HOME » NEWS » State » BIDDING FOR GULBARGA DISTRICT BEELAVARA GRAMA PANCHAYAT ELECTION MEMBER SEATS VIDEO GOES VIRAL SAKLB SCT

ಗ್ರಾಮ ಪಂಚಾಯಿತಿ ಚುನಾವಣೆ; ಕಲಬುರ್ಗಿಯ ಬೀಳವಾರ ಸದಸ್ಯರ ಸ್ಥಾನ 26.55 ಲಕ್ಷಕ್ಕೆ ಹರಾಜು!

ಗ್ರಾಮ ಪಂಚಾಯಿತಿ ಚುನಾವಣೆಯ ಸಿದ್ಧತೆ ಬಿರುಸು ಪಡೆದುಕೊಂಡಿದೆ. ಗ್ರಾಮ ಪಂಚಾಯಿತಿ ಸ್ಥಾನಗಳು ಬಹಿರಂಗ ಹರಾಜು ಆಗುತ್ತಿರೋ ಪ್ರಕರಣ ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

news18-kannada
Updated:December 6, 2020, 11:39 AM IST
ಗ್ರಾಮ ಪಂಚಾಯಿತಿ ಚುನಾವಣೆ; ಕಲಬುರ್ಗಿಯ ಬೀಳವಾರ ಸದಸ್ಯರ ಸ್ಥಾನ 26.55 ಲಕ್ಷಕ್ಕೆ ಹರಾಜು!
ಬೀಳವಾರ ಗ್ರಾಮ ಪಂಚಾಯಿತಿ ಸದಸ್ಯರ ಹರಾಜಿನಲ್ಲಿ ಭಾಗಿಯಾಗಿರುವ ಜನರು
  • Share this:
ಕಲಬುರ್ಗಿ(ಡಿ. 6): ರಾಜಕೀಯದ ವಿಷಯಕ್ಕೆ ಬಂದರೆ ಹಳ್ಳಿಯಿಂದ ದೆಹಲಿಯವರೆಗೆ ಅನ್ನೋ ಮಾತು ಬರುತ್ತದೆ. ಆಡಳಿತದ ಬುನಾದಿಯಾಗಿರೋ ಗ್ರಾಮ ಪಂಚಾಯಿತಿಗೆ ಇದೀಗ ಚುನಾವಣೆಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿ ಧ್ಯೇಯವಿಟ್ಟುಕೊಂಡು ನಡೆಯುತ್ತಿರೋ ಚುನಾವಣೆಯೂ ಅಡ್ಡದಾರಿ ಹಿಡಿಯಲಾರಂಭಿಸಿದೆ. ಅದಕ್ಕೊಂದು ನಿದರ್ಶನ ಕಲಬುರ್ಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ನಡೆದಿರೋ ಬಹಿರಂಗ ಹರಾಜು. ಕಲಬುರ್ಗಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿರುವಂತೆಯೇ ಚುನಾವಣಾ ಬಿಸಿ ತಾರಕಕ್ಕೇರಲಾರಂಭಿಸಿದೆ.

ಗ್ರಾಮ ಪಂಚಾಯಿತಿ ಚುನಾವಣೆಯ ಸಿದ್ಧತೆ ಬಿರುಸು ಪಡೆದುಕೊಂಡಿದೆ. ಗ್ರಾಮ ಪಂಚಾಯಿತಿ ಸ್ಥಾನಗಳು ಬಹಿರಂಗ ಹರಾಜು ಆಗುತ್ತಿರೋ ಪ್ರಕರಣ ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬೀಳವಾರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವನ್ನು ಹೊಂದಿದೆ. ಗ್ರಾಮದಲ್ಲಿ 10 ಸದಸ್ಯ ಸ್ಥಾನಗಳಿವೆ. ವಾರ್ಡ್ ಸಂಖ್ಯೆ 1 ರ ನಾಲ್ಕು ಸ್ಥಾನಗಳಿಗೆ ಬಹಿರಂಗ ಹರಾಜು ಹಾಕಲಾಗಿದೆ. ನಾಲ್ಕು ಸ್ಥಾನಗಳು ಬರೋಬ್ಬರಿ 26.55 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬೀಳವಾರ ಗ್ರಾಮದಲ್ಲಿ ಹರಾಜು ಕೂಗುತ್ತಿರೋ ವೀಡಿಯೋ ಇದೀಗ ವೈರಲ್ ಆಗಿದೆ.

ಗ್ರಾಮ ಪಂಚಾಯಿತಿಗೆ 2.50 ಕೋಟಿ ರೂಪಾಯಿ ಅನುದಾನವಿದೆ. ಗ್ರಾಮ ಪಂಚಾಯಿತಿಗೆ ಡೈರೆಕ್ಟ್ ಎಂಟ್ರಿ ಕೊಡೋರು ಹರಾಜಿನಲ್ಲಿ ಭಾಗಿಯಾಗಿ ಎಂದು ವ್ಯಕ್ತಿ ಕೂಗ್ತಿರೋ ದೃಶ್ಯಗಳಿವೆ. ಜನರೂ ಸರ ಒಂದೊಂದು ದರ ಹೇಳುತ್ತಿದ್ದು, ದರ ಏರಿಸುತ್ತಲೇ ಹೋಗುತ್ತಿರೋ ದೃಶ್ಯಗಳಿವೆ. ಒಂದೊಂದು ಸ್ಥಾನಕ್ಕೂ ಲಕ್ಷಾಂತರ ರೂಪಾಯಿ ಬೆಲೆ ಕಟ್ಟಲಾಗಿದೆ.

ಇದನ್ನೂ ಓದಿ: ಕೊರೋನಾ ನಿಯಂತ್ರಣಕ್ಕೆ ಬೆಂಗಳೂರಲ್ಲಿ ದುಬಾರಿ ದಂಡ ಅನಿವಾರ್ಯ; ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನ 8.55 ಲಕ್ಷ ರೂಪಾಯಿಗೆ ಹರಾಜಾಗಿದ್ದರೆ, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಸ್ಥಾನ 7.25 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿದೆ. ಪರಿಶಿಷ್ಟ ಜಾತಿ ಪುರುಷ ಮೀಸಲಾದ ಸದಸ್ಯ ಸ್ಥಾನ 5.50 ಲಕ್ಷ ರೂಪಾಯಿಗೆ, ಪರಿಶಿಷ್ಟ ಪಂಗಡ ಮಹಿಳಾ ಸದಸ್ಯ ಸ್ಥಾನಕ್ಕೆ 5.25 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿದೆ. ಹರಾಜಿನಲ್ಲಿ ಸ್ಥಾನ ಗಿಟ್ಟಿಸಿಕೊಂಡವರು ನಿಗದಿತ ದಿನಾಂಕದೊಳಗಾಗಿ ಹಣ ಪಾವತಿಸಬೇಕು. ಇಲ್ಲದಿದ್ದಲ್ಲಿ ಸ್ಥಾನಗಳು ಬೇರೆಯವರ ಪಾಲಾಗುತ್ತವೆ ಎಂದು ಕಂಡೀಷನ್ ಬೇರೆ ಹಾಕಲಾಗಿದೆ.

ಹರಾಜು ನಡೆಸಿದವರು ಯಾರು, ಹರಾಜಿನಿಂದ ಬಂದ ಹಣ ಏನು ಮಾಡಲಾಗುತ್ತೆ ಎಂಬಿತ್ಯಾದಿಯ ಮಾಹಿತಿ ನೀಡಲು ಗ್ರಾಮಸ್ಥರ ಹಿಂದೇಟು ಹಾಕಿದ್ದಾರೆ. ಆದರೆ ಗ್ರಾಮದ ನೂರಾರು ಜನ ಹರಾಜು ಪ್ರಕ್ರಿಯೆ ವೇಳೆ ಉಪಸ್ಥಿತರಿದ್ದುದು ವಿಶೇಷ. ಯಾರೂ ಸಹ ಇದು ತಪ್ಪೆಂದು ಹೇಳೋ ಧೈರ್ಯವನ್ನೂ ಮಾಡಿಲ್ಲ. ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರೋ ಕೆಲಸ ನಡೆದಿದೆ ಎಂದು ಗ್ರಾಮದ ಕೆಲವರು ಆರೋಪ ಮಾಡಿದ್ದಾರೆ. ಹರಾಜು ಪ್ರಕ್ರಿಯೆ ಅಚ್ಚರಿಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರೋ ಯಡ್ರಾಮಿ ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ, ಕಾನೂನಿನಲ್ಲಿ ಬಹಿರಂಗ ಹರಾಜಿಗೆ ಅವಕಾಶವಿಲ್ಲ. ಆದರೂ ಬಹಿರಂಗ ಹರಾಜು ನಡೆದಿದೆ ಎಂದು ಕೆಲವರು ಹೇಳುತ್ತಿರೋದರಿಂದ ಗ್ರಾಮಕ್ಕೆ ಎಂ.ಸಿ.ಸಿ. ತಂಡವನ್ನು ಮತ್ತು ಕಾರ್ಯನಿರ್ವಾಹಕ ಅಧಿಕಾರಿಯನ್ನೂ ಕಳುಹಿಸಿದ್ದೇನೆ. ಯಾರೋ ವ್ಯಕ್ತಿ ಬಹಿರಂಗ ಹರಾಜು ಮಾಡಿದ ಕೂಡಲೇ ಉಳಿವರು ಚುನಾವಣೆಗೆ ನಿಲ್ಲೋಲ್ಲ ಅಂತ ಏನೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಡೆಯಬೇಕಾಗುತ್ತದೆ. ಎಂಸಿಸಿ ಟೀಂ ಮುಖ್ಯಸ್ಥರು ಮತ್ತು ಕಾರ್ಯನಿರ್ವಹಣಾಧಿಕಾರಿ ಕೊಡೋ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ನಾಯ್ಕೋಡಿ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by: Sushma Chakre
First published: December 6, 2020, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories