ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗರ ಬೃಹತ್​ ಪ್ರತಿಭಟನೆಗೆ ಬೆಚ್ಚಿದ ಬಿಜೆಪಿ: ಹೈ ಕಮಾಂಡ್​ಗೆ ಮಾಹಿತಿ ರವಾನೆ

ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಇನ್ನೂ ಪೂರ್ತಿ ಬೆಳೆದಿಲ್ಲ. ಮೈಸೂರು ಭಾಗದ ಪ್ರಭಾವಿ  ನಾಯಕರಾಗಿರುವ ಡಿಕೆ ಶಿವಕುಮಾರ್​ ಬಂಧನದಿಂದ ಇಲ್ಲಿ ಬಿಜೆಪಿಗೆ ಇನ್ನಷ್ಟು ಹಿನ್ನಡೆಯಾಗಬಹುದು ಎಂದು ಬಿಜೆಪಿ ಹೈಕಮಾಂಡ್​ಗೆ ಎಚ್ಚರಿಸಲಾಗಿದೆ.

Seema.R | news18-kannada
Updated:September 11, 2019, 5:45 PM IST
ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗರ ಬೃಹತ್​ ಪ್ರತಿಭಟನೆಗೆ ಬೆಚ್ಚಿದ ಬಿಜೆಪಿ: ಹೈ ಕಮಾಂಡ್​ಗೆ ಮಾಹಿತಿ ರವಾನೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಸೆ. 11): ಕನಕಪುರ ಶಾಸಕ ಡಿಕೆ ಶಿವಕುಮಾರ್​ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಕ್ರಮ ಖಂಡಿಸಿ ಇಂದು ನಗರದಲ್ಲಿ ನಡೆದ ಒಕ್ಕಲಿಗರ ಸಂಘದ ಪ್ರತಿಭಟನೆ ಕುರಿತು ರಾಜ್ಯ ಬಿಜೆಪಿ ಹೈ ಕಮಾಂಡ್​ಗೆ ಮಾಹಿತಿ ನೀಡಿದೆ. ಪ್ರತಿಭಟನೆಯ ನಂತರದ ಸಾಧಕ ಬಾಧಕಗಳ ಬಗ್ಗೆ ರಾಜ್ಯ ನಾಯಕರು ವರಿಷ್ಠರಲ್ಲಿ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆನ್ನಲಾಗಿದೆ.

ಒಕ್ಕಲಿಗ ಸಮುದಾಯದ 10ಕ್ಕೂ ಹೆಚ್ಚು ಸಂಘಗಳು ಈ ಪ್ರತಿಭಟನೆಗೆ ಕರೆ ನೀಡಿದ್ದು, ಕಾಂಗ್ರೆಸ್​,  ಜೆಡಿಎಸ್​ ಪಕ್ಷಗಳು ಹಾಗೂ ಕರವೇ ಸಂಘಟನೆಗಳು ಕೂಡ ಬೆಂಬಲ ನೀಡಿದ್ದವು. ಬೆಳಗ್ಗೆ 11 ಗಂಟೆಗೆ ನ್ಯಾಷನಲ್​ ಕಾಲೇಜ್​ ಮೈದಾನದಿಂದ ಫ್ರೀಡಂ ಪಾರ್ಕ್​ವರೆಗೂ ಸುಮಾರು 5.2 ಕಿಮೀ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ, ಎಚ್​ಡಿ ಕುಮಾರಸ್ವಾಮಿ , ಒಕ್ಕಲಿಗ ಸಮುದಾಯದ ನಂಜಾವಧೂತ ಸ್ವಾಮೀಜಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ರಾಮನಗರ, ಕನಕಪುರ ಸೇರಿದಂತೆ ಹಳೆ ಮೈಸೂರು ಭಾಗದ ಒಕ್ಕಲಿಗರು  ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗಳು ಕೇಳಿ ಬಂದಿದ್ದು, ಡಿಕೆ ಶಿವಕುಮಾರ್​ ಧ್ವನಿ ಅಡಗಿಸಲು ಇಡಿಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್​, ಜೆಡಿಎಸ್​ ನಾಯಕರು ಹೊರಿಸಿದರು.

ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಇನ್ನೂ ಪೂರ್ತಿ ಬೆಳೆದಿಲ್ಲ. ಮೈಸೂರು ಭಾಗದ ಪ್ರಭಾವಿ  ನಾಯಕರಾಗಿರುವ ಡಿಕೆ ಶಿವಕುಮಾರ್​ ಬಂಧನದಿಂದ ಇಲ್ಲಿ ಬಿಜೆಪಿಗೆ ಇನ್ನಷ್ಟು ಹಿನ್ನಡೆಯಾಗಬಹುದು. ಈ ಭಾಗದಲ್ಲಿರುವ ಒಕ್ಕಲಿಗ ಮತದಾರರು ಬಿಜೆಪಿಯಿಂದ ಇನ್ನೂ ದೂರ ಹೋಗಬಹುದು. ಇದರಿಂದ ಬಿಜೆಪಿಗೆ ಸಂಕಷ್ಟ ಒದಗಬಹುದು ಎಂದು ಬಿಜೆಪಿ ಹೈಕಮಾಂಡ್​ಗೆ ಎಚ್ಚರಿಸಲಾಗಿದೆ.

ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಭಾಗಿಯಾಗಿದ್ದಾರೆ. ಡಿಕೆಶಿ ಅವರ ಬಂಧನದ ವಿಚಾರ ರಾಜಕೀಯವಾಗಿ ಬಳಕೆಯಾಗುತ್ತಿದೆ. ಅಲ್ಲದೆ, ಅವರ ಬಂಧನ ವಿಚಾರವನ್ನು ಒಕ್ಕಲಿಗರ ಸಮುದಾಯವನ್ನು ಗುರಿಯಾಗಿಸಿ ಮಾಡಿರುವ ಕಾರ್ಯ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ರಾಜ್ಯ ಬಿಜೆಪಿ ನಾಯಕರ ಅಳಲಾಗಿದೆ.

ಇದನ್ನು ಓದಿ: ದಸರಾ ಸಂಭ್ರಮ 2019: ಗೋಲ್ಡನ್​ ಸ್ಟಾರ್​ ಗಣೇಶ್​ರಿಂದ ಈ ಬಾರಿ ಯುವ ದಸರಾ ಉದ್ಘಾಟನೆಅಲ್ಲದೇ, ಮೈತ್ರಿ ಸರ್ಕಾರ ಪತನವಾದ ಕೂಡಲೇ ನಡೆದ ಡಿಕೆ ಶಿವಕುಮಾರ್​ ಬಂಧನ ದ್ವೇಷ ರಾಜಕಾರಣ ಎಂದು ಜನರು ನಂಬುವಂತೆ ಆಗಿದೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಇನ್ನು ಭದ್ರವಾಗಿ ತಾಳವೂರಿಲ್ಲ. ಈ ನಡುವೆ ಲಿಂಗಾಯತದಷ್ಟೇ ಹೆಚ್ಚು ಪ್ರಭಾವಿಯಾಗಿರುವ ಒಕ್ಕಲಿಗ ಸಮುದಾಯ ನಮ್ಮ ಸರ್ಕಾರದ ವಿರುದ್ಧ ತಿರುಗಿ ಬಿದ್ದರೆ ಕಷ್ಟವಾಗಲಿದೆ. ಜೊತೆಗೆ ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟಿದ್ದೇ ಡಿಕೆಶಿಯನ್ನು ಬಂಧಿಸಲು ಕಾರಣ ಎಂಬ ಸಂದೇಶ ಜನರಿಗೆ ತಲುಪಿದೆ. ಇದನ್ನು ಸೂಕ್ತವಾಗಿ ನಿಭಾಯಿಸಬೇಕು ಎಂದರೆ ನಮ್ಮ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯದ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ಕೂಡ ಹೈ ಕಮಾಂಡ್​ಗೆ ಮಾಹಿತಿ ಕಳುಹಿಸಲಾಗಿದೆ ಎನ್ನಲಾಗಿದೆ.

(ವರದಿ: ರಮೇಶ್​ ಹಿರೇಜಂಬೂರು)

First published: September 11, 2019, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading