ಪ್ರಾಣಿ ಮತ್ತು ಪಕ್ಷಿಗಳ ಪಾಲಿಗೆ ಯಮಸ್ವರೂಪಿಯಾಗುತ್ತಿವೆ ಹವ್ಯಾಸಿ ದ್ರೋಣ್ ಆಟಿಕೆ


Updated:January 14, 2018, 8:52 AM IST
ಪ್ರಾಣಿ ಮತ್ತು ಪಕ್ಷಿಗಳ ಪಾಲಿಗೆ ಯಮಸ್ವರೂಪಿಯಾಗುತ್ತಿವೆ ಹವ್ಯಾಸಿ ದ್ರೋಣ್ ಆಟಿಕೆ

Updated: January 14, 2018, 8:52 AM IST
-ಶ್ಯಾಮ್.ಎಸ್, ನ್ಯೂಸ್ 18 ಕನ್ನಡ

ಬೆಂಗಳೂರು(ಜ.14): ಬೆಂಗಳೂರಿನ ಹೆಸರಘಟ್ಟದ ಕೆರೆ ಪ್ರದೇಶದಲ್ಲಿ ದ್ರೋಣ್ ನಂತಹ ರಿಮೋಟ್ ಕಂಟ್ರೋಲ್ ವಿಮಾನವನ್ನು ಹವ್ಯಾಸಕ್ಕಾಗಿ ಹಾರಿಸೋದು ಜಾಸ್ತಿಯಾಗಿದೆ. ಇದ್ರಿಂದ ಬೆಂಗಳೂರಿನ ಏಕೈಕ ಬೃಹತ್ ಹುಲ್ಲುಗಾವಲು ಪ್ರದೇಶಗಳಲ್ಲಿ ಪಕ್ಷಿಗಳು, ಪ್ರಾಣಿಗಳು ಗಾಯಗೊಳ್ತಿರೋ ಪ್ರಕರಣ ಬೆಳಕಿಗೆ ಬಂದಿದೆ. ದ್ರೋಣ್ ಹಾರಿಸಲು ನಗರದಲ್ಲಿ ಯಾವುದೇ ಕಾನೂನುಗಳು ಇಲ್ಲದಿರೋದ್ರಿಂದ ಹವ್ಯಾಸಿ ದ್ರೋಣ್ ಆಟಿಕೆ ವಿಮಾನಗಳು ಪ್ರಾಣಿ ಮತ್ತು ಪಕ್ಷಿಗಳ ಪಾಲಿಗೆ ಯಮಸ್ವರೂಪಿಯಾಗಿವೆ.

ಬೆಂಗಳೂರಿನಲ್ಲಿ ಬೃಹತ್ ಹುಲ್ಲುಗಾವಲಿನ ಪ್ರದೇಶಗಳ ಪೈಕಿ ಉಳಿದಿರೋದು 300 ಎಕರೆ ವಿಸ್ತೀರ್ಣದ ಈ ಹೆಸರಘಟ್ಟವೊಂದೇ. ಇಲ್ಲಿ ಚಳಿಗಾಲ ಸೇರಿದಂತೆ ವಿವಿಧ ಕಾಲಗಳಲ್ಲಿ ಹಲವು ರೀತಿಯ ವಲಸೆ ಹಕ್ಕಿಗಳು ಉತ್ತರ ಏಷ್ಯಾ, ಮಧ್ಯಏಷ್ಯಾ ರಾಷ್ಟ್ರಗಳಿಂದ ಇಲ್ಲಿಗೆ ಹಾರಿ ಬರುತ್ತವೆ. ಹೆಸರಘಟ್ಟದ ಹುಲ್ಲುಗಾವಲು ಪ್ರದೇಶ ಹಾಗೂ ಹೆಸರಘಟ್ಟದ ಬತ್ತಿಹೋದ ವಿಶಾಲ ಕೆರೆ ಪ್ರದೇಶದಲ್ಲಿ ಕಳೆದ 9 ತಿಂಗಳಿನಿಂದ ಹವ್ಯಾಸಿ ದ್ರೋಣ್ ತಂಡದವರು ಮನೋರಂಜನೆಗಾಗಿ ರಿಮೋಟ್ ಕಂಟ್ರೋಲ್ ಆಟಿಕೆ ಏರ್ ಕ್ರಾಫ್ಟ್ ಗಳನ್ನು ಹಾರಿಬಿಡುತ್ತಿದ್ದಾರೆ. ಇವರ ಮನೋರಂಜನೆಯಿಂದ ಇಲ್ಲಿ ಆಕಾಶದಲ್ಲಿ ಹಾರಾಡುವ ಪಕ್ಷಿಗಳ ರೆಕ್ಕೆಗಳಿಗೆ ಗಾಯಗಳಾಗುತ್ತಿವೆ. ಹಾರಾಟ ನಡೆಸುವ ಸಂದರ್ಭದಲ್ಲಿ ನೆಲದ ಮೇಲೆ ಓಡಾಡುವ ನಾಯಿ, ದನ ಮುಂತಾದ ಪ್ರಾಣಿಗಳಿಗೆ ಗಾಯಗಳಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ವಾರಾಂತ್ಯದಲ್ಲಿ ಹೆಸರಘಟ್ಟ ಕೆರೆ ಹಾಗೂ ಹುಲ್ಲುಗಾವಲು ಸ್ಥಳ ಮೂಲತಃ ಸಂರಕ್ಷಿತ ಪ್ರದೇಶ. ಹಾಗಿದ್ರೂ ಆರೇಳು ಮಂದಿಯ ತಂಡ ವಾರಾಂತ್ಯದಲ್ಲಿ ಇಲ್ಲಿಗೆ ಬಂದು ತಮ್ಮ ರಿಮೋಟ್ ಕಂಟ್ರೂಲ್ ಮೂಲಕ ಆಟಿಕೆ ವಿಮಾನವನ್ನು ಹಾರಿಸುತ್ತಿದ್ದಾರೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಿ. ಬಣ್ಣದ ಹಾರುವ ವಸ್ತುವನ್ನು ಪಕ್ಷಿ ಎಂದುಕೊಂಡು ಈ ಹದ್ದು ಅದನ್ನು ಹಿಡಿಯಲು ಮುಂದಾಗ್ತಿದೆ. ಇಂತಹ ಪ್ರಕರಣಗಳಿಂದ ಹಕ್ಕಿಗಳ ರೆಕ್ಕೆಗಳಿಗೆ ಗಾಯವಾಗಿ ಹಲವು ಪಕ್ಷಿಗಳು ಸಾವನ್ನಪ್ಪುತ್ತಿವೆ. ಆಟಿಕೆ ವಿಮಾನದ ಬ್ಯಾಟರಿಗಳು ಹಾರಾಟದ ವೇಳೆ ಬ್ಯಾಟರಿ ಹಾಳಾಗಿ ಕೆಳಕ್ಕಿಳುವಾಗ ನೆಲದ ಮೇಲೆ ಓಡಾಡುತ್ತಿರುವ ನಾಯಿ- ದನಗಳಿಗೂ ಡಿಕ್ಕಿ ಹೊಡೆದು ಗಾಯಗಳಾಗುತ್ತಿದೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಹೆಸರಘಟ್ಟ ಪ್ರದೇಶದಲ್ಲಿ ಅಕ್ಟೋಬರ್ ನಿಂದ ಮಾರ್ಚ್ ತನಕ 130 ವಿವಿಧ ಜಾತಿಗೆ ಸೇರಿದ ಹಕ್ಕಿಗಳು ಭೇಟಿಕೊಡುತ್ತಿರುವುದನ್ನು ಪಕ್ಷಿ ತಜ್ಞರು ದಾಖಲಿಸಿದ್ದಾರೆ. ಹೆಸರಘಟ್ಟ ಕೆರೆಗೆ 29 ವಿವಿಧ ಜಾತಿಯ 2 ಸಾವಿರ ನೀರು ಹಕ್ಕಿಗಳಿರೋದು ತಿಳಿದುಬಂದಿದೆ. ಒಟ್ಟಾರೆ ಈ ವಲಯದಲ್ಲಿ 200ಕ್ಕೂ ವಿವಿಧ ಜಾತಿಯ ಬಾನಾಡಿಗಳಿವೆ.

ಈ ಹಿಂದೆ ಹೊಸಕೋಟೆಯಲ್ಲಿ ಸಕ್ರಿಯವಾಗಿದ್ದ ಆರ್ ಸಿ ಇಂಡಿಯಾ ಆರ್ಗ್ ಎಂಬ ಸಂಸ್ಥೆಯ ಸದಸ್ಯರು ಹೊಸಕೋಟೆ ಭಾಗದಲ್ಲಿ ಇದೇ ರೀತಿ ಮನೋರಂಜನೆಗಾಗಿ ದ್ರೋಣ್ ಹಾರಿಬಿಡುತ್ತಿದ್ರು. ಆದ್ರೆ ಅರಣ್ಯ ಇಲಾಖೆಯವರು 2016ರ ಆರಂಭದಲ್ಲಿ ದ್ರೋಣ್ ಹಾರಾಟಕ್ಕೆ ನಿಷೇಧ ಹೇರಿದ್ದರಿಂದ ಅಲ್ಲಿನ ಸದಸ್ಯರು ಹೆಸರಘಟ್ಟ ಪ್ರದೇಶವನ್ನು ಆಯ್ದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಯಾರೋ ಮಾಡೋ ತಪ್ಪಿಗೆ ಅಮಾಯಕ ಪ್ರಾಣಿ- ಪಕ್ಷಿಗಳು ನೋವು ಅನುಭವಿಸ್ತಿರೋದು ಮಾತ್ರ ದುರಂತವೇ ಸರಿ....!
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ