ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ (Council Election) ಕೊಡಗಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಥರ್ ಗೌಡ(Mantar Gowda) ಸ್ಪರ್ಧಿಸುತ್ತಿರುವ ಬೆನ್ನಲ್ಲೇ, ಬಿಜೆಪಿಯಲ್ಲಿರುವ ಅವರ ತಂದೆ ಎ.ಮಂಜು (A.Manju)ವಿರುದ್ಧ ಬಿಜೆಪಿ (BJP) ಶಿಸ್ತು ಸಮಿತಿ ಕ್ರಮ ಕೈಗೊಂಡಿದೆ. ಆದರೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಇದ್ದರೂ ಸೋದರ ಲಖನ್ ಜಾರಕಿಹೊಳಿಯನ್ನು ಕಣಕ್ಕಿಳಿಸಿ ಬೆಂಬಲವಾಗಿ ನಿಂತಿರುವ, ಪಕ್ಷ ವಿರೋಧಿ ರಮೇಶ್ ಜಾರಕಿಹೊಳಿ (Ramesh Jarkiholi) ಮೇಲೆ ಬಿಜೆಪಿ ಏಕೆ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರಶ್ನಿಸಿದ್ದರು. ಎ.ಮಂಜು ಮೇಲೆ ಕ್ರಮ ತೆಗೆದುಕೊಂಡಂತೆ ರಮೇಶ್ ಜಾರಕಿಹೊಳಿ ಮೇಲೆ ಕ್ರಮ ತೆಗೆದುಕೊಳ್ಳಲು ಬಿಜೆಪಿಗೆ ಧಂ ಇಲ್ವಾ ಎಂದು ಡಿಕೆಶಿ ಕುಹಕವಾಡಿದ್ದರು. ಇದಕ್ಕೆ ಇಂದು ರಾಜ್ಯ ಬಿಜೆಪಿ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದೆ.
#ಅಸಹಾಯಕಡಿಕೆಶಿ ಎಂದು ತಿರುಗೇಟು
ಕೆಪಿಸಿಸಿ ಕಚೇರಿಯಲ್ಲೇ ನಡೆದ "ಪಿಸುಮಾತು" ಪ್ರಕರಣ ನಡೆದು ಅದೆಷ್ಟೋ ದಿನಗಳಾಗಿವೆ. ಆದರೆ ಪ್ರಕರಣದ ರೂವಾರಿ ಉಗ್ರಪ್ಪ ವಿರುದ್ಧ ಡಿಕೆ ಶಿವಕುಮಾರ್ ಅವರಿಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲವೇಕೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಉಗ್ರಪ್ಪ ಅವರು ಸಿದ್ದರಾಮಯ್ಯ ಬಣದವರೆಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಅಲ್ಪಸಂಖ್ಯಾತ ಸಮುದಾಯದ ಸಲೀಂ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಲಾಯ್ತೇ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಯಾರಾದರೂ ಬಂಡಾಯವಾಗಿ ಸ್ಪರ್ಧಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಕೆಶಿ ಎಚ್ಚರಿಸಿದ್ದಾರೆ. ಆದರೆ ಡಿಕೆಶಿ ತಕ್ಕಡಿ ಎದ್ದೇಳುತ್ತಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲೇ ವ್ಯಂಗ್ಯವಾಡಿದ್ದ ಉಗ್ರಪ್ಪ ವಿರುದ್ಧ ಏಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ? ಭಯವೋ, ಬೆದರಿಕೆಯೋ? ಎಂದು ಪ್ರಶ್ನಿಸಿದ್ದಾರೆ. #ಅಸಹಾಯಕಡಿಕೆಶಿ ಎಂದು ಹ್ಯಾಷ್ಟ್ಯಾಗ್ ಮೂಲಕ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ನಿನ್ನೆ ಡಿಕೆಶಿ ಏನಂದಿದ್ದರು..?
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎ.ಮಂಜು ಮೇಲೆ ಬಿಜೆಪಿ ಶಿಸ್ತುಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೊಸ ಬಾಂಬ್ ಸಿಡಿಸಿದರು. ಎ.ಮಂಜು ಹೆಗಲ ಮೇಲಿಂದ ರಾಜಕೀಯ ಎದುರಾಳಿಗೆ ಗುರಿಯಿಟ್ಟರು. ಬಿಜೆಪಿಯವರು ಮಂಜು ಬಗ್ಗೆಯೇನೋ ನಿರ್ಧಾರ ತೆಗೆದುಕೊಂಡರು. ಆದರೆ ಬೆಳಗಾವಿ ವಿಚಾರವಾಗಿ ಯಾಕೆ ನಿರ್ಧಾರ ಮಾಡ್ತಿಲ್ಲ ಎಂದು ಪ್ರಶ್ನಿಸಿದರು. ಕ್ರಮ ತೆಗೆದುಕೊಳ್ಳೋಕೆ ಬಿಜೆಪಿಯವರಿಗೆ ಧಂ ಇಲ್ಲ, ಅಲ್ಲಿ ಯಾಕೆ ಪಕ್ಷೇತರ ಅಭ್ಯರ್ಥಿಯನ್ನು ನಿಲ್ಲಿಸಿದ್ರು ಎಲ್ಲಾ ಗೊತ್ತಿದೆ. ಯಾರು ನಿಲ್ಲಿಸಿದ್ದು ಅನ್ನೋದು ಗೊತ್ತಿದೆ ಎಂದು ಡಿಕೆಶಿ ಚಾಟಿ ಬೀಸಿದರು. ಎ.ಮಂಜು ಮೇಲೆ ಶಿಸ್ತು ಕ್ರಮ ತೆಗೆದುಕೊಂಡಂತೆ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದರು ಇದಕ್ಕೆ ಇಂದು ಬಿಜೆಪಿ ತಿರುಗೇಟು ನೀಡಿದೆ.
ಇದನ್ನೂ ಓದಿ: ಸೋಲೋ ಕಡೆ ಟಿಕೆಟ್ ಕೊಟ್ಟು HDK ಮುಸ್ಲಿಮರನ್ನು ಬಲಿ ಪಡೆಯುತ್ತಿದ್ದಾರೆ: MLA Zameer ಆರೋಪ
BJPಯಿಂದ ಅಂತರ ಕಾಯ್ದುಕೊಂಡ ಜಾರಕಿಹೊಳಿ
ಬಿಜೆಪಿಯಲ್ಲಿರುವ ರಮೇಶ್ ಜಾರಕಿಹೊಳಿ ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಪರ ನಿಂತಿಲ್ಲ. ಬದಲಾಗಿ ಸೋದರ ಲಖನ್ ಜಾರಕಿಹೊಳಿಗೆ ಬೆಂಬಲವಾಗಿ ನಿಂತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸೋದರನನ್ನು ಕಣಕ್ಕಿಳಿಸಿ ರಾಜಕೀಯ ದಾಳ ಉರುಳಿಸಿದ್ದಾರೆ. ಬಿಜೆಪಿ ಚುನಾವಣಾ ಪ್ರಚಾರದಿಂದ ರಮೇಶ್ ಜಾರಕಿಹೊಳಿ ಅಂತರ ಕಾಯ್ದುಕೊಂಡಿದ್ದಾರೆ. ನಿನ್ನೆ ಈ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದು ಒಂದೇ ನನ್ನ ಗುರಿ ಎಂದಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರ ಕಾಂಗ್ರೆಸ್ ನಿಂದ ಬೆಳಗಾವಿಯಲ್ಲಿ ಸ್ಪರ್ಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ