ರಾಯಚೂರು ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​; ಆತ್ಮಹತ್ಯೆ ಎಂದು ಧೃಡಪಡಿಸಿದ ಮರಣೋತ್ತರ ಪರೀಕ್ಷಾ ವರದಿ

ವಿದ್ಯಾರ್ಥಿನಿ ಮಧು ಪತ್ತಾರ್ ಮರಣೋತ್ತರ ಪರೀಕ್ಷೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕೆಲ ಹೋರಾಟಗಾರರು ಸಿಐಡಿ ಪೊಲೀಸರು ಪ್ರಕರಣದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣದ ಹೊಣೆಯನ್ನು ಸಿಬಿಐಗೆ ವಹಿಸಬೇಕು ಅಲ್ಲದೆ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿ ಪ್ರಾಮಾಣಿಕ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

MAshok Kumar | news18
Updated:May 11, 2019, 12:32 PM IST
ರಾಯಚೂರು ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​; ಆತ್ಮಹತ್ಯೆ ಎಂದು ಧೃಡಪಡಿಸಿದ ಮರಣೋತ್ತರ ಪರೀಕ್ಷಾ ವರದಿ
ಸಾಂದರ್ಭಿಕ ಚಿತ್ರ.
  • News18
  • Last Updated: May 11, 2019, 12:32 PM IST
  • Share this:
ರಾಯಚೂರು (ಮೇ.11) : ಇಡೀ ರಾಜ್ಯದ ಗಮನ ಸೆಳೆದಿದ್ದ ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅಸಹಜ ಸಾವು ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದ್ದು ಇದು ಕೊಲೆಯಲ್ಲ ಆತ್ಮಹತ್ಯೆ ಎಂಬ ಮರಣೋತ್ತರ ಪರೀಕ್ಷಾ ವರದಿ ಸಿಐಡಿ ಪೊಲೀಸರ ಕೈ ಸೇರಿದೆ.

ಏಪ್ರಿಲ್.15 ರಂದು ಮುಂಜಾನೆ ತನ್ನ ತಾಯಿಗೆ ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದ ವಿದ್ಯಾರ್ಥಿನಿ ಮಧು ನಾಪತ್ತೆಯಾಗಿದ್ದಳು. ಮಗಳು ಮನೆಗೆ ಬಾರದಿದ್ದಾಗ ಸ್ವಾಭಾವಿಕವಾಗಿ ಪೋಷಕರಿಗೆ ಆತಂಕ ಶುರುವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಎರಡು ದಿನಗಳ ಬಳಿಕ  ರಾಯಚೂರಿನ ಮಾಣಿಕ್ ಪ್ರಭು ದೇವಸ್ಥಾನದ ಗುಡ್ಡದಲ್ಲಿ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪೋಷಕರು ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿ ಸುಟ್ಟು ನಂತರ ಆಕೆಯನ್ನು ನೇಣು ಬಿಗಿಯಲಾಗಿದೆ ಎಂದು ಅನುಮಾನಿಸಿದ್ದರು, ಅಲ್ಲದೆ ಮೃತಳ ಸಹಪಾಠಿ ಸುದರ್ಶನ್ ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಪರಿಣಾಮ ಈ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು, ಪರಿಣಾಮ ಸುದರ್ಶನ್​ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ರಾಜ್ಯ ಸರ್ಕಾರ ನಂತರ ತನಿಖೆಯ ಹೊಣೆಯನ್ನು ಸಿಐಡಿ ಗೆ ವಹಿಸಿತ್ತು.

ಇದನ್ನೂ ಓದಿ : ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಬೀದಿಗಿಳಿದು ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು

ಕೊಲೆಯಲ್ಲ ಆತ್ಮಹತ್ಯೆ ಎಂದ ವರದಿ..!: ಪೋಷಕರು ನೀಡಿದ ದೂರಿನ ಅನ್ವಯ ಆರೋಪಿ ಸುದರ್ಶನ್​ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ಕೈಸೇರುವ ತನಕ ಇದು ಕೊಲೆಯೋ ಆತ್ಮಹತ್ಯೆಯೋ ಎಂದು ಸ್ಪಷ್ಟಪಡಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ಮರಣೋತ್ತರ ಪರೀಕ್ಷೆ ಸಿಐಡಿ ಪೊಲೀಸರ ಕೈಸೇರಿದ್ದು ವರದಿಯ ಪ್ರಕಾರ ಇದು ಕೊಲೆಯಲ್ಲ ಆತ್ಮಹತ್ಯೆ ಎಂಬುದು ದೃಢಪಟ್ಟಿದೆ.

ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಿದ್ಯಾರ್ಥಿನಿ ಮೇಲೆ ಯಾವುದೇ ಹಲ್ಲೆಯಾಗಿಲ್ಲ. ಆಕೆಯ ದೇಹದ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ಸಂಬಂಧಿಸಿದ ಯಾವುದೇ ಗುರುತುಗಳು ಪತ್ತೆಯಾಗಿಲ್ಲ. ಆಕೆಯ ಕುತ್ತಿಗೆ ಭಾಗಗಳಲ್ಲಿ ಮಾತ್ರ ಗಂಭೀರ ಗಾಯಗಳು ಕಂಡುಬಂದಿವೆ. ಆದರೆ, ನೇಣು ಬಿಗಿದುಕೊಂಡಿರುವ ಪರಿಣಾಮ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿ ಗಾಯದ ಕಲೆಗಳಾಗಿದ್ದು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿಲ್ಲ.

ಇನ್ನೂನೇಣು ಬಿಗಿದುಕೊಂಡ ಶವ ಮೂರು ದಿನಗಳ ಕಾಲ ಬಿಸಿಲಿನಲ್ಲಿ ಕಾದಿರುವ ಪರಿಣಾಮ ರಕ್ತ ಹೆಪ್ಪುಗಟ್ಟಿ ಇಡೀ ದೇಹ ಕಪ್ಪಗಾಗಿದೆ. ಇದನ್ನೇ ಕೆಲವರು ದೇಹವನ್ನು ಸುಟ್ಟು ನಂತರ ನೇಣು ಬಿಗಿದಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಅಲ್ಲದೆ ಘಟನೆ ನಡೆದ ಸ್ಥಳಲ್ಲಿ ಮೂರು ದಿನಗಳ ಕಾಲ ಬೇರೆ ಯಾವುದೇ ವ್ಯಕ್ತಿಗಳು ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿಲ್ಲ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಇದನ್ನೂ ಓದಿ : ರಾಯಚೂರು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್; ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು

ಡೆತ್​ನೋಟ್​ ಸೀಕ್ರೆಟ್​: ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆಯಲ್ಲ ಆತ್ಮಹತ್ಯೆ ಎಂಬುದು ದೃಢಪಟ್ಟಿದೆ. ಆದರೆ ಮೃತ ವಿದ್ಯಾರ್ಥಿನಿ ಮಧು ಪತ್ತಾರ್ ಬರೆದಿದ್ದಾಳೆ ಎನ್ನಲಾದ ಡೆತ್​ನೋಟ್​ ಸೀಕ್ರೆಟ್​ ಅನ್ನು ಭೇದಿಸುವುದು ಮಾತ್ರ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

ಮೃತ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ತಾನು ನಪಾಸಾದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಆಕೆ ಡೆತ್​ನೋಟ್​ನಲ್ಲಿ ಬರೆದಿದ್ದಳು. ಆದರೆ, ಎಲ್ಲಾ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದ ವಿದ್ಯಾರ್ಥಿನಿ ತನ್ನ ಡೆತ್​ನೋಟ್​ನಲ್ಲಿ ಹೀಗೇಕೆ ಬರೆದಿದ್ದಳು? ಅಥವಾ ಯಾರಾದರೂ ಆಕೆಯಿಂದ ಬೆದರಿಸಿ ಹೀಗೊಂದು ಡೆತ್​ನೋಟ್​ ಬರೆಸಿದ್ದರೆ? ಎಂದೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈ ಕುರಿತು ತನಿಖೆಯಾಗುತ್ತಿದೆ.

ಇದಕ್ಕಾಗಿ ಮಧು ಕೈಬರಹದ ಅಕ್ಷರಗಳ ಮಾದರಿಗಾಗಿ ಹುಡುಕಾಟ ನಡೆಸುತ್ತಿರುವ ಸಿಐಡಿ ಪೊಲೀಸ್ ಅಧಿಕಾರಿಗಳು ಮಾದರಿ ಸಿಕ್ಕ ನಂತರ ಡೆತ್​ನೋಟ್​ ಅನ್ನು ಎಫ್​ಎಸ್​ಎಲ್​ ಗೆ ಕಳುಹಿಸಲಿದ್ದಾರೆ. ಎಫ್​ಎಸ್​ಎಲ್​ ವರದಿ ಬಂದ ನಂತರ ಮಾತ್ರ ಈ ಡೆತ್​ನೋಟ್​ ಮಧು ಬರೆದಿದ್ದೆ? ಅಥವಾ ಬೇರೆಯವರು ಬರೆದಿದ್ದೆ? ಎಂಬ ಸತ್ಯ ಬಯಲಾಗಲಿದೆ.

ಇದನ್ನೂ ಓದಿ : ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

ಪ್ರಕರಣದ ಹಾದಿ ತಪ್ಪಿಸುತ್ತಿರುವ ಆರೋಪಿ : ಮಧು ಪತ್ತಾರ್ ಅಸಹಜ ಸಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಪ್ರಾಥಮಿಕ ತನಿಖೆ ವೇಳೆ, “ಮೃತ ವಿದ್ಯಾರ್ಥಿನಿ ಹಾಗೂ ಸುದರ್ಶನ್ ಸಹಪಾಠಿಗಳು. ಸುದರ್ಶನ್ ಹಲವು ದಿನಗಳಿಂದ ಪ್ರೀತಿಸುವಂತೆ ಆಕೆಯನ್ನು ಪೀಡಿಸುತ್ತಿದ್ದ. ಇದಕ್ಕೆ ಆಕೆ ಒಪ್ಪದಿದ್ದಾಗ ಎರಡು ಬಾರಿ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಅಲ್ಲದೆ ಆಕೆಯ ಸಾವಿನ ದಿನವೂ ಸಹ ಎಲ್ಲರ ಎದುರು ಆಕೆಯನ್ನು ಹೊಡೆದಿದ್ದ ಇದರಿಂದ ಮನನೊಂದು ಮಧು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ” ಎಂದು ತಿಳಿಸಿದ್ದರು.

ಆದರೆ, ಸಿಐಡಿ ಪೊಲೀಸರ ಎದುರು ಬೇರೆಯದೆ ಕಥೆ ಹೆಣೆಯುತ್ತಿರುವ ಆರೋಪಿ ಸುದರ್ಶನ್, “ನಾನು ಮತ್ತು ಮಧು 7 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ, ಜಾತಿ ನಮ್ಮ ಮದುವೆಗೆ ಅಡ್ಡವಾಗಿತ್ತು. ಮದುವೆ ವಿಚಾರಕ್ಕೆ ನಮ್ಮ ನಡುವೆ ಕೆಲವು ಬಾರಿ ಮನಸ್ತಾಪಗಳು ಉಂಟಾಗಿದ್ದು, ನಂತರ ಮತ್ತೆ ಎಲ್ಲವೂ ಸರಿಯಾಗಿತ್ತು. ಆದರೆ, ಆಕೆಗೆ ಮನೆಯಲ್ಲಿ ವಿದೇಶಿ ಸಂಬಂಧ ಹುಡುಕಿದ್ದರು. ಇದರಿಂದ ಮನನೊಂದು ಮಧು ಆತ್ಮಹತ್ಯೆಗೆ ಶರಣಾಗಿದ್ದಾಳೆ” ಎಂದು ತಿಳಿಸಿದ್ದಾನೆ.

ಆದರೆ, ಸುದರ್ಶನ್ ಹೇಳುತ್ತಿರುವ ಕಥೆಯನ್ನು ಸಿಐಡಿ ಪೊಲೀಸರು ನಂಬುವ ಸ್ಥಿತಿಯಲ್ಲಿಲ್ಲ. ಈ ನಡುವೆ ವಿದ್ಯಾರ್ಥಿನಿ ಮಧು ಪತ್ತಾರ್ ಮರಣೋತ್ತರ ಪರೀಕ್ಷೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕೆಲ ಹೋರಾಟಗಾರರು "ಸಿಐಡಿ ಪೊಲೀಸರು ಪ್ರಕರಣದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣದ ಹೊಣೆಯನ್ನು ಸಿಬಿಐಗೆ ವಹಿಸಬೇಕು ಅಲ್ಲದೆ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿ ಪ್ರಾಮಾಣಿಕ ತನಿಖೆಯಾಗಬೇಕು" ಎಂದು ಒತ್ತಾಯಿಸುತ್ತಿದ್ದಾರೆ.

(ವರದಿ ಶರಣಪ್ಪ ಬಾಚಲಾಪುರ್)

First published: May 11, 2019, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading