ವಿಧಾನಪರಿಷತ್ ಚುನಾವಣೆಗೆ (Vidhanaparishat Election) ಬಿಜೆಪಿ ಕೊನೆಗೂ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಬೆಳಗ್ಗೆ ನಾಲ್ವರ ಹೆಸರು ಬಲವಾಗಿ ಕೇಳಿ ಬಂದಿದ್ದವು. ಆದ್ರೆ ಈಗ ಮತ್ತೆ ಕೊನೆ ಕ್ಷಣದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Ex DCM Laxman Savadi) ಅವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಬೆಳಗ್ಗೆ ಲಿಂಗರಾಜ್ ಪಾಟೀಲ್ ಮತ್ತು ಮಂಜುಳಾ ಅವರ ಹೆಸರು ಕೇಳಿ ಬಂದಿತ್ತು. ಇಬ್ಬರಿಗೂ ಟಿಕೆಟ್ ತಪ್ಪಿದೆ. ಚಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್, ಎಸ್.ಕೇಶವಪ್ರಸಾದ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಸವರಾಜ್ ಹೊರಟ್ಟಿ ಅವರಿಗೂ ಟಿಕೆಟ್ ನೀಡಲಾಗಿದೆ.
ವಿಜಯೇಂದ್ರೆಗೆ ಟಿಕೆಟ್ ತಪ್ಪಿದ್ಯಾಕೆ?
ಒಂದು ವೇಳೆ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನೀಡಿದ್ರೆ ಮುಂದಿನ ವಿಧಾನಸಭಾ ಚುನಾವಣೆ ಪ್ರಚಾರದಿಂದ ಯಡಿಯೂರಪ್ಪ ಅಂತರ ಕಾಯ್ದುಕೊಳ್ಳಬಹುದು. ಈಗ ಟಿಕೆಟ್ ನೀಡಿದ್ರೆ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಟಿಕೆಟ್ ಕೇಳುವ ಸಾಧ್ಯತೆಗಳಿವೆ. ಹಾಗಾಗಿ ನೇರವಾಗಿ 2023ಕ್ಕೆ ಟಿಕೆಟ್ ನೀಡಿದ್ರೆ ಉತ್ತಮ ಎಂದು ಭಾವಿಸಿ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಪ್ರಬಲ ಸಮುದಾಯದವರಿಗೆ ಹೆಚ್ಚು ಅವಕಾಶ
ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ 1952ರಿಂದ 2022ರವರೆಗಿನ 70 ವರ್ಷದಲ್ಲಿ ವಿಧಾನ ಪರಿಷತ್‍ನಲ್ಲಿ ದೊರೆತ 802 ಅವಕಾಶಗಳ ಪೈಕಿ ಪ್ರಬಲ ಸಮುದಾಯದವರೇ ಪರಿಷತ್ ಸದಸ್ಯತ್ವದ ಸಿಂಹಪಾಲು ಪಡೆದಿದ್ದಾರೆ. ಅಚ್ಚರಿಯಾಗಬಹುದಾದ ಅಧಿಕೃತ ವಿವರ ಈ ಕೆಳಕಂಡಂತಿದೆ.
ಲಿಂಗಾಯತರು - 141, ಒಕ್ಕಲಿಗ -158, ಬ್ರಾಹ್ಮಣ -91, ಪ.ಜಾ -65, ಮುಸ್ಲಿಂ -54, ಕುರುಬ-20, ಪ.ಪಂ -18, ಈಡಿಗ -18, ಕೊಡವ -15, ಜೈನ್-14, ಬಂಟ -14, ಬಲಿಜ-13, ಕ್ರೈಸ್ತ -12, ಮರಾಠ -12, ಬೆಸ್ತ -11, ವೈಶ್ಯ-10, ರೆಡ್ಡಿ-9, ಗಾಣಿಗ-6, ದೇವಾಂಗ-5, ವಿಶ್ವಕರ್ಮ-4, ಉಪ್ಪಾರ-3, ನಾಯ್ಡು, ತಿಗಳ, ಮಡಿವಾಳ, ಹಿಂದೂ ಸಾದರು, ರಾಜು ಕ್ಷತ್ರಿಯ, ಭಂಡಾರಿ - ತಲಾ 2, ಗೊಲ್ಲ, ಕುಂಬಾರ, ರಜಪೂತ್, ಮುದಲಿಯಾರ್, ಅರಸು, ದೇವಳಿ, ಸಿಂಧಿ, ಭಾವಸಾರ ಕ್ಷತ್ರಿಯ, ಸವಿತಾ - ತಲಾ 1 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Target Bengaluru: 'ಉಗ್ರರ ರಾಜಧಾನಿ' ಆಗಲಿದೆಯಾ ಬೆಂಗಳೂರು? NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ
ಜೂನ್ ನಲ್ಲಿ ಏಳು ಜನ ನಿವೃತ್ತಿ
ಪ್ರಸ್ತುತ, ವಿಧಾನಪರಿಷತ್ತಿನ 74 ಸದಸ್ಯರ ಸಮುದಾಯದ ವಿವರ ಹೀಗಿದೆ: ಒಕ್ಕಲಿಗ- 21, ಲಿಂಗಾಯತ -20, ಪ.ಜಾ- 5, ಕುರುಬ- 5, ಪ.ಪಂ, ಮುಸ್ಲಿಂ, ಬೆಸ್ತ - ತಲಾ 3, ಈಡಿಗ -3, ಕೊಡವ, ಬಂಟ, ಬ್ರಾಹ್ಮಣ - ತಲಾ 2, ತಿಗಳ, ವೈಶ್ಯ, ರೆಡ್ಡಿ, ವಿಶ್ವಕರ್ಮ ಮತ್ತು ಜೈನ್ - ತಲಾ 1. ಇವರಲ್ಲಿ ಮುಂಬರುವ ಜೂನ್ ತಿಂಗಳಲ್ಲಿ 7 ಮಂದಿ ಸದಸ್ಯರು ನಿವೃತ್ತರಾಗುತ್ತಿದ್ದಾರೆ.
ಸಿದ್ದರಾಮಯ್ಯಗೆ ಡಿಕೆಶಿ ಚೆಕ್ ಮೇಟ್ ಕೊಟ್ಟಿದ್ದು ಹೇಗೆ ಗೊತ್ತಾ?
ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಒಬಿಸಿ ಮತ್ತು ಅಲ್ಪಸಂಖ್ಯಾತರೊಬ್ಬರಿಗೆ ಟಿಕೆಟ್ ಕೊಡಲು ನಿರ್ಧರಿಸಿತ್ತು. ಒಬಿಸಿ ಯಿಂದ ಮಾಜಿ ಸಚಿವ ಎಂ ಆರ್ ಸೀತಾರಂ (ಬಲಿಜ ಸಮುದಾಯ) ಹೆಸರನ್ನು ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಇತ್ತ ಡಿಕೆ ಶಿವಕುಮಾರ್ ಒಬಿಸಿ ಕೋಟಾದಡಿ ಇಬ್ಬರ ಹೆಸರು ಶಿಫಾರಸು ಮಾಡಿದ್ದರು. ಮಾಜಿ ಮೇಯರ್ ಪದ್ಮಾವತಿ- ಬಲಿಜ ಸಮುದಾಯ ಅಥವಾ ನಾಗರಾಜ್ ಯಾದವ್ - ಯಾದವ ಸಮುದಾಯ ಅವರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದರು.
ಎಂ.ಆರ್.ಸೀತಾರಂಗೆ ಟಿಕೆಟ್ ತಪ್ಪಿದ್ದೇಕೆ?
2018ರ ವಿಧಾನಸಭಾ ಚುನಾವಣೆ ವೇಳೆ ಮಲ್ಲೇಶ್ವರಂ ಕ್ಷೇತ್ರದಿಂದ ಎಂ.ಆರ್.ಸೀತಾರಾಂ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದ್ರೆ ಅಶ್ವಥ್ ನಾರಾಯಣ್ ಎದುರು ಸೋಲುವ ಭಯದಿಂದ ಸೀತಾರಂ ಟಿಕೆಟ್ ನಿರಾಕರಿಸಿದ್ದರು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಮುಜುಗರಕ್ಕೆ ಒಳಗಾಗಿತ್ತು. ಇತ್ತ ಸೀತಾರಂ ಮೇಲೆ ಕಾಂಗ್ರೆಸ್ ವರಿಷ್ಠ ಕೆ.ಸಿ.ವೇಣುಗೋಪಾಲ್ ಸಹ ಮುನಿಸಿಕೊಂಡಿದ್ದರು.
ಇದನ್ನೂ ಓದಿ: Kempegowda Layout: ನಾಡಪ್ರಭು ಕೆಂಪೇಗೌಡ ಬಡಾವಣೆ ತ್ವರಿತ ಕಾಮಗಾರಿ ನಡೆಸಿ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಎಚ್ಚರಿಕೆ
ಹೈಕಮಾಂಡ್ ಮನವೊಲಿಸಿದ್ದು ಹೇಗೆ ಡಿಕೆಶಿ?
ಇದೇ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿರಿಸಿದ ಡಿ.ಕೆ.ಶಿವಕುಮಾರ್, ಬಲಿಜ ಸಮುದಾಯದ ಪದ್ಮಾತಿಯವರಿಗಾದರೂ ಕೊಡಿ ಅಥವಾ ಯಾದವ ಸಮುದಾಯದ ನಾಗರಾಜ್ ಗಾದರೂ ಕೊಡಿ. ಯಾದವ ಸಮುದಾಯ ರಾಜ್ಯದಲ್ಲಿ 50 ಲಕ್ಷದಷ್ಟು ಜನಸಂಖ್ಯೆ ಇದೆ. ನಾಗರಾಜ್ ಯಾದವ್ ನಿಷ್ಟಾವಂತ ಮತ್ತು ಕಷ್ಟದ ಕಾಲದಲ್ಲೂ ಪಕ್ಷದ ಪರ ವಕಾಲತ್ತು ವಹಿಸುತ್ತಾರೆ. ಸೀತಾರಾಂ ಅವರಿಂದ ಯಾವುದೇ ಪಕ್ಷ ಸಂಘಟನೆ ಸಹಾಯ ಇಲ್ಲ ಎಂದು ಹೈಕಮಾಂಡ್ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ