ಏಳು ಕ್ಷೇತ್ರಗಳಲ್ಲಿ ಬಿಜೆಪಿಗಿಲ್ಲ ಸಮರ್ಥ ಅಭ್ಯರ್ಥಿಗಳು; ಬಿಎಸ್​ವೈಗೆ ತಲೆನೋವಾದ ಆಯ್ಕೆ

ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ ಮತ್ತು ಹಾಸನ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ.

Sharath Sharma Kalagaru | news18
Updated:March 15, 2019, 12:03 PM IST
ಏಳು ಕ್ಷೇತ್ರಗಳಲ್ಲಿ ಬಿಜೆಪಿಗಿಲ್ಲ ಸಮರ್ಥ ಅಭ್ಯರ್ಥಿಗಳು; ಬಿಎಸ್​ವೈಗೆ ತಲೆನೋವಾದ ಆಯ್ಕೆ
ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ
Sharath Sharma Kalagaru | news18
Updated: March 15, 2019, 12:03 PM IST
ಬೆಂಗಳೂರು(ಮಾ. 14): ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 17 ಕ್ಷೇತ್ರಗಳನ್ನ ಗೆದ್ದಿದ್ದ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಅನೇಕ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಇಂಥ ಏಳು ಕ್ಷೇತ್ರಗಳು ಬಿಜೆಪಿಗೆ ತಲೆನೋವಾಗಿವೆ. ನಾಮಪತ್ರ ಸಲ್ಲಿಕೆಯ ದಿನ ಹತ್ತಿರ ಬರುತ್ತಿರುವಂತೆಯೇ ಬಿಜೆಪಿ ಪಾಳಯದಲ್ಲಿ ಆತಂಕ ಮನೆ ಮಾಡುತ್ತಿದೆ. ಮೋದಿ ಅಲೆಯನ್ನು ಉಪಯೋಗಿಸಿಕೊಳ್ಳುವ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದೆ. ಈ ಏಳು ಕ್ಷೇತ್ರಗಳೆಂದರೆ ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ ಮತ್ತು ಹಾಸನ.

ಬಳ್ಳಾರಿ: ಹಲವು ವರ್ಷಗಳ ಕಾಲ ತನ್ನ ಭದ್ರಕೋಟೆ ಎನಿಸಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಉಪಚುನಾವಣೆಯಲ್ಲಿ ಸೋತಿತ್ತು. ರೆಡ್ಡಿ ಸಹೋದರರ ಅನುಪಸ್ಥಿತಿಯಲ್ಲಿ ಬಿಜೆಪಿಯು ನೆಲೆ ಮರಳಿಗಿಟ್ಟಿಸಲು ಪರದಾಡುತ್ತಿದೆ. ಬಿ. ಶ್ರೀರಾಮುಲು ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದು ಬಿಜೆಪಿಗೆ ಇನ್ನಷ್ಟು ಹತಾಶೆ ತಂದಿದೆ. ಕಾಂಗ್ರೆಸ್ ಪಕ್ಷದಿಂದ ಬಿ. ನಾಗೇಂದ್ರ ಅವರನ್ನು ಸೆಳೆಯುವ ಪ್ರಯತ್ನ ಯಶಸ್ವಿಯಾಗಿಲ್ಲ. ನಾಗೇಂದ್ರ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟು ಬರಲು ತಯಾರಿಲ್ಲ. ಶ್ರೀರಾಮುಲು ಅವರು ತಮ್ಮ ಸಹೋದರಿ ಜೆ. ಶಾಂತಾ ಅವರನ್ನ ಕಣಕ್ಕಿಳಿಸಲು ಸಿದ್ಧರಿಲ್ಲ. ನಾಗೇಂದ್ರ ಅವರ ಸಹೋದರ ವೆಂಕಟೇಶ್ ಹಾಗೂ ದೇವೇಂದ್ರ ಅವರ ಹೆಸರುಗಳು ಬಳ್ಳಾರಿ ಕ್ಷೇತ್ರದ ಟಿಕೆಟ್​ಗೆ ಕೇಳಿಬರುತ್ತಿದೆ. ಆದರೆ ಇವರು ಕಾಂಗ್ರೆಸ್ಸನ್ನು ಮಣಿಸುವಷ್ಟು ಪ್ರಬಲವಾಗಿಲ್ಲ. ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇದನ್ನೂ ಓದಿ: ಸ್ಪೈಸ್ ಜೆಟ್​ಗೆ ಭಾರೀ ಸಂಕಟ, ಬಹುತೇಕ ವಿಮಾನಗಳು ಸ್ಥಗಿತ; ಟಿಕೆಟ್ ದರ ಏರಿಕೆ 

ಚಿತ್ರದುರ್ಗ: ಕಾಂಗ್ರೆಸ್​ನ ಭದ್ರಕೋಟೆಯಾಗಿರುವ ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಸಂಸದ ಜನಾರ್ದನ ಸ್ವಾಮಿ, ಮಾದಾರ ಚೆನ್ನಯ್ಯ ಮತ್ತು ಮಾನಪ್ಪ ವಜ್ಜಲ್ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಮಾದಾರ ಚೆನ್ನಯ್ಯ ಅವರು ಸ್ಪರ್ಧೆಗೆ ಒಪ್ಪುತ್ತಿಲ್ಲ. ಮಾನಪ್ಪ ವಜ್ಜಲ್ ಅವರು ಸೂಕ್ತ ಅಭ್ಯರ್ಥಿಯಲ್ಲವೆಂಬ ಅಭಿಪ್ರಾಯವಿದೆ. ಇನ್ನು, ಜನಾರ್ದನ ಸ್ವಾಮಿ ಅವರ ವರ್ಚಸ್ಸು ಮೊದಲಿನಷ್ಟು ಉತ್ತಮವಾಗಿಲ್ಲವೆನ್ನಲಾಗಿದೆ.

ರಾಯಚೂರು: ಶ್ರೀರಾಮುಲು ಅವರ ನೆಂಟರಾದ ಸಣ್ಣ ಫಕೀರಪ್ಪ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತು ದೇವದುರ್ಗ ಶಾಸಕ ಶಿವನಗೌಡ ನಾಯಕ್ ಅವರ ಹೆಸರು ರಾಯಚೂರು ಟಿಕೆಟ್ ರೇಸ್​ನಲ್ಲಿದೆ. ಆಪರೇಷನ್ ಕಮಲದ ಆಡಿಯೋ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಶಿವನಗೌಡ ನಾಯಕ್ ಅವರು ಚುನಾವಣೆಗೆ ನಿಲ್ಲಲು ಒಪ್ಪುತ್ತಿಲ್ಲ. ಸಣ್ಣ ಫಕೀರಪ್ಪ ಅವರ ವರ್ಚಸ್ಸು ಕುಂದಿದೆ. ತಿಪ್ಪರಾಜು ಹವಾಲ್ದಾರ್ ಅವರು ಲೋಕಸಭೆಯಲ್ಲಿ ಸ್ಪರ್ಧಿಸುವ ಮಟ್ಟಕ್ಕೆ ಹೆಸರು ಮಾಡಿಲ್ಲ. ಕಾಂಗ್ರೆಸ್​ನ ಸಂಸದ ಬಿ.ವಿ. ನಾಯಕ್ ಅವರನ್ನ ಸೆಳೆಯುವ ಆಸೆಯಲ್ಲಿದ್ದ ಬಿಜೆಪಿಗೆ ಅದೂ ಸಾಧ್ಯವಾಗಿಲ್ಲ. ಕೊನೆಯ ಘಳಿಗೆಯಲ್ಲಿ ಬಿ.ವಿ. ನಾಯಕ್ ಅವರು ಕೈಕೊಟ್ಟಿರುವುದು ಬಿಜೆಪಿಗೆ ನಿರಾಸೆ ತಂದಿದೆ.

ಬೆಂಗಳೂರು ಗ್ರಾಮಾಂತರ: ಡಿಕೆ ಬ್ರದರ್ಸ್​ನ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್​ನ ಡಿ.ಕೆ. ಸುರೇಶ್ ವಿರುದ್ಧ ಯಾರನ್ನು ಕಣಕ್ಕಿಳಿಸುವುದು ಎಂಬುದು ಬಿಜೆಪಿಗೆ ದೊಡ್ಡ ಪ್ರಶ್ನೆಯಾಗಿದೆ. ಇದ್ದುದರಲ್ಲಿ ಪ್ರಬಲರೆನಿಸಿರುವ ಸಿ.ಪಿ. ಯೋಗೇಶ್ವರ್ ಅವರು ಚುನಾವಣೆಯಲ್ಲಿ ನಿಲ್ಲಲು ಮನಸು ಮಾಡುತ್ತಿಲ್ಲ. ತೇಜಸ್ವಿನಿ ರಮೇಶ್ ಅವರೂ ಸಿದ್ಧವಾಗಿಲ್ಲ. ಇನ್ನು, ರುದ್ರೇಶ್ ಅವರು ತಕ್ಕ ಡಿಕೆ ಸುರೇಶ್ ಅವರನ್ನು ಎದುರಿಸುವಷ್ಟು ಸಮರ್ಥರಲ್ಲ.

ಚಾಮರಾಜನಗರ: ಈ ಕ್ಷೇತ್ರಕ್ಕೆ ಕಾಗಲವಾಡಿ ಶಿವಣ್ಣ ಅವರ ಹೆಸರು ಕೇಳಿ ಬರುತ್ತಿದೆ. ಆದರೆ, ಹಾಲಿ ಕಾಂಗ್ರೆಸ್ ಸಂಸದ ಧ್ರುವನಾರಾಯಣ್ ಅವರನ್ನು ಸೋಲಿಸಲು ಶಿವಣ್ಣಗೆ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ಚಾಮರಾಜನಗರದಲ್ಲಿ ಐದು ಬಾರಿ ಸಂಸದರಾಗಿದ್ದ ದಲಿತ ಮುಖಂಡ ವಿ. ಶ್ರೀನಿವಾಸ ಪ್ರಸಾದ್ ಅವರ ಹಿಂದೆ ಬಿದ್ದಿದೆ ಬಿಜೆಪಿ. ಆದರೆ, ಶ್ರೀನಿವಾಸ ಪ್ರಸಾದ್ ಅವರ ಆರೋಗ್ಯ ಸ್ಥಿತಿ ಸಹಜವಾಗಿಲ್ಲ. ಮೊದಲಿನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಸಾದ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನವೇ.
Loading...

ಕೋಲಾರ: ಏಳು ಬಾರಿ ಗೆದ್ದಿರುವ ಕೆ.ಹೆಚ್. ಮುನಿಯಪ್ಪ ಅವರನ್ನು ಸೋಲಿಸಲು ಬಿಜೆಪಿಗೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ. ಡಿ.ಎಸ್. ವೀರಯ್ಯ, ಚಲವಾದಿ ನಾರಾಯಣಸ್ವಾಮಿ, ಚಿ.ನಾ. ರಾಮು ಮತ್ತು ನಿವೃತ್ತ ಐಆರ್​ಎಸ್ ಅಧಿಕಾರಿ ರಮೇಶ್ ಬಾಬು ಅವರು ಕೋಲಾರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ನಾಲ್ವರೂ ಕೂಡ ಮುನಿಯಪ್ಪಗೆ ಪೋಪೋಟಿ ನೀಡುವಷ್ಟು ಪ್ರಬಲರಾಗಿಲ್ಲ.

ಹಾಸನ: ದೇವೇಗೌಡರ ಕುಟುಂಬದ ಅಡ್ಡಿಯಾಗಿರುವ ಹಾಸನದಲ್ಲಿ ಲೋಕಸಭಾ ಅಭ್ಯರ್ಥಿಯಾಗಲು ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ. ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡರನ್ನು ಕರೆದು ಟಿಕೆಟ್ ಕೊಡುವ ಪ್ಲಾನ್ ಇದೆಯಾದರೂ, ಗೌಡರ ಕುಟುಂಬವನ್ನು ಎದುರುಹಾಕಿಕೊಂಡು ರಾಜಕೀಯ ಮಾಡುವ ಶಕ್ತಿ ಅವರಿಗಿಲ್ಲ. ಗೌಡರ ಕುಟುಂಬದ ವಿರುದ್ಧ ಇಷ್ಟು ವರ್ಷ ಹೋರಾಟ ಮಾಡಿಕೊಂಡು ಮಂತ್ರಿ ಸ್ಥಾನವನ್ನೂ ಅನುಭವಿಸಿದ್ದ ಅರಕಲಗೂಡು ಮಂಜು ಅವರು ಬಿಜೆಪಿ ಪಾಲಿಗೆ ಸದ್ಯಕ್ಕೆ ಅನಿವಾರ್ಯವಾಗಿದೆ. ಎ. ಮಂಜು ಅವರು ಸ್ಪರ್ಧಿಸಿದರೆ ಬಾಗೂರು ಮಂಜೇಗೌಡ ಮೊದಲಾದ ಮುಖಂಡರೂ ಅವರಿಗೆ ಜೊತೆಯಾಗಿ ನಿಲ್ಲುವ ಸಂಭವವಿದೆ. ಆದರೆ, ಎ. ಮಂಜು ಅವರು ಬಿಜೆಪಿಗೆ ಬರುತ್ತಾರಾ ಎಂಬುದು ಇನ್ನೂ ನಿಶ್ಚಿತವಾಗಿಲ್ಲ. ಇದರ ಜೊತೆಗೆ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇರುವ ಮತ್ತೊಂದು ಕ್ಷೇತ್ರವೆಂದರೆ ಮಂಡ್ಯ. ಇಲ್ಲಿ ಸುಮಲತಾ ಅಂಬರೀಷ್ ಅವರು ಪಕ್ಷೇತರವಾಗಿ ಸ್ಪರ್ಧಿಸಿದರೆ ಬಿಜೆಪಿಯು ಅವರಿಗೆ ಬಾಹ್ಯ ಬೆಂಬಲ ಕೊಡುವ ಸಾಧ್ಯತೆ ಇದೆ. ಒಂದು ವೇಳೆ ಸುಮಲತಾ ಕಣಕ್ಕಿಳಿಯದಿದ್ದರೆ ಬಿಜೆಪಿಯಿಂದ ಕಣಕ್ಕಿಳಿಯಬಲ್ಲ ಸಮರ್ಥರು ಯಾರೂ ಇದ್ದಂತಿಲ್ಲ. ರಾಜ್ಯದಲ್ಲಿ 22 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿಗೆ 8 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲವಾಗಿದೆ. ಇಂಥ ಸ್ಥಿತಿಯಲ್ಲಿ ಬಿಜೆಪಿಯ ಗುರಿ ಈಡೇರುವ ಕನಸು ಹೇಗೆ ನನಸಾಗುತ್ತದೆ ಎಂಬುದು ಯಕ್ಷ ಪ್ರಶ್ನೆ.

(ವರದಿ: ಚಿದಾನಂದ ಪಟೇಲ್)

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...