ದಕ್ಷಿಣ ಕನ್ನಡ (Dakshina Kannada) ಮತ್ತು ಕೊಡಗು (Kodagu) ಜಿಲ್ಲೆಯ ಅರಣ್ಯ ಭಾಗದಲ್ಲಿ ಉಂಟಾದ ಭೂಕುಸಿತದಿಂದಾಗಿ (Big Landslide) ಮತ್ತೆ ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಮತ್ತು ಬಾಳುಗೋಡು ಪರಿಸರದ ಜನ ಆತಂಕದಲ್ಲಿದ್ದಾರೆ. ಭಾನುವಾರ ತಡರಾತ್ರಿ ಕಲ್ಮಕಾರಿನ ಕಡಮಕಲ್ಲು ಅರಣ್ಯ ಭಾಗದಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ಗುಡ್ಡದ ಮಣ್ಣು (Soil) ಹಾಗು ಮರಗಳು (Wood) ಕಿಲೋಮೀಟರ್ ದೂರದವರೆಗೆ ಹೊಳೆಯಲ್ಲಿ ಹರಿದು ಮತ್ತೆ ಭಾರೀ ನಷ್ಟವನ್ನು ಉಂಟು ಮಾಡಿದೆ. ಕೊಲ್ಲಮೊಗ್ರು- ಉಪ್ಪುಕಳ ಸಂಪರ್ಕಿಸುವ ಸೇತುವೆ ಸಂಪೂರ್ಣ ಕುಸಿದಿದ್ದು, ಉಪ್ಪುಕಳ ಭಾಗದ ಸುಮಾರು 250 ಮಿಕ್ಕಿದ ಮನೆಗಳಿಗೆ ಸಂಪರ್ಕ ಕಡಿತವಾಗಿದೆ.
ಕಡಮಕಲ್ಲು ಅರಣ್ಯ ಭಾಗದ ಗುಡ್ಡದ ಒಂದು ಭಾಗದಲ್ಲಿ ಭಾರೀ ಪ್ರಮಾಣದ ಮಣ್ಣಿನ ಸವೆತವಾಗಿದ್ದು, ಕೆಸರು ಮಿಶ್ರಿತ ಈ ಮಣ್ಣು ಕಡಮಕಲ್ಲು, ಕಲ್ಮಕಾರು, ಕೊಲ್ಲಮೊಗ್ರು ಮೂಲಕ ಹರಿಹರಪಳ್ಳತ್ತಡ್ಕದವರೆಗೆ ಹೊಳೆಯಲ್ಲಿ ಹರಿದು ಬಂದಿದೆ.
ಸೇತುವೆಗಳಿಗೆ ಹಾನಿ
ಕೆಸರು ಮಣ್ಣಿನ ಜೊತೆ ಭಾರೀ ಪ್ರಮಾಣದ ಮರದ ರಾಶಿಗಳೂ ಹರಿದು ಬಂದಿದ್ದು, ಹಲವು ಸೇತುವೆಗಳಲ್ಲಿ ಬಿರುಕು ಬಿಟ್ಟಿದ್ದರೆ, ಇನ್ನು ಕೆಲವು ಸೇತುವೆಗಳಿಗೆ ಹಾನಿಯಾಗಿದೆ. ಕಳೆದ ಬಾರಿಯೂ ಈ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೂರಕ್ಕೂ ಮಿಕ್ಕಿದ ಮನೆಗಳಿಗೆ ತೊಂದರೆಯಾಗಿದ್ದು, ಹತ್ತಕ್ಕೂ ಮಿಕ್ಕಿದ ಮನೆಗಳು ಹಾಗೂ ಅಂಗಡಿಗಳು ಪ್ರವಾಹದ ನೀರಿನಿಂದಾಗಿ ಕೊಚ್ಚಿ ಹೋಗಿದ್ದವು.
ಇದನ್ನೂ ಓದಿ: Chikkamagaluru: ಚಿಕ್ಕಮಗಳೂರಿನ ಗಿರಿ-ಪರ್ವತಕ್ಕೆ ನೀಲಿ ಚಿತ್ತಾರ, ಕಾಫಿನಾಡಿನ ಬೆಟ್ಟ-ಗುಡ್ಡಗಳಿಗೆ ಹೊಸ ಬಣ್ಣ!
ಅಲ್ಲದೇ ಈ ಭಾಗದ ಹಲವು ಗ್ರಾಮಗಳಿಗೆ ಸಂಪರ್ಕಿಸುವ ಸೇತುವೆಗಳು ನೀರುಪಾಲಾಗಿದ್ದವು. ತಿಂಗಳ ಹಿಂದಿನ ಪ್ರವಾಹದ ಕರಿ ಛಾಯೆಯಿಂದ ಹೊರ ಬರುತ್ತಿರುವ ನಡುವೆಯೇ ಈ ಭಾಗದಲ್ಲಿ ಮತ್ತೆ ಪ್ರಕೃತಿ ನಡುಗಿದೆ.
ಮನೆಗಳಿಗೆ ನುಗ್ಗಿದ ನೀರು
ದಕ್ಷಿಣ ಕನ್ನಡ ಜಿಲ್ಲೆಯ ಆಗಸ್ಟ್ 28 ರಂದು ಭಾರೀ ಮಳೆಯಾಗದಿದ್ದರೂ, ಏಕಾಏಕಿ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿತ್ತು. ಸುಳ್ಯದ ಪಯಸ್ವಿನಿ ನದಿ ಅಪಾಯದ ಮಟ್ಟದಲ್ಲಿ ಹರಿದಿದ್ದು, ನದಿ ಪಾತ್ರದ ಹಲವು ಮನೆಗಳಿಗೂ ನೀರು ನುಗ್ಗಿದ ವರದಿಯಾಗಿದೆ.
ಅದೇ ರೀತಿ ಸುಳ್ಯದ ಅತೀ ಹೆಚ್ಚು ಮಳೆಯಾಗುವಂತಹ ಪ್ರದೇಶಗಳಾದ ಕೊಲ್ಲಮೊಗ್ರು, ಹರಿಹರ, ಕಲ್ಮಕಾರು ಭಾಗದಲ್ಲೂ ನಿನ್ನೆ ಮಳೆಯಾಗದಿದ್ದರೂ, ಬೆಟ್ಟಗಳು ದಿಢೀರ್ ಕುಸಿದು ಭಾರೀ ಪ್ರಮಾಣದ ನಷ್ಟವನ್ನು ಉಂಟು ಮಾಡಿದೆ.
ತಾತ್ಕಾಲಿ ಕಾಲು ಸೇತುವೆ ಸಹ ನಾಶ, ಸಂಪರ್ಕ ಕಡಿತ
ಕಳೆದ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿದ್ದ ಕೊಲ್ಲಮೊಗ್ರು,ಉಪ್ಪುಕಳ ಸಂಪರ್ಕಿಸುವ ಸೇತುವೆಯ ಒಂದು ಭಾಗ ಪ್ರವಾಹದ ನೀರಿನ ರಭಸಕ್ಕೆ ಸಿಲುಕಿ ಹಾನಿಗೊಳಗಾಗಿದ್ದು, ಈ ಭಾಗದ ಜನ ತಮ್ಮ ದೈನಂದಿನ ಕೆಲಸಕ್ಕಾಗಿ ಅಡಿಕೆ ಮರವನ್ನು ಹಾಸಿ ಕಾಲು ಸೇತುವೆ ಮಾಡಿದ್ದರು. ಆದರೆ ನಿನ್ನೆಯ ನೀರು ಈ ಕಾಲು ಸೇತುವೆಗೂ ಹಾನಿ ಮಾಡಿದ ಪರಿಣಾಮ ಈ ಭಾಗದ ಜನ ಪರ್ಯಾಯ ಸಂಪರ್ಕ ವ್ಯವಸ್ಥೆಯಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಕಡಮಕಲ್ಲು ಅರಣ್ಯದಲ್ಲಿ ಆಗಸ್ಟ್28 ರಂದು ಆದ ಭಾರೀ ಭೂಕುಸಿತದ ದೃಶ್ಯಗಳು ನಿನ್ನೆಯ ಭಯಾನಕತೆಯನ್ನು ಸಾರಿ ಹೇಳುತ್ತಿದೆ. ಮತ್ತೆ ಮಳೆಯಾದಲ್ಲಿ ಮತ್ತಷ್ಟು ಬೆಟ್ಟ ಕುಸಿಯುವ ಸಾಧ್ಯತೆಯೂ ಈ ಭಾಗದಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ: Kodagu: ಪಯಸ್ವಿನಿ ನದಿಯಲ್ಲಿ ದಿಢೀರ್ ಪ್ರವಾಹ; ಸಚಿವ ಮಾಧುಸ್ವಾಮಿ ವಿರುದ್ಧ ಸ್ಥಳೀಯರ ಆಕ್ರೋಶ
ಪಯಸ್ವಿನಿ ಪ್ರವಾಹ
ದೇವರಕೊಲ್ಲಿ, ಜೋಡುಪಾಲ ಸೇರಿದಂತೆ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಸುರಿದಿದೆ. ಇದರಿಂದಾಗಿ ಪಯಸ್ವಿನಿ ನದಿ (Payaswini River) ಉಕ್ಕಿ ಹರಿದಿದೆ. ನದಿಯಲ್ಲಿ ತೇಲಿ ಬಂದ ಬಾರಿ ಗಾತ್ರದ ಸಾವಿರಾರು ಮರದ ದಿಮ್ಮಿಗಳು ಕೊಯಿನಾಡಿನ ಕಿಂಡಿ ಅಣೆಕಟ್ಟೆಯಲ್ಲಿ ಸಿಲುಕಿದ್ದವು. ಕಿಂಡಿ ಅಣೆಕಟ್ಟು ಸಂಪೂರ್ಣ ಬ್ಲಾಕ್ ಆಗಿದ್ದರಿಂದ ಭಾರಿ ಪ್ರಮಾಣದ ನೀರು ಕೊಯಿನಾಡಿನ ಗ್ರಾಮಕ್ಕೆ ನುಗ್ಗಿ 7 ಮನೆಗಳು ಪ್ರವಾಹಕ್ಕೆ ಸಿಲುಕಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ