ಕಾಂಗ್ರೆಸ್​ ಬೆಳಗಾವಿ ಫೈಟ್​ನಿಂದ ಬಿಜೆಪಿಗೆ ಸಿಗದ ಲಾಭ; ಇಂದು ಸಂಜೆ ದೆಹಲಿಗೆ ಯಡಿಯೂರಪ್ಪ

news18
Updated:September 7, 2018, 2:17 PM IST
ಕಾಂಗ್ರೆಸ್​ ಬೆಳಗಾವಿ ಫೈಟ್​ನಿಂದ ಬಿಜೆಪಿಗೆ ಸಿಗದ ಲಾಭ; ಇಂದು ಸಂಜೆ ದೆಹಲಿಗೆ ಯಡಿಯೂರಪ್ಪ
ಸಾಂದರ್ಭಿಕ ಚಿತ್ರ
news18
Updated: September 7, 2018, 2:17 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.7): ಕಾಂಗ್ರೆಸ್-ಜೆಡಿಎಸ್​ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಲು ಸತತ ಪ್ರಯತ್ನ ನಡೆಸುತ್ತಿರುವ ವಿರೋಧ ಪಕ್ಷ ಬಿಜೆಪಿಯ ಮತ್ತೊಂದು ಪ್ರಯತ್ನವೂ ವಿಫಲವಾಗಿದೆ. ಕಾಂಗ್ರೆಸ್​ನ ಆಂತರಿಕ ಭಿನ್ನಮತದ ಲಾಭ ಪಡೆದುಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ಕಾಂಗ್ರೆಸ್​ ಒಗ್ಗಟ್ಟು ಮಂತ್ರದ ಮೂಲಕ ತಿರುಗೇಟು ನೀಡಿದೆ.

ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬ್ರದರ್ಸ್​ ನಡುವಿನ ಜಗಳ ಕಳೆದೊಂದು ವಾರದಿಂದ ತಾರಕಕ್ಕೇರಿತ್ತು. ಒಂದು ಹಂತದಲ್ಲಿ ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟರೂ ಪ್ರತಿಷ್ಠೆ ಬಿಡಲ್ಲ ಎಂಬ ಹಠಕ್ಕೆ ಬಿದ್ದು, ರಾಜಕೀಯ ಕೋಲಾಹಲವನ್ನೇ ಎಬ್ಬಿಸಿದ್ದರು. ಇದೇ ಸಮಯವನ್ನು ಉಪಯೋಗಿಸಿಕೊಂಡ ಬಿಜೆಪಿ ರಮೇಶ್​ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಸೇರಿದಂತೆ ಅವರ ಬೆಂಬಲಿತ 12 ಕಾಂಗ್ರೆಸ್ ಶಾಸಕರಿಗೆ ಭರ್ಜರಿ ಆಫರ್​ ನೀಡಿ, ಪಕ್ಷಕ್ಕೆ ಸೆಳೆದುಕೊಳ್ಳಲು ಯೋಜನೆ ರೂಪಿಸಿತ್ತು. ಈ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ, ಮತ್ತೆ ಅಧಿಕಾರ ಸ್ಥಾಪಿಸಲು ಬಿಜೆಪಿ ಮುಂದಾಗಿತ್ತು. ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಈ ಹೈಡ್ರಾಮಾಗೆ ಶುಕ್ರವಾರ ತೆರೆಬಿದ್ದಿದ್ದು, ಕೆಪಿಸಿಸಿಯ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಅಸಮಾಧಾನಿತ ಮುಖಂಡರು ಒಮ್ಮತಕ್ಕೆ ಬಂದು, ಪಕ್ಷದ ನಿಲುವಿಗೆ ಬದ್ಧರಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದರೊಂದಿಗೆ ಕೈ ನಾಯಕರ ಭಿನ್ನಮತದ ಲಾಭ ಪಡೆಯಲು ಮುಂದಾಗಿದ್ದ ಬಿಜೆಪಿಗೆ ಕಾಂಗ್ರೆಸ್​ ಒಗ್ಗಟ್ಟಿನ ಉತ್ತರ ನೀಡಿದೆ. ಇನ್ನೇನು ಜಾರಕಿಹೊಳಿ ಸಹೋದರರು ಕಾಂಗ್ರೆಸ್​ ಬಿಡಲಿದ್ದಾರೆ ಎಂದು ತುದಿಗಾಲಲ್ಲಿ ನಿಂತಿ್ದ್ದ ಬಿ.ಎಸ್​.ಯಡಿಯೂರಪ್ಪ ಕಾಂಗ್ರೆಸ್ ಒಗ್ಗಟ್ಟು ಮಂತ್ರದಿಂದ ಕಂಗಾಲಾಗಿದ್ದಾರೆ.

ಇಂದು ಸಂಜೆ ದೆಹಲಿಗೆ ತೆರಳಲಿರುವ ಬಿ.ಎಸ್​.ಯಡಿಯೂರಪ್ಪ ಪ್ರಮುಖವಾಗಿ ಎರಡು ವಿಚಾರಗಳನ್ನು ಹೈಕಮಾಂಡ್​ನೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ಕೈ ನಾಯಕರ ಭಿನ್ನಮತದಿಂದ ಬಿಜೆಪಿಗೆ ಯಾವುದೇ ಲಾಭ ಆಗಲಿಲ್ಲ ಎಂಬುದು ಒಂದಾದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸ್ಥಿತಿಗತಿ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಯಡಿಯೂರಪ್ಪ ಚರ್ಚೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್​ ಭಿನ್ನಮತದ ಲಾಭ ಬಿಜೆಪಿಗೆ ಸಿಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಕೆ.ಎಸ್​. ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಹೇಳಿಕೆ ಕಸಕ್ಕೆ ಸಮ. ಆ ಪಕ್ಷಕ್ಕೆ ಶಿಸ್ತು ಇಲ್ಲ ಎಂದು ಕೆಂಡ ಕಾರಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ