HOME » NEWS » State » BHEEMA TEERA SHOOT OUT CASE IG REVEALED ABOUT MURDER ATTEMPT ON MAHADEVA SAHUKARA BHYRAGONDA MVSV LG

ಭೀಮಾ ತೀರದ ಗುಂಡಿನ ದಾಳಿ ಪ್ರಕರಣ; ಕೊಲೆ ಯತ್ನಕ್ಕೆ ಕಾರಣವೇನು? ಐಜಿ ಬಿಚ್ಚಿಟ್ಟ ಇಂಚಿಂಚು ಮಾಹಿತಿ ಇಲ್ಲಿದೆ

ಈ ಕೊಲೆ ಯತ್ನದಲ್ಲಿ ಮಲ್ಲಿಕಾರ್ಜುನ ಚಡಚಣ ಕೈವಾಡದ ಸಾಧ್ಯತೆಯಿದೆ.  ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಯಿಲ್ಲ.  ಅವರಿಗೆ ಈಗ 70 ವರ್ಷ ವಯಸ್ಸಾಗಿದೆ.  ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.  ವಿಮಲಾಬಾಯಿ ಚಡಚಣ ಎಲ್ಲಿದ್ದಾರೆ ಗೊತ್ತಿಲ್ಲ.  ಅಲ್ಲಿಯವರೆಗೆ ತನಿಖೆ ಹೋಗಿಲ್ಲ.  ಕೆಲವು ಯುವಕರನ್ನು ಬೆಂಗಳೂರು, ಬಳ್ಳಾರಿಯಲ್ಲಿ ಸೆರೆ ಹಿಡಿಯಲಾಗಿದೆ.

news18-kannada
Updated:November 6, 2020, 11:05 AM IST
ಭೀಮಾ ತೀರದ ಗುಂಡಿನ ದಾಳಿ ಪ್ರಕರಣ; ಕೊಲೆ ಯತ್ನಕ್ಕೆ ಕಾರಣವೇನು? ಐಜಿ ಬಿಚ್ಚಿಟ್ಟ ಇಂಚಿಂಚು ಮಾಹಿತಿ ಇಲ್ಲಿದೆ
ಪೊಲೀಸ್ ಅಧಿಕಾರಿಗಳು
  • Share this:
ವಿಜಯಪುರ (ನ. 06):  ವಿಜಯಪುರ ಜಿಲ್ಲೆಯ ಕನ್ನಾಳ ಕ್ರಾಸ್ ಬಳಿ ಭೀಮಾ ತೀರದ ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನ. 2 ರಂದು ನಡೆದ ಫೈರಿಂಗ್ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ವಿಜಯಪುರದಲ್ಲಿ ಈ ವಿಷಯ ತಿಳಿಸಿದ ಬೆಳಗಾವಿ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ, ಈ ದಾಳಿಯ ಬಗ್ಗೆ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.  ಓರ್ವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿಯ ನಾಗಪ್ಪ ಉರ್ಫ ನಾಗರಾಜ ಪೀರಗೊಂಡ(28) ಮತ್ತೊಬ್ಬ ವಿಜಯಪುರ ನಗರದ ಕಿರಾಣಿ ವ್ಯಾಪಾರಿ ವಿಜಯ ತಾಳಿಕೋಟಿ.  ಇವರಲ್ಲಿ ನಾಗಪ್ಪ ಉರ್ಫ್ ನಾಗರಾಜ ಪೀರಗೊಂಡ ಟಿಪ್ಪರ್ ಚಲಾಯಿಸಿ ಸಾಹುಕಾರ ಕಾರ್ ಗೆ ಅಪಘಾತ ಮಾಡಿದ್ದ.  ಮತ್ತೊಬ್ಬ ವಿಜಯಪುರ ನಿವಾಸಿ ಮತ್ತು ಕಿರಾಣಿ ವ್ಯಾಪಾರಿ ವಿಜಯ ತಾಳಿಕೋಟೆ ಸಾಹುಕಾರ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಮಹಾದೇವ ಸಾಹುಕಾರ ಮೇಲೆ ದಾಳಿ ನಡೆಸಲು ನ.1 ರಂದು ಆರೋಪಿಗಳು ಸಭೆ ನಡೆಸಿದ್ದರು.  ನ. 2 ರಂದು ಅಪಘಾತ ಮತ್ತು ಫೈರಿಂಗ್ ಗೂ ಮುಂಚೆ ಎರಡು ಬಾರಿ ಕೊಲೆಗೆ ಸ್ಕೆಚ್ ಹಾಕಿದ್ದು ವಿಫಲವಾಗಿತ್ತು.  ಧರ್ಮರಾಜ ಚಡವಣ ಸಹಚರ ಮಡಿವಾಳಯ್ಯ ಹಿರೇಮಠ ಸ್ವಾಮಿ(27) ನೇತೃತ್ವದಲ್ಲಿ ಈ ಸ್ಕೆಚ್ ಹಾಕಲಾಗಿತ್ತು.  ಈತನಿಗೆ ವಿಜಯ ತಾಳಿಕೋಟಿ ಸಾಹುಕಾರ ಬಗ್ಗೆ ಮಾಹಿತಿ ನೀಡುತ್ತಿದ್ದ.  ನ. 2 ರಂದು ಮೊದಲಿಗೆ ಕಾತ್ರಾಳದಲ್ಲಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮಕ್ಕೆ ಸಾಹುಕಾರ ಆಗಮಿಸುವ ಬಗ್ಗೆ ಮಾಹಿತಿ ಇತ್ತು.  ಅಂದು ಬೆಳಿಗ್ಗೆ 3.30 ರಿಂದ ಬೆ. 8 ಗಂಟೆಯವರೆಗೆ ಅಲ್ಲಿ ಈ ಗ್ಯಾಂಗ್ ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರುವ ಟಿಪ್ಪರ್ ನೊಂದಿಗೆ ಕಾಯುತ್ತಿದ್ದರು.  ಅಲ್ಲದೇ, ಏಳೆಂಟು ಮೋಟರ್ ಸೈಕಲ್ ಗಳಲ್ಲಿ ತಲಾ ಇಬ್ಬರಿಂದ ಮೂರು ಜನ ಕುಳಿತುಕೊಂಡು ಹೋಗಿದ್ದನ್ನು ಅದನ್ನು ಅಲ್ಲಿನ ಜನ ನೋಡಿದ್ದರು.  ಆದರೆ, ಆಗ ಸಾಹುಕಾರ ಪ್ರವಚನ ಕಾರ್ಯಕ್ರಮಕ್ಕೆ ಬರಲಿಲ್ಲ.

ನಂತರ ಊಟ ಮಾಡಿದ ಯುವಕರು, ಬಳಿಕ ದೇವರ ನಿಂಬರಗಿ ಜಿಗಜಿಣಗಿ ಮಧ್ಯೆ ಕ್ರಾಸ್ ವೊಂದರ ಬಳಿ ಸಾಹುಕಾರ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು.  ಅಲ್ಲಿಯೂ ಟಿಪ್ಪರ್ ಬಂದಿತ್ತು.  ಆದರೆ, ಸಾಹುಕಾರ ಇಲ್ಲಿಯೂ ಬರಲಿಲ್ಲ.  ಆಗ ಎಲ್ಲರೂ ಅಲ್ಲಿಂದ ಚದುರಿ ಹೋದರು.  ನಂತರ ವಿಜಯ ತಾಳಿಕೋಟೆ ನೀಡಿದ ಮಾಹಿತಿಯಂತೆ ಎಲ್ಲರೂ ತಕ್ಷಣ ಸಂಘಟಿತರಾದರು.  ಮೂರನೇ ಪ್ಲ್ಯಾನ್ ನಂತೆ ಅಂದು ಸಾಹುಕಾರ ಚಿಂಚಲಿ ಪೈಪ್ ಫ್ಯಾಕ್ಟರಿಯಲ್ಲಿ ಊಟ ಮುಗಿಸಿ ತನ್ನ ಸ್ವಂತ ಊರು ಕೇರೂರಿಗೆ ಮರಳುತ್ತಿದ್ದ.  ಈ ಸಂದರ್ಭದಲ್ಲಿ ಸಾಹುಕಾರನನ್ನು ಹಿಂಬಾಲಿಸುತ್ತಿದ್ದ ವಿಜಯ ತಾಳಿಕೋಟೆ ಮಡಿವಾಳಯ್ಯ ಹಿರೇಮಠ ಸ್ವಾಮಿಗೆ ಈ ಕುರಿತು ಮಾಹಿತಿ ನೀಡಿದ.  ಸಾಹುಕಾರನ ಕಾರ್ ಕನ್ನಾಳ ಕ್ರಾಸ್ ಬಳಿ ಬರುತ್ತಿದ್ದಂತೆ ಟಿಪ್ಪರ ಅವರ ಕಾರಿಗೆ ಡಿಕ್ಕಿ ಹೊಡೆಯಿತು.  ನಂತರ ಆರೋಪಿಗಳು ಕಲ್ಲು ತೂರಾಟ ನಡೆಸಿ ಫೈರಿಂಗ್ ಮಾಡಿದರು.  ಪೆಟ್ರೋಲ್ ಬಾಂಬ್ ಕೂಡ ಎಸೆದು ಅಲ್ಲಿಂದ ಪರಾರಿಯಾದರು ಎಂದು ಅವರು ತಿಳಿಸಿದರು.

ಎರಡು ಕಾರಣಗಳಿಗಾಗಿ ಕೊಲೆ ಯತ್ನ

ಮಹಾದೇವ ಸಾಹುಕಾರ ಭೈರಗೊಂಡ ಕೊಲೆ ಯತ್ನಕ್ಕೆ ಎರಡು ಪ್ರಮುಖ ಕಾರಣಗಳಿವೆ.  ಚಡಚಣ ಮತ್ತು ಭೈರಗೊಂಡ ಕುಟುಂಬದ ಹಳೆಯ ವೈಷಮ್ಯ ಒಂದು ಕಾರಣ.  ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಗ್ಯಾಂಗ್ ಅಷ್ಟೊಂದು ಪ್ರಬಲವಾಗಿರಲಿಲ್ಲ.  ಈ ಹಿನ್ನೆಲೆಯಲ್ಲಿ ದಾರಿ ತಪ್ಪಿದ ಯುವಕರು ಒಂದು ಗ್ಯಾಂಗ್ ಕಟ್ಟಲು ಯೋಚಿಸಿದ್ದರು.  ಇದರಲ್ಲಿ ಧರ್ಮರಾಜ ಚಡಚಣ ಸಹಚರ ಮಡಿವಾಳಯ್ಯ ಹಿರೇಮಠ ಸ್ವಾಮಿ 25 ರಿಂದ 27 ಜನ ಯುವಕರನ್ನು ಸಂಘಟಿಸಿ ಡಿಎಂಸಿ ಹೆಸರಿನಲ್ಲಿ ಹೊಸ ಗ್ಯಾಂಗ್ ಕಟ್ಟಿದ್ದ.  ಫೈನಾನ್ಸ್ ಆರಂಭಿಸಿ ಹಣದ ವ್ಯವಹಾರ ಮಾಡುತ್ತ ಕೆಲವರಿಗೆ ಸಹಾಯ ಮಾಡಿದ್ದ.  ಈ ಮೂಲಕ ಹಲವು ಯುವಕರನ್ನು ಸೆಳೆದಿದ್ದ.  ಪುಣೆಯ ಹಲವರು ಈತನಿಗೆ ನೆರವಾಗಿದ್ದರು.  ಈ ಮೂಲಕ ಹೊಸ ಗ್ಯಾಂಗ್ ಲೀಡರ್ ಆಗಿದ್ದ.  ಈ ಹಿನ್ನೆಲೆಯಲ್ಲಿ ಹೊಸ ಗ್ಯಾಂಗ್ ಸೃಷ್ಠಿಯೂ ಈ ದಾಳಿಗೆ ಕಾರಣವಾಗಿದೆ.

ಜನವರಿಯಿಂದಲೇ ಈ ದಾಳಿಯ ಕುರಿತು ಸ್ಕೆಚ್ ಹಾಕಲಾಗಿತ್ತು.  ಆರೇಳು ತಿಂಗಳಿಂದ 25 ಜನರನ್ಮು ಸಂಘಟಿಸಿದ್ದ.  ಎಲ್ಲವನ್ನೂ ಗೌಪ್ಯವಾಗಿ ಇಡಲಾಗಿತ್ತು.  ಈ ಕೃತ್ಯದಲ್ಲಿ ವಿಜಯಪುರ ಸುತ್ತಮುತ್ತಲಿನ ನಾನಾ ಗ್ರಾಮಗಳು, ಉಮರಾಣಿ ಮತ್ತು ಪುಣೆಯ ಯುವಕರು ಭಾಗಿಯಾಗಿದ್ದಾರೆ.  ಡಿಎಂಸಿ ಅಂದರೆ ಧರ್ಮರಾಜ ಮಲ್ಲಿಕಾರ್ಜುನ ಚಡಚಣ ಹೆಸರಿನಲ್ಲಿ ಗ್ರೂಪ್​ ರಚಿಸಿಕೊಂಡಿದ್ದರು.  ಈ ಮೂಲಕ ಮಾಫಿಯಾ ನಡೆಸಬೇಕು.  ಡಾನ್ ಆಗಿ ಬೆಳೆಯಬೇಕು ಎಂಬ ಕನಸು ಹೊಂದಿದ್ದ ಯುವಕರು ಇದರಲ್ಲಿ ಭಾಗಿಯಾಗಿದ್ದಾರೆ.  ಹಣದ ದುರಾಸೆಯೂ ಕೆಲವರಿಗಿತ್ತು.  ಈ ದಾಳಿಯಲ್ಲಿ ಪಾಲ್ಗೊಂಡವರು ವಿಜಯಪುರ ಜಿಲ್ಲೆಯ ನಾನಾ ತಾಲೂಕುಗಳಿಗೆ ಸೇರಿದ್ದು, ಅವರೆಲ್ಲ ಆಯಾ ತಾಲೂಕಿನಲ್ಲಿ ಡಾನ್ ಆಗುವ ಕನಸು ಕಂಡಿದ್ದರು ಎಂದು ಐಜಿ ತಿಳಿಸಿದರು.

ಇವರಲ್ಲಿ ಬಹುತೇಕರು ಮೆಕ್ಯಾನಿಕ್, ಡ್ರೈವರ್ಸ್, ಗಾರೆ ಕೆಲಸದವರು, ಕೃಷಿ ಕೆಲಸ ಮಾಡುವವರು ಇದರಲ್ಲಿ ಭಾಗಿಯಾಗಿದ್ದಾರೆ.  ಎಲ್ಲರೂ ಶೋಕಿ ಜೀವನ ಬಯಸುತ್ತಿದ್ದರು.  ಇವರ ಜೀವನ ಶೈಲಿ ನೋಡಿದರೆ ಹಾಗೆ ಅನಿಸುತ್ತಿದೆ.  ದಾರಿ ತಪ್ಪಿದ ಯುವಕರು ಇವರಾಗಿದ್ದಾರೆ.  ಎಲ್ಲರೂ ಎಂಟರಿಂದ 10ನೇ ತರಗತಿಯ ವರೆಗೆ ಓದಿದವರಾಗಿದ್ದಾರೆ.  ಒಂದು ವಾರದ ಹಿಂದೆ ಇವರು ಪಿಸ್ತೂಲನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ಇವರಿಗೆ ಕೆಲವರು ತೋರಿಸಿದ್ದರು.  ಮಡಿವಾಳಯ್ಯ ಹಿರೇಮಠ ಸ್ವಾಮಿ ಸಿಕ್ಕ ಮೇಲೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಅವರು ತಿಳಿಸಿದರು.ಆರೋಪಿಗಳು ಹೇಗೆ ಸಿಕ್ಕರು ಗೊತ್ತಾ?

ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಟಿಪ್ಪರ್ ಅಪಘಾತ ಮಾಡಿದ ಚಾಲಕ ನಾಗಪ್ಪ ಉರ್ಫ್ ನಾಗರಾಜ ಪೀರಗೊಂಡ ಟಿಪ್ಪರ್ ಬಿಟ್ಟು ಓಡಿ ಹೋಗುವಾಗ ಹೆದರಿದ್ದ.  ಚಾಲಕನನ್ನು ಮತ್ತು ಟಿಪ್ಪರ್ ನ್ನು ವಿಜಯಪುರದಲ್ಲಿ ಕೆಲವರು ಫೈನಾನ್ಸ್ ಬಳಿ ನೋಡಿದ್ದರು.  ಅಲ್ಲದೇ, ವಿಜಯ ತಾಳಿಕೋಟಿಯನ್ನು ಕೂಡ ಜನರು ನೋಡಿದ್ದರು.  ಈ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.  ಆಗ ಆತನ ಬಳಿ ಟಿಪ್ಪರ್ ಕೀ ಸಿಕ್ಕಿದೆ.  ಅಲ್ಲದೇ, ಆದ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾನೆ.  ಈ ಶೂಟೌಟ್ ನಲ್ಲಿ ಸಾಹುಕಾರ ಕಡೆಯವರು ನಡೆಸಿದ ಪ್ರತಿ ದಾಳಿಯಲ್ಲಿ ಓರ್ವನ ಹಣೆಗೆ ಗುಂಡು ತಗುಲಿದೆ.  27 ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರಲ್ಲಿ ಹೆಚ್ಚಿನವರು ವಿಜಯಪುರದವರಾಗಿದ್ದಾರೆ ಎಂದು ಅವರು ತಿಳಿಸಿದರು.

ಘಟನಾ ಸ್ಥಳದಲ್ಲಿ ಸಿಕ್ಕ ವಸ್ತುಗಳು

ನ. 2 ರಂದು ಫೈರಿಂಗ್ ನಡೆದ ಘಟನಾ ಸ್ಥಳದಲ್ಲಿ ಒಂದು ಟಿಪ್ಪರ್, 5 ಬೈಕ್ ಗಳು ಪತ್ತೆಯಾಗಿದ್ದು, ಅವುಗಳಲ್ಲಿ ನಾಲ್ಕು ಕಳ್ಳತನ ಮಾಡಿದ ಬೈಕ್ ಗಳಾಗಿವೆ.  ಎರಡು ದೊಡ್ಡ ಕತ್ತಿಗಳು ಟಿಪ್ಪರ್ ನಲ್ಲಿ , ಹೊರಗಡೆ ಮೂರು ಕತ್ತಿಗಳು, ಎರಡು ಟ್ರೇಗಳಲ್ಲಿದ್ದ ಬಿಯರ್ ಬಾಟಲ್ ಗಳಲ್ಲಿ ತಯಾರಿಸಿದ ಪೆಟ್ರೋಲ್ ಬಾಂಬ್ ಗಳು, ಹಾರಿಸಲಾದ ಮತ್ತು ಜೀವಂತ ಗುಂಡುಗಳು ಪತ್ತೆಯಾಗಿವೆ.  ಒಟ್ಟು 13 ಸುತ್ತು ಫೈರಿಂಗ್ ಆಗಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಬಳಿಕದಿಂದ ಮೂರು ದಿನಗಳ ವರೆಗೆ ವಿಜಯಪುರ ಜಿಲ್ಲೆಯಲ್ಲಿ ನಾಕಾಬಂದಿ ಹಾಕಲಾಗಿತ್ತು.  ಹೀಗಾಗಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ.

ಅಲ್ಲದೇ, ಹಲವರನ್ನು ವಶಕ್ಕೆ ಪಡೆಯಲೂ ಕೂಡ ನೆರವಾಗಿದೆ.  ಈಗ ಈ ಕೇಸ್ ನ ಸಂಪೂರ್ಣ ಮಾಹಿತಿ ಸಿಕ್ಕಿದ್ದರಿಂದ ನಾಕಾಬಂದಿ ತೆಗೆಯಲಾಗಿದೆ.  ಈ ಘಟನೆ ಸಂಬಂಧ ಹಲವಾರು ತಂಡಗಳನ್ನು ರಚಿಸಲಾಗಿತ್ತು.  ಈಗ ಆ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.  9 ತಂಡಗಳು ಈಗ ನಾನಾ 29 ಕಡೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.  ಇಂಡಿ, ವಿಜಯಪುರ ನಗರದ ಗಾಂಧಿನಗರ, ಆಶ್ರಮ ರಸ್ತೆ, ಅತಾಲಟ್ಟಿ, ಸಾರವಾಡ, ಮಸೂತಿ ಸೇರಿದಂತೆ ನೆರೆಯ ಮಹಾರಾಷ್ಟ್ರ ಮತ್ತೀತರ ಕಡೆ ತನಿಖೆ ನಡೆಯುತ್ತಿದೆ.  ಆರೋಪಿಗಳ ಪತ್ತೆಗೆ ನೆರೆಯ ಮಹಾರಾಷ್ಟ್ರಕ್ಕೂ ವಿಜಯಪುರ ಪೊಲೀಸರು ತೆರಳಿದ್ದಾರೆ ಎಂದು ರಾಘವೇಂದ್ರ ಸುಹಾಸ ತಿಳಿಸಿದರು.

ಸಿಎಂ ಬದಲಾವಣೆ ಬಗ್ಗೆ ಮೋದಿ, ಅಮಿತ್ ಶಾ ಫೋನ್ ಮಾಡಿ ಹೇಳಿದ್ರಾ?; ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಕಿಡಿ

ಕಳೆದ ಮೂರು ದಿನಗಳಿಂದ ವಿಜಯಪುರದಲ್ಲಿಯೇ ಠಿಕಾಣಿ ಹೂಡಿರುವ ಬೆಳಗಾವಿ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ, ಈ ಪ್ರಕರಣದ ಉಳಿದ ಆರೋಪಿಗಳ ಬಂಧನಕ್ಕೂ ಜಾಲ ಬೀಸಲಾಗಿದೆ.  ಈ ಕೇಸ್ ಒಂದು ತಾರ್ಕಿಕ ಅಂತ್ಯ ಕಾಣುವವರೆಗೆ ತಾವು ಇಲ್ಲಿಯೇ ಇರುವುದಾಗಿ ತಿಳಿಸಿದರು.

ಈ ಕೊಲೆ ಯತ್ನದಲ್ಲಿ ಮಲ್ಲಿಕಾರ್ಜುನ ಚಡಚಣ ಕೈವಾಡದ ಸಾಧ್ಯತೆಯಿದೆ.  ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಯಿಲ್ಲ.  ಅವರಿಗೆ ಈಗ 70 ವರ್ಷ ವಯಸ್ಸಾಗಿದೆ.  ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.  ವಿಮಲಾಬಾಯಿ ಚಡಚಣ ಎಲ್ಲಿದ್ದಾರೆ ಗೊತ್ತಿಲ್ಲ.  ಅಲ್ಲಿಯವರೆಗೆ ತನಿಖೆ ಹೋಗಿಲ್ಲ.  ಕೆಲವು ಯುವಕರನ್ನು ಬೆಂಗಳೂರು, ಬಳ್ಳಾರಿಯಲ್ಲಿ ಸೆರೆ ಹಿಡಿಯಲಾಗಿದೆ.  ಅವರನ್ನು ಕರೆತಂದು ವಿಚಾರಣೆ ನಡೆಸಿದಾಗ ಹೆಚ್ಚಿನ ಮಾಹಿತಿ ಸಿಗಲಿದೆ.  ಭೈರಗೊಂಡ ಕಡೆಯವರು ನಿರ್ದಿಷ್ಟವಾಗಿ ದೂರು ನೀಡಿಲ್ಲ.  ಹಳೆಯ ವೈಷಮ್ಯದ ಹಿನ್ನೆಲೆ ಎಂದು ದೂರು ನೀಡಿದ್ದಾರೆ.

ಭೀಮಾ ತೀರದ ಹೆಸರು ಕೆಡಿಸುವುದು ಸರಿಯಲ್ಲ

ಇಂತಹ ಪ್ರಕರಣಗಳಿಗೆ ಭೀಮಾ ತೀರ ಎಂದು ನದಿ ಹೆಸರನ್ನು ಹೇಳಬಾರದು.  ಯಾರೋ 50 ಜನ ಪಡ್ಡೆ ಹುಡುಗರು, ಕ್ರಿಮಿನಲ್ಸ್ ಗಳಿಂದಾಗಿ ಈ ಹೆಸರು ಹೇಳುವುದು ಸರಿಯಲ್ಲ.  ಭೀಮಾ ತೀರದಲ್ಲಿ ಲಕ್ಷಾಂತರ ಜನ ವಾಸ ಮಾಡುತ್ತಾರೆ.  ಭೀಮಾ ತೀರದಲ್ಲಿ ಒಳ್ಳೆಯ ನಾಗರಿಕತೆಯಿದೆ.  ಒಳ್ಳೆಯ ಸಂಸ್ಕೃತಿಯಿದೆ.  ಈ ಹಿಂದೆ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ.  ಹೀಗಾಗಿ ಭೀಮಾ ತೀರ ಎಂದು ಹೇಳುವುದು ಬೇಡ ಎಂದು ರಾಘವೇಂದ್ರ ಸುಹಾಸ ತಿಳಿಸಿದರು.

ಈ ಪ್ರಕರಣದ ಆರೋಪಿಗಳ ವಿರುದ್ಧ ಕರ್ನಾಟಕ ಕ್ರಿಮಿನಲ್ ಆ್ಯಕ್ಟಿವಿಟೀಸ್ ಆ್ಯಕ್ಟ್ ನಡಿ ಕೇಸ್ ದಾಖಲಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಡಿವೈಎಸ್ಪಿ ಲಕ್ಷ್ಮಿನಾರಾಯಣ, ಸಿಪಿಐಗಳಾದ ಸುನಿಲ ಕಾಂಬಳೆ, ರವೀಂದ್ರ ನಾಯ್ಕೋಡಿ, ಸುರೇಶ ಬೆಂಡೆಗುಂಬಳ ಉಪಸ್ಥಿತರಿದ್ದರು.
Published by: Latha CG
First published: November 6, 2020, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories