ಆಪರೇಷನ್ ಕಮಲವೋ, ವಾಜಪೇಯಿ ಮಾರ್ಗವೋ..? ಬಿಜೆಪಿಯ ಆಯ್ಕೆ ಯಾವುದು?


Updated:May 16, 2018, 5:48 PM IST
ಆಪರೇಷನ್ ಕಮಲವೋ, ವಾಜಪೇಯಿ ಮಾರ್ಗವೋ..? ಬಿಜೆಪಿಯ ಆಯ್ಕೆ ಯಾವುದು?

Updated: May 16, 2018, 5:48 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಮೇ 16): ಅತಂತ್ರ ವಿಧಾನಸಭೆಯಲ್ಲಿ ನಂಬರ್ ಒನ್ ಪಕ್ಷವಾಗಿರುವ ಬಿಜೆಪಿಗೆ ಈಗ ಬಹುಮತ ಸಾಬೀತಪಡಿಸುವ ಚಾಲೆಂಜ್ ಎದುರಾಗದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿ ಕಾರ್ಯವನ್ನು ಕಠಿಣಗೊಳಿಸಿದೆ. ಬಿಜೆಪಿ ಮುಂದೆ ಈಗ ಕೆಲವೇ ಆಯ್ಕೆಗಳಿವೆ…

ಆಪರೇಷನ್ ಕಮಲ:
ಇದು ಬಿಜೆಪಿಯ 10 ವರ್ಷದ ಹಿಂದಿನ ತಂತ್ರ. 2008ರಲ್ಲಿ ರಾಜ್ಯದಲ್ಲಿ ಇಂಥದ್ದೇ ಸ್ವಲ್ಪ ಅತಂತ್ರದ ಸ್ಥಿತಿ ಬಂದಿದ್ದಾಗ ಅಧಿಕಾರ ಗದ್ದುಗೆ ಏರಲು ಬಿಜೆಪಿ ಯಶಸ್ವಿಯಾಗಿ ಆಪರೇಷನ್ ಕಮಲ ಮಾಡಿತ್ತು. ಒಟ್ಟು 110 ಸ್ಥಾನ ಪಡೆದಿದ್ದ ಬಿಜೆಪಿಗೆ ಆಗ ಬಹುಮತಕ್ಕೆ ಕೊರತೆ ಬಿದ್ದದ್ದು ಕೇವಲ 3 ಸ್ಥಾನ ಮಾತ್ರ. ಆರು ಮಂದಿ ಪಕ್ಷೇತರ ಶಾಸಕರ ಬೆಂಬಲ ಗಳಿಸಿತು. ಆಪರೇಷನ್ ಕಮಲ ಮೂಲಕ ನಾಲ್ವರು ಜೆಡಿಎಸ್ ಮತ್ತು ಮೂವರು ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡಿತು. ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿತು. ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಶಿವಾನಂದ್ ನಾಯ್ಕ್, ಆನಂದ್ ಅಸ್ನೋಟಿಕರ್, ಜೆ. ನರಸಿಂಹ ಸ್ವಾಮಿ, ಜಗ್ಗೇಶ್ ಮೊದಲಾದವರು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಆಗಮಿಸಿದ್ದರು. ಈ ಏಳು ಶಾಸಕರ ಸ್ಥಾನ ಸೇರಿದಂತೆ ಒಟ್ಟು 8 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಐವರು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಅಲ್ಲಿಗೆ ಬಿಜೆಪಿ ಸರಕಾರದ ಬಲ 121 ಸ್ಥಾನಗಳಿಗೆ ಏರಿತು.

ಈಗಲೂ ಬಿಜೆಪಿ ಅದೇ ತಂತ್ರ ಅನುಸರಿಸುತ್ತದಾ ಎಂಬುದು ಕುತೂಹಲ ಮೂಡಿಸಿದೆ. 2008ರಲ್ಲಿ ಬಿಜೆಪಿಗೆ 3 ಸ್ಥಾನಗಳ ಕೊರತೆ ಬಿದ್ದರೆ ಈ ಸಲ 9 ಸ್ಥಾನಗಳ ಕೊರತೆ ಇದೆ. ಹೆಚ್​ಡಿಕೆ ತೆರವು ಮಾಡಲಿರುವ ಒಂದು ಕ್ಷೇತ್ರ ಸೇರಿದಂತೆ ಇನ್ನೂ ಮೂರು ಕ್ಷೇತ್ರಗಳ ಚುನಾವಣೆ ಬಾಕಿ ಇದೆ. ಸದ್ಯ ಸದನದ ಬಲ 221 ಇದೆ. ಬಹುಮತ ಸಾಬೀತಿಗೆ 111 ಶಾಸಕರ ಬಲ ಅಗತ್ಯವಿದೆ. ಬಿಜೆಪಿಯ ಬಳಿ 204 ಶಾಸಕರಿದ್ದಾರೆ. ಇನ್ನೂ ಅದಕ್ದೆ 7 ಸ್ಥಾನಗಳ ಕೊರತೆ ಇದೆ. ವಿಶ್ವಾಸ ಮತ ಯಾಚನೆಯ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್​ನ 11 ಶಾಸಕರು ಗೈರಾಗಿಬಿಟ್ಟರೆ ಬಿಜೆಪಿ ಬಹುಮತ ಸಾಬೀತಾದಂತಾಗುತ್ತದೆ. ಮುಂಬರಲಿರುವ ಉಪಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯು ಆಪರೇಷನ್ ಕಮಲ ಮೂಲಕ ಕನಿಷ್ಠ 15-18 ಶಾಸಕರನ್ನಾದರೂ ಸೆಳೆದುಕೊಳ್ಳಬೇಕಾಗುತ್ತದೆ.

ವಾಜಪೇಯಿ ತಂತ್ರ:
ಕೇಂದ್ರದಲ್ಲಿ 1996ರಲ್ಲಿ 545 ಸದಸ್ಯಬಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನಗಳನ್ನು ಗೆದ್ದು ನಂಬರ್ ಒನ್ ಪಕ್ಷವಾಯಿತು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಅಧಿಕಾರ ಸ್ವೀಕರಿಸಿದರು. 13 ದಿನಗಳಲ್ಲಿ ಬಹುಮತ ಸಾಬೀತುಪಡಿಸಲು ಅವರಿಂದಾಗಲಿಲ್ಲ. ಶಿವಸೇನೆ, ಸಮತಾ ಪಕ್ಷ ಮತ್ತು ಹರಿಯಾಣ ವಿಕಾಸ್ ಪಕ್ಷ ಬಿಟ್ಟು ಬೇರಾರೂ ಬೆಂಬಲಕ್ಕೆ ನಿಲ್ಲಲಿಲ್ಲ. ಬಹುಮತ ಗಳಿಸುವ ಯಾವ ಅಕಶ ವಿಶ್ವಾಸ ಮತದ ದಿನದಂದು ವಾಜಪೇಯಿ ಭಾವಪೂರ್ಣ ಭಾಷಣ ಮಾಡಿದರು. ನಂತರ, ವಿಧಾನಸಭೆ ವಿಸರ್ಜನೆಗೆ ಮುಂದಾಗದೇ, ರಾಜೀನಾಮೆ ಕೊಟ್ಟರು. ಅದು ಕೇಂದ್ರದಲ್ಲಿ ಬಿಜೆಪಿಯ ಚೊಚ್ಚಲ ಸರಕಾರವಾಗಿತ್ತು. ವಾಜಪೇಯಿ ರಾಜೀನಾಮೆ ಬಳಿಕ ಕಾಂಗ್ರೆಸ್​ನ ಬಾಹ್ಯ ಬೆಂಬಲದೊಂದಿಗೆ ಹೆಚ್.ಡಿ. ದೇವೇಗೌಡ ಅವರು ತೃತೀಯ ರಂಗದ ಅಭ್ಯರ್ಥಿಯಾಗಿ ಪ್ರಧಾನಿ ಹುದ್ದೆ ಅಲಂಕರಿಸಿದರು. ಅದು ಹೆಚ್ಚು ಕಾಲ ಬಾಳಲಿಲ್ಲ. 1998ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರಕಾರ ಬಹುಮತ ಗಳಿಸಿತು. ವಾಜಪೇಯಿ ಪರವಾಗಿ ಅನುಕಂಪ ಅಲೆ ಎದ್ದಿತ್ತು.
Loading...

ಈಗ ಯಡಿಯೂರಪ್ಪ ಕೂಡ ಅದೇ ತಂತ್ರ ಅನುಸರಿಸುವ ಅವಕಾಶ ಪಡೆದಿದ್ದಾರೆ. 2008ರಲ್ಲಿ ಬಿಜೆಪಿ-ಜೆಡಿಎಸ್ 20-20 ಸರಕಾರದಲ್ಲಿ ಹೆಚ್​ಡಿಕೆ ಬಿಜೆಪಿಗೆ ಅಧಿಕಾರ ಕೊಡದೇ ಹೋದಾಗ, ರಾಜ್ಯದ ಮತದಾರರು ಬಿಎಸ್​ವೈ ಕೈಹಿಡಿದರು. ತತ್​​ಪರಿಣಾಮವಾಗಿ ಬಿಜೆಪಿ ಅಧಿಕಾರದ ಗದ್ದುಗೆ ಏರಿತು. ಯಡಿಯೂರಪ್ಪ ಈ ಬಾರಿಯೂ ಅಂಥದ್ದೇ ವಾತಾವರಣ ಸೃಷ್ಟಿಸಿಕೊಳ್ಳುವ ಆಯ್ಕೆ ಬಿಜೆಪಿಗೆ ಇದೆ.

ಇವೆರಡೂ ಮಾರ್ಗಗಳನ್ನು ಬಿಟ್ಟು ಮೂರನೇ ಆಯ್ಕೆಯೆಂದರೆ ತಟಸ್ಥವಾಗುವುದು. ಆದರೆ, ಯಡಿಯೂರಪ್ಪ ಸರಕಾರ ರಚಿಸಬೇಕೆಂದು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಮೂರನೇ ಆಯ್ಕೆ ಇಲ್ಲ.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ