ಹುಬ್ಬಳ್ಳಿಯಿಂದ ಬಿಜೆಪಿ ಚುನಾವಣಾ ರ್‍ಯಾಲಿ ಆರಂಭ; ಇಂದು ವಾಣಿಜ್ಯನಗರಿಗೆ ಮೋದಿ ಆಗಮನ

65 ಎಕರೆ ಜಾಗದಲ್ಲಿ ಬಿಜೆಪಿ ಸಮಾವೇಶಕ್ಕೆ ಸಿದ್ದತೆ ಮಾಡಲಾಗಿದೆ. ಲಕ್ಷಾಂತರ ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

Latha CG | news18
Updated:February 10, 2019, 8:16 AM IST
ಹುಬ್ಬಳ್ಳಿಯಿಂದ ಬಿಜೆಪಿ ಚುನಾವಣಾ ರ್‍ಯಾಲಿ ಆರಂಭ; ಇಂದು ವಾಣಿಜ್ಯನಗರಿಗೆ ಮೋದಿ ಆಗಮನ
ಪ್ರಧಾನಿ ಮೋದಿ
Latha CG | news18
Updated: February 10, 2019, 8:16 AM IST
ಹುಬ್ಬಳ್ಳಿ,(ಫೆ.10): ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ರಣಕಹಳೆ ಊದಲಿದ್ದು, ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರೀ ಹುಮ್ಮಸ್ಸಿನಲ್ಲಿರುವ ಬಿಜೆಪಿ ಪಾಳಯ ಪ್ರಧಾನಿಗಳ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದೆ. ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಿಂದ ರಾಜ್ಯದ ಪ್ರಚಾರ ಸಮಾವೇಶಗಳಿಗೆ ಚಾಲನೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ರ್‍ಯಾಲಿ ಹುಬ್ಬಳ್ಳಿಯಿಂದ ಪ್ರಾರಂಭವಾಗಲಿದೆ. ಹೀಗಾಗಿ ಹುಬ್ಬಳ್ಳಿಯ ಗಬ್ಬೂರು ಬಳಿಯ ಕೆಎಲ್​ಇ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಧಾನಿಗಳಿಗೆ ಸ್ವಾಗತ ಕೋರಲು ಬಿಜೆಪಿ ಸಕಲ ತಯಾರಿ ಮಾಡಿಕೊಂಡಿದೆ. 65 ಎಕರೆ ಜಾಗದಲ್ಲಿ ಬಿಜೆಪಿ ಸಮಾವೇಶಕ್ಕೆ ಸಿದ್ದತೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕುಳಿತುಕೊಳ್ಳಲು ಪ್ರಧಾನ ವೇದಿಕೆ ಸಿದ್ಧವಾಗಿದೆ. ಪ್ರಧಾನ ವೇದಿಕೆಯ ಪಕ್ಕದಲ್ಲಿ ಶಾಸಕರು ಮತ್ತು ಸಂಸದರಿಗಾಗಿ ವೇದಿಕೆ ನಿರ್ಮಾಣ ಮಾಡಲಾಗಿದೆ. . ಹುಬ್ಬಳ್ಳಿ- ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಲಕ್ಷಾಂತರ ಜನರು ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ರಮೇಶ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಶಿವಕುಮಾರ ಉದಾಸಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಇಂದು ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿಗಳು ಬಂದಿಳಿಯಲಿದ್ದಾರೆ. ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಸೇರಿದಂತೆ ಬಿಜೆಪಿ ಮುಖಂಡರು ಪ್ರಧಾನಿಗಳನ್ನು ಸ್ವಾಗತಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಗಬ್ಬೂರು ವೃತ್ತದ ಬಳಿಯ ಕೆಎಲ್‌ಇ ಮೈದಾನಕ್ಕೆ ಆಗಮಿಸಲಿರುವ ಪ್ರಧಾನಿಗಳು ಮೊದಲು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತ್ರಿಬಲ್​ ಐಟಿ ಕಟ್ಟಡದ ಶಂಕುಸ್ಥಾಪನೆ ಹಾಗೂ ಪೈಪ್ ನ್ಯಾಚುರಲ್​ ಗ್ಯಾಸ್​ ಸಂಪರ್ಕಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಆವಾಸ್​ ಯೋಜನೆಯ ಮನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಬಿಜೆಪಿಯ ಬೃಹತ್​ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ಪ್ರಧಾನಿಗಳ ವಿಶೇಷ ಭದ್ರತಾ ಪಡೆ ನಗರಕ್ಕೆ ಆಗಮಿಸಿದ್ದು ಕಾರ್ಯಕ್ರಮ ನಡೆಯುವ ಪ್ರದೇಶದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಈಗಾಗಲೆ ನಗರದಾದ್ಯಂತೆ ಬೈಕ್‌ ಜಾಥಾ ಮಾಡುವ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ಎಲ್ಲೆಡೆ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಕರ್ನಾಟಕದಲ್ಲಿ ಹುಬ್ಬಳ್ಳಿಯಿಂದ ಪ್ರಾರಂಭವಾಗಲಿರುವ ಬಿಜೆಪಿ ಚುನಾವಣಾ ಸಮಾವೇಶ ತೀವ್ರ ಕುತೂಹಲ ಕೆರಳಿಸಿದೆ. ಪ್ರಧಾನಿಗಳು ಮಹದಾಯಿ ವಿವಾದದದಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಮಾತನಾಡುತ್ತಾರಾ? ಯಡಿಯೂರಪ್ಪ ಆಪರೇಷನ್ ಕಮಲದ ಆಡಿಯೋ ಬಗ್ಗೆ ಪ್ರಸ್ತಾವಣೆ ಮಾಡುತ್ತಾರಾ? ರಾಜ್ಯ ಸರ್ಕಾರದ ಬಜೆಟ್ ಕುರಿತು ಏನು ಹೇಳುತ್ತಾರೆ? ರಾಜ್ಯಕ್ಕೆ ಏನಾದರೂ ವಿಶೇಷ ಕೊಡುಗೆಯನ್ನು ಘೋಷಿಸುತ್ತಾರಾ ಎಂದು ಜನರು ಕಾತುರತೆಯಿಂದ ಕಾಯುತ್ತಿದ್ದಾರೆ.
First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...