• Home
  • »
  • News
  • »
  • state
  • »
  • ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಮೂಲಕ ಬಿಜೆಪಿ ರೈತರನ್ನು ಬೀದಿಪಾಲು ಮಾಡಲಿದೆ; ದೇವೇಗೌಡ ಅಸಮಾಧಾನ

ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಮೂಲಕ ಬಿಜೆಪಿ ರೈತರನ್ನು ಬೀದಿಪಾಲು ಮಾಡಲಿದೆ; ದೇವೇಗೌಡ ಅಸಮಾಧಾನ

ಹೆಚ್​.ಡಿ.  ದೇವೇಗೌಡ

ಹೆಚ್​.ಡಿ. ದೇವೇಗೌಡ

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ನೂತನ ಕೈಗಾರಿಕಾ ನೀತಿ ಸೇರಿದಂತೆ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಎಲ್ಲಾ ಕಾಯ್ದೆಗಳೂ ಜನ ವಿರೋಧಿಯಾದದ್ದು. ಇವು ಕೇವಲ ಕಾರ್ಪೋರೇಟ್‌ ಕುಳಗಳಿಗಷ್ಟೇ  ಲಾಭವಾಗಲಿದೆ ಎಂದು ಹೆಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಜುಲೈ 28); ರಾಜ್ಯ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತರು ಹಾಗೂ ಕಾರ್ಮಿಕರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಬಿಎಸ್‌ವೈ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


ಇಂದು ಪತ್ರಿಕಾಗೋಷ್ಠಿ ನಡೆಸಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಹೆಚ್‌.ಡಿ. ದೇವೇಗೌಡ, "ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ನೂತನ ಕೈಗಾರಿಕಾ ನೀತಿ ಸೇರಿದಂತೆ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಎಲ್ಲಾ ಕಾಯ್ದೆಗಳೂ ಜನ ವಿರೋಧಿಯಾದದ್ದು. ಇವು ಕೇವಲ ಕಾರ್ಪೋರೇಟ್‌ ಕುಳಗಳಿಗಷ್ಟೇ  ಲಾಭವಾಗಲಿದೆ.


ಈ ಕಾಯ್ದೆಗಳ ಮೂಲಕ ರೈತರು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲಾ ಶ್ರಮಿಕ ವರ್ಗದ ಜನ ಬೀದಿ ಪಾಲಾಗಲಿದ್ದಾರೆ. ಇದೇ ಕಾರಣಕ್ಕೆ ಈ ಎಲ್ಲಾ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ನಾನು ಮೂರು ಬಾರಿ ಪತ್ರ ಬರೆದಿದ್ದೇನೆ. ಆದರೆ, ಇದಕ್ಕೆ ಉತ್ತರಿಸದ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆಗಳನ್ನು ಜಾರಿ ಮಾಡಿರುವುದು ವಿಷಾಧನೀಯ" ಎಂದು ಅಸಮಾಧಾನ ಹೊರಹಾಕಿದ್ದಾರೆ.


"ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಸೆಕ್ಷನ್ 79-A, 79-B, 79-C ರದ್ದು ಮಾಡಿರುವುದು ರೈತ ವಿರೋಧಿ. ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ಮಾರಕ. ಕೈಗಾರಿಕೆ ವಿವಾದ ಮತ್ತಿತರ ನಿಯಮಗಳ ತಿದ್ದುಪಡಿ ಮಾಡುವ ಮೂಲಕ ಸರ್ಕಾರ ರೈತ ವಿರೋಧಿ ತೀರ್ಮಾನ ತೆಗೆದುಕೊಂಡಿದೆ. ಇಷ್ಟು ದಿನ ನಾನು ಕೊರೋನಾ ಕಾರಣದಿಂದಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಬಾರದು ಅಂತ ಹಿಂದೆ ಸರಿದಿದ್ದೆ. ಆದರೆ, ಈಗ ಮಾತನಾಡಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.


ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆ ಪರಿಣಾಮ ಏನಾಗಲಿದೆ? ಈ ಬಗ್ಗೆ ಸರ್ಕಾರ ಮಾಹಿತಿ ನೀಡದೆ ಕಾಯ್ದೆ ಜಾರಿ ಮಾಡಿದ್ದಾರೆ. ಇದರಿಂದ ಕೇವಲ ರಿಯಲ್ ಎಸ್ಟೇಟ್ ಮಾಫಿಯಾಗಷ್ಟೆ ಅನುಕೂಲಕರವಾಗಲಿದೆ. ಸಣ್ಣ ಸಣ್ಣ ರೈತರಿಗೆ ತೊಂದರೆಯಾಗಲಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಮಾಫಿಯಾ ನಡೆಯುತ್ತದೆ. ಇದು ಅತ್ಯಂತ ಕೆಟ್ಟ ತಿದ್ದುಪಡಿ ಕಾಯ್ದೆ.


ಯಾರೋ ಕೈಗಾರಿಕೆ ಉದ್ಯಮಿ ಬಂದು ಭೂಮಿ ಪಡೆಯುತ್ತಾನೆ. ಕೈಗಾರಿಕೆ ಉದ್ದೇಶಕ್ಕಾಗಿ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. 7 ವರ್ಷಗಳ ನಂತರ ಅದೇ ಭೂಮಿಯನ್ನ ಪರಾಭಾರೆ ಮಾಡಬಹುದು. ಹೀಗಾಗಿ ಕಾರ್ಪೋರೇಟ್‌ ಕುಳಗಳು 7 ವರ್ಷಗಳ ನಂತರ ಅಂದಿನ ಬೆಲೆಗೆ ಭೂಮಿಯನ್ನು ಮಾರಾಟ ಮಾಡುತ್ತಾರೆ. ಇದು ನಿಜಕ್ಕೂ ರೈತರ ಪಾಲಿನ ಮರಣ ಶಾಸನಾಗಲಿದೆ. ಬಹುಮತ ಇದೆ ಎಂಬ ಅಹಂನಿಂದಾಗಿ ರಾಜ್ಯ ಸರ್ಕಾರ ಇಂತಹ ಕಾನೂನು ತರುತ್ತಿದೆ" ಎಂದು ದೇವೇಗೌಡ ಕಿಡಿಕಾರಿದ್ದಾರೆ.


"ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಹೇಳಿದ್ದೆ ವೇದವಾಕ್ಯವಾಗಿದೆ. ಇವರು ವಿರೋಧ ಪಕ್ಷಗಳ ವಿಶ್ವಾಸ ಪಡೆಯುತ್ತಿಲ್ಲ. ನಾನು ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ದಲ್ಲಾಳಿಗೆ ಪೂರ್ಣ ಅವಕಾಶ ನೀಡಿದಂತಾಗಿದೆ. ನಾನು ಇದನ್ನು ಕಂಡತುಂಡವಾಗಿ ವಿರೋಧಿಸುತ್ತೇನೆ. ಕಾಂಗ್ರೆಸ್, ಸಿಪಿಐಎಂ ಸೇರಿ ಅನೇಕರು ಇದನ್ನು ವಿರೋಧಿಸಿದ್ದಾರೆ.


ಈ ಕುರಿತು ರಾಜ್ಯಾದ್ಯಂತ ಹೋರಾಟ ಮಾಡಬೇಕು. ಆದರೆ, ಕೊರೋನಾದಿಂದಾಗಿ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಹದಿನೈದು ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಕೇಸುಗಳು ಈ ಕಾಯ್ದೆಯ ವಿರುದ್ಧ ದಾಖಲಾಗಿವೆ. ಈ ವಿಚಾರವನ್ನು ನಾವು ಕೊನೆ ಹಂತದ ವರೆಗೂ ತೆಗೆದುಕೊಂಡು ಹೋಗುತ್ತೇನೆ. ಒಂದನೇ ತಾರೀಖು ಜೆಪಿ ಭವನದ ನೆಲಮಹಡಿಯಲ್ಲಿ ಪ್ರತಿ ತಾಲೂಕಿನ ಒಬ್ಬೊಬ್ಬ ರೈತರ ಜೊತೆ ಸಭೆ ಮಾಡುತ್ತೇವೆ. ನಮ್ಮ ಮುಂದಿನ ಹೋರಾಟಕ್ಕೆ ರೂಪುರೇಷೆ ರೂಪಿಸುತ್ತೇವೆ.


ಇದನ್ನೂ ಓದಿ : Rajasthan Political Crisis: ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಪಾಠ ಕಲಿಸಲು ಬಿಎಸ್‌ಪಿಗೆ ಇದು ಸಕಾಲ; ಮಾಯಾವತಿ ಆಕ್ರೋಶಈ ಕಾಯಿದೆ ಗಳನ್ನು ಹಿಂಪಡೆಯಲು ಒತ್ತಾಯಿಸಿ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಒಂದಿಬ್ಬರು ರೈತರನ್ನು ಕರೆದುಕೊಂಡು ಹೋಗಿ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಮತ್ತೆ ಯಾವಾಗ ಅಧಿವೇಶನ ಕರೆಯುತ್ತಾರೋ ಗೊತ್ತಿಲ್ಲ. ಆದರೆ, ಅಲ್ಲಿಯವರೆಗೆ ಈ ಕಾಯ್ದೆಯ ಕುರಿತು ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ. ರೈತರಿಗೆ, ಕಾರ್ಮಿಕರಿಗೆ ಮಾರಕವಾಗಿರುವ ಈ ಕಾಯ್ದೆಯನ್ನು ಹಿಂಪಡೆಯುವವರೆಗೆ ನಾವು ಹೋರಾಟವನ್ನು ಮುಂದುವರೆಸುತ್ತೇವೆ" ಎಂದು ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

Published by:MAshok Kumar
First published: