ಮಂತ್ರಿ ಡೆವಲಪರ್ಸ್​ನಿಂದ ಬಿಬಿಎಂಪಿ ಜಾಗ ಒತ್ತುವರಿ; ಅಪಾರ್ಟ್​ಮೆಂಟ್​ನಲ್ಲಿರುವ 215 ಕುಟುಂಬಗಳಿಗೂ ತಟ್ಟಲಿದೆ ಬಿಸಿ

ಸರ್ಕಾರಿ ಒತ್ತುವರಿ ಜಾಗದಲ್ಲಿ ಮಂತ್ರಿ ಡೆವಲಪರ್ಸ್​ 4 ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದೆ. 17 ಅಂತಸ್ತಿನ 2 ಬಹುಮಹಡಿ ಕಟ್ಟಡಗಳು ಈಗಾಗಲೇ ನಿರ್ಮಾಣವಾಗಿದ್ದು, ಅದರಲ್ಲಿ ಜನರು ವಾಸವಾಗಿದ್ದಾರೆ. 30 ಅಂತಸ್ತಿನ 2 ಕಟ್ಟಡಗಳ ನಿರ್ಮಾಣಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.

ಬೆಂಗಳೂರಿನ ಮಂತ್ರಿ ಅಪಾರ್ಟ್​ಮೆಂಟ್

ಬೆಂಗಳೂರಿನ ಮಂತ್ರಿ ಅಪಾರ್ಟ್​ಮೆಂಟ್

  • Share this:
ಬೆಂಗಳೂರು (ಮಾ. 2): ಜಕ್ಕರಾಯನ ಕೆರೆ ಹಾಗೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಮಲ್ಲೇಶ್ವರಂನಲ್ಲಿ ಮಂತ್ರಿ ಅಪಾರ್ಟ್​ಮೆಂಟ್​​ ಕಟ್ಟಡ ನಿರ್ಮಿಸಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ಸರ್ವೆ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಡೆವಲಪರ್ಸ್​ ಒತ್ತುವರಿ ಮಾಡಿರುವ ಸರ್ಕಾರಿ ಜಾಗವನ್ನು ಪತ್ತೆ ಮಾಡಿದ್ದಾರೆ. ಇಂದು ಸರ್ವೆಯ ವರದಿಯನ್ನು ಅಧಿಕಾರಿಗಳು ಬಿಬಿಎಂಪಿಗೆ ಸಲ್ಲಿಕೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತುವರಿ ಜಾಗವನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿರುವುದರಿಂದ ಮಂತ್ರಿ ಡೆವಲಪರ್ಸ್​ ಮತ್ತು ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿರುವ 215 ಕುಟುಂಬಗಳಿಗೆ ದೊಡ್ಡ ಶಾಕ್ ಉಂಟಾಗಿದೆ.

ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್​ ಮತ್ತು ಮಂತ್ರಿ ಗ್ರೀನ್ ಅಪಾರ್ಟ್​ಮೆಂಟ್​ ಮೇಲೆ ಕೆರೆ ಒತ್ತುವರಿ ಹಾಗೂ ಬಿಬಿಎಂಪಿ ಜಾಗವನ್ನು ಕಬಳಿಸಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ವೆ ನಡೆಸಿ, ಒತ್ತುವರಿ ಜಾಗವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಕೋರ್ಟ್ ಆದೇಶ ನೀಡಿತ್ತು.

ಕೈಗಾರಿಕಾ ವಲಯಕ್ಕೆ ಮೀಸಲಿಟ್ಟಿದ್ದ ಈ ಸ್ಥಳವನ್ನು ವಸತಿ ಪ್ರದೇಶಕ್ಕೆ ಪರಿವರ್ತನೆ ಮಾಡಿ ಅಲ್ಲಿ ಬೃಹತ್ ವಸತಿ ಸಮುಚ್ಛಯ ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 400 ಕೋಟಿ ರೂ. ಮೌಲ್ಯದ 4.29 ಎಕರೆ ಪ್ರದೇಶದ ಈ ಭೂಮಿಯನ್ನು ಮರು ವಶಪಡಿಸಿಕೊಳ್ಳಲು ಕೋರ್ಟ್​ ಸೂಚಿಸಿತ್ತು. ಜಕ್ಕರಾಯನ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಹಾಗೂ ಸರ್ಕಾರಿ ಜಾಗದಲ್ಲಿ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿರುವ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ಕೆರೆ ಒತ್ತುವರಿ ಪ್ರಕರಣ; ಶೀಘ್ರವೇ ನೆಲಕ್ಕುರುಳುತ್ತಾ ಮಂತ್ರಿ ಮಾಲ್ ಕಟ್ಟಡ?

ಈ ಹಿನ್ನೆಲೆಯಲ್ಲಿ ಸರ್ವೆ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳ ತಂಡ ಒತ್ತುವರಿ ಜಾಗವನ್ನು ಪತ್ತೆ ಮಾಡಿದೆ. ಒತ್ತುವರಿ ಜಾಗದಲ್ಲಿ ಮಂತ್ರಿ ಡೆವಲಪರ್ಸ್​ 4 ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದೆ. 17 ಅಂತಸ್ತಿನ 2 ಬಹುಮಹಡಿ ಕಟ್ಟಡಗಳು ಈಗಾಗಲೇ ನಿರ್ಮಾಣವಾಗಿದ್ದು, ಅದರಲ್ಲಿ ಜನರು ವಾಸವಾಗಿದ್ದಾರೆ. 30 ಅಂತಸ್ತಿನ 2 ಕಟ್ಟಡಗಳ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿರುವ ಅಪಾರ್ಟ್​ಮೆಂಟ್​ನಲ್ಲಿ ಇರುವ 215 ಫ್ಲಾಟ್​​ಗಳ ಕುಟುಂಬಗಳಿಗೆ ಇದೀಗ ಆತಂಕ ಶುರುವಾಗಿದೆ. ಒಂದುವೇಳೆ ಕಾನೂನು ಪ್ರಕಾರವಾಗಿ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕಾದರೆ ಈ ಕುಟುಂಬಗಳು ತಮ್ಮ ಮನೆಯನ್ನು ತೆರವುಗೊಳಿಸಬೇಕಾಗುತ್ತದೆ.

ಇದನ್ನೂ ಓದಿ: ಆನೇಕಲ್​​ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಂದ ಕೋಟ್ಯಾಂತರ ರೂ. ಮೌಲ್ಯದ ಕೆರೆ ಜಾಗ ವಶ

ಏನಿದು ಪ್ರಕರಣ?:

ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ರಾಜಾ ಮಿಲ್ ಇದ್ದ ಸ್ಥಳದಲ್ಲಿ ಮಂತ್ರಿಮಾಲ್ ನಿರ್ಮಿಸಿರುವುದು, ಯಶವಂತಪುರ ರಸ್ತೆಯ ಕಿರ್ಲೋಸ್ಕರ್ ಕಾರ್ಖಾನೆ ಇದ್ದ ಸ್ಥಳದಲ್ಲಿ ಒರಾಯನ್ ಮಾಲ್ ಹಾಗೂ ಸುಜಾತಾ ಚಿತ್ರಮಂದಿರದ ಎದುರಿನ ಮಿನರ್ವ ಮಿಲ್ ಪ್ರದೇಶದಲ್ಲಿ ಶೋಭಾ ಅಪಾರ್ಟ್‍ಮೆಂಟ್ ನಿರ್ಮಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳನ್ನು ವಸತಿ ಪ್ರದೇಶಗಳನ್ನಾಗಿ ಅಥವಾ ವಸತಿ ಪ್ರದೇಶಗಳನ್ನು ಕೈಗಾರಿಕಾ ಪ್ರದೇಶಗಳನ್ನಾಗಿ ಭೂ ಪರಿವರ್ತನೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್​ನ ಆದೇಶವಿದ್ದರೂ ಕಾನೂನು ಬಾಹಿರವಾಗಿ ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಎನ್.ಆರ್. ರಮೇಶ್ ದೂರು ನೀಡಿದ್ದರು.

ಇದನ್ನೂ ಓದಿ: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ; ಸಿಎಲ್​ಪಿ ಸಭೆ ಕರೆದ ಸಿದ್ದರಾಮಯ್ಯ

3.31 ಎಕರೆ ವಿಸ್ತೀರ್ಣದ ಸ್ವತ್ತು ಹಾಗೂ 37 ಗುಂಟೆ ಕೆರೆ ಒತ್ತುವರಿ ಸೇರಿದಂತೆ 4.29 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಹಮಾರಾ ಶೆಲ್ಟರ್ಸ್​ ಸಂಸ್ಥೆಯವರು ಮಂತ್ರಿಮಾಲ್ ಮತ್ತು ಮಂತ್ರಿ ಗ್ರೀನ್ ವಸತಿ ಸಮುಚ್ಛಯವನ್ನು ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಫೆ. 28ರಂದು ಬಿಬಿಎಂಪಿ ಅಧಿಕಾರಿಗಳು ಸರ್ವೆ ನಡೆಸಿದ್ದರು. ಆ ಸರ್ವೆಯಲ್ಲಿ ಮಂತ್ರಿ ಡೆವಲಪರ್ಸ್​ನವರು ಅಪಾರ್ಟ್​ಮೆಂಟ್ ನಿರ್ಮಿಸಲು ಸರ್ಕಾರಿ ಜಾಗವನ್ನು ಕಬಳಿಸಿರುವುದು ಸಾಬೀತಾಗಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಮಂತ್ರಿ ಮಾಲ್​ ಕಟ್ಟಡ ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಅಧಿಕಾರಿಗಳು ಇಂದು ಬಿಬಿಎಂಪಿ ಗೆ ವರದಿ ಸಲ್ಲಿಸಲಿದ್ದಾರೆ.

 

 
First published: