ಸಚಿವಗಿರಿ ಸಿಕ್ಕರೂ ಆನಂದ್ ಸಿಂಗ್​ಗೆ ಸಂತಸವಿಲ್ಲ; ಹೊಸ ಜಿಲ್ಲೆ ರಚನೆ ವಿಚಾರದಲ್ಲಿ ರೆಡ್ಡಿ-ರಾಮುಲು ಪಾಳಯದ ಮೇಲುಗೈ

ಶಾಸಕ ಸೋಮಶೇಖರ ರೆಡ್ಡಿಯಂತೂ ನೂತನ ಜಿಲ್ಲೆ ಘೋಷಣೆಯಾದರೆ ಬಳ್ಳಾರಿಗೆ ಬೆಂಕಿ ಬೀಳುತ್ತೆ ಎಂದು ಎಚ್ಚರಿಸಿದ್ದರು. ಇದೀಗ ಸಿಎಂ ಹೇಳಿಕೆಯಿಂದ ಸಂತಸಗೊಂಡಿರುವ ರೆಡ್ಡಿ ಅಖಂಡ ಬಳ್ಳಾರಿ ಜಿಲ್ಲೆಯಾಗಿ ಉಳಿಯಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆನಂದ್ ಸಿಂಗ್, ಶ್ರೀರಾಮುಲು, ಸೋಮಶೇಖರ್ ರೆಡ್ಡಿ.

ಆನಂದ್ ಸಿಂಗ್, ಶ್ರೀರಾಮುಲು, ಸೋಮಶೇಖರ್ ರೆಡ್ಡಿ.

 • Share this:
  ಬಳ್ಳಾರಿ: ಸಚಿವ ಸ್ಥಾನ ಸಿಕ್ಕಿದ ನಂತರ ಸಂತಸದಲ್ಲಿರುವ ಆನಂದ್ ಸಿಂಗ್ ಅವರಿಗೆ ಸಿಎಂ ಯಡಿಯೂರಪ್ಪ ಅವರ ಆ ಒಂದು ಹೇಳಿಕೆ ಆನಂದ ಸಿಂಗ್ ಅವರ ಆನಂದವನ್ನೇ ಕಸಿದುಕೊಂಡುಬಿಟ್ಟಿದೆ.

  ಸಚಿವ ಸಂಪುಟದಲ್ಲಿ ಪ್ರಮುಖ ಆಹಾರ ಇಲಾಖೆ ಸಿಕ್ಕರೂ ಸಿಂಗ್ ಉಭಯ ಸಂಕಟದಲ್ಲಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ರೆಡ್ಡಿ-ರಾಮುಲು ಪಾಳಯ ಸಂತೋಷದಲ್ಲಿದೆ. ಇನ್ನೇನು  ವಿಜಯನಗರ ಜಿಲ್ಲೆ ಘೋಷಣೆಯಾಗಿಬಿಡುತ್ತೆ ಎನ್ನುವಷ್ಟರಲ್ಲಿಯೇ ಹೀಗೇಕಾಯಿತು? ಎಂದು ಆನಂದ್ ಸಿಂಗ್ ಸಿಎಂ ಮನೆ ಕಡೆ‌ ದೌಡಾಯಿಸಿದ್ದಾರೆ. ಸದ್ಯದ ಪರಿಸ್ಥಿತಿ ನೋಡುತ್ತಿದ್ದರೆ ನೂತನ ವಿಜಯನಗರ ಜಿಲ್ಲೆ‌ ವಿಚಾರದಲ್ಲಿ ಆನಂದ್ ಸಿಂಗ್​ಗೆ ಭಾರೀ ಹಿನ್ನಡೆಯಾಗಿದೆ. ಸಹಜವಾಗಿಯೇ ಇದನ್ನು ವಿರೋಧಿಸಿದ್ದ ರಾಮುಲು-ರೆಡ್ಡಿ ಪಾಳಯ ಮೆಲುಗೈ ಸಾಧಿಸಿದೆ. ಯಾಕೆಂದರೆ ಹುಬ್ಬಳ್ಳಿಯಲ್ಲಿ ಸಿಎಂ ಯಡಿಯೂರಪ್ಪ ನೀಡಿದ ಆ ಹೇಳಿಕೆ ನೂತನ ಸಚಿವ ಆನಂದ್ ಸಿಂಗ್ ಅವರ ಆನಂದವನ್ನೇ ಕಸಿದುಕೊಂಡಿದೆ.

  ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಜಿಂದಾಲ್ ಭೂ ಪರಾಭಾರೆ ಹಾಗೂ ವಿಜಯನಗರ‌ ಜಿಲ್ಲೆ ಸಂಬಂಧ ರಾಜೀನಾಮೆ ನೀಡಿದ್ದರು. ಆನಂತರ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣವಾಯಿತು. ಉಪ ಚುನಾವಣೆಯಿಂದಲೂ ಮುನ್ನಲೆಗೆ ಬಂದ ವಿಜಯನಗರ‌ ನೂತನ ಜಿಲ್ಲೆ‌ ವಿಷಯ ಆನಂದ್ ಸಿಂಗ್ ಅವರಿಗೆ  ಟ್ರಂಪ್‌ಕಾರ್ಡ್ ಆಗಿತ್ತು. ಹಂಪಿ ಉತ್ಸವದಲ್ಲಿ ಸಿಎಂ ನೂತನ ಜಿಲ್ಲೆ ಘೋಷಣೆಯಾಗಿಯೇ ಬಿಡುತ್ತೆ ಎಂದೇ ಆನಂದ್ ಸಿಂಗ್ ಉತ್ಸಾಹದಲ್ಲಿದ್ದರು. ಸಚಿವ ಸ್ಥಾನ ಘೋಷಣೆ ಮಾಡಿದ ಮೇಲೂ  ಸಚಿವ ಸ್ಥಾನಕ್ಕಿಂತ ವಿಜಯನಗರ‌ ಜಿಲ್ಲೆ ಘೋಷಣೆಯಾಗುತ್ತೆ ಎಂದು ಆನಂದ್ ಸಿಂಗ್ ಆಶಾಭಾವನೆಯಲ್ಲಿದ್ದಾರೆ.ಆದರೀಗ ಸಿಎಂ ಯಡಿಯೂರಪ್ಪ ಘೋಷಣೆಯ ಮಾತಿರಲಿ ಅದರ ಪ್ರಸ್ತಾವನೆಯೂ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಆನಂದ್ ಸಿಂಗ್  ಶಾಕ್‌ ನೀಡಿದ್ದಾರೆ.

  ಈ ನಡುವೆ ಸಚಿವ ಸಂಪುಟದಲ್ಲಿ ಪ್ರಮುಖ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಿಂಗ್​ಗೆ ದೊರೆತರೂ ಸಮಾಧಾನವಿಲ್ಲ. ಹೊಸಪೇಟೆಯಲ್ಲಿದ್ದ ಆನಂದ್‌ಸಿಂಗ್‌ ಇಂದು ಬೆಳಗ್ಗೆ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನು ನೇರವಾಗಿ ಭೇಟಿಯಾಗಿ ಚರ್ಚೆ ಮಾಡಿ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಈ ಬೆಳವಣಿಗೆ ರೆಡ್ಡಿ-ರಾಮುಲು ಪಾಳಯಕ್ಕೆ ಸಂತಸ ತಂದಿದೆ. ಯಾಕೆಂದರೆ ವಿಜಯನಗರ‌ ನೂತನ ಜಿಲ್ಲೆಗೆ ಆನಂದ್ ಸಿಂಗ್ ಸಮೇತ ನಿಯೋಗ ಹೋಗಿ ಸಿಎಂ ಭೇಟಿಯಾಗಿ ಬಂದಿದ್ರು. ಈ ಕುರಿತು ಸಿಎಂ ನೇತೃತ್ವದಲ್ಲಿ ಸಭೆಯೂ ಜರುಗಿತ್ತು. ಹೊಸ ಜಿಲ್ಲೆಗೆ ಸಚಿವ ರಾಮುಲು ಬಹಿರಂಗವಾಗಿ ವಿರೋಧಿಸಿದ್ದರು. ಶಾಸಕ ಸೋಮಶೇಖರ ರೆಡ್ಡಿಯಂತೂ ನೂತನ ಜಿಲ್ಲೆ ಘೋಷಣೆಯಾದರೆ ಬಳ್ಳಾರಿಗೆ ಬೆಂಕಿ ಬೀಳುತ್ತೆ ಎಂದು ಎಚ್ಚರಿಸಿದ್ದರು. ಇದೀಗ ಸಿಎಂ ಹೇಳಿಕೆಯಿಂದ ಸಂತಸಗೊಂಡಿರುವ ರೆಡ್ಡಿ ಅಖಂಡ ಬಳ್ಳಾರಿ ಜಿಲ್ಲೆಯಾಗಿ ಉಳಿಯಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಇದನ್ನು ಓದಿ: ನಾನು ಸಿಎಂ ಬಳಿ ಕೇಳಿದ್ದ ಖಾತೆಯೇ ಬೇರೆ, ಆದ್ರೆ ವೈದ್ಯಕೀಯ ಖಾತೆ ಕೊಟ್ಟಿದ್ದಾರೆ; ಡಾ.ಸುಧಾಕರ್ ಬೇಸರ

  ಆನಂದ್ ಸಿಂಗ್ ಅಂದುಕೊಂಡಂತೆ ಸಚಿವ‌ ಸ್ಥಾನ ದೊರೆತಿದೆ. ಪ್ರಮುಖ ಖಾತೆ ಆಹಾರ ಇಲಾಖೆಯು ಸಿಕ್ಕಿದೆ. ಆದರೆ ರಾಜೀನಾಮೆ ಕೊಡಲು ಕಾರಣವಾದ, ಚುನಾವಣಾ ಅಸ್ತ್ರವಾಗಿದ್ದ ವಿಜಯನಗರ ಜಿಲ್ಲೆ ಮಾತ್ರ ಸಿಎಂ‌ ಹೇಳಿಕೆಯಿಂದ ಸಾಕಷ್ಟು ಸಂಕಷ್ಟ ತಂದಿದೆ. ಇದೀಗ ಸಚಿವ ಆನಂದ್ ಸಿಂಗ್ ಎಲ್ಲ ಇದ್ದೂ ಏನೂ ಇಲ್ಲದಂತ ಪರಿಸ್ಥಿತಿಯಲ್ಲಿದ್ದಾರೆ. ಕೊಟ್ಟ ನೂತನ ಸಚಿವ ಖಾತೆ ನಿಭಾಯಿಸಬೇಕೋ ಅಥವಾ ವಿಜಯನಗರ‌ ಜಿಲ್ಲೆ‌ಗೆ ಮತ್ತೆ ಹೋರಾಟ ಮುಂದುವರೆಸಬೇಕಾ? ಎಂಬ ಚಿಂತೆಯಲ್ಲಿ ಆನಂದ್​ ಸಿಂಗ್​ ಇದ್ದಾರೆ.

  ವಿಶೇಷ ವರದಿ: ಶರಣು ಹಂಪಿ
  First published: