ಹುಬ್ಬಳ್ಳಿ(ಡಿ.31): ಮಹದಾಯಿ ವಿಚಾರದಲ್ಲಿ ಬಿಜೆಪಿ (BJP) ಮಹಾ ಮೋಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್. ಕೆ. ಪಾಟೀಲ್ (Former Minister HK Patil) ಆರೋಪಿಸಿದ್ದಾರೆ. ಇದೇ ವೇಳೆ ರಣದೀಪ್ ಸುರ್ಜೇವಾಲಾ, ಡಿ. ಕೆ. ಶಿವಕುಮಾರ್ ಸಹ ಕಿಡಿಕಾರಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಎಚ್. ಕೆ. ಪಾಟೀಲ್ ಕಳಸಾ - ಬಂಡೂರಿ ಡಿ.ಪಿ.ಆರ್. ಅನುಮತಿ ಹೆಸರಲ್ಲಿ ಜನರ ಕಣ್ಣೊರೆಸುವ ತಂತ್ರ ನಡೆಸಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಮತ್ತಷ್ಟು ಮಾತನಾಡಿದ ಕೈ ನಾಯಕ ಪಾಟೀಲ್ ಸರ್ಕಾರ ಸುಳ್ಳು ಹೇಳಿ ಈ ಭಾಗದ ರೈತರನ್ನು ಮರಳು ಮಾಡೋಕೆ ಹೊರಟಿದೆ. ಕೇಂದ್ರ ನೀಡಿದೆ ಎನ್ನಲಾದ ಡಿಪಿಆರ್ ಅನುಮತಿ ಪತ್ರದಲ್ಲಿ ದಿನಾಂಕವೇ ನಮೂದಾಗಿಲ್ಲ. ದಿನಾಂಕವೇ ಹಾಕದ ಆದೇಶಕ್ಕೆ ಯಾವ ಮೌಲ್ಯವಿದೆ ಎಂದು ಎಚ್. ಕೆ. ಪಾಟೀಲ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಜನವರಿ 02 ಕ್ಕೆ ಹೋರಾಟ ಮಾಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಮಹದಾಯಿ ಜಲ ಜನ ಸಮಾವೇಶ ಹಮ್ಮಿಕೊಂಡಿದ್ದಕ್ಕೆ ತರಾತುರಿಯಲ್ಲಿ ಡಿಪಿಆರ್ ಅನುಮತಿ ನಾಟಕವಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: Mahadayi Issue: ಮಹದಾಯಿ ನೀರು ಪಡೆಯಲು ಸರ್ಕಾರದ ಮಾಸ್ಟರ್ ಪ್ಲಾನ್; ಕಾಂಗ್ರೆಸ್ ಪಾದಯಾತ್ರೆಗೂ ಮುನ್ನ ಘೋಷಣೆ
ಮುಗ್ದ ರೈತರಿಗೆ ಸುಳ್ಳು ಹೇಳೋದು, ಮೋಸ ಮಾಡೋದು ಬಿಜೆಪಿಯ ವರಸೆಯಾಗಿದೆ. ಚುನಾವಣೆ ಬಂದಾಗಲೆಲ್ಲಾ ಬಿಜೆಪಿಯವರು ಸುಳ್ಳು ಹೇಳ್ತಾರೆ, ಮೋಸ ಮಾಡ್ತಾರೆ. ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿ ಎನ್. ಒ .ಸಿ ಕೊಟ್ಟಿದ್ದಾರೆ ಅಂತ ಇದೇ ಹುಬ್ಬಳ್ಳಿಯಲ್ಲಿ ಪತ್ರ ತೋರಿಸಿದ್ದರು. ಆದರೆ ಅದು ಬೋಗಸ್ ಲೆಟರ್ ಅಂತ ಆಮೇಲೆ ಗೊತ್ತಾಯಿತು. ಸುಳ್ಳು ದಾಖಲೆಯನ್ನು ಯಡಿಯೂರಪ್ಪ ಬಹಿರಂಗ ಪಡಿಸಿದ್ರು. ಮಹದಾಯಿ ವಿಚಾರವಾಗಿ ಇದು ಮೊದಲ ದ್ರೋಹ ಆಗಿತ್ತು ಎಂದು ಗುಡುಗಿದ್ದಾರೆ. ಇದೇ ವೇಳೆ ಸಿಎಂ ಬೊಮ್ಮಾಯಿ ಮಹದಾಯಿಗಾಗಿ ಮಾಡಿದ ಪಾದಯಾತ್ರೆಯನ್ನು ನೆನಪಿಸಿದ್ದಾರೆ.
ನಮ್ಮ ಕಾಲದಲ್ಲಿ ಡಿಪಿಆರ್ ಸಿದ್ದಪಡಿಸಿದ್ವಿ ನಮ್ಮ ಡಿಪಿಆರ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ವಿ, ನಮಗೆ ಅವತ್ತು ಅನುಮತಿ ಸಿಕ್ತು. ಕುಡಿಯೋಕೆ ನೀರು ಬಳಕೆ ಮಾಡಬಹುದು ಅನ್ನೋ ಅನುಮತಿ ಸಿಕ್ಕಿತ್ತು. ಈ ಹಿಂದೆ ಅನುಮತಿ ಸಿಕ್ಕ ಯೋಜನೆಗೆ ಡಿಪಿಆರ್ ಬದಲಿಸಿ ಮತ್ತೆ ಮರು ಅನುಮತಿ ಪಡೆದಂತೆ ತೋರಿಸುತ್ತಿದೆ. ಗೋವಾ ಮುಖ್ಯಮಂತ್ರಿ ವಾಜಪೇಯಿ ಬಳಿ ತಪ್ಪು ಮಾಹಿತಿ ಹೇಳಿದ್ರು. ನಮಗೆ ಸಿಕ್ಕ ಕ್ಲಿಯರೆನ್ಸ್ ಸ್ಥಗಿತ ಮಾಡಿದ್ರು. ನವೆಂಬರ್ ನಲ್ಲಿ ಬಿಜೆಪಿ ಡಿಪಿಆರ್ ಸಿದ್ದ ಮಾಡಿತ್ತು. ನಾವು ಜನವರಿ 2 ರಂದು ಜಲಾಂದೋಲನ ಸಭೆ ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: Mahadayi Water Project: ಮಹದಾಯಿ ಯೋಜನೆ ಜಾರಿಗೆ ಮತ್ತೆ ಗೋವಾ ಕ್ಯಾತೆ!
ಬಿಜೆಪಿಯಿಂದ ಮೋಸ
ಇದೀಗ ಬಿಜೆಪಿ ಸರ್ಕಾರ ಮತ್ತೆ ಮುಗ್ದ ರೈತರಿಗೆ ಮೋಸ ಮಾಡಿದ್ದಾರೆ. ಬೊಮ್ಮಾಯಿ ನಿನ್ನೆ ವೀರಾವೇಶದ ಮಾತಾಡಿದ್ದಾರೆ ಸದನವನ್ನು ದಾರಿ ತಪ್ಪಿಸೋ ಕೆಲಸ ಮಾಡಿದ್ದಾರೆ. ಜೋಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರೋ ದಾಖಲೆಗಳಿಗೆ ದಿನಾಂಕವೇ ಇಲ್ಲ. ಇದೊಂದು ನಿರ್ಗತಿಕರ ಕೂಸು. ಇದೆಲ್ಲ ಆಫೀಶಿಯಲ್ ದಾಖಲೆನಾ ಎಂದು ಪ್ರಶ್ನೆ ಮಾಡಿದ ಎಚ್. ಕೆ. ಪಾಟೀಲ್, ಇದೇ ದಾಖಲೆ ಇಟ್ಕೊಂಡು ಮುಗ್ದ ರೈತರಿಗೆ ಮೋಸ ಮಾಡ್ತೀರಾ.?? ಹಿಂದೆ ಯಡಿಯೂರಪ್ಪ ಮೋಸ ಮಾಡಿದ್ರು, ಇದೀಗ ಬೊಮ್ಮಾಯಿ ಮೋಸ ಮಾಡ್ತಿದಾರೆ. ಏಳು ಪುಟಗಳ ದಾಖಲೆಯಲ್ಲಿ ದಿನಾಂಕವೇ ಇಲ್ಲ ಅಂದ್ರೆ ಏನರ್ಥ. ಎಂದು ಪ್ರಶ್ನಿಸಿದ್ದಾರೆ.
ನಮಗೆ ಅನುಮತಿ ಸಿಕ್ತು ಎಂದು ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡ್ತಿದೆ. ಮೋಸ, ದ್ರೋಹ ನಿಲ್ಲಿಸಿ, ನಿಮಗೆ ಅವಕಾಶ ಸಿಕ್ಕಿದ್ರೆ ಕೆಲಸ ಮಾಡಿ. ನಮ್ಮ ಹೋರಾಟ ಹತ್ತಿಕ್ಕಲು ಸುಳ್ಳು ಹೇಳ್ತಿದೀರಾ ಎಂದು ಎಚ್.ಕೆ. ಪಾಟೀಲ್ ವಾಗ್ದಾಳಿ ನಡೆಸಿದರು. ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದ ಎಚ್. ಕೆ. ಪಾಟೀಲ, ಜನವರಿ 02 ರಂದು ನಡೆಯುವ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ, ಡಿಕೆಶಿ ಹಾಗೂ ಸಿದ್ಧರಾಮಯ್ಯ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ