ಬೆಂಗಳೂರು (ಜ. 6): ಕೊರೋನಾ ರೂಪಾಂತರಿ ಇಡೀ ದೇಶವನ್ನೇ ಮತ್ತೊಮ್ಮೆ ಆತಂಕಕ್ಕೆ ಈಡುಮಾಡಿರುವ ಬೆನ್ನಲ್ಲೇ Bird Flu ಭೀತಿಯೂ ಹೆಚ್ಚಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಹಿಮಾಚಲಪ್ರದೇಶದಲ್ಲಿ H5N1 ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ನೆರೆಯ ರಾಜ್ಯವಾದ ಕೇರಳದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ 2 ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಮುನ್ನೆಚ್ಚರಿಕಾ ಕ್ರಮವಾಗಿ 50 ಸಾವಿರ ಪಕ್ಷಿಗಳನ್ನು ಕೊಲ್ಲಲು ತೀರ್ಮಾನಿಸಲಾಗಿದೆ. ಹಾಗೇ, ಹಕ್ಕಿ ಜ್ವರವನ್ನು ಕೇರಳ ಸರ್ಕಾರ State Disaster ಎಂದು ಘೋಷಿಸಿದೆ.
ಕೇರಳದಲ್ಲಿ ಸಾವಿರಾರು ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಫಾರ್ಮ್ಗಳಲ್ಲಿರುವ ಕೋಳಿಗಳನ್ನು ಸಾಯಿಸಲಾಗುತ್ತಿದೆ. ಕೇರಳದಲ್ಲಿ ಹಕ್ಕಿ ಜ್ವರ ಹೆಚ್ಚಾಗಿರುವುದರಿಂದ ಕರ್ನಾಟಕದ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕರ್ನಾಟಕ ಸರ್ಕಾರ ಸೂಚಿಸಿದೆ. ಈ ಜಿಲ್ಲೆಗಳ ಯಾವುದೇ ಭಾಗದಲ್ಲಿ ಹಕ್ಕಿಗಳು ಅಸಹಜವಾಗಿ ಸಾವನ್ನಪ್ಪಿದ್ದರೆ ಪಶು ವೈದ್ಯಾಧಿಕಾರಿಗಳು ತೆರಳಿ ತಪಾಸಣೆ ನಡೆಸಬೇಕು ಎಂದು ಆದೇಶಿಸಲಾಗಿದೆ. ಹಾಗೇ, ಈ ಕುರಿತು ಮಾಹಿತಿ ನೀಡುವಂತೆಯೂ ಸಾರ್ವಜನಿಕರಲ್ಲಿ ಕೋರಲಾಗಿದೆ.
ಇದನ್ನೂ ಓದಿ: Bird Flu: ಕೇರಳಕ್ಕೂ ಕಾಲಿಟ್ಟ ಹಕ್ಕಿ ಜ್ವರ; 2 ಜಿಲ್ಲೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳು ಸಾವು
ಕೇರಳದ ಅಲಪ್ಪುಳ, ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ, ಜಿಲ್ಲಾಡಳಿತಗಳು ಕಂಟ್ರೋಲ್ ರೂಂಗಳನ್ನು ಆರಂಭಿಸಿವೆ. ಡಿಸೆಂಬರ್ ಕೊನೆಯ ವಾರದಲ್ಲಿ ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಸಾಕಷ್ಟು ಬಾತುಕೋಳಿಗಳು ಸಾವನ್ನಪ್ಪಿದ್ದವು. ಅವುಗಳಲ್ಲಿ 8 ಬಾತುಕೋಳಿಗಳ ಸ್ಯಾಂಪಲ್ ಅನ್ನು ಭೂಪಾಲ್ನ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 5 ಸ್ಯಾಂಪಲ್ನಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದೆ. ಹೀಗಾಗಿ, ಕೊಟ್ಟನಾಡ್ ಭಾಗದಲ್ಲಿ ನಿನ್ನೆ ಸಾವಿರಾರು ಪಕ್ಷಿಗಳನ್ನು ಸಾಯಿಸಲಾಗಿದೆ. ಅಲಪ್ಪುಳ ಜಿಲ್ಲೆಯ ನೆದುಮುಂಡಿ, ಥಕಳಿ, ಪಳಿಪ್ಪಾಡ್, ಕರುವಟ್ಟ ಭಾಗ ಹಾಗೂ ಕೊಟ್ಟಾಯಂ ಜಿಲ್ಲೆಯ ನೀಂದೂರ್ ಭಾಗಗಳಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ.
ಕೋಳಿ, ಟರ್ಕಿ, ಬಾತುಕೋಳಿ, ಕಾಗೆಗಳ ಮೂಲಕ ಹಕ್ಕಿ ಜ್ವರ ಹರಡುವ ಸಾಧ್ಯತೆ ಇರುತ್ತದೆ. ಕೇರಳದಲ್ಲಿ ಈ ಮೊದಲು 2016ರಲ್ಲಿ ಭಾರೀ ಪ್ರಮಾಣದ ಹಕ್ಕಿ ಜ್ವರದ ಕೇಸುಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಹಕ್ಕಿಜ್ವರದ ಭೀತಿ ಶುರುವಾಗಿದೆ. ಹಿಮಾಚಲ ಪ್ರದೇಶದಲ್ಲಿ ಈಗಾಗಲೇ 2 ಸಾವಿರಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿವೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೂಡ ಸಾವಿರಾರು ಕಾಗೆ, ಹಕ್ಕಿಗಳು ಸಾವನ್ನಪ್ಪಿವೆ.
ನೀಂದೂರ್ನ ಬಾತುಕೋಳಿಯ ಫಾರ್ಮ್ ಒಂದರಲ್ಲೇ 1,500 ಬಾತುಕೋಳಿಗಳು ಸಾವನ್ನಪ್ಪಿವೆ. ಹಾಗೇ ಅಲಪ್ಪುಳ ಜಿಲ್ಲೆಯ ಕುಟ್ಟನಾಡ್ ಜಿಲ್ಲೆಯ ಕೆಲವು ಫಾರ್ಮ್ಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಕೇರಳದ ಫಾರ್ಮ್ಗಳಲ್ಲಿ 12,000 ಬಾತುಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಹರಡಬಾರದೆಂಬ ಕಾರಣಕ್ಕೆ ಅವುಗಳ ಜೊತೆಗಿದ್ದ ಸುಮಾರು 36,000 ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಬಾತುಕೋಳಿಗಳನ್ನು ಸಾಕಿದವರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ