ನಿಮಗೆ ಕೇಶವಕೃಪಾ ಹೇಗೋ ನಮಗೆ ಎಐಸಿಸಿ ಹಾಗೇ: ಸದನದಲ್ಲಿ ಡಿಕೆಶಿ- ರಾಮದಾಸ್​ ಮಾತಿನ ಜಟಾಪಟಿ

news18
Updated:July 11, 2018, 8:57 PM IST
ನಿಮಗೆ ಕೇಶವಕೃಪಾ ಹೇಗೋ ನಮಗೆ ಎಐಸಿಸಿ ಹಾಗೇ: ಸದನದಲ್ಲಿ ಡಿಕೆಶಿ- ರಾಮದಾಸ್​ ಮಾತಿನ ಜಟಾಪಟಿ
news18
Updated: July 11, 2018, 8:57 PM IST
ರಮೇಶ್​ ಹಿರೇಜಂಬೂರು, ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 11):  ಬಿಜೆಪಿಯವರಿಗೆ ಹೇಗೆ ಕೇಶವಕೃಪಾ ಹೇಗೋ ಹಾಗೇ ನಮಗೆ ಎಐಸಿಸಿ ದೇವಸ್ಥಾನವಿದ್ದಂತೆ. ಸುಖಾಸುಮ್ಮನೆ ಎಐಸಿಸಿಗೆ ಲಂಚ ಕೊಟ್ಟಿದ್ದಾರೆ ಎಂದು ಹೇಳಿದರೆ ಕೇಳಿಕೊಂಡು ಕೂರಲು ನಾವು ತಯಾರಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿನ ವಿಧಾನಸಭೆ ಕಲಾಪದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ವಾದ-ವಿವಾದಗಳ ಕಾವು ಜೋರಾಗುತ್ತಿದೆ. ಇಂದಿನ ಕಲಾಪದಲ್ಲಿ ಬಿಜೆಪಿ ಸದಸ್ಯ ಎಸ್​.ಎ. ರಾಮದಾಸ್​ ಮತ್ತು ಡಿ.ಕೆ. ಶಿವಕುಮಾರ್​ ನಡುವೆ ವಾಗ್ವಾದ ನಡೆದಿದ್ದು, ಕೆಲ ಕಾಲ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಕಳೆದ ಅವಧಿಯ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್​ ನಿರ್ಮಾಣದಲ್ಲಿ 150ಕ್ಕೂ ಹೆಚ್ಚು ಕೋಟಿ ಅವ್ಯವಹಾರ ನಡೆದಿದೆ. ಕೇಂದ್ರ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿರುವ ಎನ್​ಜಿಒಗೆ ಇಂದಿರಾ ಕ್ಯಾಂಟೀನ್​ ನಡೆಸುವ ಜವಾಬ್ದಾರಿ ನೀಡಿದ್ದೀರಿ. ಎಐಸಿಸಿಗೆ 50 ಕೋಟಿ ರೂಪಾಯಿ ಕಿಕ್​​ಬ್ಯಾಕ್ ನೀಡಲಾಗಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್​.ಎ. ರಾಮದಾಸ್ ಆರೋಪ ಮಾಡಿದರು. ಈ ಕುರಿತು ಸಂಪೂರ್ಣ ದಾಖಲೆ, ಸಿಡಿ ಸಮೇತ ಬಂದಿರುವುದಾಗಿ ತಿಳಿಸಿದರು.

ದಾಖಲೆ ಕೊಟ್ಟು ಆರೋಪ ಮಾಡಿ:

ಆರೋಪ ಮಾಡೋದೇ ಆದರೆ ನೊಟೀಸ್ ಕೊಟ್ಟು, ದಾಖಲೆ ಕೊಟ್ಟು ಆರೋಪ ಮಾಡಿ. ಯಾರೋ ಒಬ್ಬ ಲಂಚ ಹೊಡೆದು ಅದು ಬಿಜೆಪಿಯ ಕೇಂದ್ರ ಕಚೇರಿಗೆ ಹೋಯ್ತು ಎಂದು ಆರೋಪಿಸಿದರೆ ನೀವು ಒಪ್ಪುತ್ತೀರಾ‌? ಎಂದು ಡಿ.ಕೆ.ಶಿವಕುಮಾರ್​ ಪ್ರಶ್ನಿಸಿದಾಗ ಕಾಂಗ್ರೆಸ್​-ಜೆಡಿಎಸ್​ ಸದಸ್ಯರು​ ದನಿಗೂಡಿಸಿದರು.

ದಾಖಲೆಗಳಿಲ್ಲದೆ ಕಿಕ್​​ಬ್ಯಾಕ್ ಆರೋಪ ಮಾಡಲು ನಾನು ಅವಕಾಶ ನೀಡುವುದಿಲ್ಲ. ಸುಮ್ಮನೆ ಆರೋಪ ಮಾಡಬೇಡಿ. ನಿಜವಾಗಲೂ ದಾಖಲೆಗಳಿದ್ದರೆ ಅವುಗಳನ್ನು ನೀಡಿದ ನಂತರ ಮಾತನಾಡಿ ಎಂದು ಡಿಕೆ ಶಿವಕುಮಾರ್​ ಹೇಳಿದರು.
Loading...

ಎಐಸಿಸಿ ಎಂದರೆ ಒಂದು ಸಂಸ್ಥೆ. ಅಧ್ಯಕ್ಷರು, ಪದಾಧಿಕಾರಿಗಳು ಇದ್ದಾರೆ. ಹಾಗಾಗಿ, ಎಐಸಿಸಿ ಮೇಲೆ ಆರೋಪ ಮಾಡಿದರೆ ಅಧ್ಯಕ್ಷರ ಮೇಲೆ ಆರೋಪ ಮಾಡಿದಂತೆ.ನಿಯಮಾವಳಿ ಪ್ರಕಾರ ಅದಕ್ಕೆ ಅವಕಾಶವಿಲ್ಲ. ರಾಮದಾಸ್ ಅವರು ಸಭಾಧ್ಯಕ್ಷರ ಆದೇಶ ಉಲ್ಲಂಘನೆ ಮಾಡಿದ್ದಾರೆ. ಪೀಠಕ್ಕೆ ನೇರ ಸವಾಲು ಹಾಕಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಎಲ್ಲ ಸಾಕ್ಷಿಗಳೂ ಇವೆ:

ಅದಕ್ಕೆ ಉತ್ತರ ನೀಡಿದ ರಾಮದಾಸ್​, ದಾಖಲೆ ಇಲ್ಲದೆ ನಾನು ವೃಥಾ ಆರೋಪ ಮಾಡಿಲ್ಲ. ನನ್ನ ಬಳಿ ಸಿಸಿಟಿವಿ ದೃಶ್ಯಾವಳಿ ಇದೆ. ಸಿಟಿಟಿವಿ ಫೂಟೇಜ್ ಸೇರಿ ಎಲ್ಲ ದಾಖಲೆ ನನ್ನಲ್ಲಿದೆ ಎಂದು ಸಮರ್ಥನೆ ಮಾಡಿಕೊಂಡರು.

ರಾಮದಾಸ್ ಅವರು ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಮಾಡಿಲ್ಲ. ಎಐಸಿಸಿ ಸಂಸ್ಥೆಯೇ ಹೊರತು ವ್ಯಕ್ತಿಯಲ್ಲ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಉಪಸಭಾಧ್ಯಕ್ಷರು ರಾಮದಾಸ್​ ಅವರ ಬಳಿ ಇರುವ ದಾಖಲೆಗಳನ್ನು ಕಾರ್ಯದರ್ಶಿಯವರಿಗೆ ಒಪ್ಪಿಸಿ, ನೊಟೀಸ್ ಕೊಟ್ಟು ಬಳಿಕ ಚರ್ಚೆಗೆ ಬರುವಂತೆ ಆದೇಶಿಸಿದರು. ಅದನ್ನು ಒಪ್ಪದ ರಾಮದಾಸ್, ಮೊದಲು ಚರ್ಚೆ ಆಗಲಿ. ನ್ಯಾಯಾಂಗ ತನಿಖೆಗೆ ಆದೇಶಿಸಿ. ಬಳಿಕ ನನ್ನ ಬಳಿ ಇರುವ ದಾಖಲೆಯನ್ನು ಸದನಕ್ಕೆ ಒಪ್ಪಿಸುತ್ತೇನೆ ಎಂದು ಪಟ್ಟು ಹಿಡಿದರು. ಗದ್ದಲದ ನಡುವೆಯೇ ಇಂದಿನ ಸದನದ ಕಲಾಪ ಮುಕ್ತಾಯಗೊಂಡಿತು.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...