ಕರ್ನಾಟಕ ಉಪ ಚುನಾವಣೆ; ಜಿದ್ದಾಜಿದ್ದಿ ಹೋರಾಟಕ್ಕೆ ಸಿದ್ದವಾದ ಹೊಸಕೋಟೆ; ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್​ ಸರ್ಪಗಾವಲು

ಹೊಸಕೋಟೆ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಹಾಗೂ ಶರತ್ ಬಚ್ಚೇಗೌಡ ಅವರ ನಡುವೆ ಜಿದ್ದಾಜಿದ್ದಿ ಹೋರಾಟ ನಡೆಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಈ ಕ್ಷೇತ್ರವನ್ನು ಈಗಾಗಲೇ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದ್ದು, ಚುನಾವಣೆ ನಿಮಿತ್ತ ಪೊಲೀಸ್ ಇಲಾಖೆ ಬಿಗಿ ಭದ್ರತೆ ನೀಡಲು ಮುಂದಾಗಿದೆ.

MAshok Kumar | news18-kannada
Updated:December 4, 2019, 1:34 PM IST
ಕರ್ನಾಟಕ ಉಪ ಚುನಾವಣೆ; ಜಿದ್ದಾಜಿದ್ದಿ ಹೋರಾಟಕ್ಕೆ ಸಿದ್ದವಾದ ಹೊಸಕೋಟೆ; ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್​ ಸರ್ಪಗಾವಲು
ಶರತ್​ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್.
  • Share this:
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪ ಚುನಾವಣೆ ನಡೆಯಲಿದೆ. ರಾಣಿ ಬೆನ್ನೂರು ಕ್ಷೇತ್ರದ ಆರ್. ಶಂಕರ್ ಹಾಗೂ ಶಿವಾಜಿನಗರ ಕ್ಷೇತ್ರದ ರೋಷನ್ ಬೇಗ್ ಹೊರತುಪಡಿಸಿ ಉಳಿದ ಎಲ್ಲಾ 13 ಅನರ್ಹ ಶಾಸಕರ ಹಣೆಬರಹವನ್ನು ಬರೆಯಲು ಮತದಾರ ಸಿದ್ದವಾಗಿದ್ದಾನೆ. ಆದರೆ, ನಾಳಿನ ಉಪ ಚುನಾವಣೆಯಲ್ಲಿ ಈ ಎಲ್ಲಾ ಕ್ಷೇತ್ರಗಳ ಪೈಕಿ ರಾಜ್ಯ ರಾಜಕೀಯ ವಲಯದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಕ್ಷೇತ್ರ ಎಂದರೆ ಹೊಸಕೋಟೆ ವಿಧಾನಸಭಾ ಕ್ಷೇತ್ರ.

ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ರಾಜೀನಾಮೆಯಿಂದ ಹೊಸಕೋಟೆ ಕ್ಷೇತ್ರ ತೆರವಾಗಿತ್ತು. ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್, ಮೈತ್ರಿ ಸರ್ಕಾರದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕೈ ನಾಯಕರಿಗೆ ಬಿಗ್ ಶಾಕ್ ನೀಡಿದ್ದರು. ಅಲ್ಲದೆ, ಈ ಭಾರಿ ಇದೇ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.

ಮತ್ತೊಂದೆಡೆ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ, ತಮಗೆ ಟಿಕೆಟ್ ಲಭ್ಯವಾಗದ ಕಾರಣ ಅವರು ಇದೀಗ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಇದು ಸಾಮಾನ್ಯವಾಗಿ ಎಂಟಿಬಿ ನಾಗರಾಜ್ ಅವರ ತಲೆನೋವಿಗೆ ಕಾರಣವಾಗಿದೆ.

ಹೊಸಕೋಟೆ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಹಾಗೂ ಶರತ್ ಬಚ್ಚೇಗೌಡ ಅವರ ನಡುವೆ ಜಿದ್ದಾಜಿದ್ದಿ ಹೋರಾಟ ನಡೆಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಈ ಕ್ಷೇತ್ರವನ್ನು ಈಗಾಗಲೇ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದ್ದು, ಚುನಾವಣೆ ನಿಮಿತ್ತ ಪೊಲೀಸ್ ಇಲಾಖೆ ಬಿಗಿ ಭದ್ರತೆ ನೀಡಲು ಮುಂದಾಗಿದೆ.

ಹೊಸಕೋಟೆಯಲ್ಲಿ ಒಟ್ಟು 2,16,711 ಮತದಾರರಿದ್ದು, ಮತದಾರರಿಗೆ ಅನುಕೂಲವಾಗುವಂತೆ ಚುನಾವಣಾ ಅಧಿಕಾರಿಗಳು ಕ್ಷೇತ್ರದಲ್ಲಿ ಒಟ್ಟು 286 ಮತಗಟ್ಟೆಗಳನ್ನು ನಿರ್ಮಿಸಿದ್ದಾರೆ. ಈ ಪೈಕಿ 85 ಸೂಕ್ಷ್ಮ, 69 ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದ್ದು, ಈ ಎಲ್ಲಾ ಮತಗಟ್ಟೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಅಲ್ಲದೆ, ಮತದಾನ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಎಲ್ಲೂ ಅಹಿತಕರ ಘಟನೆ ನಡೆಯದಂತೆ ತಡೆಯುವ ಸಲುವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಲ್ಲದೆ, ಚುನಾವಣಾ ಕರ್ತವ್ಯಕ್ಕಾಗಿ ಪ್ರತ್ಯೇಕವಾಗಿ 1,400 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಹೊಸಕೋಟೆ ಚುನಾವಣಾ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Karnataka By Election: ನಾಳೆ 15 ಕ್ಷೇತ್ರಗಳಲ್ಲಿ ಮತದಾನ, ಅರ್ಹರಾಗ್ತಾರಾ ಅನರ್ಹರು?
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ