ಬೆಂಗಳೂರು(ಆ. 12): ನಿನ್ನೆ ರಾತ್ರಿ ನಗರದ ಮೂರು ಪ್ರದೇಶಗಳಲ್ಲಿ ನಡೆದ ಗಲಭೆ ಘಟನೆಯನ್ನು ರಾಜ್ಯ ರಾಜಕೀಯ ಮುಖಂಡರು ಖಂಡಿಸಿದ್ದಾರೆ. ಗಲಭೆ ಮಾಡಿದವರನ್ನು ಹಾಗೂ ಗಲಭೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿವಿಧ ಮುಖಂಡರು ಒತ್ತಾಯಿಸಿದ್ಧಾರೆ. ಹಾಗೆಯೇ ರಾಜಕೀಯ ವಾಗ್ಯುದ್ಧಕ್ಕೂ ಈ ಘಟನೆ ಕಾರಣವಾಗಿದೆ.
ಒಂದು ಧರ್ಮದ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದವರನ್ನು ಕೂಡಲೇ ಬಂಧಿಸಬೇಕು. ಹಾಗೆಯೇ, ಕಾನೂನು ಕೈಗೆ ತೆಗೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ನಡೆದಿರುವ ಗಲಭೆಯನ್ನು ಖಂಡಿಸುತ್ತೇನೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ರಾಜ್ಯ ಪೊಲೀಸರು ಗಲಭೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾರೆ. ಶಾಂತಿ ಕಾಪಾಡಿಕೊಳ್ಳಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Bangalore violence: ಗಲಭೆ ಜಾಡು ಹಿಡಿದು ಮೊದಲೇ ಮನೆ ಖಾಲಿ ಮಾಡಿದ್ರಾ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ?
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವವರು ಫೇಸ್ಬುಕ್ನಲ್ಲಿ ಒಂದು ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಅದನ್ನು ಪ್ರತಿಭಟಿಸಿ ನಿನ್ನೆ ರಾತ್ರಿ ಡಿಜೆ ಹಳ್ಳಿಯಲ್ಲಿ ಹಿಂಸಾಚಾರ ನಡೆದಿದೆ. ಡಿಜೆ ಹಳ್ಳಿ, ಕಾಡುಗೊಂಡನಹಳ್ಳಿ, ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಗಲಭೆಕೋರರು ಕಲ್ಲು ತೂರಾಟ ಇತ್ಯಾದಿ ಕೃತ್ಯಗಳನ್ನ ಎಸಗಿದ್ದಾರೆ. ಹಲವಾರು ವಾಹನಗಳು ಸೇರಿದಂತೆ ಸಾರ್ವನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೇ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಗಲಭೆಪೀಡಿತ ಪ್ರದೇಶಗಳಲ್ಲಿ ಸದ್ಯಕ್ಕೆ ಕರ್ಫ್ಯೂ ವಿಧಿಸಲಾಗಿದೆ.
ಬೆಂಗಳೂರಿನ ಪುಲಕೇಶಿನಗರದ ಶಾಸಕರಾದ ಶ್ರೀ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸದ ಮೇಲೆ ಹಾಗೂ ಪೊಲೀಸರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ದಾಳಿ ಮಾಡಿರುವುದು ಖಂಡನೀಯ. 1/3@BJP4Karnataka @BSBommai @BSYBJP pic.twitter.com/L3KWLb0CNr
— N Ravi Kumar (@nrkbjp) August 11, 2020
ಒಂದು ಸಮುದಾಯದ ಅವಹೇಳನಕಾರಿ ಪೋಸ್ಟ್ ಸಂಬಂಧಿಸಿದಂತೆ ಕಾನೂನು ರೀತಿ, ಶಾಂತಿಯುತ ಹೋರಾಟವನ್ನು ಬಿಟ್ಟು, ಕಾನೂನು ಕೈಗೆತ್ತಿಕೊಂಡು ಪುಂಡರು ಶಾಸಕರ ಮನೆ, ಪೊಲೀಸ್ ರನ್ನು ಗುರಿಯಾಗಿಸಿ ಠಾಣೆಯ ಮೇಲೆ, ಕ್ವಾಟರ್ಸ್,ವಾಹನಕ್ಕೆ ಬೆಂಕಿ ಹಚ್ಚಿರುವುದು, ಬಾಟಲಿ,ಕಲ್ಲುತೂರಾಟ, ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡಿರುವುದು ದುಂಡಾವರ್ತನೆಯಾಗಿದೆ.2/3 pic.twitter.com/6KxlYRVZ4N
— N Ravi Kumar (@nrkbjp) August 11, 2020
ಇದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಶಾಂತಿ ಕದಡಲು ಈ ಸಂಚು ನಡೆದಿದೆ.
ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಈ ಘಟನೆಗೆ ಕುಮ್ಮಕ್ಕು ನೀಡಿದವರನ್ನು ಹಾಗೂ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಮಾಡಬೇಕು, ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. 3/3 pic.twitter.com/249COgSkpS
— N Ravi Kumar (@nrkbjp) August 11, 2020
ಹಾವಿಗೆ ಹಾಲೆರೆದರೇನು ಫಲ? ಏಳು ದಶಕಗಳಿಂದ ಒಂದು ಸಮುದಾಯವನ್ನು ರಾಷ್ಟ್ರೀಯತೆಯ ಮುಖ್ಯವಾಹಿನಿಯಿಂದ ದೂರವಿಟ್ಟು ತುಷ್ಟೀಕರಣದ ರಾಜಕೀಯ ಮಾಡಿದ ಫಲವಿದು!!!! ಇನ್ನಾದರೂ ರಾಷ್ಟ್ರ ಮೊದಲೆನ್ನುವ ಭಾವನೆ ಪಕ್ಷಾತೀತವಾಗಿ ಬರಲಿ.
— K S Eshwarappa (@ikseshwarappa) August 12, 2020
ಘಟನೆಯನ್ನು ಖಂಡಿಸುತ್ತೇನೆ. ಇದು ವ್ಯವಸ್ಥಿತ ಸಂಚು ಇದ್ದಂತಿದೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಶಾಸಕರಾಗಲಿ ಯಾರೇ ಆಗಲಿ ಅವರ ಮೇಲೆ ದಾಳಿ ಮಾಡಬಾರದು ಎಂದು ಹೇಳಿರುವ ಡಿಕೆಶಿ, ಪ್ರಚೋದನಕಾರಿ ಪೋಸ್ಟ್ ಕೂಡ ಸರಿಯಲ್ಲ ಎಂದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ್ಧಾರೆ. ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಖಂಡನೀಯ. ಈ ಘಟನೆಯಿಂದ ಪೊಲೀಸರು ನೈತಿಕ ಸ್ಥೈರ್ಯ ಕಳೆದುಕೊಳ್ಳಬಾರದು. ಇಂಥ ಪ್ರಕರಣಗಳ ಸಂದರ್ಭಗಳಲ್ಲಿ ಪೊಲೀಸರು ವಿವೇಚನೆಯಿಂದ ನಿರ್ಧಾರ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಣ್ಣ ನಿರ್ಲಕ್ಷ್ಯವೂ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇಂತಹ ಕೋಮು ಗಲಭೆಗಳಲ್ಲಿ ಸಾವು-ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದ್ಧಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಿ....
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ