ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 10 ಬೃಹತ್ ಹಗರಣಗಳು ನಡೆದಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರ ವಿರುದ್ಧ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್ ಆರ್ (Ramesh NR) ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ. ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ,, ನಕಲಿ ದಾಖಲೆ, ಸರ್ಕಾರಿ ಭೂಮಿ ಕಬಳಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ 10 ಪ್ರತ್ಯೇಕ ದೂರು ನೀಡಿಲಾಗಿದ್ದು, 3,728 ಪುಟಗಳ ದಾಖಲೆ, 62 ಗಂಟೆಗಳ ವಿಡಿಯೋ ತುಣುಕು, 900ಕ್ಕೂ ಅಧಿಕ ಛಾಯಾಚಿತ್ರಗಳನ್ನು ಸಾಕ್ಷಿಯಾಗಿ ನೀಡಲಾಗಿದೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.
ಯಾರು ಯಾರ ವಿರುದ್ಧ ದೂರು
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ 7, ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ನಾಲ್ಕು, ಯುಟಿ ಖಾದರ್ , ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ವಿರುದ್ಧ ತಲಾ ಎರಡು ಹಾಗೂ ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ಎಂ.ಕೃಷ್ಣಪ್ಪ, ಶಾಸಕರಾದ ಎನ್.ಎ.ಹ್ಯಾರಿಸ್, ಪ್ರಿಯ ಕೃಷ್ಣ ವಿರುದ್ಧ ತಲಾ ಒಂದು ದೂರು ನೀಡಲಾಗಿದೆ. ದೂರಿನಲ್ಲಿ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಹೆಸರೂ ಇದೆ. ಕಾಂಗ್ರೆಸ್ ಅವಧಿಯಲ್ಲಿ ಸಾವಿರಾರು ಹಗರಣ ನಡೆದಿದ್ದು, ಇದರ ವಿರುದ್ಧ ಸೂಕ್ತ ತನಿಖೆಯಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: G Parameshwar: ಕಾಂಗ್ರೆಸ್ನಲ್ಲಿ ಭಾರೀ ಬಂಡಾಯ; ಪ್ರಣಾಳಿಕೆ ಸಮಿತಿಗೆ ಪರಮೇಶ್ವರ್ ರಾಜೀನಾಮೆ?
ಕಾಂಗ್ರೆಸ್ ಅವಧಿಯಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಪಾಲುಧಾರಿಕೆಯ ಡಿಎಲ್ಎಫ್ ಸಂಸ್ಥೆ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿಯ ಗಂಗೇನ ಹಳ್ಳಿ ಗ್ರಾಮದ ಸರ್ವೆ ನಂಬರ್ 1ರಿಂದ 99, ವರ್ತೂರು ಗ್ರಾಮದ ಸರ್ವೆ ನಂಬರ್ 7ರಿಂದ 10, ವರ್ತೂರು ನರಸೀಪುರ ಗ್ರಾಮದ ಸರ್ವೆ ನಂಬರ್ 1ರಿಂದ 35 ಮತ್ತು ಪೆದ್ದನಪಾಳ್ಯ ಗ್ರಾಮದ ಸರ್ವೆ ನಂಬರ್ 17ರಿಂದ 20ರಲ್ಲಿರುವ ಸುಮಾರು 9,600 ಕೋಟಿ ರೂಪಾಯಿಗಳ ಅಧಿಕ ಮೌಲ್ಯದ 1,100 ಎಕರೆ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಇಂದಿರಾ ಕ್ಯಾಂಟಿನ್ ಹೆಸರಿನಲ್ಲಿ 560 ಕೋಟಿ ರೂ ವಂಚನೆ
ಸಿದ್ದರಾಮಯ್ಯ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲೂ 560 ಕೋಟೊ ರೂ ಹಗರಣ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯ 189 ಇಂದಿರಾ ಕ್ಯಾಂಟೀನ್ಗಳ ಗ್ರಾಹಕರ ಹೆಸರಿನಲ್ಲಿ ಪ್ರತಿ ತಿಂಗಳು 11.5 ಕೋಟಿ ರೂಗಳನ್ನು ಕಬಳಿಸಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ, ಮಾಜಿ ಸಚಿವ ಕೆಜಿ ಜಾರ್ಜ್ ಹಾಗೂ ಹಣಕಾಸು ವಿಭಾಗದ ಹಿಂದಿನ ಜಂಟಿ ಆಯುಕ್ತ ಮನೋಜ್ ರಾಜನ್ ಹಾಗೂ ರಿವಾರ್ಡ್ ಸಂಸ್ಥೆಗಳು ಭಾಗಿಯಾಗಿದೆ ಎಂದು ತಿಳಿಸಿದ್ದಾರೆ.
ಜಾಹೀರಾತು ಶುಲ್ಕ ಪಾವತಿಸದೇ ವಂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ 439 ಬಸ್ ತಂಗುದಾಣಗಳಲ್ಲಿ 2015-16ರಿಂದ 2016-17ರವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಬಳಸಿಕೊಳ್ಳದೇ ಕಾನೂನು ಬಾಹಿರವಾಗಿ ಬಳಸಿಕೊಳ್ಳಲಾಗಿದೆ. ಜೊತೆಗೆ ಪಾಲಿಕೆಗೆ ನಿಯಮಾನುಸಾರ ಪಾವತಿಸಬೇಕಿದ್ದ 68.15 ಕೋಟಿ ಜಾಹೀರಾತು ಶುಲ್ಕ ಪಾವತಿಸದೆ ವಂಚಿಸಲಾಗಿದೆ. ಅಂತೆಯೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಯೋಜನೆಯ ಹೆಸರಿನಲ್ಲಿ 1,600 ಕೋಟಿ ಹಗರಣ ನಡೆದಿದ್ದು, ಇದರಲ್ಲಿ ಸಿದ್ದರಾಮಯ್ಯ ಮತ್ತು ಕೆಜಿ ಜಾರ್ಜ್ ಕೈವಾಡವಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಕೃಷಿಭಾಗ್ಯ ಹೆಸರಿನಲ್ಲಿ 800 ಕೋಟಿ ವಂಚನೆ
ಕೃಷಿ ಭೂಮಿಗಳಲ್ಲಿ ಕೃಷಿ ಹೊಂಡ ನಿರ್ಮಿಸುವ ರೈತರಿಗೆ ನೆರವಾಗುವ ಕೃಷಿ ಭಾಗ್ಯ ಯೋಜನೆಯಲ್ಲಿ 800 ಕೋಟಿ ಹಗರಣ ನಡೆದಿದೆ. 2014ರಿಂದ 2017-18ರ 4 ವರ್ಷದಲ್ಲಿ ರಾಜ್ಯದ 2,15,130 ಫಲಾನುಭವಿಗಳಿಗೆ ಕೃಷಿ ಹೊಂಡ ನಿರ್ಮಿಸಿ, ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್ ಸೆಟ್ ಅಳವಡಿಕೆ ಹೆಸರಿನಲ್ಲಿ ಹಣ ಲೂಟಿ ಹೊಡೆಯಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಕೃಷಿ ಸಚಿವ ಕೃಷ್ಣ ಭೈರೇಗೌಡ, ಕೃಷಿ ಇಲಾಖೆಯ ಅಂದಿನ ಹಲವು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ರಮೇಶ್ ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ
ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್, ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಹಗರಣ ಸೇರಿದಂತೆ ಒಟ್ಟು ನಾಲ್ಕು ರೀತಿಯ ವಿವಿಧ ಯೋಜನೆಗಳ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಲ್ಲಿ ಕೆಎಸ್‌ಎಪಿಎಸ್ ಮೂಲ ಏಡ್ಸ್ ಪೀಡಿತ ಬಾಲಕ/ ಬಾಲಕಿಯರು, ಮಹಿಳೆಯರು, ಪುರುಷರು, ಮಂಗಳಮುಖಿಯರನ್ನು ಪುನರ್ವಸತಿ ಕೇಂದ್ರಗಳಿಗೆ ಸೇರಿಸಿ ಸೌಲಭ್ಯ ಕಲ್ಪಿಸುವ ಯೋಜನೆಯಲ್ಲಿ ನೂರಾರು ಕೋಟಿ . ಹಣ ದುರ್ಬಳಕೆಯಾಗಿದೆ ಎಂದು ರಮೇಶ್ ಹತ್ತಾರು ಆರೋಪಗಳನ್ನು ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ