ಬೆಂಗಳೂರು: ಪಕ್ಷದಲ್ಲಿ ಒಂದು ಹುದ್ದೆ, ಸ್ಥಾನ ಮಾನ ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಾಸ ಇತ್ತು. ವರಿಷ್ಠರು ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಖುಷಿಯಾಗುತ್ತಿದೆ ಎಂದು ಬಿಜೆಪಿ ರಾಜ್ಯಸಭೆ ಅಭ್ಯರ್ಥಿ ಈರಣ್ಣ ಕಡಾಡಿ ಹೇಳಿದ್ದಾರೆ.
ಈರಣ್ಣ ಕಡಾಡಿ ಅವರು ಇಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಅವರು, ಯಾರನ್ನೂ ಹಿಂದಿಕ್ಕುವ ಮಾತಿಲ್ಲ. ಆಕಾಂಕ್ಷಿಗಳಾಗಿದ್ದವರೆಲ್ಲಾ ನಮ್ಮ ಮುಖಂಡರೇ. ಅವರೆಲ್ಲಾ ದೂರವಾಣಿ ಮೂಲಕ ನನ್ನ ಜೊತೆ ಮಾತಾಡಿ ಅಭಿನಂದನೆ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಜ್ಯದ ಧ್ವನಿಯಾಗಿರುತ್ತೇನೆ. ಅಭ್ಯರ್ಥಿ ಆಗುತ್ತೇನೆ ಅಂದುಕೊಂಡಿರಲಿಲ್ಲ. ಆದರೆ, ಪಕ್ಷದಲ್ಲಿ ಸ್ಥಾನಮಾನ ಸಿಗುತ್ತೆ ಅನ್ನೋ ನಂಬಿಕೆ ಇತ್ತು ಎಂದು ಹೇಳಿದರು.
ನೆನ್ನೆ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾದ ಅಶೋಕ ಗಸ್ತಿ ಹಾಗೂ ಈರಣ್ಣ ಕಡಾಡಿ ಅವರು ಇಂದು ಬಿಜೆಪಿ ಅಧ್ಯಕ್ಷ ನಳೀನ ಕುಮಾರ ಕಟೀಲರನ್ನು ಭೇಟಿ ಮಾಡಿ ಬಿ ಫಾರ್ಮ್ ಹಾಗೂ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದರು. ಅದಾದ ಬಳಿಕ ಇಂದು ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಜೂನ್ 19ಕ್ಕೆ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಇದನ್ನು ಓದಿ ವಿಧಾನ ಪರಿಷತ್ ಸ್ಥಾನಕ್ಕೆ ಯತ್ನಿಸಿದ ಈರಣ್ಣ ಕಡಾಡಿಗೆ ರಾಜ್ಯಸಭೆ ಪ್ರವೇಶದ ಭಾಗ್ಯ ನೀಡಿದ ಬಿಜೆಪಿ ವರಿಷ್ಠರು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ