ಯುವ ದಸರಾ ವೇದಿಕೆಯಲ್ಲೇ ನಿವೇದಿತಾ-ಚಂದನ್ ಶೆಟ್ಟಿ ಲವ್ ಪ್ರೊಪೋಸಲ್; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ; ಉಸ್ತುವಾರಿ ಸೋಮಣ್ಣಗೂ ತರಾಟೆ

ನಿವೇದಿತಾ ಗೌಡ, ಚಂದನ್ ಶೆಟ್ಟಿ ಅವರ ನಿಶ್ಚಿತಾರ್ಥ ಬಹಳ ರೋಮ್ಯಾಂಟಿಕ್ ಆಗಿದ್ದಂತೂ ಹೌದು. ಆದರೆ, ಯುವ ದಸರಾದಂಥ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡ ವಿವಾದವೂ ಅವರಿಬ್ಬರನ್ನು ಸುತ್ತುವರಿದಿದೆ. ಖಾಸಗಿ ಕಾರ್ಯಕ್ರಮದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುವುದನ್ನು ಬಿಟ್ಟು ದಸರಾ ವೇದಿಕೆಯನ್ನು ಬಳಕೆ ಮಾಡಿಕೊಂಡಿದ್ದು ವ್ಯಾಪಕ ಟೀಕೆಗೂ ಕಾರಣವಾಗಿದೆ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

 • Share this:
  ಮೈಸೂರು(ಅ. 05): ಬಿಗ್ ಬಾಸ್ ಸೀಸನ್ ಫೈವ್​ನಲ್ಲಿ ರೋಮ್ಯಾಂಟಿಕ್ ಜೋಡಿಯಾಗಿ ಹೆಸರು ಮಾಡಿದ್ದ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಆ ಸೀಸನ್​ನ ವಿನ್ನರ್ ಚಂದನ್ ಶೆಟ್ಟಿ ಅವರು ಕಾರ್ಯಕ್ರಮದ ವೇದಿಕೆಯಲ್ಲೇ ನಿವೇದಿತಾ ಗೌಡ ಅವರಿಗೆ ಮದುವೆಯಾಗುವುದಾಗಿ ಪ್ರೊಪೋಸ್ ಮಾಡಿದ್ದಾರೆ. ನಿನ್ನೆ ರಾತ್ರಿ ಇವರಿಬ್ಬರದ್ದು ಪ್ರೊಪೋಸ್​ಗಷ್ಟೇ ಸೀಮಿತವಾಗದೇ ಒಂದು ರೀತಿಯ ಎಂಗೇಜ್ಮೆಂಟ್ ಕೂಡ ಆಗಿದೆ. ರಾತ್ರಿ 11ಗಂಟೆಗೆ ಮುಗಿಯಬೇಕಿದ್ದ ಯುವ ದಸರಾ ಕಾರ್ಯಕ್ರಮವು ಇವರಿಬ್ಬರ ಪ್ರೇಮ ಪ್ರಸಂಗದಿಂದಾಗಿ ಒಂದು ಗಂಟೆ ತಡವಾಗಿ ಮುಕ್ತಾಯಗೊಂಡಿದೆ.

  ನಿನ್ನೆಯ ಕಾರ್ಯಕ್ರಮದ ಮಧ್ಯದಲ್ಲಿ ಚಂದನ್ ಶೆಟ್ಟಿ ಅವರು ತಾನು ನಿವೇದಿತಾ ಅವರನ್ನು ಮದುವೆಯಾಗುತ್ತಿರುವುದಾಗಿ ಘೋಷಿಸಿದರು. ವೇದಿಕೆಯಲ್ಲಿ ಪ್ರೇಕ್ಷಕರ ಸಮ್ಮುಖದಲ್ಲೇ ನಿವೇದಿತಾಗೆ ಪ್ರೊಪೋಸ್ ಮಾಡಿದ ಚಂದನ್ ತನ್ನ ಪ್ರಿಯತಮೆಗೆ ಉಂಗುರ ಕೂಡ ತೊಡಿಸಿ ಆಲಂಗಿಸಿದರು. ಇಬ್ಬರೂ ಪರಸ್ಪರ ಮುತ್ತನ್ನೂ ವಿನಿಮಯ ಮಾಡಿಕೊಂಡರು.

  ಇದನ್ನೂ ಓದಿ: ಸದ್ದಿಲ್ಲದೆ ಎಂಗೇಜ್​ ಆದ ಬಿಗ್​ಬಾಸ್​ ಖ್ಯಾತಿಯ ಸ್ಯಾಂಡಲ್​ವುಡ್ ನಟಿ

  ನಿವೇದಿತಾ ಗೌಡ, ಚಂದನ್ ಶೆಟ್ಟಿ ಅವರ ನಿಶ್ಚಿತಾರ್ಥ ಬಹಳ ರೋಮ್ಯಾಂಟಿಕ್ ಆಗಿದ್ದಂತೂ ಹೌದು. ಆದರೆ, ಯುವ ದಸರಾದಂಥ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡ ವಿವಾದವೂ ಅವರಿಬ್ಬರನ್ನು ಸುತ್ತುವರಿದಿದೆ. ಖಾಸಗಿ ಕಾರ್ಯಕ್ರಮದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುವುದನ್ನು ಬಿಟ್ಟು ದಸರಾ ವೇದಿಕೆಯನ್ನು ಬಳಕೆ ಮಾಡಿಕೊಂಡಿದ್ದು ವ್ಯಾಪಕ ಟೀಕೆಗೂ ಕಾರಣವಾಗಿದೆ.

  ಗೌಡ-ಶೆಟ್ಟಿ ಜೋಡಿ ದಸರಾ ವೇದಿಕೆಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಸಂಗತಿಯನ್ನು ಯುವ ದಸರಾ ಉಪಸಮಿತಿಗೆ ತಿಳಿಸಿರಲಿಲ್ಲವಂತೆ. ನಿನ್ನೆಯ ಕಾರ್ಯಕ್ರಮದ ಪಟ್ಟಿಯಲ್ಲಿ ಚಂದನ್ ಶೆಟ್ಟಿ ಅವರ ಹಾಡುಗಾರಿಕೆ ಇತ್ತು. ನಿವೇದಿತಾ ಗೌಡ ಅವರು ವೇದಿಕೆ ಏರುವುದು ನಿಗದಿಯಾಗಿರಲಿಲ್ಲ. ಆದರೂ ಅವರಿಗೆ ವೇದಿಕೆ ಏರಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ರಿಶ್ಯಂತ್ ಅವರು ಉಪ ವಿಶೇಷಾಧಿಕಾರಿಯಾಗಿರುವ ಯುವ ದಸರಾ ಉಪಸಮಿತಿ ನಿರ್ಲಕ್ಷ್ಯ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಬೇರೆ ದಿನಗಳಲ್ಲಾದರೆ ರಾತ್ರಿ 11ಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಗಿಸಲು ಕಟ್ಟಪ್ಪಣೆ ಹೊರಡಿಸುವ ಸಮಿತಿಯು ಸೆಲಬ್ರಿಟಿಗಳಿಗೋಸ್ಕರ ಒಂದು ಗಂಟೆ ಹೆಚ್ಚುವರಿ ಸಮಯ ನೀಡಿದ್ದು ಯಾಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾಗುತ್ತಿದೆ.

  ಇದನ್ನೂ ಓದಿ: ಬಿಗ್ ಬಾಸ್ 7​ ಮೂಲಕ ಅದೃಷ್ಟ ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ ಕನ್ನಡದ ಈ ನಟಿ

  ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರನ್ನೂ ಟ್ರೋಲ್ ಮಾಡಲಾಗುತ್ತಿದೆ. ದಸರಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನೂ ಟ್ರೋಲಿಗರು ಬಿಟ್ಟಿಲ್ಲ. ನೆರೆ ಪರಿಹಾರಕ್ಕೆ ದುಡ್ಡಿಲ್ಲ ಎಂದವರು ಸೆಲಬ್ರಿಟಿಗಳ ನಿಶ್ಚಿತಾರ್ಥಕ್ಕೆ ಎಲ್ಲಿಂದ ದುಡ್ಡು ಬಂದು ಎಂದು ಕೆಲ ವ್ಯಕ್ತಿಗಳು ಪ್ರಶ್ನಿಸಿದ್ದಾರೆ. ದಸರಾದಲ್ಲಿ ಮದುವೆ, ಆಹಾರ ಮೇಳದಲ್ಲಿ ಬೀಗರ ಊಟ, ಯುವ ದಸರಾದಲ್ಲಿ ನಿಶ್ಚಿತಾರ್ಥ ಇತ್ಯಾದಿ ಥರಹಾವೇರಿ ಸ್ಟೇಟಸ್ ಮತ್ತು ಪೋಸ್ಟ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

  ಬಿಗ್ ಬಾಸ್-5 ಕಾರ್ಯಕ್ರಮ ವೇಳೆಯಿಂದಲೂ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆ ಸೀಸನ್​ನ ವಿನ್ನರ್ ಚಂದನ್ ಶೆಟ್ಟಿ ಅವರು ನಿವೇದಿತಾ ಅವರನ್ನು ವರಿಸುತ್ತಾರೆಂಬ ಸುದ್ದಿ ಆಗಿನಿಂದಲೇ ಚಾಲನೆಯಲ್ಲಿತ್ತು. ಅವರಿಬ್ಬರ ಪೋಷಕರೂ ಕೂಡ ಇವರ ವಿವಾಹಕ್ಕೆ ಸಮ್ಮತಿಸಿದ್ದಾರೆ. ಇಷ್ಟಾದರೂ ಚಂದನ್ ಶೆಟ್ಟಿ ಯುವ ದಸರಾ ವೇದಿಕೆಯಲ್ಲಿ ವಿವಾಹ ಘೋಷಿಸುವ ಪ್ರಮೇಯವೇನಿತ್ತು ಎಂಬ ಪ್ರಶ್ನೆ ಇದೆ.

  ದಸರಾ ವೇದಿಕೆಯಲ್ಲಿ ವೈಯಕ್ತಿಕ ವಿಚಾರ ಇರಬಾರದು ಎಂಬ ಸಂಗತಿ ತನಗೆ ತಿಳಿದಿರಲಿಲ್ಲ. ತಾನು ಕೇವಲ ಮನರಂಜನೆಗೆ ಮಾತ್ರ ಇದನ್ನು ಮಾಡಿದ್ದು. ತಾನು ಮಾಡಿಕೊಂಡಿದ್ದು ಎಂಗೇಜ್ಮೆಂಟ್ ಆಗಿರಲಿಲ್ಲ. ತಾನು ಮಾಡಿದ್ದು ತಪ್ಪು ಎಂದಾದರೆ ಕ್ಷಮೆ ಕೇಳುತ್ತೇನೆ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ಧಾರೆ.

  (ವರದಿ: ಪುಟ್ಟಪ್ಪ)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
  First published: