ಬೆಂಗಳೂರು (ಡಿ.10): ಟೀ ಕುಡಿದು ಹಣ ಕೊಡುವ ವಿಚಾರಕ್ಕೆ ಸಂಬಂಧಸಿದಂತೆ ಬೇಕರಿ ಕೆಲಸಗಾರರ ಮೇಲೆ ಪುಡಿ ರೌಡಿಗಳು ಹಲ್ಲೆ ಮಾಡಿದ್ದ ಘಟನೆ ಡಿಸೆಂಬರ್ 8ರ ರಾತ್ರಿ ನಗರದ ಕುಂದಲಹಳ್ಳಿ ಗೇಟ್ (Kundalahalli Gate) ವ್ಯಾಪ್ತಿಯಲ್ಲಿ ನಡೆದಿತ್ತು. ಏರಿಯಾದಲ್ಲಿ ಓಡಾಡಿಕೊಂಡಿದ್ದ ಪುಡಿ ರೌಡಿಗಳು (Rowdies) ಗೂಂಡಾಗಿರಿ ನಡೆಸಿ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ ಭಯಾನಕ ದೃಶ್ಯಗಳು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಈ ಪ್ರಕರಣಕ್ಕೆ ಬಿಗ್ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ ವಿಚಾರಣೆ ವೇಳೆ ಬೇಕರಿ ಪಕ್ಕ ಇದ್ದ ಟೀ ಅಂಗಡಿ ಮಾಲೀಕನೇ ಕೃತ್ಯದ ರೂವಾರಿ ಎಂಬ ಅಂಶ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದ ಹೆಚ್ಎಎಲ್ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ಬೇಕರಿ ಪಕ್ಕದಲ್ಲೇ ಟೀ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ್ ಎಂಬಾತನೇ ಕೃತ್ಯದ ಮೂಲಕ ರೂವಾರಿ ಎಂಬುವುದು ಪೊಲೀಸರಿಗೆ ತಿಳಿದು ಬಂದಿದೆಯಂತೆ. ಟೀ ಅಂಗಡಿ ಮಾಲೀಕನ ಕುಮ್ಮಕ್ಕಿನಿಂದಲೇ ಬೇಕರಿ ಕೆಲಸಗಾರರ ಮೇಲೆ ಪುಡಿ ರೌಡಿಗಳು ಹಲ್ಲೆ ಮಾಡಿದ್ದರಂತೆ.
ಟೀ ಅಂಗಡಿಯಲ್ಲಿ ವ್ಯಾಪಾರ ಆಗುತ್ತಿರಲಿಲ್ಲವಂತೆ
ಬಂಧಿತ ಆರೋಪಿ ಮಂಜುನಾಥ್ ಬೇಕರಿ ಎದುರೇ ಟೀ ಅಂಗಡಿ ಇಟ್ಟುಕೊಂಡಿದ್ದನಂತೆ. ಆದರೆ ಬೇಕರಿ ಇರೋ ಕಾರಣ ಟೀ ಅಂಗಡಿಯಲ್ಲಿ ಅಷ್ಟು ವ್ಯಾಪಾರ ಆಗುತ್ತಿರಲಿಲ್ಲವಂತೆ. ಈ ಬಗ್ಗೆಯೇ ಮಂಜುನಾಥ್ ಹಲವು ಬಾರಿ ಅದೇ ಏರಿಯಾದ ಹುಡುಗರ ಜೊತೆಗೆ ಹೇಳಿಕೊಂಡಿದ್ದನಂತೆ. ಇದೇ ಕಾರಣದಿಂದ ಬೇಕರಿ ಹುಡುಗರ ಮೇಲೆ ಹಲ್ಲೆ ಮಾಡಿ ಜಗಳ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಗುರುವಾರ ರಾತ್ರಿ ಹುಡುಗರೊಂದಿಗೆ ಬೇಕರಿ ಬಳಿ ಹೋಗಿದ್ದ ಮಂಜುನಾಥ್, ಟೀ ಕೇಳುವ ನೆಪದಲ್ಲಿ ಜಗಳ ಶುರು ಮಾಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: Bengaluru: ಮರದಿಂದ ಹೊರ ಬರ್ತಿದೆ ಕೆಂಪು ದ್ರವ; ಸ್ಥಳೀಯರಿಂದ ಪೂಜೆ
ಸದ್ಯ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿರುವ ಪೊಲೀಸರು ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದವರಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಆದರೆ ಗಲಾಟೆ ಸಂದರ್ಭದಲ್ಲಿ ಬೇಕರಿ ಸಿಬ್ಬಂದಿಗೆ ಹೆಲ್ಮೆಟ್ನಿಂದ ಹಲ್ಲೆ ಮಾಡಿದ್ದ ಟೀ ಅಂಗಡಿ ಮಾಲೀಕ ಮಂಜುನಾಥ್ ಹಾಗೂ ಮತ್ತೊಬ್ಬ ವ್ಯಾಪಾರಿ ಶ್ಯಾಮ್ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
50ಕ್ಕೂ ಹೆಚ್ಚು ಜನರಿಂದ ಘಟನೆ ಖಂಡಿಸಿ ಠಾಣೆ ಎದುರು ಪ್ರತಿಭಟನೆ
HAL ಬೇಕರಿಯಲ್ಲಿ ಪುಡಿರೌಡಿಗಳ ಪುಂಡಾಟ ಹಲ್ಲೆ ಖಂಡಿಸಿ ದಕ್ಷಿಣ ಕನ್ನಡ ಮೂಲದ ವ್ಯಾಪಾರಿಗಳು, ಉದ್ಯಮಿಗಳು ಎಚ್ಎಎಲ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. 50ಕ್ಕೂ ಹೆಚ್ಚು ಜನರು ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಠಾಣೆ ಬಳಿ ಆಗಮಿಸಿದ್ದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಘಟನೆ ಬಗ್ಗೆ ಠಾಣೆಯಲ್ಲಿ ಚರ್ಚೆ ನಡೆಸಿದ್ದರು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ನವೀನ್, ಪ್ರಜ್ವಲ್, ನಿತಿನ್ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: Bengaluru Traffic: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ITMS ತಂತ್ರಜ್ಞಾನ; ವಾಹನ ಸಂಚಾರ ಮತ್ತಷ್ಟು ಸುಗಮ
ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು
ಘಟನೆ ಸಂಬಂಧ ದೂರು ಸ್ವೀಕರಿಸುತ್ತಿದಂತೆ ತನಿಖೆ ಶುರು ಮಾಡಿದ್ದ ಪೊಲೀಸರು, ಹೆಚ್ಎಎಲ್ ಅಶ್ವತ್ಥ ನಗರದ ಕಾರ್ತಿಕ್, ಸಲ್ಮಾನ್ ಹಾಗೂ ಮಾರತ್ ಹಳ್ಳಿಯ ಕಾರ್ತಿಕ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು.
ಇನ್ನು, ಹಲ್ಲೆಗೊಳಾಗಿದ್ದ ನವೀನ್ ಕುಮಾರ್ ಶೆಟ್ಟಿ ಉಡುಪಿ ಜಿಲ್ಲೆಯ ಬೈಂದೂರಿನ ಮೂಲದವರಾಗಿದ್ದು, ಜೀವನೋಪಾಯಕ್ಕಾಗಿ ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿ ಬ್ರಹ್ಮಲಿಂಗೇಶ್ವರ ಹೆಸರಿನಲ್ಲಿ ಬೇಕರಿ ನಡೆಸುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ