ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ವಿಷಯ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಅದರಲ್ಲೂ ಯಡಿಯೂರಪ್ಪ ಅವರೇ ನಿನ್ನೆ (ಜೂನ್ 6ರಂದು) 'ಹೈಕಮಾಂಡ್ ಬಯಸಿದರೆ ರಾಜೀನಾಮೆ ನೀಡುತ್ತೇನೆ' ಎಂದು ಹೇಳಿರುವುದು 'ನಾಯಕತ್ವ ಬದಲಾವಣೆ ವಿಷಯದ ಚರ್ಚೆಗೆ ಇನ್ನಷ್ಟು ಪುಷ್ಠಿ ನೀಡಿದೆ. ಆದರೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಮೂರು ದಿನಗಳಿಂದ ದೆಹಲಿಯಲ್ಲೇ ಇದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಆಗಿರುವ ಸಿ.ಟಿ. ರವಿ ಸೋಮವಾರ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ "ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂಸ ಕೆಳಗೆ ಇಳಿಸುವ ಹಾಗೂ ಇನ್ನೊಬ್ಬರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ಸದ್ಯ ಕೇವಲ ರಾಷ್ಟ್ರೀಯ ಸಂಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಅಂಗನವಾಡಿಯಿಂದ ಅಂತರಾಷ್ಟ್ರೀಯ ಮಟ್ಟದ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲೂ ಈ ಚರ್ಚೆ ನಡೆದಿದೆ. ಆದರೆ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ: ಪೊಲೀಸ್ ಆಯುಕ್ತರಿಗೆ ಬಾಹ್ಮಣ ಸಮುದಾಯದಿಂದ ದೂರು
ಬಿಜೆಪಿಯಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಮತ್ತು ಬದಲಿಸುವುದು ಸಂಸದೀಯ ಮಂಡಳಿ ಸಭೆ. ಈ ವಿಷಯದಲ್ಲಿ ಸಂಸದೀಯ ಮಂಡಳಿ ಸಭೆಯೇ ಸುಪ್ರೀಂ. ಆ ಸಭೆಯ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕು ಎಂದ ಸಿ.ಟಿ. ರವಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವ ಹಿನ್ನಲೆಯಲ್ಲಿ ರಾಜೀನಾಮೆಯ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು. ಇದರ ಜೊತೆಗೆ ಸಿ.ಟಿ. ರವಿ ಕೆಲವು ಸಂಗತಿಗಳ ಬಗ್ಗೆ ನಾವು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಬದಲಾವಣೆ ವಿಷಯದಲ್ಲಿ ಹುಟ್ಟಿಕೊಂಡಿರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದರು.
ಈ ನಡುವೆ ರಾಜ್ಯ ಬಿಜೆಪಿ ಬಿಕ್ಕಟ್ಟು ಪರಿಹರಿಸಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರಿಂದ ಪಕ್ಷದ ಹೈಕಮಾಂಡ್ ಪ್ರತ್ಯೇಕವಾದ ವರದಿ ಕೇಳಿದೆ. ಭೂಪೇಂದ್ರ ಯಾದವ್ ಹಿರಿಯ ನಾಯಕರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ಸಚಿವರು ಮತ್ತು ಶಾಸಕರಿಂದ ಅರುಣ್ ಸಿಂಗ್ ಮಾಹಿತಿ ಸಂಗ್ರಹಿಸಲಿದ್ದಾರೆ. ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ನೀಡುವ ವರದಿ ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈನಲ್ಲಿ ಸದ್ಯ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನಿಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ