ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕತೆಯಿಲ್ಲ: ಮಲ್ಲಿಕಾರ್ಜುನ ಖರ್ಗೆ

news18
Updated:July 12, 2018, 4:21 PM IST
ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕತೆಯಿಲ್ಲ: ಮಲ್ಲಿಕಾರ್ಜುನ ಖರ್ಗೆ
news18
Updated: July 12, 2018, 4:21 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಜುಲೈ 12) :  ಅವಕಾಶ ಸಿಕ್ಕಾಗ ಉತ್ತಮ ಆಡಳಿತ ಮಾಡದ ಬಿಜೆಪಿಗೆ ಮತ್ತೊಮ್ಮೆ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸುವ ನೈತಿಕತೆಯಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಖರ್ಗೆ, ಬಿಜೆಪಿ ಧೋರಣೆಯನ್ನು ಖಂಡಿಸಿದ್ದಾರೆ. ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರೂ ಉತ್ತಮ ಆಡಳಿತ ಕೊಡಲಾಗಿಲ್ಲ.  ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ, ಭಯೋತ್ಪಾದನೆ ಹತ್ತಿಕ್ಕುವಲ್ಲಿ ಮೈತ್ರಿ ಸರ್ಕಾರ ಸಂಪೂರ್ಣ ವಿಫಲವಾಗಿತ್ತು ಎಂದರು.

ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ನಡೆಯುತ್ತಿದ್ದ ದಾಳಿಗಳನ್ನು ತಡೆಯುವಲ್ಲಿಯೂ ಸರ್ಕಾರ ಸಕ್ರಿಯ ಪಾತ್ರ ನಿರ್ವಹಿಸಲಿಲ್ಲ. ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರಿಂದಲೇ ಮೈತ್ರಿ ಮುರಿದು ಬಿದ್ದಿತ್ತು. ಇದೀಗ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸುವ ಕಸರತ್ತು ಆರಂಭಿಸಿದೆ.

ಒಳ್ಳೆಯ ಆಡಳಿತ ಕೊಡಲಾಗಿಲ್ಲವಾದರೂ, ಯಾವ ಮುಖವಿಟ್ಟುಕೊಂಡು ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆಯೋ ಗೊತ್ತಿಲ್ಲ.  ಮತ್ತೊಮ್ಮೆ ಪಿಡಿಪಿ ಜತೆಗೂಡಿ ಮೈತ್ರಿ ಸರ್ಕಾರ ರಚಿಸುತ್ತೋ ಎಂಬುದರ ಬಗ್ಗೆಯೂ ಸ್ಪಷ್ಟತೆಯಿಲ್ಲ ಎಂದು ಹೇಳಿದರು.

ಜನ ಬೆಂಬಲ ಉಳಿಸಿಕೊಳ್ಳಬೇಕೆಂದು ಬಿಜೆಪಿ ಈ ರೀತಿಯ ನಾಟಕವಾಡುತ್ತಿದೆ. ಆದರೆ ಇದರಲ್ಲಿ ಬಿಜೆಪಿ ಯಶಸ್ಸು ಕಾಣುವುದಿಲ್ಲ. ಮುಂದಿನ ಲೋಕಸಭಾ ಅಧಿವೇಷನದಲ್ಲಿ ಜಮ್ಮು-ಕಾಶ್ಮೀರದ ವಿಷಯವನ್ನು ಗಂಭೀರವಾಗಿ ಚರ್ಚಿಸಲಾಗುವುದು ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...