ತಿಂಗಳ ಬಳಿಕ ಸಂಚಾರಕ್ಕೆ ಮುಕ್ತವಾದ ಭೀಮಾ ಬ್ಯಾರೇಜುಗಳು; ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಜನರ ಓಡಾಟ ಆರಂಭ

ದ್ವಿಚಕ್ರ ವಾಹನ, ಕ್ರೂಸರ್ ಸೇರಿದಂತೆ ನಾನಾ ವಾಹನಗಳ ಮೂಲಕ ಈ ಬ್ಯಾರೇಜ್ ಕಂ ಬ್ರಿಡ್ಜ್ ಮೇಲೆ ವಾಹನಗಳ ಓಡಾಟ ಈಗ ಆರಂಭವಾಗಿದೆ.  ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ಉಭಯ ರಾಜ್ಯಗಳ ಭೀಮಾ ತೀರದ ಗ್ರಾಮಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಭೀಮಾ ನದಿ ಬ್ಯಾರೇಜ್

ಭೀಮಾ ನದಿ ಬ್ಯಾರೇಜ್

  • Share this:
ವಿಜಯಪುರ(ಅ. 30): ಭೀಮಾ ನದಿ ಪ್ರವಾಹದಲ್ಲಿ ಮುಳಗಡೆಯಾಗಿದ್ದ ವಿಜಯಪುರ ಜಿಲ್ಲೆಯ ಬ್ಯಾರೇಜುಗಳು ಸುಮಾರು ಒಂದು ತಿಂಗಳ ನಂತರ ಈಗ ಸಂಚಾರಕ್ಕೆ ಮುಕ್ತವಾಗಿವೆ. ಕರ್ನಾಟಕದ ವಿಜಯಪುರ ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಧ್ಯೆ ಹರಿಯುವ ಭೀಮಾ ನದಿಗೆ ಸಮಾನಾಂತರ ಗಡಿಯಲ್ಲಿ 8 ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ.  ಇದರಲ್ಲಿ ನಾಲ್ಕು ಬ್ಯಾರೇಜುಗಳನ್ನು ಕರ್ನಾಟಕ ನಿರ್ಮಿಸಿದ್ದರೆ, ಮತ್ತೆ ನಾಲ್ಕು ಬ್ಯಾರೇಜುಗಳನ್ನು ಮಹಾರಾಷ್ಟ್ರ ನಿರ್ಮಿಸಿದೆ.  ಭೀಮಾ ನದಿಯಲ್ಲಿ ಈ ಬಾರಿ ಭಾರಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳಿಂದ ಈ ಎಲ್ಲಾ ಬ್ಯಾರೇಜುಗಳು ನದಿ ನೀರಿನಲ್ಲಿ ಮುಳುಗಿದ್ದವು.  ಇದು ಭೀಮಾ ನದಿ ತೀರದ ಕರ್ನಾಟಕ ಮತ್ತು ಮಹಾರಾಷ್ಟ್ರದ ಗ್ರಾಮಸ್ಥರಿಗೆ ತೀವ್ರ ತೊಂದರೆಗೆ ಕಾರಣವಾಗಿತ್ತು. ಕರ್ನಾಟಕದ ವಿಜಯಪುರ ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಗಳಲ್ಲಿ ಸಮಾನಾಂತರ ಗಡಿಯಲ್ಲಿ ಈ ಭೀಮಾ ನದಿ ಹರಿಯುತ್ತದೆ. ಈ ನದಿಗೆ ವಿಜಯಪುರ-ಸೋಲಾಪುರ ಗಡಿಗಳ ಮಧ್ಯೆ ಎಂಟು ಕಡೆಗಳಲ್ಲಿ ಬ್ಯಾರೇಜುಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಉಭಯ ರಾಜ್ಯಗಳು ತಲಾ ನಾಲ್ಕರಂತೆ ಬ್ಯಾರೇಜುಗಳನ್ನು ನಿರ್ಮಿಸಿವೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ  ಗೋವಿಂದಪುರ-ಭಂಡಾರಕವಟೆ, ಉಮರಾಣಿ-ಲವಂಗಿ, ಮಹಾರಾಷ್ಟ್ರದ ಔಜ-ಶಿರನಾಳ, ಚಿಂಚಪೂರ-ಧೂಳಖೇಡ, ಕರ್ನಾಟಕದ ಚಣೆಗಾಂವ-ಬರೂರ, ಹಿಂಗಣಿ-ಆಳಗಿ ಮತ್ತು ಮಹಾರಾಷ್ಟ್ರದ ಖಾನಾಪುರ-ಪಡನೂರ ಹಾಗೂ ಹಿಳ್ಳಿ-ಗುಬ್ಬೇವಾಡ ಮಧ್ಯೆ ಎಂಟು ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ. ಈ ಬಾರಿ ಉಂಟಾದ ಭಾರಿ ಪ್ರವಾಹದಿಂದಾಗಿ ಈ ಎಲ್ಲ ಬ್ಯಾರೇಜುಗಳು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದ್ದವು.

20 ವರ್ಷಗಳ ಬಳಿಕ ಆನೇಕಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಇದೀಗ ಭೀಮಾ ನದಿಯಲ್ಲಿ ಪ್ರವಾಹ ಸಂಪೂರ್ಣ ಇಳಿಮುಖವಾಗಿದ್ದು, ನೀರಿನ ಹರಿವು ಮುಂದವರೆದಿದೆ.  ಅಲ್ಲದೇ, ಎಲ್ಲ ಬ್ಯಾರೇಜುಗಳು ಈಗ ಸಂಚಾರಕ್ಕೆ ಮುಕ್ತವಾಗಿವೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಬಳಿಯ ಭೀಮಾ ನದಿಯಲ್ಲಿ ಪ್ರವಾಹ ಸಂಪೂರ್ಣ ಇಳಿಮುಖವಾಗಿದ್ದು, ಇದೀಗ ಉಮರಾಣಿ-ಲವಂಗಿ ಬ್ಯಾರೇಜ್ ಸಂಚಾರಕ್ಕೆ ಮುಕ್ತವಾಗಿದೆ.  ಈ ಹಿನ್ನೆಲೆಯಲ್ಲಿ ಈಗ ಕರ್ನಾಟಕದಿಂದ ಮಹಾರಾಷ್ಟಕ್ಕೆ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಜನರು ಈ ಬ್ಯಾರೇಜುಗಳ ಮೂಲಕ ಓಡಾಟ ಆರಂಭಿಸಿದ್ದಾರೆ.

ದ್ವಿಚಕ್ರ ವಾಹನ, ಕ್ರೂಸರ್ ಸೇರಿದಂತೆ ನಾನಾ ವಾಹನಗಳ ಮೂಲಕ ಈ ಬ್ಯಾರೇಜ್ ಕಂ ಬ್ರಿಡ್ಜ್ ಮೇಲೆ ವಾಹನಗಳ ಓಡಾಟ ಈಗ ಆರಂಭವಾಗಿದೆ.  ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ಉಭಯ ರಾಜ್ಯಗಳ ಭೀಮಾ ತೀರದ ಗ್ರಾಮಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಕರ್ನಾಟಕದ ಜನ ಮಹಾರಾಷ್ಟ್ರದಲ್ಲಿ ಮತ್ತು ಮಹಾರಾಷ್ಟ್ರದ ಜನ ಕರ್ನಾಟಕದಲ್ಲಿ ಜಮೀನು ಹೊಂದಿದ್ದು, ಪ್ರತಿನಿತ್ಯ ಈ ಬ್ಯಾರೇಜುಗಳ ಮೂಲಕ ತಂತಮ್ಮ ಹೊಲಗಳಿಗೆ, ಬೇರೆ ಬೇರೆ ಕೆಲಸಗಳಿಗಾಗಿ ನಾನಾ ಗ್ರಾಮಗಳಿಗೆ ಸುತ್ತಾಡುತ್ತಾರೆ.  ಕಳೆದ ಸುಮಾರು ಒಂದು ತಿಂಗಳಿಂದ ಈ ಬ್ಯಾರೇಜುಗಳು ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಜನರು ಬೇರೆ ಮಾರ್ಗಗಳ ಮೂಲಕ ಸುಮಾರು 50 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಾಗಿತ್ತು.

ಈಗ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಭೀಮಾ ನದಿಯಲ್ಲಿಯೂ ನೀರಿನ ಹರಿವು ಕೂಡ ಗಣನೀಯವಾಗಿ ಇಳಿಮುಖವಾಗಿದೆ.  ಹೀಗಾಗಿ ಬ್ಯಾರೇಜುಗಳು ಈಗ ಸಂಚಾರಕ್ಕೆ ಮುಕ್ತವಾಗಿರುವುದು ಈ ಭಾಗದ ಗ್ರಾಮಸ್ಥರು ಎಂದಿನಂತೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಅನುಕೂಲವಾಗಿದೆ ಎಂದು ಉಮರಾಣಿ ಗ್ರಾಮದ ರೈತರಾದ ಅಪ್ಪು ಚಿಂಚೋಳಿ, ಶರಣಪ್ಪ ಬಿರಾದಾರ, ಸಣ್ಣಪ್ಪ ಚಿಂಚಲಿ ಮುಂತಾದವರು ಹರ್ಷ ವ್ಯಕ್ತಪಡಿಸಿದ್ದಾರೆ.
Published by:Latha CG
First published: