HOME » NEWS » State » BIRD FLU BIRD FLU FEAR AT KODAGU AMID PREPARATION OF COVID 19 VACCINATION LG

Bird Flu: ಕೋವಿಡ್ ವ್ಯಾಕ್ಸಿನ್ ವಿತರಣೆ ಸಿದ್ಧತೆ ನಡುವೆಯೇ ಕೊಡಗಿನಲ್ಲಿ ಹಕ್ಕಿಜ್ವರದ ಆತಂಕ 

ಸದ್ಯ ಕೊಡಗಿನಲ್ಲಿ ಇನ್ನೂ ಹಕ್ಕಿ ಜ್ವರದ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಪೌಲ್ಟ್ರಿ ಅಥವಾ ವನ್ಯ ಪ್ರದೇಶದಲ್ಲಾಗಲಿ, ಅಸಹಜವಾಗಿ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿದರೆ ತಕ್ಷಣವೇ ಮಾಹಿತಿ ನೀಡುವಂತೆ ವಶುಸಂಗೋಪನಾ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

news18-kannada
Updated:January 7, 2021, 8:06 AM IST
Bird Flu: ಕೋವಿಡ್ ವ್ಯಾಕ್ಸಿನ್ ವಿತರಣೆ ಸಿದ್ಧತೆ ನಡುವೆಯೇ ಕೊಡಗಿನಲ್ಲಿ ಹಕ್ಕಿಜ್ವರದ ಆತಂಕ 
ಸಾಂದರ್ಭಿಕ ಚಿತ್ರ
  • Share this:
ಕೊಡಗು(ಜ.07): ಕೊಡಗು ಜಿಲ್ಲೆಯಲ್ಲಿ ಕೊರೊನಾ ಭೀತಿ ನಡುವೆಯೇ ಹಕ್ಕಿ ಜ್ವರದ ಭೀತಿ ಎದುರಾಗಿದ್ದು ಜಿಲ್ಲಾಡಳಿತ ಹೈಅಲರ್ಟ್ ಮಾಡಿದೆ. ಹೌದು ಕೊಡಗು ಜಿಲ್ಲೆಯಲ್ಲಿ ಇಂದಿಗೂ ನಿತ್ಯ 10 ರಿಂದ 15 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದುವರೆಗೆ 80 ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ನಡುವೆ ಕೊಡಗಿಗೆ ಹೊಂದಿಕೊಂಡಿರುವ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಇರುವುದು ಖಚಿತವಾಗಿರುವುದರಿಂದ ಕೊಡಗು ಜಿಲ್ಲೆಗೆ ಮತ್ತೊಂದು ಆತಂಕ ಎದುರಾಗಿದೆ. ಹೀಗಾಗಿಯೇ ಕೊಡಗಿನಲ್ಲಿ ಹೈಅಲರ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

ಕೇರಳದಿಂದ ಕುಕ್ಕುಟೋದ್ಯಮದ ಯಾವುದೇ ಉತ್ಪನ್ನವೂ ಕೊಡಗಿಗೆ ಬರುವುದಿಲ್ಲ. ಆದರೆ ಕೊಡಗಿನಿಂದ ಕೇರಳಕ್ಕೆ ಕೋಳಿ ಮತ್ತು ಅದರ ಉತ್ಪನ್ನಗಳು ರವಾನೆಯಾಗುತ್ತವೆ. ಹೀಗೆ ಅವುಗಳನ್ನು ಕೇರಳಕ್ಕೆ ಸಾಗಿಸಿ ವಾಪಸ್ಸು ಆಗುವ ವಾಹನಗಳಿಂದ ರಾಜ್ಯಕ್ಕೆ ಹಕ್ಕಿ ಜ್ವರ ಹರಡಬಾರದೆಂದು ಬಿಗಿ ಕ್ರಮಕೈಗೊಳ್ಳಲಾಗಿದೆ. ಕೊಡಗು ಕೇರಳಗಳ ನಡುವೆ ಇರುವ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ.

ಕೋಳಿ ಮತ್ತು ಅದರ ಉತ್ಪನ್ನಗಳನ್ನು ಕೇರಳಕ್ಕೆ ಸಾಗಿಸಿ ವಾಪಸ್ಸ್ ಆಗುವ ವಾಹನಗಳಿಗೆ ಒಂದು ಪರ್ಸೆಂಟ್ ಹೈಪೋಕ್ಲೋರೈಡ್ ಮಿಶ್ರಣವನ್ನು ಬಳಸಿ ವಾಹನಗಳಿಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಇನ್ನು ಪಶು ಸಂಗೋಪನಾ ಇಲಾಖೆಯಿಂದ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಸಿಬ್ಬಂದಿಗಳು ಮೂರು ಕಡೆಗಳಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಗೆ ಮುಂದಾಗಿರುವುದಾಗಿ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಸುರೇಶ್ ಭಟ್ ಹೇಳಿದ್ದಾರೆ.

ಸದ್ಯ ಕೊಡಗಿನಲ್ಲಿ ಇನ್ನೂ ಹಕ್ಕಿ ಜ್ವರದ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಪೌಲ್ಟ್ರಿ ಅಥವಾ ವನ್ಯ ಪ್ರದೇಶದಲ್ಲಾಗಲಿ, ಅಸಹಜವಾಗಿ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿದರೆ ತಕ್ಷಣವೇ ಮಾಹಿತಿ ನೀಡುವಂತೆ ವಶುಸಂಗೋಪನಾ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಕೊರೊನಾ ಮಹಾಮಾರಿಯನ್ನು ಕೊಲ್ಲಲು ಕೋವಿಡ್ ವ್ಯಾಕ್ಸಿನ್ ರೆಡಿಯಾಗುತ್ತಿದ್ದಂತೆ ಕೊಡಗು ಜಿಲ್ಲೆಯಲ್ಲೂ ವ್ಯಾಕ್ಸಿನ್ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಚಳಿಗಾಲದಲ್ಲಿ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಹೆಲ್ತ್ ಕೇರ್ ವರ್ಕರ್ಸ್ ಗೆ ವ್ಯಾಕ್ಸಿನ್ ವಿತರಣೆಗೆ ನಿರ್ಧರಿಸಲಾಗಿದ್ದು, ಜಿಲ್ಲೆಯ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳು ಸೇರಿದಂತೆ 243 ಸಂಸ್ಥೆಗಳ 6300 ಹೆಲ್ತ್ ಕೇರ್ ವರ್ಕರ್ಸ್ ಗೆ ಕೋವ್ಯಾಕ್ಸಿನ್ ನೀಡಲು ಸಿದ್ಧತೆ ನಡೆಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಜನವರಿ 8 ರಂದು ಡ್ರೈರನ್ ನಡೆಸಲು ಸಿದ್ಧತೆ ನಡೆಸಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

ಮಡಿಕೇರಿ, ಕುಶಾಲನಗರ ಮತ್ತು ವಿರಾಜಪೇಟೆ ಮೂರು ಕಡೆಗಳಲ್ಲಿ ಡ್ರೈ ರನ್ ನಡೆಸಲಾಗುವುದು. ಬಳಿಕ ಕೋವಿಡ್ ವ್ಯಾಕ್ಸಿನ್ ವಿತರಿಸಲಾಗುವುದು ಎಂದಿದ್ದಾರೆ. ಎರಡನೇ ಹಂತದಲ್ಲಿ ಪೊಲೀಸ್ ಮತ್ತು ಹೋಂಗಾರ್ಡ್ ಗಳಿಗೆ ಕೋವ್ಯಾಕ್ಸಿನ್ ದೊರೆಯಲಿದೆ. ಮೂರನೇ ಹಂತದಲ್ಲಿ ಹಿರಿಯ ನಾಗರಿಕರಿಗೆ ಮತ್ತು ನಾಲ್ಕನೇ ಹಂತದಲ್ಲಿ ಎಲ್ಲಾ ಸಾರ್ವಜನಿಕರಿಗೂ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ವ್ಯಾಕ್ಸಿನ್ ಸಂಗ್ರಹಣೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಮತ್ತು ಜಿಲ್ಲಾಸ್ಪತ್ರೆಯಲ್ಲೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಕೊಡಗಿನಲ್ಲಿ ಕೋವಿಡ್ ಮಹಾಮಾರಿಯನ್ನು ಸಂಹರಿಸಲು ಕೋವಿಡ್ ವ್ಯಾಕ್ಸಿನ್ ವಿತರಣೆಗೆ ಸಿದ್ಧತೆ ನಡೆಯುತ್ತಿದ್ದರೆ, ಕೇರಳದಿಂದ ಹಕ್ಕಿ ಜ್ವರ ಹರಡುವ ಆತಂಕ ಎದುರಾಗಿರುವುದು ಜಿಲ್ಲಾಡಳಿತ ಮತ್ತೊಂದು ಹೊಸ ಹೋರಾಟಕ್ಕೆ ಸಿದ್ಧವಾಗಬೇಕಾಗಿದೆ.
Published by: Latha CG
First published: January 7, 2021, 7:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories