ಬೆಂಗಳೂರಿನ ನಿಮ್ಹಾನ್ಸ್ ರೋಗಿಗಳ ಹಸಿವು ನೀಗಿಸುತ್ತಿದೆ ಅಕ್ಷಯ ಅನ್ನ ದಾಸೋಹ ಸಂಸ್ಥೆ

ಒಂದು ಒಳ್ಳೆಯ ಕೆಲಸ ಮಾಡಲು ಹೊರಟಾಗ ಅದಕ್ಕೆ ಅನೇಕರು ಬೆಂಬಲ ನೀಡುತ್ತಾರೆ ಎನ್ನುವುದಕ್ಕೆ ಭಾಸ್ಕರ್​ ರೆಡ್ಡಿ ಕೆಲಸ ಉತ್ತಮ ಉದಾಹರಣೆ. ಮೊದಲಿಗರಾಗಿ ಇದನ್ನು ಆರಂಭಿಸಿದ್ದು ಇಬ್ಬರು ಮಾತ್ರ. ಈಗ ಇದಕ್ಕೆ ಸ್ಪಾನ್ಸರ್​ ಆಗಿ ನಿಂತವರ ಸಂಖ್ಯೆ 80ಕ್ಕೆ ಏರಿಕೆ ಆಗಿದೆಯಂತೆ.

Rajesh Duggumane | news18-kannada
Updated:December 29, 2019, 8:43 AM IST
ಬೆಂಗಳೂರಿನ ನಿಮ್ಹಾನ್ಸ್ ರೋಗಿಗಳ ಹಸಿವು ನೀಗಿಸುತ್ತಿದೆ ಅಕ್ಷಯ ಅನ್ನ ದಾಸೋಹ ಸಂಸ್ಥೆ
ನಿಮ್ಹಾನ್ಸ್​ ರೋಗಿಗಳಿಗೆ ವರದಾನವಾದ ಅಕ್ಷಯ ಅನ್ನ ದಾಸೋಹ ಸಂಸ್ಥೆ
  • Share this:
ಬೆಂಗಳೂರು (ಡಿ. 29): ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡುತ್ತಾರೆ. ಬೇರೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ. ಇಂಥ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ-ಭಾನುವಾರ ಕ್ಯಾಂಟೀನ್​ ಲಭ್ಯವಿರುವುದಿಲ್ಲ. ಹೀಗಾಗಿ ರೋಗಿಗಳು ಮತ್ತು ರೋಗಿಗಳನ್ನು ನೋಡಲು ಬರುವವರು ಸಾಕಷ್ಟು ತೊಂದರೆ ಅನುಭವಿಸುವುದು ಸಾಮಾನ್ಯವಾಗಿತ್ತು. ಇದೇ ಕಾರಣಕ್ಕಾಗಿ "ಅಕ್ಷಯ ಅನ್ನ ದಾಸೋಹ" ಸಂಸ್ಥೆ ರೋಗಿಗಳಿಗೆ ಅನ್ನದಾನ ಮಾಡುತ್ತಿದೆ. ಈ ದಾಸೋಹ ಕಾರ್ಯಕ್ರಮ ಇದೀಗ 100 ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದು ಆರಂಭವಾಗಿದ್ದು ಹೇಗೆ? ಅಸಲಿಗೆ ಇದರ ಉಪಯೋಗವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ನಿಮ್ಹಾನ್ಸ್​​ಗೆ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಹೀಗೆ ಬರುವ​​ ರೋಗಿಗಳು ಇಲ್ಲಿ ಶನಿವಾರ-ಭಾನುವಾರ ಕ್ಯಾಂಟಿನ್​ ಇರದ ಕಾರಣ ಆಹಾರಕ್ಕಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಶನಿವಾರ-ಭಾನುವಾರ ಹೊರಗಿನ ತಿಂಡಿಗೆ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಇದು ರೋಗಿಗಳ ಜೇಬಿಗೆ ಭಾರವಾಗುತ್ತಿತ್ತು. ಇದನ್ನು ಅರಿತ ಬೆಂಗಳೂರು ಮೂಲದ ಭಾಸ್ಕರ್​ ರೆಡ್ಡಿ ಹಾಗೂ ಅವರ ಗೆಳೆಯರೊಬ್ಬರು ಅನ್ನ ದಾಸೋಹಕ್ಕೆ ಮುಂದಾದರು. ಆರಂಭದಲ್ಲಿ ನಿಮ್ಹಾನ್ಸ್​​ ರೋಗಿಗಳಿಗೆ ಭಾನುವಾರ ಮಾತ್ರ ಊಟ ನೀಡಲಾಗುತ್ತಿತ್ತಂತೆ. ಈಗ ಶನಿವಾರವೂ ಅನ್ನದಾನ ಮಾಡಲಾಗುತ್ತಿದೆ.

ನಿಮ್ಹಾನ್ಸ್​​ ರೋಗಿಗಳಿಗೆ ಪಲಾವ್​ ಹಂಚುತ್ತಿರುವುದು


ಒಂದು ಒಳ್ಳೆಯ ಕೆಲಸ ಮಾಡಲು ಹೊರಟಾಗ ಅದಕ್ಕೆ ಅನೇಕರು ಬೆಂಬಲ ನೀಡುತ್ತಾರೆ ಎನ್ನುವುದಕ್ಕೆ ಭಾಸ್ಕರ್​ ರೆಡ್ಡಿ ಕೆಲಸ ಉತ್ತಮ ಉದಾಹರಣೆ. ಈ ಬಗ್ಗೆ ಮಾಹಿತಿ ನೀಡುವ ಅವರು,“ಶನಿವಾರ-ಭಾನುವಾರ ನಿಮ್ಹಾನ್ಸ್​ ರೋಗಿಗಳಿಗೆ ತುಂಬಾನೇ ತೊಂದರೆ ಉಂಟಾಗುತ್ತಿತ್ತು. ಕ್ಯಾಂಟೀನ್​ ಇರದ ಕಾರಣ ಹೊರಗೆ ತೆರಳಿ ಅವರು ಊಟ ಮಾಡಬೇಕಿತ್ತು. ಹೀಗಾಗಿ ನಾವು ಅವರಿಗೆ ಊಟ ಕೊಡಲು ಮುಂದಾದೆವು. ‘ಅಕ್ಷಯ ಅನ್ನ ದಾಸೋಹ’ ಹೆಸರಿನ ಸಂಸ್ಥೆ ಮೂಲಕ ನಿಮ್ಹಾನ್ಸ್​​ ರೋಗಿಗಳಿಗೆ ಶನಿವಾರ-ಭಾನುವಾರ ಊಟ ಕೊಡುತ್ತಿದ್ದೇವೆ. ಇದಕ್ಕೆ ಕೋರಮಂಗಲದ ಲೈನ್ಸ್​ ಕ್ಲಬ್​ ಕೂಡ ಇದಕ್ಕೆ ಕೈ ಜೋಡಿಸಿದೆ,” ಎನ್ನುತ್ತಾರೆ .

ಮೊದಲಿಗರಾಗಿ ಇದನ್ನು ಆರಂಭಿಸಿದ್ದು ಇಬ್ಬರು ಮಾತ್ರ. ಈಗ ಇದಕ್ಕೆ ಸ್ಪಾನ್ಸರ್​ ಆಗಿ ನಿಂತವರ ಸಂಖ್ಯೆ 80ಕ್ಕೆ ಏರಿಕೆ ಆಗಿದೆಯಂತೆ. “ಈ ಸಾಮಾಜಿಕ ಕಾರ್ಯಕ್ಕೆ ಆರಂಭದಲ್ಲಿ ಕೈ ಜೋಡಿಸಿದ್ದು ಇಬ್ಬರು ಮಾತ್ರ. ಈಗ 10 ಜನರು ಸೇರಿ ಇದನ್ನು ನಡೆಸುತ್ತಿದ್ದೇವೆ. ಈ ಸಾಮಾಜಿಕ ಕಾರ್ಯಕ್ಕೆ ಸ್ಪಾನ್ಸರ್​ ಮಾಡಿದವರ ಸಂಖ್ಯೆ 80 ದಾಟಿದೆ. ” ಎಂದು ಭಾಸ್ಕರ್ ರೆಡ್ಡಿ ಸಂತಸ ವ್ಯಕ್ತಪಡಿಸುತ್ತಾರೆ.

ಆಹಾರ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನರು


ಈ ಕಾರ್ಯವನ್ನು ತುಂಬಾ ಶ್ರದ್ಧೆಯಿಂದ ಆರಂಭಿಸಿದ ಭಾಸ್ಕರ್​ ರೆಡ್ಡಿ ಅದನ್ನು ಅರ್ಧಕ್ಕೆ ಕೈ ಬಿಟ್ಟಿಲ್ಲ. “ಈವರೆಗೆ ನಾವು 100ಕ್ಕೂ ಅಧಿಕ ವಾರಗಳನ್ನು ಪೂರೈಸಿದ್ದೇವೆ. ಶನಿವಾರ ಹಾಗೂ ಭಾನುವಾರ ತಲಾ 400 ರೋಗಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಲಯನ್ಸ್​ ಕ್ಲಬ್​ ಕೂಡ ಇದಕ್ಕೆ ಬೆಂಬಲ ನೀಡಿದೆ,” ಎಂಬುದು ಭಾಸ್ಕರ್​ ರೆಡ್ಡಿ ಗೆಳೆಯ ಸೂರ್ಯಕುಮಾರ್ ಮಾತು."ಆರಂಭದಲ್ಲಿ ನಾವು ಇದನ್ನು ತುಂಬಾ ಚಿಕ್ಕ ಪ್ರಮಾಣದಲ್ಲಿ ಆರಂಭಿಸಿದ್ದೆವು. ಆದರೆ, ಬರು ಬರುತ್ತಾ ಇದಕ್ಕೆ ಪ್ರತಿಕ್ರಿಯೆ ದೊಡ್ಡ ಪ್ರಮಾಣದಲ್ಲಿ ದೊರೆತಿತ್ತು. ಹೀಗಾಗಿ ಈ ಕಾರ್ಯಕ್ಕೆ ಕೊಡುಗೆ ನೀಡುವವರ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಈಗ ನಮ್ಮ ಕಾರ್ಯ ಯಶಸ್ವಿಯಾಗಿದೆ. ವೀಕೆಂಡ್​ನಲ್ಲಿ ಮಾತ್ರವಲ್ಲದೆ ಹಬ್ಬದ ಸಮಯದಲ್ಲಿ ಹೋಳಿಗೆ ನೀಡುವ ಕಾರ್ಯವನ್ನೂ ನಾವು ಮಾಡುತ್ತಿದ್ದೇವೆ," ಎನ್ನುತ್ತಾರೆ ಸೂರ್ಯಕುಮಾರ್​. 
First published:December 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ