ನವದೆಹಲಿ, ಜೂ. 12: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೂರು ಮುಖ್ಯ ಟಾಸ್ಕ್ ನೀಡಿದ್ದಾರೆ ಎಂದು ನ್ಯೂಸ್ 18 ಕನ್ನಡಕ್ಕೆ ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ರಾಜ್ಯ ಬಿಜೆಪಿ ಬಿಕ್ಕಟ್ಟು ಬಗೆಹರಿಸಲು ಜೂನ್ 16ರಂದು ಅರುಣ್ ಸಿಂಗ್ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಮೂರು ದಿನ ಬೆಂಗಳೂರಿನಲ್ಲೇ ಇರಲಿದ್ದಾರೆ. ಆ ಸಂದರ್ಭದಲ್ಲಿ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿರುವ, ಗೊಂದಲ ಸೃಷ್ಟಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರವೂ ಸೇರಿದಂತೆ ಮೂರು ಮುಖ್ಯ ಟಾಸ್ಕ್ ಗಳ ಮೇಲೆ ಗಮನ ಹರಿಸಲಿದ್ದಾರೆ ಎನ್ನಲಾಗಿದೆ.
ಟಾಸ್ಕ್ ನಂಬರ್ 1:
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸಬೇಕೋ ಅಥವಾ ಬೇಡವೋ? ಎಂಬುದು. ಒಂದೊಮ್ಮೆ ಯಡಿಯೂರಪ್ಪ ಅವರನ್ನು ಬದಲಿಸಿದರೆ ಆಗಬಹುದಾದ ಸಾಧಕ ಬಾಧಕಗಳು ಏನು? ಇದು ಮುಂದೆ ಯಾವ ರೀತಿಯ ಪರಿಣಾಮ ಬೀರಲಿದೆ? ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಹೇಗೆ? ಎಂಬ ಬಗ್ಗೆ ಆರ್‌ಎಸ್‌ಎಸ್ ನಾಯಕರು, ಬಿಜೆಪಿ ಹಿರಿಯರು, ಸಚಿವರು, ಶಾಸಕರು ಮುಖ್ಯವಾಗಿ ಬಂಡಾಯಗಾರರಿಂದ ಅಭಿಪ್ರಾಯ ಸಂಗ್ರಹಿಸುವುದು.
ಟಾಸ್ಕ್ ನಂಬರ್ 2:
ಒಂದೊಮ್ಮೆ ಯಡಿಯೂರಪ್ಪ ಅವರನ್ನು ಬದಲಿಸಿದರೆ ಯಾರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು? ಯಾರಿಗೆ ಕೊಟ್ಟರೆ ಹೆಚ್ಚು ಸೂಕ್ತ? ಸೋಷಿಯಲ್ ಇಂಜಿನಿಯರಿಂಗ್ ಮತ್ತು ಸಾಮರ್ಥ್ಯದ ದೃಷ್ಟಿಯಲ್ಲಿ ಯಾರು ಉತ್ತಮರು? ಯಡಿಯೂರಪ್ಪ ಅವರನ್ನು ಕದಲಿಸಿದರಿಂದ ಉಂಟಾಗುವ ರಾಜಕೀಯ ಸಂಚಲನವನ್ನು ನಿಭಾಯಿಸುವ ಸಾಮರ್ಥ್ಯ ಯಾರಿಗಿದೆ? 2023ರ ರಾಜ್ಯ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆ ಗೆಲ್ಲಬಲ್ಲ ನಾಯಕ ಯಾರಾಗಬಲ್ಲರು? ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದು.
ಇದನ್ನು ಓದಿ: 2022 ಜೂನ್ ಅಂತ್ಯದೊಳಗೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ; ಸಿಎಂ ಬಿಎಸ್ ಯಡಿಯೂರಪ್ಪ
ಟಾಸ್ಕ್ ನಂಬರ್ 3:
ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಿಸಲಿ, ಬಿಡಲಿ 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುವುದು ಹೇಗೆ? ಅದಕ್ಕಾಗಿ ಸರ್ಕಾರ ಮತ್ತು ಪಕ್ಷದಲ್ಲಿ ಮಾಡಬೇಕಾದ ಬದಲಾವಣೆ ಏನು ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದು.
ಹೀಗೆ ಎಲ್ಲವುಗಳ ಬಗ್ಗೆ ವಿವರವಾಗಿ ಚರ್ಚಿಸುವಂತೆ ಅರುಣ್ ಸಿಂಗ್ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಸೂಚನೆ ನೀಡಿದ್ದಾರೆ. ಎಲ್ಲವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಹೇಳಿದ್ದಾರೆ. ಅರುಣ್ ಸಿಂಗ್ ನೀಡುವ ವರದಿ ಆಧರಿಸಿ ಜೆ.ಪಿ. ನಡ್ಡ ಅಂತಿಮ ನಿರ್ಧಾರ ಮಾಡಲಿದ್ದಾರೆ. ಅದಕ್ಕೂ ಮೊದಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಗ್ಗೆ ಚರ್ಚಿಸಲಿದ್ದಾರೆ ಎಂದು ನ್ಯೂಸ್ 18ಗೆ ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇದನ್ನು ಓದಿ: ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬಿಜೆಪಿ ಕೆಲ ನಾಯಕರಿಂದ ಅರುಣ್ ಸಿಂಗ್ ಮೇಲೆ ಒತ್ತಡ
ಇನ್ನು ಇದೇ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುವ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ವಿರೋಧಿ ಪಾಳೆಯವು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಡ ಹೇರುತ್ತಿದ್ದು, ಈಗಾಗಲೇ ಅರುಣ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮನವಿ ಮಾಡಿರುವ ಕೆಲ ಹಿರಿಯ ಶಾಸಕರು, ಬಂಡಯಗಾರರು ಮತ್ತು ಹಿರಿಯರು 'ಕೆಲವರ ಅಭಿಪ್ರಾಯ ಎಲ್ಲರ ಅಭಿಪ್ರಾಯ ಆಗಿರುವುದಿಲ್ಲ. ಶಾಸಕಾಂಗ ಸಭೆ ಕರೆದರೆ ಎಲ್ಲಾ ಶಾಸಕರಿಗೂ ಅವಕಾಶ ಸಿಗಲಿದೆ. ಆದುದರಿಂದ ಶಾಸಕರ ಸಮಸ್ಯೆ ಕೇಳಲು ಶಾಸಕಾಂಗ ಪಕ್ಷದ ಸಭೆಯೇ ಸೂಕ್ತ. ಗೊಂದಲ ಬಗೆಹರಿಸಲು ಶಾಸಕಾಂಗ ಪಕ್ಷದ ಸಭೆ ಕರೆಯುವುದೇ ಸರಿಯಾದ ಮಾರ್ಗ' ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ