ಕಲಬುರ್ಗಿ(ನವೆಂಬರ್. 10): ತೀವ್ರ ಕುತೂಹಲ ಕೆರಳಿಸಿದ್ದ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಮಲ ಮತ್ತೊಮ್ಮೆ ಅರಳಿದೆ. ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಕೊನೆಗೂ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಶಶೀಲ್ ನಮೋಶಿ ಮುನ್ನಡೆ ಸಾಧಿಸಿದರೂ ಎರಡನೆಯ ಪ್ರಾಶಸ್ತ್ಯದ ಮತ ಎಣಿಕೆವರೆಗೂ ಫಲಿತಾಂಶಕ್ಕಾಗಿ ಕಾಯಬೇಕಾಯಿತು. ಗೆಲುವಿನ ಕೋಟಾ ರೀಚ್ ಆಗದ ಪರಿಣಾಮ, ಎರಡನೆಯ ಪ್ರಾಶಸ್ತ್ಯದ ಮತ ಎಣಿಕೆ ನಡೆಸಲಾಯಿತು. ಮೂವರು ಅಭ್ಯರ್ಥಿಗಳ ಎಲಿಮಿನೇಷನ್ ನಂತರ ಬಿಜೆಪಿ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. 21437 ಮತಗಳ ಪೈಕಿ 1844 ಮತಗಳು ತಿರಸ್ಕೃತಗೊಂಡು, 19593 ಮತಗಳು ಮಾತ್ರ ಪುರಸ್ಕೃತಗೊಂಡವು. 9418 ಮೊದಲ ಪ್ರಾಶಸ್ತ್ಯದ ಮತ ಪಡೆದ ಬಿಜೆಪಿಯ ಶಶಿಲ್ ನಮೋಶಿ 3205 ಮತಗಳ ಮುನ್ನಡೆ ಸಾಧಿಸಿದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರಗೆ 6213 ಮೊದಲ ಪ್ರಾಶಸ್ತ್ಯದ ಮತಗಳು ಸಿಕ್ಕವು.
ಜೆಡಿಎಸ್ ನ ತಿಮ್ಮಯ್ಯ ಪುರ್ಲೆಗೆ 3812 ಮೊದಲ ಪ್ರಾಶಸ್ತ್ಯದ ಮತಗಳು ಬಂದರೆ, ಚಂದ್ರಕಾಂತ್ ಸಿಂಗೆ ಗೆ 91 ಮತ ಹಾಗೂ ವಾಟಾಳ್ ನಾಗರಾಜ್ ಗೆ 59 ಮತ ಪಡೆದಿದ್ದರು. 21437 ಮತಗಳ ಪೈಕಿ 19593 ವ್ಯಾಲಿಡ್ ಮತಗಳಾಗಿದ್ದುದರಿಂದ ಗೆಲುವಿಗಾಗಿ 9797 ಮತಗಳ ಕೋಟಾ ನಿಗದಿ ಮಾಡಲಾಯಿತು. ಮೊದಲ ಸುತ್ತಿನಲ್ಲಿ ಯಾವ ಅಭ್ಯರ್ಥಿಯೂ ಕೋಟಾ ರೀಚ್ ಆಗದ ಹಿನ್ನೆಲೆಯಲ್ಲಿ ಎರಡನೆಯ ಪ್ರಾಶಸ್ತ್ಯತ ಮತ ಎಣಿಕೆ ಮಾಡಲಾಯಿತು. ಅತ್ಯಂತ ಕಡಿಮೆ ಮತ ಪಡೆದಿದ್ದ ವಾಟಾಳ್ ನಾಗರಾಜ್ ಎಲಿಮಿನೇಷನ್ ನೊಂದಿಗೆ ಎರಡನೆಯ ಪ್ರಾಶಸ್ತ್ಯದ ಮತ ಎಣಿಕೆ ಆರಂಭಗೊಂಡಿತು.ನಂತರ ಚಂದ್ರಕಾಂತ್ ಸಿಂಗೆ ರ ಎಲಿಮಿನೇಟ್ ಮಾಡಲಾಯಿತು.
ಜೆಡಿಎಸ್ ನಂತ ತಿಮ್ಮಯ್ಯ ಪುರ್ಲೆ ಅವರಿಗೆ ಬಿದ್ದ ಎರಡನೆಯ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಿದ ನಂತರ ಗೆಲುನಿಗೆ ನಿಗದಿಗೊಳಿಸಿದ್ದ ಕೋಟಾ ಪೂರ್ಣಗೊಂಡಿದ್ದು, ಕೊನೆಗೂ ಬಿಜೆಪಿಯ ಶಶೀಲ್ ನಮೋಶಿ ಅವರನ್ನು ವಿಜೇತ ಅಭ್ಯರ್ಥಿ ಎಂದು ಚುನಾವಣಾಧಿಕಾರಿ ಎನ್.ವಿ.ಪ್ರಸಾದ್ ಪ್ರಕಟಿಸಿದ್ದಾರೆ.
ಅಂತಿಮವಾಗಿ ಶಶೀಲ್ ನಮೋಶಿ 10212 ಮತ ಪಡೆದರೆ, ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಶರಣಪ್ಪ ಮಟ್ಟೂರ 7082 ಮತ ಪಡೆದಿದ್ದಾರೆ. ನಮೋಶಿ 3130 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ : Munirathna: ರಾಜರಾಜೇಶ್ವರಿ ನಗರದಲ್ಲಿ 57936 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ದ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ
ಈ ವೇಳೆ ಮಾತನಾಡಿದ ಶಶೀಲ್ ನಮೋಶಿ, ಶಿಕ್ಷಕರು ಮತ್ತೊಮ್ಮೆ ತಮಗೆ ಆಶೀರ್ವಾದ ನೀಡಿದ್ದಾರೆ. ಈ ಹಿಂದೆ ಮೂರು ಬಾರಿ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಪರಿಷತ್ ನಲ್ಲಿ ಕೆಲಸ ಮಾರುವ ಅವಕಾಶ ಸಿಕ್ಕಿತ್ತು. ಇದೀಗ ಮತ್ತೊಮ್ಮೆ ಶಿಕ್ಷಕರ ಆಶೀರ್ವಾದ ಸಿಕ್ಕಿದೆ. ಇದಕ್ಕೆ ಬಿಜೆಪಿ ಸರ್ಕಾರ ಶಿಕ್ಷಕರ ಪರ ಕೈಗೊಂಡ ಕಾರ್ಯಕ್ರಮಗಳು ಮುಖ್ಯ ಕಾರಣ. ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಪರಿಷತ್ ನಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ