ಈ ಬಾರಿ ಸಚಿವರ ಆಯ್ಕೆಗೆ ಸಿಎಂಗೆ ನಿರ್ಣಯ ನಡೆಸುವಂತೆ ಕೂಡ ಸೂಚನೆ ನೀಡಲಾಗಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವರ ಪಟ್ಟಿ ತಯಾರಿಸುವಂತೆ ತಿಳಿಸಲಾಗಿದೆ, ಅಲ್ಲದೇ ಮುಂದಿನ ಬಾರಿ ಬರುವಾಗ ಸಚಿವರ ಪಟ್ಟಿಯೊಂದಿಗೆ ಬನ್ನಿ ಎಂದು ತಿಳಿಸಿದ್ದು, ಈಗ ಸಿಎಂ ಮುಂದೆ ಪಟ್ಟಿ ತಯಾರಿಸುವ ಸವಾಲ್ ಎದುರಾಗಿದೆ.
ಇದನ್ನು ಓದಿ: ಮಂತ್ರಿಪಟ್ಟಕ್ಕೆ ತಡೆಯಾಜ್ಞೆಯೇ ಕಂಟಕ; ಕೋರ್ಟ್ ಮೆಟ್ಟಿಲೇರಿದ ನಾಯಕರಲ್ಲಿ ಆತಂಕ
ಇನ್ನೆರಡು ದಿನದಲ್ಲಿ ಮತ್ತೆ ದೆಹಲಿಗೆ
ಕಳೆದ ಬಾರಿ ಬಿಎಸ್ ಯಡಿಯೂರಪ್ಪ ಸಂಪುಟ ರಚನೆಯಲ್ಲಿ ಆದ ವಿಳಂಬದಂತೆ ಈ ಬಾರಿ ಆಗದಂತೆ ನೋಡಿಕೊಳ್ಳಲಾಗಿದೆ. ಇದೇ ಹಿನ್ನಲೆಯಲ್ಲಿ ಸೋಮವಾರವೇ ಮತ್ತೆ ಸಿಎಂ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಕೂಡ ಇದೆ. ಸಂಜೆ ಬೆಂಗಳೂರಿಗೆ ಆಗಮಿಸುವ ಸಿಎಂ ನಾಳೆ, ನಾಡಿದ್ದು ಸಚಿವರ ಪಟ್ಟಿ ತಯಾರಿಸಿ ಮತ್ತೆ ದೆಹಲಿಗೆ ಹೊರಡಲಿದ್ದಾರೆ. ಮಂಗಳವಾರ ಮತ್ತೆ ನಡ್ಡಾ ಭೇಟಿಯಾಗಿ ಒಪ್ಪಿಗೆ ಪಡೆಯಲಿದ್ದು, ಗುರುವಾರ ಸಂಪುಟ ವಿಸ್ತರಣೆ ಕಾರ್ಯ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಕಳಂಕಿತರಿಗಿಲ್ಲ ಸ್ಥಾನ
ಈ ಬಾರಿ ಸರ್ಕಾರದಲ್ಲಿ ಕಳಂಕಿತರಿಗೆ ಅದರಲ್ಲೂ ನ್ಯಾಯಾಲಯದ ಮೊರೆ ಹೋಗಿ ತಮ್ಮ ವಿರುದ್ಧ ಮಾನಹಾನಿಯಂತ ಪ್ರಕರಣ ಪ್ರಸಾರವಾಗದಂತೆ ತಡೆಯಾಜ್ಞೆ ತಂದ ಶಾಸಕರಿಗೆ ಸಚಿವ ಸ್ಥಾನ ನೀಡದಂತೆ ಆರ್ಎಸ್ಎಸ್ ಸಂದೇಶ ನೀಡಿದೆ. ಈ ಹಿನ್ನಲೆ ಸಚಿವರ ಆಯ್ಕೆಯಲ್ಲಿ ಸಿಎಂ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.
ಪ್ರಾದೇಶಿಕ ಸಮತೋಲನೆ
ಈ ಬಾರಿ ಉತ್ತರ ಕರ್ನಾಟಕ ಶಾಸಕರಿಗೆ ಸಚಿವ ಸ್ಥಾನ ನೀಡುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಈಗಾಗಲೇ ಶಾಸಕರು ತಿಳಿಸಿದ್ದಾರೆ. ಪ್ರಾದೇಶಿಕ ಸಮತೋಲನೆ ಕಾಯ್ದುಕೊಂಡು ಎಲ್ಲಾ ಸಮುದಾಯದ ನಾಯಕರಿಗೆ ಅನ್ಯಾಯವಾಗದಂತೆ ಸಂಪುಟ ರಚನೆ ನಡೆಸಬೇಕು ಎಂಬ ಕೂಗು ಕೇಳಿ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ