ಬಿಜೆಪಿ ಕಾರ್ಯಕಾರಿಣಿ; ಬೆಳಗಾವಿಗೆ ಬಂದಿಳಿದ ಉಸ್ತುವಾರಿ ಅರುಣ್ ಸಿಂಗ್; ಸಂಪುಟ ವಿಸ್ತರಣೆ ಬಗ್ಗೆ ಸಿಗಲಿದೆಯಾ ಸಂದೇಶ?
ಅರುಣ್ ಸಿಂಗ್ ಅವರ ಸಂದೇಶ ನೋಡಿ ಮುಂದಿನ ತೀರ್ಮಾನ ನಡೆಸಲಾಗುವುದು. ಅವರು ಬಂದ ಬಳಿಕ ಸಂದೇಶ ನೋಡಿ ವಿಸ್ತರಣೆ, ಪುನರ್ ರಚನೆ ಬಗ್ಗೆ ತೀರ್ಮಾನ ಮಾಡಲಾಗುವುದು- ಸಿಎಂ ಬಿಎಸ್ ಯಡಿಯೂರಪ್ಪ
ಬೆಳಗಾವಿ (ಡಿ.4): ನಾಳೆ ಇಲ್ಲಿನ ಗಾಂಧಿಭವನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು, ಇದಕ್ಕಾರಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗಡಿ ಜಿಲ್ಲೆಗೆ ಬಂದಿಳಿದಿದ್ದಾರೆ. ರಾಜ್ಯ ಉಸ್ತುವಾರಿಯಾಗಿ ನೇಮಕವಾದ ಬಳಿಕ ಇದೇ ಮೊದಲ ಬಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಆಗಮಿಸಿದ್ದು, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅವರಿಗೆ ಪಕ್ಷದ ನಾಯಕರು ಸ್ವಾಗತಿಸಿದರು. ಕಾರ್ಯಕಾರಿಣಿಗೂ ಮುನ್ನ ಇಂದು ಸಭೆ ಕೋರ್ ಕಮಿಟಿ ಸಭೆ ನಡೆಯಲಿದ್ದು, ಹಲವು ಮಹತ್ವದ ವಿಚಾರಗಳು ಚರ್ಚೆ ನಡೆಯಲಿದೆ. ಬೆಳಗಾವಿ ಲೋಕಸಭೆ ಚುನಾವಣೆ, ವಿಧಾನಸಭಾ ಉಪಚುನಾವಣಾ, ಗ್ರಾಮ ಪಂಚಾಯತಿ ಚುನಾವಣೆಗಳ ಕುರಿತು ಚರ್ಚೆ ನಡೆಯಲಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಸಂಜೆ 7.30ಕ್ಕೆ ಕೋರ್ ಕಮಿಟಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕಂದಾಯ ಸಚಿವ ಆರ್ ಅಶೋಕ್ ಸೇರಿದಂತೆ ಸಚಿವರು, ಶಾಸಕರು, ಬಿಜೆಪಿ ರಾಜ್ಯ ಘಟಕದ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಗಳಾದ ಶ್ರೀ @ArunSinghbjp ಅವರು ಬೆಳಗಾವಿಯಲ್ಲಿ ನಾಳೆ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲಾಯಿತು. pic.twitter.com/YHO2LGNlCP
ನಗರದಲ್ಲಿ ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಮಾರ್ಗದರ್ಶನ ಮಾಡಲು ಇಂದು ರಾಜ್ಯಕ್ಕೆ ಅರುಣ್ ಸಿಂಗ್ ಆಗುಮಿಸುತ್ತಿದ್ದಾರೆ. ಇಂದು, ನಾಳೆ ಪಕ್ಷ ಸಂಘಟನೆ ಬಗ್ಗೆ ರಾಜ್ಯದ ಅಧ್ಯಕ್ಷರ ಸಮಸಕ್ಷಮದಲ್ಲಿ ಚರ್ಚೆ ನಡೆಸಲಿದ್ದೇವೆ. ಈ ವೇಳೆ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಚುನಾವಣೆ ಬಗ್ಗೆ ಕೂಡ ಚರ್ಚೆ ನಡೆಯಲಿದೆ. ಈಗಾಗಲೇ ಈ ಕುರಿತು ಒಂದು ಸುತ್ತಿನ ಚರ್ಚೆ ನಡೆದಿದೆ. ಈ ಕಾರ್ಯಕಾರಿಣಿಯಿಂದ ಗ್ರಾಮ ಪಂಚಾಯತಿ ಚುನಾವಣ ಸಂಘಟನೆ ಬಲಪಡಿಸಲು ಅನುಕೂಲವಾಗಲಿದೆ ಎಂದರು.
ಸಂಪುಟ ಸಂದೇಶ:
ಈಗಾಗಲೇ ಸಿಎಂ ಸೇರಿದಂತೆ ರಾಜ್ಯದ ನಾಯಕರು ಎದುರು ನೋಡುತ್ತಿರುವ ಸಂಪುಟ ವಿಸ್ತರಣೆ ಕುರಿತು ಅರುಣ್ ಸಿಂಗ್ ದೆಹಲಿಯಿಂದ ಸಂದೇಶ ತರುವ ನಿರೀಕ್ಷೆ ಇದೆ. ಈಗಾಗಲೇ ಹೈ ಕಮಾಂಡ್ ಭೇಟಿ ನೀಡಿರುವ ಸಿಎಂ ಬರಿಗೈಯ್ಲಿ ಹಿಂದಿರುಗಿದ್ದಾರೆ. ಈ ಹಿನ್ನಲೆ ಹೈ ಕಮಾಂಡ್ ಅರುಣ್ ಸಿಂಗ್ ಬಳಿ ಸಂದೇಶ ಕಳುಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅರುಣ್ ಸಿಂಗ್ ಅವರ ಸಂದೇಶ ನೋಡಿ ಮುಂದಿನ ತೀರ್ಮಾನ ನಡೆಸಲಾಗುವುದು. ಅವರು ಬಂದ ಬಳಿಕ ಸಂದೇಶ ನೋಡಿ ವಿಸ್ತರಣೆ, ಪುನರ್ ರಚನೆ ಬಗ್ಗೆ ತೀರ್ಮಾನ ಮಾಡಲಾಗುವುದು. ರಾಜ್ಯದ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲಾ ವಿಚಾರ ಚರ್ಚೆ ನಡೆಸಲಾಗುವುದು ಎಂದರು.
ಕೋರ್ ಕಮಿಟಿಯಲ್ಲಿ ಯಾವೆಲ್ಲಾ ವಿಷಯ ಚರ್ಚೆ
ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭೆಗೆ ಉಪಚುನಾವಣೆ ಅಭ್ಯರ್ಥಿ ಆಯ್ಕೆಯ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುವುದು. ಇದೇ ವೇಳೆ ಮೂಲ, ವಲಸಿಗರ ನಡುವಿನ ಪೈಪೋಟಿ, ಪಕ್ಷ ಸರ್ಕಾರದ ನಡುವೆ ಹಲವು ವಿಚಾರದಲ್ಲಿ ಸಮನ್ವಯದ ಕೊರತೆ ಸೇರಿದಂತೆ ಹಲವು ವಿಷಗಳು ಮುನ್ನಲೆಗೆ ಬರಲಿದೆ. ಇನ್ನು ನಿಗಮ ಮಂಡಳಿ ನೇಮಕ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪಕ್ಷದ ಅಭಿಪ್ರಾಯ ಕೇಳದ ಬಗ್ಗೆ, ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಮೇಲುಗೈ ಸಾಧಿಸಿದ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ