Chamarajanagar: 6 ವರ್ಷಗಳ ಬಳಿಕ ಬಿಳಿಗಿರಿರಂಗನಾಥಸ್ವಾಮಿ ರಥೋತ್ಸವ; ಟ್ರಾಫಿಕ್ ಜಾಮ್‌

ಆರು ವರ್ಷಗಳ ಬಳಿಕ ನಡೆದ ರಥೋತ್ಸವಕ್ಕೆ ಸಹಸ್ರಾರು ಜನ ಆಗಮಿಸುವ ನಿರೀಕ್ಷೆ ಇದ್ದರೂ  ಸಮರ್ಪಕ  ಸಾರಿಗೆ ವ್ಯವಸ್ಥೆ ಮಾಡದ ಕಾರಣ  ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಗುಂಬಳ್ಳಿ ಚೆಕ್ ಪೋಸ್ಟ್ ಬಳಿ  ವಾಹನ ದಟ್ಟಣೆ ಉಂಟಾಗಿ ಸಾವಿರಾರು ಭಕ್ತರು ರಥೋತ್ಸವದಿಂದ ವಂಚಿತರಾಗಬೇಕಾಯಿತು

ಬಿಳಿಗಿರಿ ರಂಗನಾಥಸ್ವಾಮಿ ರಥ

ಬಿಳಿಗಿರಿ ರಂಗನಾಥಸ್ವಾಮಿ ರಥ

  • Share this:
ಚಾಮರಾಜನಗರ ( ಏ.17):  ಚಂಪಕಾರಣ್ಯ ಕ್ಷೇತ್ರ ಎಂದು ಹೆಸರಾದ  ಚಾಮರಾಜನಗರ (Chamarajanagar) ಜಿಲ್ಲೆ ಬಿಳಿಗಿರಿರಂಗನಬೆಟ್ಟದಲ್ಲಿ  ಬಿಳಿಗಿರಿ ರಂಗನಾಥಸ್ವಾಮಿ (Biligiri Ranganatha swamy) ದೊಡ್ಡ ರಥೋತ್ಸವ ಆರು ವರ್ಷಗಳ ನಂತರ ಇಂದು ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿದೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಉದ್ಘೋಷ , ಶಂಖ ಹಾಗು ಜಾಗಟೆಯ  ನಿನಾದಗಳ ನಡುವೆ ಬಿಳಿಗಿರಿ ರಂಗನಾಥಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವಕ್ಕು ಮುನ್ನ ವಿಷ್ಣುವಿನ (Vishnu) ವಾಹನವೆಂದೆ ಹೇಳಲಾಗುವಗರುಡ ಪಕ್ಷಿ  ರಥದ  ಮೇಲೆ ಆಗಸದಲ್ಲಿ ಪ್ರದಕ್ಷಿಣೆ ಹಾಕುವುದು ಇಲ್ಲಿನ ವಿಶೇಷವಾಗಿದೆ.

ದೇವಸ್ಥಾನದ ಜೀರ್ಣೋದ್ಧಾರ, ಹೊಸ ರಥ ನಿರ್ಮಾಣ ಹಾಗು ಕೋವಿಡ್-19  ಹಿನ್ನಲೆಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿಯ ದೊಡ್ಡ ಜಾತ್ರೆ ಕಳೆದ ಆರು ವರ್ಷಗಳಿಂದ  ಸ್ಥಗಿತಗೊಂಡಿತ್ತು. ಇಲ್ಲಿ ಪ್ರತಿವರ್ಷ ಚೈತ್ರ ಮಾಸದ  ಹುಣ್ಣಿಮೆಯ ದಿನ ಬಿಳಿಗಿರಿ ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತದೆ. ಇಂದು ಲಕ್ಷಾಂತರ ಭಕ್ತರ ಆರಾಧ್ಯ ದೈವ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿಯ ಜನ್ಮ ದಿನ  ಎಂಬುದು ಭಕ್ತರ ನಂಬಿಕೆಯಾಗಿದೆ

ಗರುಡ ಪಕ್ಷಿ ರಥದ ಮೇಲೆ ಆಗಸದಲ್ಲಿ ಪ್ರದಕ್ಷಿಣೆ

ಶನಿವಾರ ಮದ್ಯಾಹ್ನ 12 ರಿಂದ 12.22 ರೊಳಗೆ ಸಲ್ಲುವ ಶುಭ ಕರ್ಕಾಟಕ  ಶುಭ ಮುಹೂರ್ತದಲ್ಲಿ ರಥಾರೋಹಣ ನಂತರ ಶ್ರೀಮಾನ್ ಮಹಾರಥೋತ್ಸವ  ಜರುಗಿತು.. ರಥಾರೋಹಣಕ್ಕು ಮುನ್ನ ವಿಷ್ಣವಿನ ವಾಹನ ಎಂದು ಹೇಳಲಾಗುವ ಗರುಡ ಪಕ್ಷಿ ರಥದ ಮೇಲೆ ಆಗಸದಲ್ಲಿ ಪ್ರದಕ್ಷಿಣೆ ಹಾಕುವುದು ಇಲ್ಲಿನ ವಿಶೇಷವಾಗಿದೆ.  ಸ್ವತಃ ವಿಷ್ಣುವೇ ಗರುಡನ ಮೇಲೆ ಕುಳಿತು ಬಂದು  ಭಕ್ತರನ್ನು ಹರಸಿ ಹೋಗುತ್ತಾನೆ, ಆದರೆ ವಿಷ್ಣು ನಮ್ಮ ಕಣ್ಣಿಗೆ ಕಾಣುವುದಿಲ್ಲ, ಆತನ ವಾಹನ ಗರುಡ ಪಕ್ಷಿಯ ದರ್ಶನವಾಗುತ್ತದೆ ಎನ್ನುತ್ತಾರೆ ಪ್ರಧಾನ ಅರ್ಚಕ ರವಿಕುಮಾರ್

ಪುರಾಣ ಕಥೆ

ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ  ಸಹಸ್ರಾರು ಭಕ್ರರು ಸಾಕ್ಷಿಯಾದರು. ಭಕ್ತರ ಉದ್ಘೋಷ, ಜಾಗಟೆಯ ಸದ್ದು ಹಾಗು ಶಂಖನಾದ ಮುಗಿಲು ಮುಟ್ಟಿತು. ಬಿಳಿಗಿರಿರಂಗನಾಥ ಸ್ವಾಮಿಯು   ಸೋಲಿಗರ ಬಾಲೆ ಕುಸುಮಾಲೆಯ ಅಂದಕ್ಕೆ ಸೋತು ಆಕೆಯನ್ನು ವರಿಸಿದ ಎಂಬ ಪುರಾಣ ಕಥೆಯಿದೆ ಹಾಗಾಗಿ ಬುಡಕಟ್ಟು  ಸೋಲಿಗರು  ಬಿಳಿಗಿರಿ ರಂಗನಾಥಸ್ವಾಮಿಯನ್ನು ತಮ್ಮ ಭಾವ ಎಂದೆ ಸಂಭೋದಿಸುತ್ತಾರೆ.  ಹಾಗಾಗಿ ಬಿಳಿಗಿರಿರಂಗನಬೆಟ್ಟದ ಅರಣ್ಯದಲ್ಲಿ ವಾಸಿಸುವ ಬುಡಕಟ್ಟು  ಸೋಲಿಗರು ಸಂಭ್ರಮದಿಂದ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.

ಬಿಳಿಗಿರಿರಂಗನಾಥ ಸ್ವಾಮಿಗೆ ಪಾದುಕೆ

ಪ್ರತಿ ವರ್ಷ ರಥೋತ್ಸವಕ್ಕೆ  ಯಳಂದೂರು ತಾಲೋಕು ಬೂದಿತಿಟ್ಟು ಗ್ರಾಮಸ್ಥರು ಬಿಳಿಗಿರಿರಂಗನಾಥ ಸ್ವಾಮಿಗೆ ಪಾದುಕೆಗಳನ್ನು ತಯಾರಿಸಿ ಕೊಡುತ್ತಾರೆ. ಬಿಳಿಗಿರಿರಂಗನಾಥ ಸ್ವಾಮಿ ಈ ಪಾದುಕೆಗಳನ್ನು ಮೆಟ್ಟಿ ರಾತ್ರಿ ವೇಳೆ ಅರಣ್ಯದಲ್ಲಿ ಸಂಚಾರ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ ಈ ಪಾದುಕೆಗಳನ್ನು ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಟ್ರಾಫಿಕ್ ಜಾಮ್..  ಸಂಚಾರ ಅವ್ಯವಸ್ಥೆ..  ಜಿಲ್ಲಾಡಳಿತಕ್ಕೆ ಭಕ್ತರ ಹಿಡಿಶಾಪ

ಆರು ವರ್ಷಗಳ ಬಳಿಕ ನಡೆದ ರಥೋತ್ಸವಕ್ಕೆ ಸಹಸ್ರಾರು ಜನ ಆಗಮಿಸುವ ನಿರೀಕ್ಷೆ ಇದ್ದರೂ  ಸಮರ್ಪಕ  ಸಾರಿಗೆ ವ್ಯವಸ್ಥೆ ಮಾಡದ ಕಾರಣ  ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಗುಂಬಳ್ಳಿ ಚೆಕ್ ಪೋಸ್ಟ್ ಬಳಿ  ವಾಹನ ದಟ್ಟಣೆ ಉಂಟಾಗಿ ಸಾವಿರಾರು ಭಕ್ತರು ರಥೋತ್ಸವದಿಂದ ವಂಚಿತರಾಗಬೇಕಾಯಿತು. ರಥೋತ್ಸವ ಸಮಯಕ್ಕೆ ಬೆಟ್ಟಕ್ಕೆ ಹೋಗಲಾರದೆ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಾ ವಾಪಸ್ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಮತ್ತೆ ಕೆಲವರು ಅರಣ್ಯದಲ್ಲಿ ನಡೆದೆ ಪ್ರಯಾಸದಿಂದ  ಬೆಟ್ಟ ತಲುಪಿದರು.

ಇದನ್ನೂ ಓದಿ: SBI ATM Theft: ಭಾರತೀಯ ಸ್ಟೇಟ್​ ಬ್ಯಾಂಕ್​ ಎಟಿಎಂ ಮಷೀನನ್ನೇ ಕದ್ದೊಯ್ದ ಕಳ್ಳರು

ವಾಹನ ದಟ್ಟಣೆ ತಡೆಗಟ್ಟಲು  ಈ ಬಾರಿ ಬಿಳಿಗಿರಿರಂಗನಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಖಾಸಗಿ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲೆ  ನಿಲ್ಲಿಸುವ ವ್ಯವಸ್ಥೆ ಮಾಡಲಾಗುವುದು, ಇಲ್ಲಿಂದ ಬೆಟ್ಟಕ್ಕೆ ತೆರಳಲು ಭಕ್ತರಿಗೆ ಉಚಿತ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿತ್ತು

ಹಾಗಾಗಿ ಕಿಲೋಮೀಟರ್‌ಗಟ್ಟಲೆ  ವಾಹನಗಳು ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತವು, ಚೆಕ್‌ಪೋಸ್ಟ್  ನಲ್ಲಿ ಜಮಾಯಿಸಿದ   ಸಾವಿರಾರು ಜನರಿಗೆ ಅಗತ್ಯ ಸಂಖ್ಯೆಯ ಬಸ್ ಗಳು ಇರದೆ ಬೆಟ್ಟಕ್ಕೆ ಪ್ರಯಾಣಿಸಲು ಪರದಾಡುವಂತಾಯಿತು.

ಇದನ್ನೂ ಓದಿ: Evening Digest: ಉಯ್ಯಾಲೆ ತಂತಿಗೆ ಸಿಲುಕಿ ಬಾಲಕಿ ಸಾವು; KGF-2 ಎರಡನೇ ದಿನದ ಕಲೆಕ್ಷನ್ ಎಷ್ಟು ನೋಡಿ: ಇಂದಿನ ಪ್ರಮುಖ ಸುದ್ದಿಗಳು

ಭಕ್ತರ ಆಕ್ರೋಶ  ಹೆಚ್ಚಾಗುತ್ತಿದ್ದಂತೆ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.  ಇದರಿಂದ ಬೆಟ್ಟದಲ್ಲು ವಾಹನಗಳ ದಟ್ಟಣೆ ಹೆಚ್ಚಾಯಿತು  ಬೆಟ್ಟದಲ್ಲಿ ರಸ್ತೆಗಳು ಕಿರಿದಾಗಿದ್ದರಿಂದ ಬಸ್ ಗಳು ತಿರುಗಿ ಹೋಗಲು ಸಾಧ್ಯವಾಗದೆ ಭಕ್ತರು ಗಂಟೆಗಟ್ಟಲೆ ಬೆಟ್ಟದಲ್ಲೇ ಸಿಲುಕುವಂತಾಯಿತು. ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸದೆ ಇರುವುದು  ಹಾಗು ಚೆಕ್ ಪೋಸ್ಟ್ ಬಳಿ ವಾಹನಗಳನ್ನು ನಿಯಂತ್ರಿಸಲು  ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರ ನ್ನು ನಿಯೋಜಿಸದೆ ನಿರ್ಲಕ್ಷ್ಯ ವಹಿಸಿದ್ದು ಅವ್ಯವಸ್ಥೆಗೆ ಕಾರಣವಾಯಿತು.
Published by:Divya D
First published: