Chaitra Kotur - ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋಟೂರು ಮದುವೆ ಹಾದಿರಂಪ; ಒಂದೇ ದಿನಕ್ಕೆ ಬೀದಿಗೆ ಬಂದ ದಾಂಪತ್ಯ
ತನಗೆ ಇಷ್ಟವಿಲ್ಲದಿದ್ದರೂ ಸಂಘಟನೆಗಳ ಮೂಲಕ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ನಾಗಾರ್ಜುನ್ ಹೇಳಿದ್ದಾರೆ. ತಾವಿಬ್ಬರೂ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದೇವೆ ಎಂದು ಚೈತ್ರಾ ಕೋಟೂರ್ ತಿಳಿಸಿದ್ದಾರೆ. ಕೋಲಾರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ(ಮಾ. 29): ಕಳೆದ ಬಾರಿಯ ಸೀಸನ್ನ ಬಿಗ್ ಬಾಸ್ (ಸೀಸನ್ 7) ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಅವರ ಮದುವೆ ಒಂದೇ ದಿನಕ್ಕೆ ಹಾದಿರಂಪ ಬೀದಿರಂಪ ಆಗಿದೆ. ಕೋಲಾರ ಮೂಲದ ಚೈತ್ರಾ ಕೋಟೂರು ಅವರು ಮಂಡ್ಯ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ್ ಅವರನ್ನು ನಿನ್ನೆ ಭಾನುವಾರ ಮದುವೆಯಾಗಿದ್ದರು. ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇಗುಲದಲ್ಲಿ ಇಬ್ಬರ ವಿವಾಹ ಜರುಗಿತ್ತು. ತನಗೆ ಇಷ್ಟವಿಲ್ಲದಿದ್ದರೂ ಚೈತ್ರಾ ಕೋಟೂರು ಜೊತೆ ಮದುವೆ ಮಾಡಲಾಗಿದೆ ಎಂದು ನಾಗಾರ್ಜುನ್ ಆರೋಪಿಸಿದ್ದಾರೆ. ನಾಗಾರ್ಜುನ್ ಹಾಗೂ ಅವರ ಪೋಷಕರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ.
ಸಂಘಟನೆಗಳನ್ನ ಬಳಸಿಕೊಂಡು ತನ್ನನ್ನು ಬಲವಂತವಾಗಿ ಕೂಡಿಹಾಕಿ ದೇವಸ್ಥಾನದಲ್ಲಿ ಮದುವೆ ಮಾಡಿಸಲಾಗಿದೆ. ತನಗೆ ಮದುವೆ ಒಂಚೂರು ಇಷ್ಟವಿರಲಿಲ್ಲ. ಬೆದರಿಕೆಗೆ ಬಗ್ಗೆ ಚೈತ್ರಾಗೆ ತಾಳಿ ಕಟ್ಟಿದೆ ಎಂದು ನಾಗಾರ್ಜುನ್ ಹೇಳಿದ್ದಾರೆ. ನಾಗಾರ್ಜುನ್ ಕುಟುಂಬದವರು ಕೋಲಾರದ ಕುರುಬರ ಪೇಟೆಯಲ್ಲಿರುವ ಚೈತ್ರಾಳ ಮನೆಗೆ ನಿನ್ನೆ ಬಂದು ಗಲಾಟೆ ಮಾಡಿದ್ದಾರೆ. ನಂತರ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ಕೂಡ ಕೊಟ್ಟಿದ್ದಾರೆ. ಅದಾದ ಬಳಿಕ ನಾಗಾರ್ಜುನ್ ಅವರ ಪೋಷಕರು ಮಂಡ್ಯಕ್ಕೆ ವಾಪಸ್ಸಾಗಿದ್ದಾರೆ.
ಇತ್ತ, ನಾನು ಮತ್ತು ನಾಗಾರ್ಜುನ್ ಪರಸ್ಪರ ಪ್ರೀತಿಸಿ ನಂತರ ಮದುವೆಯಾಗಿದ್ದೇವೆ. ತನಗೆ ನಾಗಾರ್ಜುನ್ ಅಂದರೆ ಇಷ್ಟ. ಆತನ ಜೊತೆ ಹೋಗುವೆ ಎಂದು ಚೈತ್ರಾ ಕೊಟ್ಟೂರು ಅವರೂ ಕೂಡ ಪೊಲೀಸ್ ಠಾಣೆಯಲ್ಲಿ ವಾದಿಸಿದ್ದಾರೆ.
ಚೈತ್ರಾ ಕೋಟೂರ್ ಅವರು ಬಿಗ್ ಬಾಸ್ ಕನ್ನಡ ಸೀಸನ್ ಏಳರ ಸ್ಪರ್ಧಿಯಾಗಿದ್ದರು. ಆ ಶೋನ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಈಗ ಇವರ ವೈವಾಹಿಕ ಜೀವನ ಒಂದೇ ದಿನಕ್ಕೆ ಬೀದಿಗೆ ಬರುವಂತಾಗಿದ್ದು ದುರಂತವೇ ಸರಿ.
ವರದಿ: ರಘುರಾಜ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ