ಕಲಬುರ್ಗಿ (ಫೆ.20) : ಶಿವರಾತ್ರಿಯಂದು ಶಿವನ ದರ್ಶನಕ್ಕೆ ಬರುವವರಿಗೆ ಕಲಬುರ್ಗಿಯಲ್ಲಿ ಈ ಬಾರಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕಲಬುರ್ಗಿ ತೊಗರಿಯ ಕಣಜ ಎಂದೇ ಪ್ರಸಿದ್ಧಿಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ತೊಗರಿಯ ಶಿವಲಿಂಗ ತಲೆಯೆತ್ತಿದೆ. ಅಮೃತ ಸರೋವರದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. 25 ಅಡಿ ಎತ್ತರದ ತೊಗರಿ ಶಿವಲಿಂಗ ಸ್ಥಾಪಿಸಿದ್ದು, ಶಿವರಾತ್ರಿಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಸಂಕ್ರಾಂತಿ ಹಬ್ಬದ ನಂತರ ಶಿವರಾತ್ರಿ ಹಬ್ಬ ಬರುತ್ತಿದೆ. ಫೆಬ್ರವರಿ 21 ರಂದು ನಾಡಿನಾದ್ಯಂತ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆಗಳು ನಡೆದಿವೆ. ಕಲಬುರ್ಗಿಯಲ್ಲಿ ತೊಗರಿ ಶಿವಲಿಂಗ ಈ ಬಾರಿ ವಿಶೇಷವಾಗಿ ಆಕರ್ಷಿಸಲಾರಂಭಿಸಿದೆ. ಕಲಬುರ್ಗಿಯ ಸೇಡಂ ರಸ್ತೆಯಲ್ಲಿರುವ ಅಮೃತ ಸರೋವರದಲ್ಲಿ ಬೃಹತ್ ಗಾತ್ರದ ತೊಗರಿ ಶಿವಲಿಂಗ ಸ್ಥಾಪಿಸಲಾಗಿದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇದನ್ನು ಸ್ಥಾಪನೆ ಮಾಡಿದೆ. ಕಲಬುರ್ಗಿ ತೊಗರಿಯ ಕಣಜ ಆಗಿರುವುದರಿಂದ ಅದರ ಸಂಕೇತವಾಗಿ ತೊಗರಿಯ ಶಿವಲಿಂಗ ಸ್ಥಾಪಿಸಲಾಗಿದೆ.
ತೊಗರಿ ಕಾಳಿನಿಂದ ಶಿವಲಿಂಗ ಅಲಂಕರಿಸಲಾಗಿದೆ. ಜೊತೆಗೆ 12 ಜ್ಯೋತಿರ್ಲಿಂಗಗಳನ್ನು ವಿವಿಧ ವಸ್ತುಗಳಿಂದ ಅಲಂಕರಿಸಲಾಗಿದ್ದು, ಶಿವರಾತ್ರಿಯಂದು ದರ್ಶನ ಮಾಡಿಕೊಂಡು ಭಕ್ತರು ಪುನೀತರಾಗಲಿದ್ದಾರೆ ಎಂದು ಬ್ರಹ್ಮಕುಮಾರಿ ವಿ.ವಿ. ಮುಖ್ಯಸ್ಥೆ ವಿಜಯಾ ಹೇಳುತ್ತಾರೆ.
ಅಮೃತ ಸರೋವರದ ಆವರಣದಲ್ಲಿ 25 ಅಡಿ ಎತ್ತರದ ಶಿವಲಿಂಗ ಸ್ಥಾಪಿಸಲಾಗಿದೆ. ಈ ಶಿವಲಿಂಗಕ್ಕೆ ಮೂರು ಕ್ವಿಂಟಲ್ ತೊಗರಿ ಬಳಸಿ ಅಲಂಕಾರ ಮಾಡಲಾಗಿದೆ. ಕಳೆದ ವರ್ಷ ತೆಂಗಿನಕಾಯಿ ಶಿವಲಿಂಗ ಮಾಡಲಾಗಿತ್ತು. ಈ ಬಾರಿ ಕಲಬುರ್ಗಿಯ ಬ್ರ್ಯಾಂಡ್ ಎಂಬ ರೀತಿಯಲ್ಲಿ ತೊಗರಿ ಶಿವಲಿಂಗ ಮಾಡಲಾಗಿದೆ.
ಇದನ್ನೂ ಓದಿ :
ಕಲ್ಲು ತೂರಾಡಿದ್ದ ಕಾಂಗ್ರೆಸ್ ಪುಡಾರಿಗಳಿಂದಲೇ ಪೊಲೀಸರ ವಿರುದ್ಧ ಆರೋಪ: ಸಚಿವ ಶ್ರೀರಾಮುಲು ಕೋಪ
ಕೇವಲ ತೊಗರಿಯ ಶಿವಲಿಂಗವೊಂದೇ ಅಲ್ಲದೆ ವಿವಿಧ ವಸ್ತುಗಳಿಂದ ಅಲಂಕರಿಸಿದ ಜ್ಯೋತಿರ್ಲಿಂಗಗಳೂ ಈ ಬಾರಿಯ ಶಿವರಾತ್ರಿಯಲ್ಲಿ ವಿಶೇಷವಾಗಿ ಕಂಗೊಳಿಸಲಿವೆ. ರುದ್ರಾಕ್ಷಿ, ಪ್ರಣತಿ, ದ್ರಾಕ್ಷಿ, ಗೋಡಂಬಿ, ಬದಾಮಿ, ಹತ್ತಿ, ಮುತ್ತು, ಹವಳ, ಸಿಂಪಿ ಇತ್ಯಾದಿಗಳಿಂದ ಜ್ಯೋತಿರ್ಲಿಂಗಗಳ ಅಲಂಕಾರ ಮಾಡಲಾಗಿದೆ. ಶಿವರಾತ್ರಿಯಂದು ಬರುವ ಭಕ್ತರಿಗೆ ತೊಗರಿಯ ಶಿವಲಿಂಗದ ಜೊತೆಗೆ ವೈವಿಧ್ಯಮಯ ಅಲಂಕೃತ ಶಿವಲಿಂಗಗಳ ದರ್ಶನದ ಭಾಗ್ಯ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ