ಬಾಗಲಕೋಟೆಯಲ್ಲಿ ಕೋವಿಡ್  ಜಾಗೃತಿಗಾಗಿ ತಯಾರಾಗುತ್ತಿದೆ ಅತೀ ದೊಡ್ಡ ಮಾಸ್ಕ್

ದೇಶದಲ್ಲಿ ಕೊರೋನ ಹಾವಳಿ ಹೆಚ್ಚಾಗುತ್ತಿರುವುದರ ಹಿನ್ನಲೆಯಲ್ಲಿ 8 ಅಡಿ ಉದ್ದನೆಯ 6 ಅಡಿ ಅಗಲನೆಯ ಅತೀ ದೊಡ್ಡ ಮಾಸ್ಕ್ ತಯಾರಿಸಿದ್ದು, ಮಾಸ್ಕ್ ಮತ್ತು ಸಾಮಾಜಿಕ ಅಂತರದ ಜಾಗೃತಿ ಅಭಿಯಾನ ಮೂಡಿಸುತ್ತಿದ್ದಾರೆ

ಅತೀ ದೊಡ್ಡ ಮಾಸ್ಕ್

ಅತೀ ದೊಡ್ಡ ಮಾಸ್ಕ್

  • Share this:
ಬಾಗಲಕೋಟೆ (ಮಾ. 26):  ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ ಮಾಸ್ಕ್ ,ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ ಕಾಯ್ದುಕೊಂಡು ಕೋವಿಡ್  ನಿಯಮ ಪಾಲನೆಗೆ ಸೂಚಿಸಿದೆ. ಆದರೂ ಜನಸಾಮಾನ್ಯರು ಕೋವಿಡ್ ನಿಯಮ ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಬಳಕೆ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಬಾಗಲಕೋಟೆ ಅಮೀನಗಡದಲ್ಲಿ ಅತೀ ದೊಡ್ಡ ಮಾಸ್ಕ್ ತಯಾರಿಸಲಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಮಲ್ಲಯ್ಯನ ಪಾದಯಾತ್ರೆ ಮಾಡುವ  ವೇಳೆ ಭಕ್ತರು  ಶ್ರೀಶೈಲ ಮಲ್ಲಿಕಾರ್ಜುನ  ಧ್ಯಾನ ಮಾಡುತ್ತಾರೆ. ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕದಿಂದ ಪಾದಯಾತ್ರೆ ಕೈಗೊಳ್ಳುವುದಕ್ಕೆ ಶತ ಶತಮಾನಗಳ ಇತಿಹಾಸವಿದೆ.ಆದರೆ ರಾಜಧಾನಿ ಬೆಂಗಳೂರಿಗೂ ಈ ಭಕ್ತಿ ನಂಟನ್ನು ಹಚ್ಚಿಸಿ ಅಲ್ಲಿಂದ ಪ್ರತಿವರ್ಷ 25ಜನರನ್ನು ಕರೆತಂದು  450 ಕಿಲೋ ಮೀಟರ್ ನಡೆಸಿ ಅವರಲ್ಲೂ  ಭಕ್ತಿ ಭಾವ ಮೂಡಿಸಿದ್ದಾರೆ  ಅಮೀನಗಡದ ಯುವ  ಉದ್ಯಮಿ ಮಂಜುನಾಥ್ ಬಂಡಿ.

ಈ ವರ್ಷ ಮಾರ್ಚ್  29ರಂದು ಸೋಮವಾರ ಆರಂಭಗೊಳ್ಳಲಿರುವ ಈ ಪಾದಯಾತ್ರೆಗಾಗಿ ವಿಶೇಷ ತಯಾರಿ ನಡೆಯುತ್ತಿದ್ದು ಬೆಂಗಳೂರಿನ ಅಮ್ಮ ಫೌಂಡೇಶನ್ ಮತ್ತು ಅಮೀನಗಡ ಶ್ರೀಶೈಲ ಪಾದಯಾತ್ರೆ ಸದ್ಭಕ್ತ ಮಂಡಳಿ ಈ ಬಾರಿ ವಿಶೇಷ ಕಾರ್ಯಕ್ರಮ ವೊಂದನ್ನು ಹಾಕಿಕೊಂಡಿದೆ. ದೇಶದಲ್ಲಿ ಕೊರೋನ ಹಾವಳಿ ಹೆಚ್ಚಾಗುತ್ತಿರುವುದರ ಹಿನ್ನಲೆಯಲ್ಲಿ 8 ಅಡಿ ಉದ್ದನೆಯ 6 ಅಡಿ ಅಗಲನೆಯ ಅತೀ ದೊಡ್ಡ ಮಾಸ್ಕ್ ತಯಾರಿಸಿದ್ದು, ಮಾಸ್ಕ್ ಮತ್ತು ಸಾಮಾಜಿಕ ಅಂತರದ ಜಾಗೃತಿ ಅಭಿಯಾನ ಮೂಡಿಸುತ್ತಿದ್ದಾರೆ.  ಜೊತೆಗೆ   108 ಅಡಿಗಳ ಉದ್ದನೆಯ ಶ್ರೀಶೈಲ ಮಲ್ಲಯ್ಯನ ಧ್ವಜ  ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಬಾಗಲಕೋಟೆಯ ಖ್ಯಾತ ಕಲಾವಿದ ಅಸ್ಲಾಂ ಕಲಾದಗಿ ಅವರು ಆಕರ್ಷಕ ಮಲ್ಲಯ್ಯನ ಚಿತ್ರ ಮಾಸ್ಕ್ ಜಾಗ್ರತೆಯ ಸಂದೇಶಗಳನ್ನು ಚಿತ್ರಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಮಾರ್ಚ್ 29 ರ  ಸಂಜೆ 4 ಗಂಟೆಗೆ 108ಅಡಿಗಳ ಧ್ವಜ ಅನಾವರಣಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಲಿದ್ದಾರೆ. ಅಮೀನಗಡದ ಪ್ರಭು ಶಂಕರೇಶ್ವರ ಮಠದ ಜಗದ್ಗುರು ಶ್ರೀ ಶಂಕರ್ ಶ್ರೀ ರಾಜೇಂದ್ರ ಮಹಾಸ್ವಾಮಿಗಳು ಮತ್ತು ಶ್ರೀಶೈಲ ಜಗದ್ಗುರು ಪೀಠದ ಶಾಖಾ ಮಠ ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಡಿ.ಅಂತಾಪುರದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿ ಗಳು  ಸಾನಿಧ್ಯ ವಹಿಸಲಿದ್ದಾರೆ.

ಬೆಂಗಳೂರಿನ ನಾಗಾರ್ಜುನ ವಿ. ವಿ. ಯ ಡೈರೆಕ್ಟರ್ ಶ್ರೀ ಮನೋಹರ್ ನರೋಜಿ, ರಾಷ್ಟ್ರೀಯ ವಾಲಿಬಾಲ್ ಮಾಜಿ ಆಟಗಾರ ರೋಹಿತ್ ಕೆಂಪೇಗೌಡ.ರಾಷ್ಟ್ರೀಯ ಓಟಗಾರ್ತಿ ಪ್ರಮೀಳಾ ಗಟ್ಟಿ, ಸಂಪನ್ಮೂಲಗಳ ವ್ಯಕ್ತಿ ರಮೇಶ್ ಉಮ್ರಾಣಿ, ಜ್ಞಾನಜ್ಯೋತಿ ಕಾಲೇಜ್ ಪ್ರಾಂಶುಪಾಲ  ರಮೇಶ್ ಸೇರಿದಂತೆ ಅಮೀನಗಡ  ಪಟ್ಟಣದ ಅನೇಕ ಗಣ್ಯ ಮಾನ್ಯರ ಸಮ್ಮುಖದಲ್ಲಿ 150 ಕೆ. ಜಿ. ಹೂವುಗಳ ಪುಷ್ಪಾರ್ಚನೆ ಮೂಲಕ ಪಥ ಸಂಚಲನ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕ ಮಂಜುನಾಥ್ ಬಂಡಿ ತಿಳಿಸಿದ್ದಾರೆ.
Published by:Seema R
First published: