ಬೆಂಗಳೂರು (ಜೂ. 18): ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಬಿ.ಕೆ. ಹರಿಪ್ರಸಾದ್ ಮತ್ತು ನಜೀರ್ ಅಹಮದ್ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಇದರ ಮಧ್ಯೆಯೇ ಬಿಜೆಪಿ ಕೂಡ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಬಿಜೆಪಿ ಸೇರ್ಪಡೆಯಾಗಿದ್ದ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ವಿಧಾನ ಪರರಿಷತ್ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹೆಚ್. ವಿಶ್ವನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು, ಎಂಟಿಬಿ ನಾಗರಾಜ್, ಆರ್ ಶಂಕರ್, ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಯಾಪುರ್ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಸಿಎಂ ಯಡಿಯೂರಪ್ಪ ನೀಡಿದ್ದ ಆಶ್ವಾಸನೆಯಂತೆ ಆರ್. ಶಂಕರ್ಗೆ ಪರಿಷತ್ ಟಿಕೆಟ್ ನೀಡಲಾಗಿದೆ. ಆದರೆ, ಹೆಚ್. ವಿಶ್ವನಾಥ್ ಸ್ಪರ್ಧೆಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ.
ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲೂ ಅಚ್ಚರಿ ಮೂಡಿಸಿದ್ದ ಬಿಜೆಪಿ ಹೈಕಮಾಂಡ್ ವಿಧಾನ ಪರಿಷತ್ಗೆ ಪ್ರತಾಪ್ ಸಿಂಹ ನಾಯಕ್ ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಮತ್ತೊಂದು ಶಾಕ್ ನೀಡಿದೆ. ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರದ ನೆರವು ತಲುಪಿಸಿ; ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ
ಸಿಎಂ ಯಡಿಯೂರಪ್ಪ ಶಿಫಾರಸು ಮಾಡಿದ್ದ ಮೂವರಿಗೆ ಹೈಕಮಾಂಡ್ ವಿಧಾನ ಪರಿಷತ್ ಟಿಕೆಟ್ ನೀಡಿದೆ. ಈ ಮೂಲಕ ತಮ್ಮ ಸರ್ಕಾರ ರಚನೆಗೆ ಕಾರಣರಾದವರಿಗೆ ಟಿಕೆಟ್ ಕೊಡಿಸಿ, ಸಿಎಂ ಯಡಿಯೂರಪ್ಪ ಮಾತು ಉಳಿಸಿಕೊಂಡಿದ್ದಾರೆ. ಹೆಚ್. ವಿಶ್ವನಾಥ್ ಆಯ್ಕೆ ವಿರುದ್ಧ ಸಾಕಷ್ಟು ವಿರೋಧಗಳು ಎದ್ದ ಕಾರಣದಿಂದ ಅವರ ಹೆಸರನ್ನು ಕೈಬಿಡಲಾಗಿದೆ.
ಸುನೀಲ್ ವಲ್ಯಾಪುರ್ ಬಿ.ಎಸ್. ಯಡಿಯೂರಪ್ಪನವರ ಆಪ್ತ. ಯಡಿಯೂರಪ್ಪ ಬಿಜೆಪಿಯಲ್ಲಿದ್ದಾಗಲೂ, ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗಲೂ ವಲ್ಯಾಪುರ್ ಸಾಥ್ ನೀಡಿದ್ದರು. ಹೈಕಮಾಂಡ್ ಹೆಚ್. ವಿಶ್ವನಾಥ್ ಬದಲು ಆಯ್ಕೆ ಮಾಡಿರುವ ಪ್ರತಾಪ್ ಸಿಂಹ ನಾಯಕ್ ವೃತ್ತಿಯಲ್ಲಿ ವಕೀಲ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರೂ ಹೌದು. ಈ ಮೂಲಕ ಮೂರೂ ಪಕ್ಷಗಳ ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ