ಹಾಸನ: 2023ರ ವಿಧಾನಸಭಾ ಚುನಾವಣೆ (Karnataka Election 2023) ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ (Political Parties) ಚಟುವಟಿಕೆಗಳು ಜೋರಾಗುತ್ತಿವೆ. ವಿಶೇಷ ಎಂದರೆ, ರಾಜ್ಯ ರಾಜಕಾರಣದಲ್ಲಿ ಹಾಸನ ಟಿಕೆಟ್ (Hassan Constituency) ವಿಚಾರ ಹೆಚ್ಚು ಗಮನ ಸೆಳೆಯುತ್ತಿದೆ. ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಜೆಡಿಎಸ್ ವರಿಷ್ಠರಿಗೆ ತಲೆನೋವಾಗಿದ್ದು, ಸಮಸ್ಯೆಗೆ ಮದ್ದೆರೆಯಲು ಇದೀಗ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಅವರು ಎಂಟ್ರಿ ಕೊಟ್ಟಿದ್ದಾರೆ. ಹಾಸನ ಟಿಕೆಟ್ ವಿಚಾರವನ್ನು ನಾನೇ ಫೈನಲ್ ಮಾಡ್ತೀನಿ. ಗೊಂದಲಕ್ಕೆ ತೆರೆ ಎಳೆದೇ ಹಾಸನಕ್ಕೆ ಬರುತ್ತೇನೆ ಎಂದು ಆಪ್ತರ ಮುಂದೆ ಗೌಡರು ಹೇಳಿದ್ದಾರಂತೆ. ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೊಟ್ಟರೆ ಸ್ವರೂಪ್ ಬೆಂಬಲಿಗರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಇದೆ. ಸ್ವರೂಪ್‌ಗೆ ಟಿಕೆಟ್ ಕೊಟ್ಟರೆ ರೇವಣ್ಣ ಕುಟುಂಬ ತಟಸ್ಥವಾಗುವ ಸಾಧ್ಯತೆ ಇದೆ. ಆದ್ದರಿಂದ ಪಂಚರತ್ನ ಯಾತ್ರೆಯಿಂದ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಾಪಾಸ್ಸಾಗಲಿ. ನಾನೇ ಗೊಂದಲ ಬಗೆಹರಿಸುತ್ತೇನೆ ಎಂದು ಗೌಡರು ಹೇಳಿದ್ದಾರಂತೆ.
ದೇವೇಗೌಡರು ಕುಳಿತುಕೊಂಡು ತೀರ್ಮಾನ ಮಾಡುತ್ತಾರೆ
ಈ ನಡುವೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲ ಕುರಿತಂತೆ ಮಾಜಿ ಸಿಎಂ ಹೆಚ್.ಡಿ ಕುಮಾರ ಸ್ವಾಮಿ ಹೇಳಿಕೆಗೆ ಎಂಎಲ್‌ಸಿ ಸೂರಜ್ ರೇವಣ್ಣ ಟಾಂಗ್ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹರದೂರು ಗ್ರಾಮದಲ್ಲಿ ಮಾತನಾಡಿದ ಎಂಎಲ್‌ಸಿ ಸೂರಜ್ ರೇವಣ್ಣ, ಹೆಚ್ಡಿ ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ರಾಜಕಾರಣಿ ಇದ್ದಾರೆ. ನಾವು ಅವರ ಬಗ್ಗೆ ಮಾತನಾಡೋದು ಸೂಕ್ತ ಅಲ್ಲ. ಅವರ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿರುತ್ತಾರೆ, ಅದು ನಮಗೆ ಸಂಬಂಧವಿಲ್ಲ. ಇರುವ ವಿಷಯ ಹೇಳಬೇಕೆಂದರೆ ಇವತ್ತು ಹಾಸನ ಜಿಲ್ಲೆ ತೆಗೆದುಕೊಂಡಾಗ ರೇವಣ್ಣ ಸಾಹೇಬರು, ದೇವೇಗೌಡರು ಕುಳಿತುಕೊಂಡು ತೀರ್ಮಾನ ಮಾಡುತ್ತಾರೆ. ದೇವೇಗೌಡರ ತೀರ್ಮಾನವೇ ಅಂತಿಮ ತೀರ್ಮಾನ.
ಇದನ್ನೂ ಓದಿ: Bhavani Revanna: ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ; ವೇದಿಕೆಯಲ್ಲಿ ಸ್ವಯಂ ಘೋಷಿಸಿಕೊಂಡ ಭವಾನಿ ರೇವಣ್ಣ
ಸ್ವರೂಪ್ ಟಿಕೆಟ್ಗೆ ಬೇಡಿಕೆ ಇಟ್ಟಿರಬಹುದು!
ಹೆಚ್ಡಿ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡುವ ವಿಷಯವಲ್ಲ. ಸ್ವರೂಪ್ ಅವರಿಗೆ ಪಕ್ಷದ ಅಭ್ಯರ್ಥಿ ಆಗಬೇಕು ಅನ್ನುವ ಆಕಾಂಕ್ಷೆ ಇದೆ. ಸ್ವರೂಪ್ ಅವರು ಹೋಗಿ ಬೇಡಿಕೆ ಇಟ್ಟಿರಬಹುದು. ಅದರಿಂದ ಕುಮಾರಸ್ವಾಮಿ ಅವರು ಆ ರೀತಿ ಹೇಳಿಕೆ ಕೊಟ್ಟಿರಬಹುದು. ಆದರೆ ರೇವಣ್ಣ, ಕುಮಾರಣ್ಣ, ದೇವೇಗೌಡರ ಸಮ್ಮುಖದಲ್ಲಿ ಎಲ್ಲಾರೂ ಕುಳಿತುಕೊಂಡು ಮಾತಾಡಿ ಒಂದು ಅಂತಿಮವಾದ ನಿರ್ಧಾರಕ್ಕೆ ಬರುತ್ತೇವೆ.
ಭವಾನಿ ರೇವಣ್ಣ ಹಾಸನಕ್ಕೆ ಸೂಕ್ತ ಅಭ್ಯರ್ಥಿ
ಭವಾನಿ ರೇವಣ್ಣ ಅವರಿ ಹಾಸನಕ್ಕೆ ಅನಿವಾರ್ಯ ಅಲ್ಲ, ಆದರೆ ಅವರು ಸೂಕ್ತ ಎಂದು ಹೇಳಲು ಬಯಸುತ್ತೇನೆ. ನಾನು ರಾಜಕಾರಣದಲ್ಲಿ ಕಿರಿಯ ವಯಸ್ಸಿನವನು, ಒಂದು ವರ್ಷದಿಂದ ಎಂಎಲ್‌ಸಿ ಆಗಿದ್ದೀನಿ. ನಾನು ನೂಡೆಲ್ ಕ್ಷೇತ್ರ ತಗೊಂಡು ಪ್ರತಿಯೊಂದು ಕಾರ್ಯಕ್ರಮಗಳಿಗೂ ಅಟೆಂಡ್ ಮಾಡಿ, ಜನರ ಮಿಡಿತವನ್ನು ನೋಡಿದ್ದೇನೆ.
ನಮ್ಮ ತಾಯಿ ಅಭ್ಯರ್ಥಿ ಆಗಬೇಕು ಅನ್ನುವ ಉದ್ದೇಶ ಅಲ್ಲ. ನಾವು ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡಬೇಕಿದೆ. 2024ಕ್ಕೆ ಲೋಕಸಭೆ ಚುನಾವಣೆ ಬರುತ್ತಿದೆ. ಈಗಿನಿಂದಲೇ ಇದಕ್ಕೆ ಒಂದು ಬುನಾದಿ, ನಾವು ಮಾಡಲೇಬೇಕಿದೆ. ನಾವು ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚಿನ ರೀತಿ ಸಂಘಟನೆ ಮಾಡಬೇಕಂದರೆ, ಇದೊಂದು ಬುನಾದಿ ಎಂದು ಹೇಳಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ