ಉಪಸಮರದಲ್ಲಿ ಕಮಲ ಕಮಾಲ್; ಹೈಕಮಾಂಡ್​ ನೀಡಿದ್ದ ಗುರಿ ತಲುಪಿ ಪ್ರಶ್ನಾತೀತ ನಾಯಕ ಎನಿಸಿಕೊಂಡ ಬಿಎಸ್​ವೈ

ಉಪ ಸಮರದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಸಿಎಂ ಬಿಎಸ್​ವೈ ನಾಯಕತ್ವಕ್ಕೆ ಕೇಂದ್ರ ನಾಯಕರು ಶುಭಾಶಯ ಕೋರಿದ್ದಾರೆ. ಫಲಿತಾಂಶದ ಬಳಿಕ ಬಿಎಸ್​ವೈಗೆ ಕರೆ ಮಾಡಿದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ‌ಪಿ ನಡ್ಡಾ ಮತ್ತು ಇತರೆ ಮುಖಂಡರು ಶುಭಾಶಯ ತಿಳಿಸಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ

ಸಿಎಂ ಬಿ.ಎಸ್.ಯಡಿಯೂರಪ್ಪ

  • Share this:
ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ದಾಖಲಿಸಿದೆ. ಈ ಗೆಲುವಿನ ಸಂಪೂರ್ಣ ಜಯಕಾರ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಹೌದು, ಹೈಕಮಾಂಡ್ ನೀಡಿದ ಗುರಿಯನ್ನು ಬಿಎಸ್​ವೈ ಯಶಸ್ವಿಯಾಗಿ ಮುಟ್ಟಿದ್ದು, ತಾವು ಮತ್ತೊಮ್ಮೆ ಉಪಚುನಾವಣೆಗಳ ನಿಷ್ಣಾತ ಎಂಬುದನ್ನು ತೋರಿಸಿದ್ದಾರೆ.

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಪರಿಣಾಮದಿಂದಾಗಿ ರಾಜ್ಯದ ಉಪಚುನಾವಣೆಯಲ್ಲಿ ಹೈಕಮಾಂಡ್ ಬಿಎಸ್​ವೈ ಅವರಿಗೆ ಮತ್ತೆ ಮಣೆ ಹಾಕಿ, 12 ಕ್ಷೇತ್ರಗಳ ಗೆಲುವಿನ ಗುರಿಯನ್ನು ಕೊಟ್ಟಿತ್ತು. ಹೈಕಮಾಂಡ್ ನೀಡಿದ ಬೆಂಬಲದಿಂದ ಬಿಎಸ್​ವೈ ಅವರು 15 ಕ್ಷೇತ್ರಗಳಲ್ಲೂ ಭರ್ಜರಿ ಪ್ರಚಾರ ನಡೆಸಿದರು. ಬಂಡಾಯದ ಕಾವನ್ನು ಬಹುತೇಕ ಯಶಸ್ವಿಯಾಗಿ ನಿವಾರಿಸಿದರು. ಆದ್ದರಿಂದಲೇ ಇಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಬರೋಬ್ಬರು 12 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ.

12 ಸ್ಥಾನಗಳ ಜೊತೆಗೆ ಬಿಜೆಪಿ ಹಲವು ಹೊಸ ದಾಖಲೆಗಳನ್ನು ಬರೆದಿದೆ. ಮೊದಲ ಬಾರಿ ಪಕ್ಷದ ಅಸ್ತಿತ್ವವೇ ಇಲ್ಲದೇ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಖಾತೆ ತೆರೆದಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಕೋಟೆ ಬೇಧಿಸಿದ ಕೀರ್ತಿ ಬಿಎಸ್​ವೈ ದಕ್ಕಿದೆ. ಮಂಡ್ಯ ಜಿಲ್ಲೆಯ ಕೆ.ಆರ್​.ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಕೆ.ಸಿ ನಾರಾಯಣಗೌಡ ಭರ್ಜರಿ ಗೆಲುವು ಪಡೆದಿದ್ದಾರೆ. ಬಯಲುಸೀಮೆ ಚಿಕ್ಕಬಳ್ಳಾಪುರದಲ್ಲೂ ಕಮಲ ಮೊದಲ ಬಾರಿ ಅರಳಿದೆ. ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಭರ್ಜರಿ ಅಂತರದಿಂದಲೇ ಗೆಲುವು ದಾಖಲಿಸಿದ್ದಾರೆ. ಹಾಗೆಯೇ ರಾಣೆಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರಾ ಅವರನ್ನು ಗೆಲ್ಲಿಸಿಕೊಂಡ ಬಿಎಸ್​ವೈ ಕಾಂಗ್ರೆಸ್​ನ ಕೆ.ಬಿ. ಕೋಳಿವಾಡ ಅವರಿಗೆ ಶಾಕ್ ನೀಡಿದ್ದಾರೆ. ಅದೇ ರೀತಿ ಗೋಕಾಕ್, ಕಾಗವಾಡ ಅಥಣಿಯಲ್ಲೂ ಬಿಎಸ್​ವೈ ಕಮಾಲ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿ ಮಹಾಲಕ್ಷ್ಮಿ ಲೇಔಟ್​ನಲ್ಲೂ ಬಿಜೆಪಿ ಖಾತೆ ತೆರೆದಿದೆ. ಈ ಎಲ್ಲ ಗೆಲುವಿನ ಸೂತ್ರಧಾರನಾಗಿರುವ ಬಿ.ಎಸ್.ಯಡಿಯೂರಪ್ಪ ಮತ್ತೆ ಪ್ರಶ್ನಾತೀತ ನಾಯಕ ಎಂಬುದನ್ನು ಸಾಬೀತು ಮಾಡಿದೆ. ಅಷ್ಟೇ ಅಲ್ಲದೇ, ಹೈಕಮಾಂಡ್ ವಿಶ್ವಾಸ ಗಟ್ಟಿ ಮಾಡಿಕೊಳ್ಳುವಲ್ಲಿಯೂ ಸಹಕಾರಿಯಾಗಿದೆ.

ಇದನ್ನು ಓದಿ: ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ; ದಿನೇಶ್​ ಗುಂಡೂರಾವ್​

ಯಶಸ್ವಿಯಾದ ಲಿಂಗಾಯತ ತಂತ್ರಗಾರಿಕೆ

ಈ ಉಪಚುನಾವಣೆಯಲ್ಲಿ ಲಿಂಗಾಯತರು ಯಡಿಯೂರಪ್ಪ ಅವರ ಕೈ ಹಿಡಿದಿರುವುದು ಸ್ಪಷ್ಟವಾಗಿದೆ. ಲಿಂಗಾಯತ ಮತಗಳು ಚದುರಿ ಹೋಗದಂತೆ ಬಿಎಸ್​ವೈ ಮಾಡಿದ ತಂತ್ರಗಾರಿಕೆ ಬಹುತೇಕ ಯಶಸ್ವಿಯಾಗಿದೆ. ಲಿಂಗಾಯತ ಮತಗಳು ಬಿಜೆಪಿಗೆ ಬರಲು ಪ್ರಮುಖ ಕಾರಣಗಳು ಇವು.

  1. ಲಿಂಗಾಯತ ಮತಗಳು ಬಿಜೆಪಿಗೆ ಬೀಳಬೇಕು, ಲಿಂಗಾಯತರು ಮತ ಹಾಕದಿದ್ದರೆ ಲಿಂಗಾಯತ ಸಿಎಂ ಕುರ್ಚಿಗೆ ಕುತ್ತು ಬರಲಿದೆ ಎಂಬ ಬಿಎಸ್​ವೈ ಹೇಳಿಕೆಗಳು,

  2. ಬಿಜೆಪಿ ಪರವಾಗಿ ವೀರಶೈವ-ಲಿಂಗಾಯತ ಸ್ವಾಮೀಜಿಗಳೇ ಅಖಾಡಕ್ಕೆ ಇಳಿದಿದ್ದು,

  3. ಈ ಅವಕಾಶ ತಪ್ಪಿದರೆ ಬಿಜೆಪಿಯಲ್ಲಿ ಮತ್ತೆ ಲಿಂಗಾಯತರಿಗೆ ಸಿಎಂ ಆಗೋ ಅವಕಾಶ ಇಲ್ಲ ಎಂಬ ಸಂದೇಶ ರವಾನಿಸಿದ್ದು

  4. ಲಿಂಗಾಯತರು ಬಿಜೆಪಿ ಬಿಟ್ಟು ಮತ ಹಾಕಿದರೆ ಬಿಎಸ್​ವೈ ಕಪಾಳಕ್ಕೆ ಹೊಡೆದಂತೆ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ

  5. ಬಿಎಸ್​ವೈ ಕುರ್ಚಿ ಉಳಿಸಲು ಲಿಂಗಾಯತ ಮತದಾರರು ಒಗ್ಗಟ್ಟಾಗಿದ್ದು

  6. ಬಿಜೆಪಿ ಹೈಕಮಾಂಡ್​ಗೆ ಬಿಎಸ್​ವೈ ಪ್ರಶ್ನಾತೀತ ನಾಯಕ ಎಂಬ ಸಂದೇಶ ಕಳಿಸಲು ತೀರ್ಮಾನಿಸಿದ್ದು


ಸಿಎಂ ಬಿಎಸ್​ವೈಗೆ ಹೈಕಮಾಂಡ್ ಅಭಿನಂದನೆ

ಉಪ ಸಮರದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಸಿಎಂ ಬಿಎಸ್​ವೈ ನಾಯಕತ್ವಕ್ಕೆ ಕೇಂದ್ರ ನಾಯಕರು ಶುಭಾಶಯ ಕೋರಿದ್ದಾರೆ. ಫಲಿತಾಂಶದ ಬಳಿಕ ಬಿಎಸ್​ವೈಗೆ ಕರೆ ಮಾಡಿದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ‌ಪಿ ನಡ್ಡಾ ಮತ್ತು ಇತರೆ ಮುಖಂಡರು ಶುಭಾಶಯ ತಿಳಿಸಿದ್ದಾರೆ.

  • ವಿಶೇಷ ವರದಿ: ಚಿದಾನಂದ ಪಟೇಲ್


First published: